ಬೊಗಳೆ ರಗಳೆ

header ads

BarKing News: Corona Virus ಬಂಧಿಸಲು ಹೋದ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದೇಕೆ?





😀😀😀😀😃😃😃
[ಕೋವಿದ ಬ್ಯುರೋದಿಂದ]
ಬೊಗಳೂರು: ಜೂ. 19ರಿಂದ ಪ್ರತಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಪ್ರತಿಯಾಗಿ ಪ್ರತೀ ಪ್ರತಿಪಕ್ಷಗಳು ಆಂಟಿ ಮಾಸ್ಕ್ ದಿನಾಚರಣೆ ಮಾಡಿರುವುದು ನಿಮಗೆ ಗೊತ್ತೇ ಇದೆ. ಆದರೆ, ಮಾಸ್ಕ್ ದಿನಾಚರಣೆಯ ಸ್ಲೋಗನ್‌ನಲ್ಲಿದ್ದಂತೆ ಕೊರೊನಾ ಬಂಧಿಸಲು ತೆರಳಿದ ಪೊಲೀಸರು ಬಿದ್ದು ಬಿದ್ದು ನಕ್ಕ ಅಘಟಿತ ಘಟನೆಯೊಂದನ್ನು ಬೊಗಳೆ ಬ್ಯುರೋ ಕ್ಷಿಪ್ರವಾಗಿ, ಬ್ರೇಕಿಂಗ್ ಸುದ್ದಿಯನ್ನು ತಡವಾಗಿ ವರದ್ದಿ ಮಾಡಿದೆ.

ದೇಶಾದ್ಯಂತ ರಣಕೇಕೆ ಹಾಕುತ್ತಾ, ರಣಚಂಡಿಯಾಗಿ, ಕ್ರೂರಿಯಾಗಿ, ರಕ್ತಪಿಪಾಸುವಾಗಿ, ರಕ್ಕಸನಾಗಿ, ಮಹಾಮಾರಿಯಾಗಿ, ರಣಚಂಡಿಯಾಗಿ- ಪುಂಡಿಯಾಗಿ, ಹೆಮ್ಮಾರಿಯಾಗಿ, ಕಿಲ್ಲರ್ ಆಗಿ, ಮರ್ಡರರ್ ಆಗಿ, ರಾಕ್ಷಸರೂಪಿಯಾಗಿ, ಪ್ರಳಯಾಂತಕನಾಗಿ, ಡೆಡ್ಲೀಯಾಗಿ, ಕೊಲೆಪಾತಕನಾಗಿ, ಆಗಿ, ಹೀಗಿ, ಹೋಗಿ.... ರಕ್ಕಸ ರಣತಾಂಡವವಾಡುತ್ತಾ ಭಯ ಉತ್ಪಾದನೆಯ ಜೊತೆಗೆ ಅಕ್ಷರ ಭಯವನ್ನೂ ಉತ್ಪಾದಿಸಿ, ಡಿಕ್ಷನರಿಯಲ್ಲಿದ್ದ ಎಲ್ಲ ಪದಗಳನ್ನೂ ಕುಕ್ಕಿ ಕುಕ್ಕಿ ತಂದು ಸುರುವಿದ ಬುದ್ಧಿ ವಾಹಿನಿಗಳ ಬಗ್ಗೆ ನಮ್ಮ ರದ್ದಿಗಾರರು ಪೊಲೀಸರಿಗೆ ಮೊದಲೇ ಆ ವಿಡಿಯೊಗಳನ್ನು ತೋರಿಸಿದ್ದರು.

ಜೊತೆಗೆ ಈ ಚಾnull ಗಳಲ್ಲಿ‌ ಪ್ರಸಾರವಾದ ಕೊರೊನಾ ವೈರಸ್‌ನ ಭಾವಚಿತ್ರವನ್ನೂ ತೋರಿಸಿ, ಪತ್ತೆ ಮಾಡಲು ವಿನಂತಿಸಲಾಗಿತ್ತು.

