[ಬೊಗಳೂರು ಕಸ ಬ್ಯುರೋದಿಂದ]
ಬೊಗಳೂರು, ನ.22- ಇನ್ನು ಮುಂದೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಸಲಾಗುತ್ತದೆ ಎಂದು ಕೇಂದ್ರದ ಉಪ (upa) ಸರಕಾರ ಘೋಷಿಸಿದೆ.

ಇದಕ್ಕೆ ಕಾರಣಗಳೇನೆಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಕೊರತೆ ಸಚಿವರನ್ನು ಪ್ರಶ್ನಿಸಿದಾಗ, ಮುಂಬಯಿ ಮೇಲೆ ದಾಳಿ ನಡೆಸಿ ಬಂಧಿತನಾಗಿದ್ದ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿರುವುದೇ ಇದಕ್ಕೆ ಕಾರಣವೆಂದು ತಿಳಿಸಿದ್ದಾರೆ.

ಅದು ಹೇಗಾಯಿತು ಎಂದು ಮತ್ತಷ್ಟು ಕೆದಕಿದಾಗ ಈ ಉತ್ತರವು ಅವರಿಂದ ಸಾದ್ಯಂತವಾಗಿ ವಿವರಿಸಲ್ಪಟ್ಟಿತು.

ಕಸಬ್‌ನನ್ನು ಮೊಟ್ಟೆ, ಬಿರಿಯಾನಿ ನೀಡಿ ಸಾಕಲು, ಕೆಳಗಿಟ್ಟರೆ ಇರುವೆ ಕಚ್ಚಿಕೊಂಡು ಹೋದೀತು, ಮೇಲಿಟ್ಟರೆ ಕಾಗೆ ಕೊಂಡೊಯ್ದೀತು ಎಂಬಂತೆ ರಕ್ಷಿಸಿಡುವುದಕ್ಕಾಗಿ ಇನ್ನು ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗಿಲ್ಲ. ಅವನಿಗೆ ಮರಾಠಿ ಭಾಷೆ ಬೋಧನೆಗೆ, ಪುಸ್ತಕಗಳ ಸೌಲಭ್ಯಕ್ಕೆ, ಅತ್ತಿತ್ತ ತಿರುಗಾಡಲು ಯಾವುದೇ ರೀತಿಯಲ್ಲಿಯೂ ಹಣ ಖರ್ಚು ಮಾಡಬೇಕಾಗಿಲ್ಲ. ಇದರೊಂದಿಗೆ ಅವನ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಗಳನ್ನು ಕೂಡ ಮನೆಗೆ ಕಳುಹಿಸಲಾಗುತ್ತದೆ. ರಕ್ಷಣೆಗಾಗಿ ರಚಿಸಲಾಗಿರುವ ಭದ್ರಕೋಟೆಯನ್ನು ಛಿದ್ರ ಮಾಡಲಾಗುತ್ತದೆ. ಮತ್ತು ಇದರೊಳಗಿನ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗಿಲ್ಲ.

ಇಷ್ಟು ಮಾತ್ರವೇ ಅಲ್ಲದೆ, ಕಸಬ್ ರಕ್ಷಣೆಗೆ ನಿಯೋಜಿಸಲಾಗಿದ್ದ 200ಕ್ಕೂ ಹೆಚ್ಚು ಪೊಲೀಸರು ಮನೆಗೆ ಹೋಗಬೇಕಿರುವುದರಿಂದ ಅವರಿಗೆ ವೇತನ ಪಾವತಿಸಬೇಕಾಗಿಲ್ಲ.

ರಾಜತಾಂತ್ರಿಕ ಒತ್ತಡ ಹೇರಬೇಕಾಗಿಲ್ಲ, ಪಾಕಿಸ್ತಾನ ಪ್ರವಾಸ ಮಾಡಬೇಕಾಗಿಲ್ಲ. ಅಮೆರಿಕವೆಂಬ ದೊಡ್ಡಣ್ಣನೆದುರು ಮಂಡಿಯೂರಿ, ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡಲು ಗೋಗರೆಯಲೆಂದು ಅಮೆರಿಕ ಪ್ರವಾಸ ಮಾಡಬೇಕಾಗಿಲ್ಲ.

