[ಬೊಗಳೂರು ತಲೆನೋವು ಬ್ಯುರೋದಿಂದ]
ಬೊಗಳೂರು, ಏ.24- ಕ್ರೋಸಿನ್ ಎಂಬ ವಿಶೇಷವಾಗಿ ತಲೆ ಹಾಗೂ ಮತ್ತೇನೇನೋ ನೋವಿನ ಶಮನಕ್ಕೆ ಬಳಸಲಾಗುವ ಮಾತ್ರೆಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದರೂ, ಬೆಲೆ ತಗ್ಗಿಸಿರುವುದರ ಹಿಂದಿನ ರಹಸ್ಯ ಬಯಲಾಗಿದೆ.

ಇತ್ತೀಚಿನ ದಿನಗಳಲ್ಲಂತೂ ವಿಶೇಷವಾಗಿ ಚುನಾವಣಾ ಕಾಲದಲ್ಲಿ ಜನರು ಸಾಕಷ್ಟು ನೋವುಗಳಿಂದ ಬಳಲುತ್ತಿದ್ದಾರೆ. ಶೇ.99.99 ಮಂದಿ ಕೂಡ ಈ ಭೀಷಣ ಭಾಷಣಗಳ ಅರಚಾಟದಿಂದಾಗಿ ತಲೆ ನೋವು ಅನುಭವಿಸುತ್ತಿದ್ದರೆ, ಮತ್ತೆ ಕೆಲವರು ಚಪ್ಪಲಿ, ಮೊಟ್ಟೆ, ಕಲ್ಲು ಮಾತ್ರವಲ್ಲದೆ 'ಕೈ'ಯೇಟಿನಿಂದ ನೋವು ಎದುರಿಸತೊಡಗಿದ್ದಾರೆ.

ಈ ಕಾರಣದಿಂದಾಗಿ ಕ್ರೋಸಿನ್ ಮಾತ್ರೆಗಳ ಬೇಡಿಕೆ ರಾಕೆಟ್ ವೇಗದಲ್ಲಿ ಮೇಲೇರುತ್ತಿದ್ದರೂ, ಗ್ಲ್ಯಾಕ್ಸೋ ಕಂಪನಿಯು ದರವನ್ನು ದಿಢೀರ್ ಇಳಿಸಿದೆ ಎಂದು ನಮಗೆ ಪ್ರಬಲವಾಗಿ ಪ್ರತಿಸ್ಫರ್ಧೆ ನೀಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಪತ್ರಿಕೆಯೊಂದು ಇಲ್ಲಿ ವರದ್ದಿ ಪ್ರಕಟಿಸಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮತದಾರರು ತಲೆನೋವು ಹೆಚ್ಚಾಗಿ ತಮ್ಮ ವಿರೋಧಿಗಳಿಗೆ ಮತ ಹಾಕಬಾರದೆಂಬ ಉದ್ದೇಶದಿಂದ ಆಡಳಿತಾರೂಢ ಸರಕಾರವು ಕ್ರೋಸಿನ್ ಮಾತ್ರೆಗಳನ್ನಾದರೂ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿ ಎಂದು ಮಾತ್ರೆ ಕಂಪನಿಯ ಮೇಲೆ ಒತ್ತಡ ಹೇರಿತ್ತು ಎಂಬ ಅಸತ್ಯಾಂಶವೊಂದನ್ನು ಅನ್ವೇಷಣೆ ಮಾಡಲಾಗಿದೆ. ಕನಿಷ್ಠ ಪಕ್ಷ, ಅಕ್ಕಿ ಬೇಳೆ ತಿನ್ನದಿದ್ದರೂ, ಕಡಿಮೆ ದರದಲ್ಲಿ ದೊರೆಯುವ ಮಾತ್ರೆಗಳನ್ನಾದರೂ ತಿಂದು ಜನರು ಹೊಟ್ಟೆ ತುಂಬಿಸಿಕೊಳ್ಳಲಿ. ಅವರ ತಲೆನೋವು ಕಡಿಮೆಯಾಗಿ ತಲೆಕೆಟ್ಟು ಮತ ಹಾಕಲಿ ಎಂದು ಮಾನ್ಯ ನಿಧಾನಮಂತ್ರಿಗಳು ಘೋಷಿಸಿರುವುದಾಗಿ ಮೂಲಗಳು ತಿಳಿಸಿವೆ.

2 Comments

ಏನಾದ್ರೂ ಹೇಳ್ರಪಾ :-D

 1. ಕ್ರೋಸಿನ್ ಮಾತ್ರೆಗಳನ್ನು ರೇಶನ್ ಅಂಗಡಿಗಳ ಮೂಲಕ ಪೂರೈಸಿದರೆ ಹೇಗೆ?

  ReplyDelete
  Replies
  1. ಸುನಾಥರೇ,
   ರೇಶನ್ ಅಂಗಡಿ ಮೂಲಕ ಪೂರೈಸಿದರೆ, ಅದರಲ್ಲಿಯೂ ಕಲಬೆರಕೆ ಪತ್ತೆಯಾದೀತು... ಶ್.... ಯಾರಿಗೂ ಹೇಳ್ಬೇಡಿ... ಸ್ವಲ್ಪ ತಲೆನೋವಾದ್ರೂ ಕಡಿಮೆ ಮಾಡ್ಕೋತೀವಿ!

   Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post