[ಬೊಗಳೂರು ಅಂಗನವಾಡಿ ಬೀಟ್ ವರದ್ದಿಗಾರರಿಂದ]
ಬೊಗಳೂರು: ಆನ್‌ಲೈನ್ ತರಗತಿಯನ್ನು ನಿಷೇಧಿಸಿರುವ ಸರ್ಕಾರದ ನಿರ್ಧಾರಕ್ಕೆ ಅಖಿಲ ಭಾರತ ಅಂಗನವಾಡಿ ಕಮ್ ಬಾಲವಾಡಿ ವಿದ್ಯಾರ್ಥಿಗಳ ಒಕ್ಕೂಟ (ಅಭಾಅಂಕಬಾವಿಒ) ತೀವ್ರವಾಗಿ ಖಂಡಿಸಿದೆ.

ಕಣ್ಣಿಗೆ ಕಾಣಿಸದ ಒಂದು ಕೊರೊನಾ ವೈರಸ್‌ಗೆ ಹೆದರಿ ಇಡೀ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹೊರಗೆಲ್ಲಾ ಹೋಗಿ ಚೆಂಡಾಟವೋ, ಪುಂಡಾಟವೋ ಆಡುವಂತಿಲ್ಲ ಎಂಬುದು ದಿಟವಾದರೂ, ಆನ್‌ಲೈನ್ ತರಗತಿ ನಡೆಸದಿರುವ ಹಿಂದಿರುವ ಹುನ್ನಾರವೇನು ಎಂದು ಅಂಕ.ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಮಾಸ್ಕ್ ಮೆಲನ್ ಅವರು ಪ್ರಶ್ನಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ, ಕೋವಿಡಾನಂದ್ ಅವರು ಮಾತನಾಡಿ, ಇದು ಏನೂ ಅರಿಯದ ಮುಗ್ಧ ಹಾಗೂ ನಿಷ್ಪಾಪಿ ಕಂದಮ್ಮಗಳಾದ ನಮ್ಮ ಕೈಯಿಂದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಎಂದಿದ್ದಾರೆ.

ಪಕ್ಕದವನೊಂದಿಗೆ ಹೊಡೆದಾಡುವಂತಿಲ್ಲ, ಚಿವುಟುವಂತಿಲ್ಲ, ಪೆನ್ಸಿಲ್ಲು-ಬಳಪಕಡ್ಡಿ ಕಸಿಯುವಂತಿಲ್ಲ. ಇದಲ್ಲದೆ, ಚೀಚಾ, ಅವನು ಮಾಸ್ಕ್ ಮೂಗಿಗೆ ಹಾಕಿಕೊಂಡಿಲ್ಲ ಅಂತ ಕಂಪ್ಲೇಟ್ ಮಾಡುವುದೂ ಅಸಾಧ್ಯವಾಗುತ್ತಿದೆ. ಈ ಎಲ್ಲ ಮನರಂಜನೆಗಳನ್ನೂ ನಮ್ಮಿಂದ ಈಗಾಗಲೇ ಕಸಿದುಕೊಳ್ಳಲಾಗಿದೆ. ಈಗ ಹೊಸದಾಗಿ ನಮ್ಮ 'ಕಲಿಯುವ' ಸಾಧನವನ್ನೂ ಕಿತ್ತುಕೊಳ್ಳಲಾಗುತ್ತಿದೆ ಎಂದು ವರದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಮುಖ್ಯ ಕಾರ್ಯದರ್ಶಿ ಡಿಸ್ಟ್ಯಾನ್ ಸಿಂಗ್ ಅವರು ಕಿಡಿ ಕಾರಿದ್ದಾರೆ.

ಈ ಕುರಿತು ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಎಲ್ಲ ಸದಸ್ಯರಿಗೂ ಅದೇನೋ ಶಂಕೆ ಹೊಳೆಯಿತು. ಅದು ಆಮಶಂಕೆ ಅಲ್ಲವೆಂಬುದು ದೃಢಪಟ್ಟಿದ್ದು, ಬಳಿಕ ಡಿಸ್ಟ್ಯಾನ್ ಸಿಂಗ್ ಅವರನ್ನು ಪಕ್ಕಕ್ಕೆ ಕರೆದು ಮಾತನಾಡಿದ ಅಸತ್ಯಾನ್ವೇಷಿ, ವಿಷಯ ಏನೆಂದು ಬಗೆದು ಹೊರತೆಗೆಯಲು ಪ್ರಯತ್ನಿಸಿದರು.

