[ಬೊಗಳೆ ಅಸತ್ಯಾನ್ವೇಷಣೆ ಬ್ಯುರೋದಿಂದ]
ಬೊಗಳೂರು, ಏ.9- ಹಸಿ ನಾತಪುರದ ಮಾಜಿ 'ಪ್ರಧಾನ' ಮಂತ್ರಿ ರಾರಾವಿಂದ ಕ್ರೇಜಿವಾಲ್‌ಗೆ ಆಟೋ ಚಾಲಕನೊಬ್ಬ ತಪರಾಕಿ ನೀಡಿದ್ದು ಯಾಕೆ ಮತ್ತು ಅದು ಕೂಡ ಕೆನ್ನೆ ಕೆಂಪಗಾಗಿ ಒಂದು ಕಣ್ಣು ಕೆಂಪನೆ ಊದಿಕೊಳ್ಳುವಷ್ಟು ಬಲವಾಗಿ ಹೊಡೆದಿದ್ದು ಯಾಕೆ ಎಂಬ ಅಂಶವನ್ನು ಬೊಗಳೆ ರಗಳೆಯ ಅಸತ್ಯಾನ್ವೇಷಣಾ ಬ್ಯುರೋ ಪತ್ತೆ ಹಚ್ಚಿದೆ.

ತಮಗೆ ಹೊಡೆದ ಆಟೋ ಚಾಲಕನ ಮನೆಗೆ ಕ್ರೇಜಿವಾಲ್ ಭೇಟಿ ನೀಡಿ ಸಾಂತ್ವನ ಹೇಳಿದಾಗಲೇ ಮತ್ತು ಹೇಳಿಸಿಕೊಂಡಾಗಲೇ ಈ ಅಂಶ ಅಲ್ಲೇ ಮೂಲೆಯಲ್ಲಿ ವೀಕ್ಷಿಸುತ್ತಿದ್ದ ನಮ್ಮ ಏಕಸದಸ್ಯ ಬ್ಯುರೋದ ಎಲ್ಲ ಸದಸ್ಯರಿಗೂ ತಿಳಿದಿದೆ. ಕ್ರೇಜಿವಾಲ್ "ಸುಳ್ಳುಗಾರ" ಎನ್ನುತ್ತಾ ರೋಷಾವೇಷದಿಂದ ಹೊಡೆದರೂ ಮಾಜಿ ಸಿಎಂ ತಮ್ಮ ಮನೆಗೆ ಬಂದಾಗ ಅವರನ್ನೇ ದೇವರು, ದಿಂಡರು ಅಂತೆಲ್ಲಾ ಈ ಆಟೋ ಚಾಲಕ ಮತ್ತು ಆಮ್ ಆದ್ಮೀ ಪಕ್ಷದ ಬೆಂಬಲಿಗ ಕೊಂಡಾಡಿರುವ ಹಿನ್ನೆಲೆಯೂ ಬಯಲಾಗಿದೆ.

ಈ ಕುರಿತು ಬೊ.ರ. ಬ್ಯುರೋಗೆ ಮಾತ್ರ ಊದಿನ ಕೆನ್ನೆ, ಕೆಂಪು ಕಣ್ಣಿನೊಂದಿಗೆ ಸಮ್-ದರ್ಶನ ನೀಡಲು ಒಪ್ಪಿ ಮಾತನಾಡಿದ ಕ್ರೇಜಿವಾಲ್, ಚುನಾವಣಾ ಭರಾಟೆ ಜೋರಾಗಿರುವುದರಿಂದ, ಒಂದಿಷ್ಟು ಪ್ರಚಾರ ಬರಲಿ, ಟಿವಿ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಾಗಲಿ ಎಂಬ ಕಾರಣಕ್ಕೆ ತಾನು ಈ ಕಪಾಳ ಮೋಕ್ಷದ ನಾಟಕ ಏರ್ಪಡಿಸಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆತನನ್ನು ಕ್ಷಮಿಸುತ್ತೇನೆ ಮತ್ತು ಕೇಸು ದಾಖಲಿಸುವುದಿಲ್ಲ ಎಂದೆಲ್ಲಾ ಭರವಸೆ ನೀಡಿದ್ದೆ. ಆದರೆ, ಏಟಿನ ಮೊದಲು ನೋಟು ಸಿಗಬೇಕು ಎಂಬುದು ಆತನ ಆಗ್ರಹವಾಗಿತ್ತು. ಮೊದಲು ಏಟು, ಆ ಮೇಲೆ ನೋಟು ಅಂತ ನಾನು ಹೇಳಿದ್ದೆ. ಮೊದಲ ಮಾತುಕತೆಯ ವೇಳೆ ನೋಟು ಕೊಟ್ಟರೆ ಮಾತ್ರ ಏಟು ಅಂತ ನಿರ್ಧಾರವಾಗಿತ್ತು. ಈಗ ಈತ ಸುಳ್ಳಾಡುತ್ತಿದ್ದಾರೆ ಎಂಬುದು ಆಟೋ ಚಾಲಕನ ವಾದ. ಹೀಗಾಗಿ, ನಿಗದಿತ ದಿನದಂದು ತನ್ನಲ್ಲಿದ್ದ ಎಲ್ಲ ಶಕ್ತಿಯನ್ನೂ ಕೈಗೂಡಿಸಿಕೊಂಡು, ಬಾರಿಸಿದ್ದಾನೆ. ನಾನು ಗಾಂಧಿ ಸಮಾಧಿ ಬಳಿ ಹೋಗಿ 'ಹೇ ರಾಮ್' ಎನ್ನುತ್ತಾ ಸ್ವಲ್ಪ ಕಾಲ ಧ್ಯಾನ ಮಾಡಿ ಸುಧಾರಿಸಿಕೊಳ್ಳಬೇಕಾಯಿತು ಎಂದು ವಿವರಿಸಿದ್ದಾರೆ.

ಈಗ ಲೆಕ್ಕ ಎಲ್ಲ ಚುಕ್ತಾ ಆಗಿದೆ. ಹೀಗಾಗಿ ರಾರಾವಿಂದರೇ ನಮ್ಮ ದೇವರು ಅಂತ ಆಟೋ ಚಾಲಕನೂ ಸ್ಪಷ್ಟನೆ ನೀಡಿದ್ದಾನೆ.

2 Comments

ಏನಾದ್ರೂ ಹೇಳ್ರಪಾ :-D

 1. ಏಟಿನ ರೇಟು ಎಷ್ಟೂಂತ ಗೊತ್ತಾಗಲಿಲ್ವೆ!

  ReplyDelete
  Replies
  1. ರೇಟು ಹೇಳಿಬಿಟ್ಟರೆ, ಗೊತ್ತಾದವರೆಲ್ಲರೂ ಈ ರೀತಿಯ ಏಟಿಗೆ ಮುಂದಾದರೆ...
   ಇಂತಹಾ ದುರಾಲೋಚನೆ ಮಾಡಿಯೇ ರೇಟನ್ನು ಬಹಿರಂಗಪಡಿಸಿಲ್ಲ...

   Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post