[ಬೊಗಳೂರು ಕಾವೇರದ ಬ್ಯುರೋದಿಂದ]
ಬೊಗಳೂರು: ಕೊರೊನಾ ವೈರಸ್ ಹಾಗೂ ಕೋವಿಡ್-19ರ ಕಾರಣದಿಂದಾಗಿ ಈ ಬಾರಿ ತಮಿಳುನಾಡಿನವರು ಕಾವೇರಿ ನೀರಿಗಾಗಿ ತಕರಾರು ಎತ್ತುವುದಿಲ್ಲವೆಂಬ ಭರವಸೆ ದೊರೆತಿದೆ. ಇದಕ್ಕೆ ಕಾರಣ, ಮಳೆಗಾಲ ಶುರುವಾಗುವ ಮುನ್ನವೇ ತಮಿಳುನಾಡಿನ ಜಲಾಶಯಗಳಿಗೆ ಸಾಕಷ್ಟು ಯೆಲ್ಲೋ ಯೆಲ್ಲೋ ನೀರು ಹರಿದುಹೋಗಲಾರಂಭಿಸಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಬೊಗಳೂರು ಮುಖ್ಯಮಂತ್ರಿಯ ಸಮರ್ಥ ಆಡಳಿತ ಎಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯ ತಂಡವೊಂದು ವರದ್ದಿ ಮಾಡಿದೆ.
ಕೊರೊನಾ ಹರಡುವಿಕೆ ತಡೆಯುವುದಕ್ಕಾಗಿಯೇ ಘೋಷಿಸಲಾಗಿದ್ದ ಲಾಕ್‌ಡೌನ್ ಅನ್ನು, ಮದಿರಾಪ್ರೇಮಿಗಳ ಹಾಹಾಕಾರದಿಂದಾಗಿ ಮತ್ತು ಯಾವುದೇ ಕೊರೊನಾ ಬಂದರೂ ನಾವೇ ನೋಡಿಕೊಳ್ಳುತ್ತೇವೆ ಎಂಬ ಯೆಂಡ್ಕುಡ್ಕರ ಭರವಸೆಯ ಮೇರೆಗೆ ತೆರವುಗೊಳಿಸಿ, ಸ್ಪಿರಿಟ್ ಏರಿಸಬಲ್ಲ ಅಂಗಡಿಗಳನ್ನು ಮಾತ್ರ ತೆರೆಯಲು ಆದೇಶ ಹೊರಡಿಸಲಾಗಿತ್ತು.
ಒಂದನೇ ದಿನ 45 ಕೋಟಿ ರೂ ಹಾಗೂ 2ನೇ ದಿನ 197 ಕೋಟಿ ರೂ. ವಹಿವಾಟು ನಡೆದಿದ್ದು, ನೂರಾರು ಲಕ್ಷ ಲೀಟರ್ ದ್ರವವು ಬಿಕರಿಯಾಗಿದೆ ಎಂದು
ನಮ್ಮ ಪ್ರತಿಸ್ಫರ್ಧಿ ಪತ್ರಿಕೆಯೊಂದು ಪ್ರಕಟ ಮಾಡಿ ಬೀಗಿದೆ. ಈ ಹೆಂಡದ ಪೀಪಾಯಿಗಳು ಬಿಕರಿಯಾದಷ್ಟೇ ವೇಗದಲ್ಲಿ ಅದು ಸೇವನೆಯೂ ಆಗಿದ್ದು, ಅದಕ್ಕಿಂತ ವೇಗದಲ್ಲಿ ಅದು ದೇಹದಿಂದ ಹೊರಬಂದಿದೆ.
ಇದರಿಂದಾಗಿ ವೃಷಭಾವತಿಯು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದು, ಇದನ್ನು ನೇರವಾಗಿ ತಮಿಳುನಾಡಿಗೆ ಬಿಡಲು ಬೊಗಳೂರು ಸರ್ಕಾರ ಆದೇಶ ನೀಡಿರುವುದಾಗಿ ಅಸತ್ಯಾನ್ವೇಷಣಾ ಬ್ಯುರೋದ ವರದ್ದಿಗಾರರು ತಿಳಿಸಿದ್ದಾರೆ. ಇವೆಲ್ಲವೂ ಕಿಕ್ಕೇರಿಸುವ- ಕಾವೇರಿಸುವ ಮೂಲದ್ರವ್ಯದಿಂದ ಬಂದಿರುವ ನೀರು ಆಗಿರುವುದರಿಂದ ಈ ಬಾರಿ ತಮಿಳುನಾಡು-ಕರ್ನಾಟಕ ಮಧ್ಯೆ ಕಾವೇರುವುದಿಲ್ಲ ಎನ್ನಲಾಗಿದೆ.
ಯಾಕೆಂದರೆ, ಈ ಬಾರಿ ತಮಿಳುನಾಡಿನಲ್ಲಿ ನೀರಿನ ಕೊರತೆ ಉಂಟಾಗಲಾರದು ಎಂಬ ಭವಿಷ್ಯದ ಮಾಹಿತಿ ಈಗಲೇ ಲಭ್ಯವಾಗಿದೆ.
2 ಕಾಮೆಂಟ್‌ಗಳು
ಪ್ರತಿ ವರ್ಷವೂ ಇದನ್ನೇ ಮಾಡಬಹುದು!
ಪ್ರತ್ಯುತ್ತರಅಳಿಸಿಹೌದು ಸಾರೂ, ನಮ್ಮಲ್ಲಿ ಈಗಾಗ್ಲೇ ಮದ್ಯ ಮಾರಾಟ ಹೆಚ್ಚಳ ಆಗ್ಬಿಟ್ಟಿದೆಯಲ್ಲ!
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D