ಏನದು ಆ ಹೊಸ 'ಕಲಿಕಾ' ಸಾಧನ ಎಂದು ಪ್ರಶ್ನಿಸಿದಾಗ, ಮೂರರ ಹರೆಯದ ಡಿಸ್ಟ್ಯಾನ್ ಸಿಂಗ್ ಅವರು ಹೀಗುತ್ತರಿಸಿದರು:

"ಅದುವೇ ಸ್ವಾಮೀ, ಈಗ ಕಬಡ್ಡಿ, ಕ್ರಿಕೆಟ್ ಇತ್ಯಾದಿ ಆಡುವಹಾಗಿಲ್ಲ. ಆನ್ಲೈನ್ ಕ್ಲಾಸ್ ಅಂತ ಹೇಳಿ ಮೊಬೈಲಲ್ಲಾದರೂ ಆಟವಾಡಬಹುದು ಅಂತ ನಾವು ಪ್ಲ್ಯಾನ್ ಮಾಡಿದ್ದರೆ, ಇವರು ಅದಕ್ಕೂ ಕಲ್ಲು ಹಾಕುತ್ತಿದ್ದಾರೆ. ಶಿಕ್ಷಣ ಸಚಿವರು ಬಹುಶಃ ನಮ್ಮ ಕಾಲದವರಲ್ಲ. ನಮ್ಮಂತೆ ಮೊಬೈಲನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದೋರಲ್ಲ. ಆನ್ಲೈನ್ ಕ್ಲಾಸ್ ಇದೆ ಅಂತ ಹೇಳಿಯಾದ್ರೂ ಅಪ್ಪಾಮ್ಮನ ಮೊಬೈಲನ್ನು ನಾವು ವಶಪಡಿಸಿಕೊಳ್ಳುವ ಪ್ರಯತ್ನ ತಪ್ಪಿ ಹೋಗಿದೆ. ಈ ಬಗ್ಗೆ ದೇಶಾದ್ಯಂತ ಸುಳ್ಳು ಸುಳ್ಳು ಕಾರಣಕ್ಕಾಗಿಯೇ ನಡೆದ ಆ್ಯಂಟಿ-ಸಿಎಎ ಹೋರಾಟದ ರೀತಿಯಲ್ಲೇ, ನಾನು ಆ್ಯಂಟಿ ಪ್ರತಿಭಟನೆ ಮಾಡ್ತೀವಿ" ಎಂದುತ್ತರಿಸುತ್ತಾ, ಗೊಣ್ಣೆ ಸುರಿಯುವ ಮೂಗಿನಿಂದ ಅದೇನನ್ನೋ ತೆಗೆದು, ಚಡ್ಡಿಗೆ ಒರೆಸುತ್ತಾ ಮರೆಯಾಗಿಬಿಟ್ಟರು.

2 Comments

ಏನಾದ್ರೂ ಹೇಳ್ರಪಾ :-D

  1. ಈ ಕಂದಮ್ಮಗಳ ಹೇಳಿಕೆಗಳಿಂದ ಒಂದು ಮಾತು ದೃಢವಾಗುತ್ತದೆ : ಇಂದಿನ ಕಂದಮ್ಮಗಳೇ ನಾಳಿನ ರಾಜಕಾರಣಿಗಳು. ಅಸತ್ಯ ಅನ್ವೇಷಿಗಳೇ, ಇವರನ್ನು ನಿರಂತರ ಹಿಂಬಾಲಿಸುತ್ತಿರಿ. ನಿಮಗೆ ಸಾಕಷ್ಟು ವರದ್ದಿ ಸಿಗುತ್ತದೆ.

    ReplyDelete
    Replies
    1. ಖಂಡಿತಾ ಖಂಡಿತಾ ಸುನಾಥವರೇಣ್ಯರೇ... ಈಗಂತೂ ಈ ಮಕ್ಕುಗಿಯೋ ಮಕ್ಕಳ ಹಿಂದೆಯೇ ಬೀಳುತ್ತಿದ್ದೇವೆ.

      Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post