[ಬೊಗಳೂರು ಗೂಬೆಗಳ ಬ್ಯುರೋದಿಂದ]
ಬೊಗಳೂರು, ಏ.29- ಗೂಬೆಗಳೂ ನಿಧಾನಸೌಧಕ್ಕೆ ಹೋಗಿದ್ದೇಕೆ ಮತ್ತು ಅದನ್ನು ಓಡಿಸಲು ಯಾರೆಲ್ಲಾ ಶತಪ್ರಯತ್ನ ಪಟ್ಟರು ಎಂಬ ಅಂಶವನ್ನು ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಭಾರೀ ತ್ರಾಸ ಪಟ್ಟು ಪತ್ತೆ ಹಚ್ಚಿ ಬಿಟ್ಟಿದ್ದಾರೆ.

ಗೂಬೆಗಳು ನಿಧಾನಸೌಧಕ್ಕೇ ಯಾಕೆ ಪ್ರವೇಶಿಸಿದ್ದು ಎಂಬುದು ತನಿಖೆಯಾಗಬೇಕಿರುವ ಸಂದರ್ಭದಲ್ಲಿಯೇ, ಗೂಬೆಯನ್ನು ಓಡಿಸಿದವರಾರು ಎಂಬ ಪ್ರಶ್ನೆಯೂ ಕೋಲಾಹಲಕಾರಿಯಾಗಿ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಸಿಕ್ಕಿಬಿದ್ದದ್ದು ರಣ ಹದ್ದುಗಳು!

ರಣ ಹದ್ದುಗಳು ಈಗಾಗಲೇ ನಿಧಾನಸೌಧದೊಳಗೆ ನೆಲೆಯಾಗಿವೆ ಎಂಬ ಬಾಯ್ಮಾತು ಕೇಳಿಬರುತ್ತಿದ್ದರೂ ಇದರಲ್ಲಿನ ಅಸತ್ಯಾಂಶವೇನೆಂಬುದು ಜನರಿಗಿನ್ನೂ ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ, ಇದ್ದ ಅಲ್ಪಬುದ್ಧಿಯನ್ನು ಓಡಿಸಿದಾಗ ದೊರೆತ ಅಂಶವೆಂದರೆ, ರಣ ಹದ್ದುಗಳು ಇತ್ತೀಚೆಗೆ ಜನರ ರಕ್ತ ಹೀರುತ್ತಿರುವುದು ಹೆಚ್ಚಾಗಿಬಿಟ್ಟಿವೆ. ಜನ ಸಾಮಾನ್ಯರು ಬೆವರು ಸುರಿಸಿ ದುಡಿದ ಹಣವನ್ನು ಲಂಚದ ರೂಪದಲ್ಲಿ ಪ್ರಾಣಿ ಸಂಗ್ರಹಾಲಯದಲ್ಲಿ ಸಾಕಲು ಅಯೋಗ್ಯವಾದ ಮತ್ತು ಜನರ ಮನೆಗಳಲ್ಲೇ ಸಾಕು ಪ್ರಾಣಿಗಳ ರೂಪದಲ್ಲಿ (ಹೆಸರು ಹೇಳುವುದಿಲ್ಲ ಬಿಡಿ) ನೆಲೆಯಾಗಿರುವ ಪ್ರಾಣಿಗಳು ಪ್ರತಿಯೊಂದು ಹೆಜ್ಜೆಗೂ ಸುಲಿಗೆ ಮಾಡುತ್ತಿರುತ್ತವೆ. ಈ ರೀತಿ ಸುಲಿಗೆ ಮಾಡಿದ ಆಹಾರದಲ್ಲಿ, ಅವರ ಒಡೆಯರಿಗೂ ಕೋಟ್ಯಂತರ ರೂಪದಲ್ಲಿ ಸಂದಾಯ ಮಾಡಬೇಕಾಗುತ್ತದೆ. ಈ ಒಡೆಯರೆಂದರೆ ರಣ ಹದ್ದುಗಳು.

ಈ ರಣ ಹದ್ದುಗಳೇ ಗೂಬೆಗಳನ್ನು ಓಡಿಸಿದ್ದು. ಯಾಕೆಂದರೆ, ತಮಗೆ ದೊರೆಯುವ ಮೊತ್ತದಲ್ಲಿ ಗೂಬೆಗಳೂ ಪಾಲು ಹೀರಿಕೊಂಡರೆ, ತಮಗೆ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮೊಮ್ಮಕ್ಕಳಿಗಾಗುವಷ್ಟು ಆಸ್ತಿಪಾಸ್ತಿ ಮಾಡಿಕೊಳ್ಳುವುದಾದರೂ ಹೇಗೆ ಎಂಬ ದುರಾಲೋಚನೆಯೇ ಗೂಬೆ ಓಡಿಸಲು ಪ್ರಮುಖ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಆದರೆ ಗೂಬೆಗಳು ಬಂದಿದ್ದೇಕೆ? ಎಂಬ ಪ್ರಶ್ನೆಯೂ ಪ್ರಸ್ತುತವಾಗುತ್ತಿರುವುದರಿಂದ ಮತ್ತಷ್ಟು ಕೆದಕಲಾಯಿತು. ರಾತ್ರಿಯೆಲ್ಲ ಬಾಡೂಟ, ಆ ಪಾರ್ಟಿ ಈ ಪಾರ್ಟಿಯಲ್ಲಿ ಸುಸ್ತಾದವರು ಹಗಲು ರೆಸ್ಟ್ ತೆಗೆದುಕೊಳ್ಳಲೆಂದು ಈ ನಿಧಾನಸೌಧಕ್ಕೆ ಬಂದು, ತೂಕಡಿಸುತ್ತಾ ಇರುತ್ತಾರೆ. ಇಂತಹಾ ತಮ್ಮದೇ ಜೀವನ ಶೈಲಿಯನ್ನು (ಹಗಲು ನಿದ್ದೆ, ರಾತ್ರಿ ಕೆಲಸ) ಅನುಸರಿಸುತ್ತಿರುವವರು ಹೇಗಿದ್ದಾರೆ, ತಮ್ಮ ಗೆಳೆಯರು ಹೇಗಿದ್ದಾರೆ ಎಂದೆಲ್ಲಾ ತಿಳಿದುಕೊಳ್ಳಲೆಂದೇ ಅವುಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಹಹ್ಹಹ್ಹಾ!! ಕಾಗೆ, ಗೂಗೆಗಳೆಲ್ಲಾ ಈಗ ವಿಧಾನಸೌಧದಲ್ಲಿ ಮೀಟಿಂಗ್ ನಡೆಸುತ್ತಿವೆ ಎಂದಾಯಿತು!

    ReplyDelete
    Replies
    1. ಅದ್ಕೇ ಸಾರ್... ನಿಧಾನಸೌಧದಲ್ಲಿ ಏನಾಗ್ತಾ ಇದೆ ಅನ್ನೋದೇ ಕೇಳಿಸೋದಿಲ್ಲ!!! ಟಿವೀಲಿ ಬರೇ ಕಾಗೆ ಗೂಗೆಗಳ ಸದ್ದೇ....!

      Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post