[ಬೊಗಳೂರು ರೆಸಾರ್ಟ್ ವರದ್ದಿ ಬ್ಯುರೋದಿಂದ]
ಬೊಗಳೂರು, ಮಾ.21- ಜಗತ್ತಿನಾದ್ಯಂತ ಚುನಾವಣೆ ಘೋಷಣೆಯಾಗಿದೆ ಎಂದು ಯಾರೋ ಹೇಳಿದಾಕ್ಷಣ ಮತ್ತೊಮ್ಮೆ ನಿದ್ದೆಯಿಂದ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋ, ಸುದ್ದಿ ಪ್ರಕಟಣೆ ಮರುಪ್ರಾರಂಭಿಸಿದೆ.

ರೆಸಾರ್ಟಿನಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದಾಗ ಆಘಾತಕಾರಿಯೋ ಎಂಬಂತೆ ಈ ಚುನಾವಣೆ ಆದೇಶವು ಮೈಮೇಲೆ ಬಿದ್ದಾಕ್ಷಣ ಕಣ್ಣುಜ್ಜಿಕೊಂಡು ಹೊರಗೆ ನೋಡಿದಾಗ, ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಆಜೆಪಿ, ಈಜೆಪಿ ಮುಂತಾದ ಪಕ್ಷ-ಕಿರುಪಕ್ಷಗಳಲ್ಲಿರುವ ಶಾಸ'ಕರು'ಗಳೆಲ್ಲರೂ ಧಾವಂತದಿಂದ ಅತ್ತಿಂದಿತ್ತ ಓಡಾಡುತ್ತಿದ್ದುದು ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ತೂಕಡಿಸುತ್ತಲೇ ತನಿಖೆಗಿಳಿದಾಗ, ನಾಡಿನ ಎಲ್ಲ ರೆಸಾರ್ಟುಗಳು, ವಿಶೇಷವಾಗಿ ಬೊಗಳೂರು ಹೊರವಲಯದಲ್ಲಿರುವವುಗಳು, ಮೇ 8ರಿಂದಲೇ 'ಹೌಸ್‌ಫುಲ್' ಎಂದು ಘೋಷಿಸಿದ್ದು, ಕನಿಷ್ಠ ಪಕ್ಷ ನಾಲ್ಕೈದು ವಾರಗಳವರೆಗೆ ಬುಕಿಂಗ್ ಆಗಿವೆ ಎಂಬುದು ತಿಳಿದುಬಂದಿದೆ.

ತಾವು ಯಾವ ಪಕ್ಷದಲ್ಲಿದ್ದೇವೆ, ಅಧಿಕಾರದಲ್ಲಿದ್ದೇವೋ-ಪ್ರತಿಪಕ್ಷದಲ್ಲಿದ್ದೇವೋ ಎಂಬ ಗೊಂದಲದಲ್ಲಿಯೇ ಮುಳುಗಿರುವ ಬಿ-ಕೆ-ಜೆಪಿ ಶಾಸಕರು, ಸರ್ವತಂತ್ರ ಸ್ವತಂತ್ರರೆಲ್ಲರೂ ಈ ಬಾರಿ ಜನರು ತಮ್ಮನ್ನು ಒದ್ದೋಡಿಸಿ ಮನೆಗೆ ಕಳುಹಿಸುತ್ತಾರೋ, ಅಥವಾ ಪುನಃ ಜೋರಾಗಿ ಒದ್ದು ವಿಧಾನಸೌಧದೊಳಗೆ ಕಳುಹಿಸುತ್ತಾರೋ ಎಂಬ ಆತಂಕದಲ್ಲಿ ಮುಳುಗಿದ್ದಾರೆ.

ಯಾವುದಕ್ಕೂ ಇರಲಿ ಎಂಬುದಕ್ಕಾಗಿ ಆ ಬಣ, ಈ ಬಣಗಳೆಲ್ಲವೂ ಅಕ್ಕ-ಪಕ್ಕದಲ್ಲಿರುವ ಎಲ್ಲ ರೆಸಾರ್ಟ್‌ಗಳನ್ನು ಬುಕ್ ಮಾಡಿಕೊಂಡಿವೆ ಎಂಬುದು ತಿಳಿದುಬಂದಿದೆ. ಯಾಕೆಂದರೆ, ಮುಂದಿನ ಸರಕಾರ ರಚನೆ ಪ್ರಕ್ರಿಯೆಯು ರೆಸಾರ್ಟ್ ಮೂಲಕವೇ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಇರುವುದರಿಂದ ಈ ಕ್ರಮ ಅನುಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ರೆಸಾರ್ಟ್‌ನಿಂದಲೇ ವರದ್ದಿ ತಂದು ಸುರುವಲಾಗುತ್ತದೆ ಎಂದು ಬೊಗಳೂರು ಬ್ಯುರೋದ ದಿಕ್ಕೆಟ್ಟು ಎಚ್ಚೆತ್ತ ಸೊಂಪಾದ'ಕರು'ಗಳು ತಿಳಿಸಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. Replies
  1. ಮಡಿವಾಳ ವೆಂಕಟೇಶರೇ... ಬೊಗಳೂರಿಗೆ ಸುಸ್ವಾಗತ....

   ಅದೇನೋ ಉದುರಿಸಿ ಹೋಗಿರುವ ಹಾಗಿದೆಯಲ್ಲಾ.... ರೆಸಾರ್ಟಿನಲ್ಲಿ ಸಿಕ್ಕ ಗುಂಡು-ತುಂಡುಗಳೇ????

   Delete
 2. ಅನ್ವೇಷಿಗಳನ್ನು ನಿದ್ದೆಯಿಂದ ಬಡಿದೆಬ್ಬಿಸಿದ ಚುನಾವಣಾ ಘೋಷಣೆಗೆ ನಾನು ಋಣಿಯಾಗಿದ್ದೇನೆ. ಒಬ್ಬ ಉಮೇದುವಾರನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷದ ವತಿಯಿಂದ ಸ್ಪರ್ಧಿಸಬಹುದೆನ್ನುವ ಚುನಾವಣಾ ಸುಧಾರಣೆಯನ್ನು ಮಾಡಿರುವದಾಗಿ ಇದೀಗ ತಿಳಿದು ಬಂದಿದೆ! ಇದೊಂದು ಕ್ರಾಂತಿಕಾರಿ ಸುಧಾರಣೆಯಾಗಿದೆ!

  ReplyDelete
  Replies
  1. ಸುನಾಥರೇ,
   ನಿಮ್ಮ ದುರಾಲೋಚನೆಗಳ ಪಟ್ಟಿಯನ್ನೇ ಚುಚ್ಚುವಾಣಾ ಆಯೋಗಕ್ಕೆ ಕಳುಹಿಸಿದ್ದೇವೆ. ನರ್ಸ್ ಜಯಲಕ್ಷ್ಮೀ ಈ ಪ್ರಸ್ತಾಪಕ್ಕೆ ಒಪ್ಪಿದ್ದಾರೆಂದು ತಿಳಿದುಬಂದಿದೆ... ಹುಷಾರ್...

   Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post