ಹೀಗೆ, ಪೊಲೀಸರ‌ ಮೇಲೆ ದಾಳಿ ನಡೆಸಿದ, ಗರ್ಭಿಣಿಯರನ್ನು ಪೀಡಿಸಿದ, ಮಕ್ಕಳ ಒಳಹೊಕ್ಕ,‌ ಕೊರೊನಾ ವಾರಿಯರ್ಸನ್ನೂ ಬಿಡದ, ಬೀದಿ ಬೀದಿಯಲ್ಲಿ ಅಟ್ಯಾಕ್ ಮಾಡುತ್ತಿದ್ದ, ಮಕ್ಕಳಿಂದ ವೃದ್ಧರವರೆಗೂ ಜೀವ ಹಿಂಡುತ್ತಿದ್ದ ಕೊರೊನಾ ವೈರಸ್ ಅನ್ನು ಹಿಡಿಯಲು ಹೋದ ಪೊಲೀಸರು ಬೇಸ್ತು ಬಿದ್ದಿದ್ದು ವರದ್ದಿಯಾಗಿದೆ.

ಇಂಥ ರಾಕ್ಷಸ, ಕೊಲೆಗಾರ, ಪಾತಕಿ, ಹಂತಕನನ್ನು ಹೇಗಪ್ಪಾ ಹಿಡಿಯುವುದು ಎಂಬ ಚಿಂತೆಯಲ್ಲಿದ್ದ ಬೊಗಳೂರು ಪೊಲೀಸರ ಕೈಗೆ ಸಿಲುಕದೆ ಈ ವೈರಸ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು.

ಆದರೆ ಯಾವ ಕೊರೊನಾ ವೈರಸ್ಸನ್ನು ಹಿಡಿಯುವುದು ಎಂಬುದೇ ಪೊಲೀಸರಿಗೆ ತಲೆನೋವಿನ ಸಂಗತಿ. ಯಾಕೆಂದರೆ ಎಲ್ಲ ವೈರಸ್ಸುಗಳೂ ಚೀನಾದಲ್ಲೇ ಹುಟ್ಟಿದವುಗಳಾಗಿದ್ದರಿಂದ, ನೋಡುವುದಕ್ಕೆ ಒಂದೇ ರೀತಿಯಾಗಿದ್ದವು.

ಅವುಗಳಲ್ಲಿ ಒಂದನ್ನು ಬಂಧಿಸಿ, ಗುದ್ದಿ ಗುದ್ದಿ ಕೊಲ್ಲಲುದ್ಯುಕ್ತವಾದಾಗ, "ಅದನ್ನು ಹರಡಿದ್ದು ನಾನಲ್ಲ, ನಾನು ಎಷ್ಟೋ ವರ್ಷಗಳಿಂದ ಇಲ್ಲೇ ನೆಲೆಯೂರಿದ್ದೆ. ಅದು ಓ ಅವನು" ಎಂದು ದೇಶದೊಳಗಿದ್ದುಕೊಂಡೇ, ಸರ್ಕಾರವನ್ನು, ಸರ್ಕಾರದ ಎಲ್ಲ ಕ್ರಮಗಳನ್ನೂ ಟೀಕಿಸುತ್ತಿದ್ದ ಮತ್ತೊಂದು ವೈರಸ್ಸನ್ನು ತೋರಿಸಿತು. ಅದು ಕೂಡ ಸೇಮ್ ಟು ಸೇಮ್ ಆರೋಪ ಮಾಡಿತು. ಅಲ್ಲಿಗೆ ಗುಲಾಮರು ಮತ್ತು ಭಕ್ತರು ಹೆಸರಿನ ಎರಡು ಪಂಗಡಗಳು ಪರಸ್ಪರ ಕೆಸರು ಚೆಲ್ಲಿಕೊಳ್ಳಲಾರಂಭಿಸಿದವು.

ಈ ವೈರಸ್‌ಗಳ ಆಟಾಟೋಪ ನೋಡಲಾರದೆ, ಪೊಲೀಸರಿಗೆ ನಗು ತಡೆದುಕೊಳ್ಳಲಾಗದೆ, "ಓ ಇದು ಯಾವಾಗಲೂ ಹೇಳಿದ್ದನ್ನೇ ಹೇಳುವ, ಆಗಾಗ್ಗೆ ರೂಪ ಬದಲಿಸುವ, ಚುನಾವಣೆ ಬಂದಾಗ ಜೋರಾಗಿಯೇ ಸೀನುವ ವೈರಸ್ಸು" ಎಂದು ಬಿದ್ದರು,‌ ಮತ್ತೆ ಬಿದ್ದರು, ಮತ್ತು ಮತ್ತೇರಿ ನಕ್ಕರು ಎಂದು ಬೊಗಳೆ ಬ್ಯುರೋ ವರದ್ದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು