ಬೊಗಳೆ ರಗಳೆ

header ads

ಎಂಥಾ ಅವಸ್ಥೆ ಸ್ವಾಮೀ! ಭಾರತದಲ್ಲಿ ಗಿಂಬಳದ ದರ ಭಾರಿ ಏರಿಕೆ!

(ಬೊಗಳೂರು ಗಿಂಬಳ ಬ್ಯುರೋದಿಂದ)
ಬೊಗಳೂರು, ಜು.1- ಭಾರತದಲ್ಲಿ ಸಂಬಳದ ಏರಿಕೆಯು ಅತ್ಯಧಿಕ ಎಂಬ ಅಂಶವು ಇಲ್ಲಿ ಬಯಲಾಗಿರುವುದು ಬೊಗಳೂರು ಬ್ಯುರೋದ ಗಮನಕ್ಕೆ ಬಂದ ಬಳಿಕ ತೀವ್ರ ಆಕ್ರೋಶಗೊಂಡಿರುವ ಬ್ಯುರೋ ಸಿಬ್ಬಂದಿ, ಕೇವಲ ಸಂಬಳ ಹೆಚ್ಚಾಗಿದೆ ಎಂದು ಹೇಳಿರುವ ಕೆಲ್ಲಿ ಸಂಸ್ಥೆಯು, ಗಿಂಬಳದ ಬಗ್ಗೆ ಏನೂ ಪ್ರಸ್ತಾಪಿಸದೆ ಇರುವುದಕ್ಕೆ ಕೆಂಡವನ್ನು ವಾಂತಿ ಮಾಡಿದ್ದಾರೆ.

ಈ ಕಾರಣಕ್ಕೆ, ಗಿಂಬಳ ಏರಿಕೆಯ ಅಂಕಿ ಅಂಶ ಹುಡುಕಾಟಕ್ಕಾಗಿ ಹುಡುಗಾಟದಿಂದ ಹೊರಟಾಗ ಹಲವಾರು ವಿಷಯಗಳು ಬ್ಯುರೋ ಗಮನಕ್ಕೆ ಬಂತು. ಈ ಬಗ್ಗೆ ಬೊಗಳೂರಿನ ತೀರಾ ಹಿಂದುಳಿದ ಮೂಲೆಯೊಂದರಲ್ಲಿ ಎರಡೂ ಕೈಗಳ ಬೆರಳುಗಳನ್ನು ಎಣಿಸುತ್ತಾ ಕೂತಿದ್ದ ಬಡ ಬೋರೇಗೌಡರನ್ನು ಪತ್ರಿಕೆಗಾಗಿ ಸಂದರ್ಶಿಸಲಾಯಿತು. ಸಂದರ್ಶನ ವೇಳೆ ಕೆಲವು ಅಚ್ಚರಿಯ ವಿಷಯಗಳು ಹೊರಬಂದವು.


"ನೋಡಪ್ಪಾ, ಹಿಂದೆ ನಮ್ ಕಾಲದಲ್ಲೆಲ್ಲಾ, ಜಮೀನಿನ ಹಕ್ಕು ಪತ್ರ ಪಡೆಯೋದಿಕ್ಕೆ ಮೂರು ಕಾಸು ಕೊಟ್ಟಿದ್ದರೆ ಸಾಕಾಗ್ತಿತ್ತು. ಆದರೆ ಈಗ ಆ ಮೂರು ಕಾಸಿನವರಿಗೆ ಹಾಗೆಂದರೆ ಏನೆಂಬುದೇ ಗೊತ್ತಿಲ್ಲ. ಈಗೇನಿದ್ದರೂ ನಮ್ಮನ್ನು ಕನಿಷ್ಠ ಮೂರು ತಾಸು ಕಾಯಿಸಿ ತಲಾ ಮೂರು ಸಾವಿರ ಕೀಳುತ್ತಾರೆ" ಎಂಬುದು ಬೋರೇಗೌಡ ನೀಡಿರುವ ಅತಿ ಸಣ್ಣ ಉದಾಹರಣೆ. ಇನ್ನೊಂದು ಉದಾಹರಣೆ ಆತನ ಬಾಯಿಂದ ಆತನಿಗೆ ಅರಿವಿಲ್ಲದಂತೆಯೇ ಉದುರಿತು. ಅದನ್ನು ಹೆಕ್ಕಿಕೊಂಡು ಓದಿ ನೋಡಿದಾಗ ಅದು ನಮ್ಮ ಪೋಲಿಗಳ ಬಗ್ಗೆ ಬರೆದಿದ್ದು!