ಇಷ್ಟೆಲ್ಲವೂ ಅಲ್ಲದೆ, ಮುಂಬಯಿ ದಾಳಿಗೆ ಸಂಬಂಧಿಸಿದಂತೆ ನಮಗೆ ಪರಿಹಾರವೂ ಸಿಕ್ಕಿಲ್ಲ, ನ್ಯಾಯವೂ ಸಿಕ್ಕಿಲ್ಲ ಎಂದು ಎಂದು ಮುಂಬಯಿ ದಾಳಿಯ ಸಂತ್ರಸ್ತರ ಮನೆಯವರು ಗದ್ದಲವೆಬ್ಬಿಸುವಂತಿಲ್ಲ. ಪ್ರತಿಪಕ್ಷಗಳು ಕೂಡ ಸುಮ್ಮನಿರುತ್ತವೆಯಾದುದರಿಂದ ದಿನಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತದೆ. ಹೀಗಾಗಿ ತನ್ನಿಂತಾನೇ, ಸರಕಾರದ ಗಮನಕ್ಕೂ ಬಾರದೆ ಏರುತ್ತಿರುವ ಬೆಲೆಗಳ ಬಗ್ಗೆ ಚಿಂತೆಯನ್ನೂ ಮಾಡಬೇಕಾಗಿಲ್ಲ ಎಂದಿರುವ ಮಾಹಿತಿ ತಂತ್ರಜ್ಞಾನ ಕೊರತೆ ಸಚಿವರು, ಬೊಗಳೂರು ಬ್ಯುರೋದ ಪ್ರಶ್ನೆಗೆ ಬೇಸ್ತು ಬಿದ್ದಂತೆ ಕಂಡುಬಂದರಾದರೂ, ಬ್ಯುರೋ ಸಿಬ್ಬಂದಿಯನ್ನೇ ತಮ್ಮ ಉತ್ತರಗಳ ಸುರಿಮಳೆಯಿಂದ ತತ್ತರಿಸುವಂತೆ ಮಾಡಿದರು.

3 Comments

ಏನಾದ್ರೂ ಹೇಳ್ರಪಾ :-D

  1. ತಮ್ಮನ್ನು ತತ್ತರಿಸುವ೦ತೆ ಉತ್ತರಿಸಿದ ಪ್ರಶ್ನೆಗಳನ್ನು ಹ್ಯಾ೦ಗ್ ಕತ್ತರಿಸಿದಿರಿ ಅನ್ನುವುದನ್ನು ಇನ್ನಷ್ಟು ವಿಸ್ತರಿಸಿ ಬಿತ್ತರಿಸಿ...!
    ಬೆಲೆ ಇಳಿಸಿದರೆ ಉಳಿದ ಹಣವನ್ನು ಹೇಗೆ ಖರ್ಚುಮಾಡುವುದು ಅ೦ತಾನೂ ತಿಳೀತಿಲ್ವೇ..!!

    ReplyDelete
  2. ಚುಕ್ಕಿಚಿತ್ತಾರರೇ ಹಾಗೂ ಸತ್ಯ ಹನಸೋಗೆ ಅವರೇ,
    ಹ್ಯಾಂಗ್ ಕತ್ತರಿಸಿದ್ದು ಅಂತ ಉತ್ತರಿಸಿ, ವಿಸ್ತರಿಸಿ, ಬಿತ್ತರಿಸಬೇಕಿದ್ದರೆ, ನಾವು ನಿದ್ದೆಯಿಂದ ಎಚ್ಚೆತ್ತುಕೊಳ್ಳುವಾಗ ತಡವಾಯಿತು ಅಂತ ಹೇಳಬಹುದು... ಅದಾಗಲೇ ಕಸಬ್ ಮತ್ತು ಅಫಜಲ್‌ಗಳನ್ನು ಹ್ಯಾಂಗ್ ಮಾಡಿ ಹ್ಯಾಂಗ್ಯಾಂಗೋ ಆಗಿಬಿಟ್ಟಿದೆ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post