ಬೊಗಳೆ ರಗಳೆ

header ads

BARking News | ಕರ್ನಾಟಕಟಕದಲ್ಲಿ ಆಂಟಿ Mask Day

[ಸೋಂಕಿತರ ಬ್ಯುರೋದಿಂದ]
ಬೊಗಳೂರು: ಆಡಳಿತ ಪಕ್ಷವು ಕರ್ನಾಟಕಟಕದಾದ್ಯಂತ ಮಾಸ್ಕ್ ಡೇ ಆಚರಿಸುವಂತೆ ಕರೆಕೊಟ್ಟಿರುವುದರಿಂದ, ವಿರೋಧ ಪಕ್ಷಗಳು ಏನು ಮಾಡಬೇಕು? ವಿರೋಧಿಸುವುದೇ ತಮ್ಮ ಕೆಲಸವಾದುದರಿಂದ ಮತ್ತು ಪ್ರತಿ ಪಕ್ಷವಾಗಿ ಆಡಳಿತ ಪಕ್ಷದ ನೀತಿಗೆ 'ಪ್ರತಿ'ಯಾಗಿ ಆಂಟಿ ಮಾಸ್ಕ್ ಡೇ ಆಚರಿಸುವುದಾಗಿ ಕರೆ ನೀಡಿವೆ.

ಈ ಕುರಿತು ರದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ಮುಖಂಡ ಕುಸ್ವಾಮಿ ಅಲಿಯಾಸ್ ಸಿರಾಮಯ್ಯ ಅವರು, ಮಾಸ್ಕ್ ದಿನ ಆಚರಣೆಯ ಹಿಂದೆ ಆಡಳಿತ ಪಕ್ಷದ ನೇರ ಕೈವಾಡವಿದೆ. ತಮ್ಮವರಿಗಷ್ಟೇ ಮಾಸ್ಕ್ ತಯಾರಿಕೆಗೆ ಅನುಮತಿ ನೀಡಿ ಇದರಲ್ಲಿ ದೊಡ್ಡ ಹಗರಣ ನಡೆದಿದೆ, ಈ ಕುರಿತು ತನಿಖೆ ಆಗಲಿ ಎಂದು ಗಹಗಹಿಸಿ ಆಗ್ರಹಿಸಿದರು.

ದೇಶೀಯ ಮಟ್ಟದಲ್ಲೇ ವಿರೋಧ ಪಕ್ಷಗಳನ್ನು ಕಡೆಗಣಿಸಲಾಗಿದೆ. ಈಗಾಗಲೇ ಚೀನಾದಿಂದ ಕೊರೊನಾ ವೈರಸ್ ತರಿಸಿಕೊಳ್ಳುವಾಗ ನಮ್ಮನ್ನು ಕೇಳಿಲ್ಲ. ಚೀನಾದ ಸೈನಿಕರನ್ನು ನಮ್ಮ ಧೀರ ಯೋಧರು ಕೊಲ್ಲುವಾಗಲೂ ನಮ್ಮನ್ನೊಂದು ಮಾತು ಕೇಳಿಲ್ಲ. ಈ ಕುರಿತು ನಮ್ಮಲ್ಲಿ ಸಾಕಷ್ಟು ಪ್ರಶ್ನೆಗಳ ರಾಶಿ ಬಿದ್ದಿವೆ. ನೀವೇಕೆ ಮೌನ, ಸೈನಿಕರಿಗೇಕೆ ಬಂದೂಕು ಕೊಟ್ಟಿಲ್ಲ, ಅವರನ್ನೇಕೆ ಚಳಿಯಲ್ಲಿ ಕೊರೆಯುವಂತೆ ಬಿಟ್ಟಿದ್ದೀರಿ, ಅವರೇಕೆ ಚೀನಾದ ಗಡಿಯನ್ನೇ ಕಾಯಬೇಕು ಮುಂದಾಗಿ ನಾವು ಕೇಳುತ್ತೇವೆ. ಅವಕ್ಕೆಲ್ಲಾ ಉತ್ತರ ಕೊಡುತ್ತಾ ಕೂರುವ ಬದಲು, ಚೀನಾದ ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿದ್ದೇಕೆ ಮತ್ತು ಅವರೊಂದಿಗೆ ಮಾತುಕತೆಗೆ ಮುಂದಾಗಿದ್ದೇಕೆ? ಎಂದು ಕೇಳಿದ ಕೇಂದ್ರದ ವಿರೋಧಿ ನಾಯಕ ಗಾಂಧಿ ರಾವ್ ಅವರು, ಮಾಸ್ಕ್ ಕೂಡ ಚೀನಾದಿಂದಲೇ ತರಿಸಿಕೊಂಡಿದ್ದಿರಬಹುದೇ ಎಂದು ಪ್ರಶ್ನಿಸಿ ಶಂಕೆಯ ಮೇಲೆ ಬೆಳಕು ಚೆಲ್ಲಿದರು.