ಪೊಲೀಸರು ಕೂಡ ಹಿಂದೆಲ್ಲಾ ನಾಕಾಣೆ ಕೊಟ್ರೆ ಕಳ್ಳರನ್ನು ಹಿಡಿದುಕೊಡ್ತಿದ್ರು, ಈಗ ನಾಕಾಣೆ ಕೊಟ್ರೆ ಕಳ್ಳರನ್ನು ನಾ ಕಾಣೆ ಎನ್ನುತ್ತಾ ಟಾಟಾ ಹೇಳುತ್ತಾರೆ. ಯಾಕಂದ್ರೆ ಕಳ್ಳರೇ ಅವರ ಕಿಸೆಯೊಳಗಿರುತ್ತಾರೆ ಮತ್ತು ಕಳವಿನಲ್ಲಿ ಅವರಿಗೆ ನಾಕಾಣೆಗಿಂತಲೂ ಮಿಗಿಲಾದ ದೇವರಾಣೆಯ ಪಾಲುಗಳು ಸಿಗುತ್ತಿರುತ್ತವೆ. ಹಿಂದೆ ಸರಕಾರಿ ನೌಕರರು 'ಸರಕಾರದ ಕೆಲಸ ದೇವರ ಕೆಲಸ' ಎಂದು ಅಕ್ಷರಶಃ ಭಾವಿಸಿ, ಹಣ ಅನ್ನೋದು ಅತ್ಯಂತ ಶುದ್ಧ ಮತ್ತು ಮೈಲಿಗೆಗೆ ಸಂಬಂಧಿಸಿದ ವಿಷಯವಾದುದರಿಂದ ಕಚೇರಿಯಲ್ಲಿ ಮೇಜಿನ ಕೆಳಗೆ ಮತ್ರವೇ ಕೈಚಾಚುತ್ತಿದ್ದರು.

ಆದ್ರೆ ಈಗಿನವರು ಹಾಗಲ್ಲ, ರಸ್ತೆ ಬದಿ ಸಿಕ್ಕರೂ ಪಕ್ಕಕ್ಕೆ ಕರೆದು "ಒಂದಷ್ಟು ತಳ್ಳಿ" ಅಂತನ್ನುತ್ತಾ 'ಏನೂ ನಡೆದಿಲ್ಲ, ಇದೆಲ್ಲಾ ಮಾಮೂಲಿ' ಎಂಬಂತೆ ನಡೆದುಕೊಳ್ಳುತ್ತಾರೆ. ಅದೂ ಅಲ್ಲದೆ "ಸರಕಾರಿ ಕೆಲಸ ದೇವರ ಕೆಲಸ" ಎನ್ನುತ್ತಾ, ಆ ಕೆಲಸವನ್ನು ಮುಟ್ಟಿದರೆ ಎಲ್ಲಿ ಮೈಲಿಗೆಯಾಗುತ್ತದೋ, ಅಶುದ್ಧವಾಗುತ್ತದೋ ಎಂದು ಕೆಲಸ ಮಾಡದೇ ಕೂರುವ ಮತ್ತು ಲಂಚಪ್ರಸಾದಕ್ಕಾಗಿ ಸದಾ ಹಾತೊರೆಯುತ್ತಿರುವ ಲಂಚಿಗರ ರಕ್ಷಣೆಗಾಗಿ ಮಾನ್ಯ ವಿಚಿತ್ರಾನ್ನಿಗಳು ಲಂಚಾಷ್ಟಕವನ್ನು ರಚಿಸಿ ಲಂಚಿತ ಪಾಮರರನ್ನು ಪುನೀತರನ್ನಾಗಿಸಲು ಹೊರಟಿದ್ದಾರೆ. ಅವರ ಈ ಲಂಚಾಷ್ಟಕದ ಮುದ್ರಣಕ್ಕೆ ಭಾರಿ ಬೇಡಿಕೆ ಬಂದಿರುವುದರಿಂದ ಡಾ ವಿನ್ಸಿ ಕೋಡ್ ಮೂಲೆಗುಂಪಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಅಂತಾರಾಷ್ಟ್ರೀಯ ಸಮುದಾಯವು, ವಿಚಿತ್ರಾನ್ನ ದ ಪೇಟೆಂಟ್ ಗಳಿಸಲು ಸಂಚು ಹೂಡಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. ಸರಕಾರಿ ಕೆಲಸ ದೇವರ ಕೆಲಸ -ಎಷ್ಟು ನಿಜ! ದೇವರ ಕೆಲಸ ನಡೆಯುವುದು ಎಲ್ಲಿ? ಸ್ವರ್ಗದಲ್ಲಿ. ಸ್ವರ್ಗಕ್ಕೆ ಹೋಗಬೇಕಾದರೆ ಸಾಯಬೇಕು. ಅಂದರೆ ಸರಕಾರದಿಂದ ಕೆಲಸ ಮಾಡಿಸಿಕೊಂಡಾಗ ನಾವು ಸತ್ತು ಹೋಗಿರುತ್ತೇವೆ. ಇದನ್ನೇ ಗಿರೀಶ್ ಕಾಸರವಳ್ಳಿಯವರು ತಮ್ಮ ತಬರನ ಕಥೆ (ಮೂಲ ಕಥೆ -ತೇಜಸ್ವಿ) ಸಿನಮಾದಲ್ಲಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ.

