[ಸ್ಯಾನಿಟೈಸರ್ ಬ್ಯುರೋದಿಂದ]
ಬೊಗಳೂರು: ಲಾಕ್‌ಡೌನ್ ಅವಧಿಯಲ್ಲಿ ಮೊಬೈಲ್ ಸಿಗುತ್ತದೆಯೆಂಬ ಕಾರಣಕ್ಕಾಗಿಯೇ ಆನ್‌ಲೈನ್ ಶಿಕ್ಷಣ ಮುಂದುವರಿಸಬೇಕೆಂದು ಆಗ್ರಹಿಸಿದ ಅಖಿಲ ಭಾರತ ಅಂಗನವಾಡಿ ವಿದ್ಯಾರ್ಥಿಗಳ ಒಕ್ಕೂಟವು, ಇದೀಗ ಹೊಸ ಬೇಡಿಕೆ ಮುಂದಿಟ್ಟಿದೆ.

ಅಂಗನವಾಡಿಯಲ್ಲಿ ಒಳಪ್ರವೇಶಿಸುವ ಮುನ್ನ ನಮ್ಮ ಕೈಗಳಿಗೆ ಹಾಕುವ ಸ್ಯಾನಿಟೈಸರ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಂಘದ ಅಧ್ಯಕ್ಷ ಮಾಸ್ಕ್ ಮೆಲನ್ ಹಾಗೂ ಮುಖ್ಯ ಕಾರ್ಯದರ್ಶಿ ಡಿಸ್ಟ್ಯಾನ್ಸ್ ಸಿಂಗ್ ಒತ್ತಾಯಪಡಿಸಿದ್ದಾರೆ.

ಈ ಬಗ್ಗೆ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಜೊತೆಗೆ ಚಾಟಿಂಗ್ ಮೂಲಕವೇ ಖುದ್ದಾಗಿ ಮಾತನಾಡಿದ ಅವರು, ಈಗ ಆನ್‌ಲೈನ್ ಶಿಕ್ಷಣವನ್ನು ನಿಷೇಧಿಸಿದ್ದು ಶಿಕ್ಷಾರ್ಹ ಅಪರಾಧವಾಗಿದ್ದು, ಕನಿಷ್ಠ ಶಿಕ್ಷಣದ ಕಿಕ್ ದೊರೆಯುವಂತಾಗಲು, ಸ್ಯಾನಿಟೈಸರ್ ಹೆಚ್ಚು ಪೂರೈಸಬೇಕಾಗುತ್ತದೆ ಎಂದಿದ್ದಾರೆ.

ಸ್ಯಾನಿಟೈಸರ್ ಬಳಕೆಯು ಕೇವಲ ಕೈಗಳ ಸ್ವಚ್ಛತೆಗಾಗಿ ಮಾತ್ರ ಎಂದು ಪ್ರಚಾರ ಮಾಡುತ್ತಿರುವುದರ ಹಿಂದೆ ಲಿಕ್ಕರ್ ಲಾಬಿಯ ಕೈವಾಡವಿದೆ ಎಂದು ಬಾಂಬ್ ಸಿಡಿಸಿದ ಅವರು, ನಮ್ಮಂಥ ಮಕ್ಕಳಿಗೆ ಏನೂ ಸಿಗದಿದ್ದರೂ ಸ್ಯಾನಿಟೈಸರ್ ಮಾತ್ರವೇ ಸಾಕಾಗುತ್ತದೆ. ಹೇಗೂ ಅಂಗನವಾಡಿ ಟೀಚರುಗಳು ನಮ್ಮನ್ನು ಕರೆಸಿಕೊಂಡು ನಿದ್ದೆ ಮಾಡಲು ಹೇಳುತ್ತಾರಲ್ವಾ? ಸ್ಯಾನಿಟೈಸರ್ ಸೇವಿಸಿ ನಾವೇನೂ ಚರಂಡಿಯಲ್ಲೇನೂ ಬೀಳುವುದಿಲ್ಲವಲ್ಲ? ಸುಮ್ಮನೇ ಮಕ್ಕಳ ಹಕ್ಕನ್ನೇಕೆ ಕಸಿದುಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದರು.

ದೊಡ್ಡವರೆಲ್ಲ ಜಾಣರಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ನಿಷೇಧ ಇದ್ದರೂ ಪಕ್ಕದ ರಾಜ್ಯಕ್ಕಾದರೂ ಹೋಗಿ ಆಲ್ಕೋಹಾಲು ತರುತ್ತಾರೆ. ನಾವೇನೂ ಆ ಪ್ರಮಾಣಕ್ಕೆ ಉಲ್ಲಂಘನೆ ಮಾಡುವುದಿಲ್ಲ. ಹೆಚ್ಚೆಂದರೆ, ನಮ್ಮ ಜೊತೆಯಲ್ಲಿ ಬರುವವರ ಕೈಗೆ ಸ್ಯಾನಿಟೈಸರ್ ಬಿದ್ದಾಕ್ಷಣ ಬಾಯಿ ಹಾಕಬಹುದು. ಆದರೆ, ಈ ರೀತಿಯ ವಿದ್ಯಮಾನ ತಪ್ಪಿಸಲು ಸ್ಯಾನಿಟೈಸರ್ ಪ್ರಮಾಣವನ್ನು ಹೆಚ್ಚು ಮಾಡಬೇಕು. ಈಗಾಗಲೇ ಅಂಗನವಾಡಿಗಳಿಗೆ ಬರುತ್ತಿರುವ ಸ್ಯಾನಿಟೈಸರ್‌ಗಳು ಮಧ್ಯೆ ಮಧ್ಯೆಯೇ ಕಳ್ಳತನವಾಗುತ್ತಿವೆ. ಅದನ್ನು ಯಾರು ಎಂದು ಪತ್ತೆ ಮಾಡಿ, ನಮ್ಮ ಹಕ್ಕನ್ನು ಕಸಿದುಕೊಂಡವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಸಂಘಟನೆಯ ಕಾರ್ಯದರ್ಶಿಗಳಾದ ಸೋಂಕಿತ ಕುಮಾರ್ ಹಾಗೂ ಶಂಕಿತಾ ಕುಮಾರಿ ಆಗ್ರಹಿಸಿದರು.

2 Comments

ಏನಾದ್ರೂ ಹೇಳ್ರಪಾ :-D

  1. ಸ್ಯಾನಿಟೈಸರಗಳು ಕಳ್ಳಸಂತೆಯಲ್ಲಿ ಮಾರಾಟವಾಗುತ್ತಿವೆ ಎನ್ನುವ ವದಂತಿ ಕೇಳಿಬರುತ್ತಿದೆ!

    ReplyDelete
  2. ಈ ವದಂತಿಯ ಹಿಂದೆಯೂ ಮಕ್ಕಳ ತುಡಿತದ ಕೈವಾಡವಿದೆ ಎಂಬುದು ಕೂಡ ಪತ್ತೆಯಾಗಿದೆ ಸುನಾಥರೇ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post