ಆಧುನಿಕತೆಗೆ ತಕ್ಕಂತೆ ಆಂಟಿ ಮಾಸ್ಕ್
ಈ ನಡುವೆ, ಆಂಟಿ ಮಾಸ್ಕ್ ಡೇಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಂಟಿ ಮಾಸ್ಕ್ ಡೇ ಆದುದರಿಂದ ಸಾಮಾನ್ಯವಾಗಿ ಬಿಳಿ ಬಣ್ಣದ ಮಾಸ್ಕ್ ಬದಲು ಬಣ್ಣ ಬಣ್ಣದ ಮಾಸ್ಕುಗಳನ್ನು ಧರಿಸಿರುವ ಆಂಟಿ ಪ್ರತಿಭಟನಾಕಾರರು ರಸ್ತೆಯಲ್ಲಿ ಕಂಡುಬಂದರು. ತಾವುಟ್ಟ ಬಟ್ಟೆಗೆ ಮ್ಯಾಚಿಂಗ್ ಮ್ಯಾಚಿಂಗ್ ಮಾಸ್ಕ್, ಹಾಕಿದ ಲಿಪ್‌ಸ್ಟಿಕ್ ಕಾಣುವಂತೆ ಇರುವ ಪಾರದರ್ಶಕ ಮಾಸ್ಕ್, ಉಸಿರಾಡಲು ಮೂಗಿನ ಬಳಿ ಮಾತ್ರವೇ ರಂಧ್ರಗಳಿರುವ, ಮತ್ತು ಇದು ಗೊತ್ತಾಗದಂತೆ ಇರುವ ಮಾಸ್ಕ್, ಬಿಂದಿ ಬಣ್ಣದ ಮಾಸ್ಕು, ಕೊಟ್ಟ ಕೊನೆಗೆ ಚಿನ್ನದ ಲೇಪನವಿರುವ ಮಾಸ್ಕ್‌ಗಳನ್ನು ಧರಿಸಿದ ಆಂಟಿ ಮಾಸ್ಕ್ ಡೇ ಭರ್ಜರಿಯಾಗಿ ಆಚರಣೆಯಾಯಿತು. ಕೆಲವರ ಮಾಸ್ಕ್‌ಗಳ ಇಲ್ಯಾಸ್ಟಿಕ್ ಹುರಿಯು ಕಿವಿಗಳನ್ನು ಎಳೆದುಕೊಂಡ ಕಾರಣ, ಕೆಲವು ಆಂಟಿ ಪ್ರತಿಭಟನಾಕಾರರು ಕಿವಿಯೋಲೆಯನ್ನೇ ಹಾಕಿಕೊಳ್ಳಬೇಕಾಗಿರಲಿಲ್ಲ. ಇದು ಟು-ಇನ್-ಒನ್ ಹೊಸ ಟ್ರಂಡ್ ಎಂದು ಬೊಗಳೆ ಬ್ಯುರೋದ ಅನ್ವೇಷಿ ನೇತೃತ್ವದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಅಲ್ಲಲ್ಲಿ ತಿರುಗಾಡುತ್ತಾ ವರದ್ದಿ ತಂದು ಸುರುವಿದ್ದಾರೆ.

ಮತ್ತೆ ಕೆಲವರು ಯುವ ಜನಾಂಗೀಯರ ಅಂಬೋಣದ ಪ್ರಕಾರ, ಪಾರದರ್ಶಕವಲ್ಲದ ಮಾಸ್ಕ್ ಧರಿಸಿದರೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿವರಿಸಿದ್ದಾರೆ. ಎದುರಿಗೆ ಬಂದವನೊಬ್ಬ ಕಾಲುಜಾರಿ ಬಿದ್ದಾಗ ನಕ್ಕರೂ ತಿಳಿಯದು, 'ಫ್ರಾಂಡ್ಸ್' ಕೈಕೊಟ್ಟಾಗ ಅತ್ತರೂ ತಿಳಿಯದು. ಇಷ್ಟೇ ಅಲ್ಲ, ಮನೆಯಿಂದ ಕಾಲೇಜಿಗೆಂದು ಹೋಗಿ, 'ಫ್ರಾಂಡ್ಸ್' ಜೊತೆ ಬೈಕಲ್ಲಿ ರೊಯ್ಯನೇ ಹೋದವರು ಯಾರೂಂತನೂ ತಿಳಿಯಲಾರದು ಎಂದು ಅವರು ಖುಷ್ ಖುಷಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಬಂಗಾಲಿಗಳು ‘ಅ’ ಸ್ವರವನ್ನು ‘ಒ’ತರಹ ಉಚ್ಚರಿಸುತ್ತಾರೆ, ನೋಡಿ. ಹೀಗಾಗಿ, ಬಂಗಾಲಿಯೊಬ್ಬನು anti-mask day ಅನ್ನು anti-mosque day ಎಂದು ಉಚ್ಚರಿಸಿ, ಒದೆಸಿಕೊಂಡನಂತೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈ ಬೊಂಗಾಳಿಗಳು ನಮ್ಮೂರನ್ನು ಬಗಳೂರು ಅನ್ನಬಹುದೇ? ಓಂಟಿ ಮಾಸ್ಕುಗಳೇ ಇವರ ಟಾರ್ಗೆಟ್ಟಂತೆ...

      ಅಳಿಸಿ

ಏನಾದ್ರೂ ಹೇಳ್ರಪಾ :-D