    -ಪವನಜ

    ಪ್ರತ್ಯುತ್ತರಅಳಿಸಿ
  2. ಅಂದ ಹಾಗೆ ನಿಮ್ಮ 'ನೆಟ್ಟ'ಗಿರೋ ಕನ್ನಡ ರಸಾಯನ ವಿಭಾಗದಲ್ಲಿ ವಿಶ್ವಕನ್ನಡವನ್ನು ಸೇರಿಸಲು ನಿಮಗೆ ಎಷ್ಟು ಲಂಚ ಅಥವಾ ಗಿಂಬಳ ನೀಡಬೇಕು?

    -ಪವನಜ

    ಪ್ರತ್ಯುತ್ತರಅಳಿಸಿ
  3. ವಾಯುಪುತ್ರರೇ,
    ಲಂಚಿಗರು ಯಾವತ್ತೂ
    "ಕೈತುಂಬ ಝಣಝಣ ಅಂತಿದ್ರೆ
    ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ" ಅಂತ ಹೇಳುತ್ತಲೇ ಇರುವುದರಿಂದ ಮತ್ತು ನರಕದಲ್ಲಿ ಈಗಾಗಲೇ ಸೀಟು ಭದ್ರ ಮಾಡಿಸಿಕೊಂಡಿರುವುದರಿಂದ
    ಸ್ವರ್ಗಕ್ಕೆ ಹೋಗಲು ಹಿಂಜರಿಯಬಹುದು.

    -------
    ನಿಮ್ಮ ವಿಶ್ವಕನ್ನಡವನ್ನೂ ನೆಟ್ಟಗಿರಿಸುತ್ತೇವೆ ಅಂತ ಈ ಮೂಲಕ ಧಮಕಿ ಹಾಕುತ್ತಿದ್ದೇವೆ.
    - ಅನ್ವೇಷಿ

    ಪ್ರತ್ಯುತ್ತರಅಳಿಸಿ
  4. ಡಿಯರ್ ಅನ್-way-she:

    ೧) ಲಂಚಾಷ್ಟಕವು ನನ್ನ ರಚನೆ ಅಲ್ಲ. ಇದೊಂದು ರೀತಿಯಲ್ಲಿ ಜನಪದ ಸಾಹಿತ್ಯದಂತೆ, ಹಳೇಕಾಲದಿಂದಲೂ ಚಾಲ್ತಿಯಲ್ಲಿರೋದು. ಬೋರೇಗೌಡ ಸಹ ಬೋರ್ ಹೊಡೆಸದಂತೆ ಅದನ್ನೇ (ಅಂದರೆ ಲಂಚ ಹಳೆ ಜಮಾನಾದಿಂದಲೂ ಬಂದಿದೆ ಅಂತ) ಹೇಳಿದ್ದಲ್ವಾ ನಿಮಗೆ?

    ೨) ಲಂಚಾಷ್ಟಕ ಪ್ರತಿಗಳ ಮುದ್ರಣಕ್ಕೆ ಅದರ payಟೆಂಟ್ ನಿಮ್ಮಲ್ಲಿರುವುದು ಅಂತ ನೀವೇ ಹೇಳಿದ್ರಿ! ಅಂದಹಾಗೆ ಪ್ರತಿಗಳಿಗೆ ಬಾರೀ ಬೇಡಿಕೆ ಬರುವುದಕ್ಕೂ ಲಂಚಪ್ರಯೋಗವಾಗಿದೆಯೋ ಹೇಗೆ?

    ೩) "Work is worship" ತಾನೆ? ವರ್ಕ್ ಎಂದರೆ ವರವೋ ಶಾಪವೋ?

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೇ,

    ನನ್ನನ್ನು ಯಾಕೆ ಸಾರು ಮಾಡಿದಿರಿ? ಅಷ್ಟಕ್ಕೆ ನಿಲ್ಲಿಸದೆ ನಿಮ್ಮನೆಗೂ ಬನ್ನಿ ಎನ್ನುತ್ತಿದ್ದೀರಾ. ನಿಮ್ಮನೆ ಎಲ್ಲಿ ಬರುತ್ತೆ?

    -ಪವನಜ

    ಪ್ರತ್ಯುತ್ತರಅಳಿಸಿ
  6. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  7. ನಮ್ಮ ಮನೆ ಇಲ್ಲಿ ಇದೆ
    ನೀವು ಹೂಂ ಅಂದ್ರೆ ಸಾಕು ಸಾರ್, ನಾನೇ ನಿಮ್ಮನ್ನು ಕರೆದೊಯ್ಯುವೆ.

    ನೀವೂ punಡಿತರು ಎಂದು ತಿಳಿದಿದೆ. ಅದಕ್ಕಾಗಿಯೇ ನಾನು ಜಾಸ್ತಿ ಮಾತನಾಡೋಲ್ಲ.

    ಪ್ರತ್ಯುತ್ತರಅಳಿಸಿ
  8. Beer ವಿಚಿತ್ರಾನ್ನಿಗಳೇ,
    ನಿಮ್ಮ ನಳಪಾಕದ ಕಚೇರಿಯಲ್ಲಿ ನಮ್ಮನ್ನು she ಮಾಡಲು ಹೊರಟಿರುವುದಕ್ಕೆ ತಗೊಳ್ಳಿ.... ಒಂದಿಷ್ಟು ಖಂಡನೆಗಳು. (ಇನ್ನೂ ಹೆಚ್ಚು ಬೇಕಿದ್ದರೆ ಲಂಚಿಸಬೇಕು....!)

    ಲಂಚಾಷ್ಟಕ ನಿಮ್ಮ ರಚನೆ ಅಲ್ಲವೆಂದರೆ ನಾನು ಒಪ್ಪುವುದೇ ಇಲ್ಲ. ಯಾಕೆಂದರೆ ಅದಕ್ಕೆ ಈಗಾಗಲೇ pay-ment ಪಡೆದಾಗಿದೆ.

    work ಈಗೀಗ war-shipನಂತೆ ನಡೆಯದಿದ್ದರೆ ಉದ್ಯೋಗಿಗಳನ್ನು ಬೇರೆಯವರು ಕೊಂಡುಕೊಳ್ಳಬಹುದು. (ಇಡೀ ಪತ್ರಿಕೆಯನ್ನೇ ಕೊಂಡುಕೊಂಡಂತೆ!)

    ಪ್ರತ್ಯುತ್ತರಅಳಿಸಿ
  9. ಮಾವಿನ ರಸಾಯನರೆ,
    ನೀವು ಕೂಡ ಪವನಜರಿಗೆ ಸಾರು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕೆಂದಿದ್ದೀರಾ....

    ಆದ್ರೂ ಅದಕ್ಕೆ ನೀವು ಲಂಚಾಷ್ಟಕದ ಪ್ರತಿಯೊಂದನ್ನು ತೆಗೆದುಕೊಳ್ಳುವುದು ಕಡ್ಡಾಯ.... ಕೂಡಲೇ ಆರ್ಡರಿಸಿ...!

    ಪ್ರತ್ಯುತ್ತರಅಳಿಸಿ
  10. ಡಾ.ಪವನಜ ಅವರು ಮಾವಿನಯನಸರ ಮನೆ ಅಡ್ರೆಸ್ ಕೇಳುವುದು ಮತ್ತು ಮಾವಿನಯನಸ ಅವರು ಅಡ್ರೆಸ್ ಇಲ್ಲಿದೆ ಅಂತೆಲ್ಲಾ ಹೇಳುವುದು ನೋಡಿದರೆ ಏನೋ ಒಳ ವ್ಯವಹಾರ.... ಅದೇ ಸ್ವಾಮಿ... ಲಂಚಾಷ್ಟಕದ ಪ್ರಭಾವ ತೀವ್ರವಾಗಿಯೇ ನಡೀತಿರೋ ಹಾಗಿದೆಯಲ್ಲಾ....

    ಅನ್ವೇಷಿಸಲೆ?

    ಪ್ರತ್ಯುತ್ತರಅಳಿಸಿ
  11. ಅಸತ್ಯಾನ್ವೇಷಿಗಳೇ, ನೋಡಿ ನಿಮ್ಮ ಅನ್ವೇಷಣೆಗೆ ಗ್ರಾಸ ಒದಗಿಸುತ್ತಿದ್ದೇವೆ. ಆದರೆ ಒಂದು ಕಂಡೀಷನ್ನು. ಗ್ರಾಸ ಒದಗಿಸಿದ್ದಕ್ಕೆ ನಮಗೆ ನೀವೇನೂ ಕೊಡಬೇಕಿಲ್ಲ, ನಮ್ಮ ಆಂತರಿಕ ಮಾಮಲಾವನ್ನು ನೀವು ಪಬ್ಲಿಕ್ ಮಾಡಕೂಡದು. ವರದಿಯನ್ನು ನಮಗೆ ಮಾತ್ರ ತಲುಪಿಸಬೇಕು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D