ಬೊಗಳೆ ರಗಳೆ

header ads

ಬೊಗಳೆ: ತಲೆ ಎಣಿಕೆಗೆ ಪರದಾಡಿದ ಸಿಬ್ಬಂದಿ!

[ತಲೆ ಸರಿ ಇಲ್ಲದ ಬ್ಯುರೋದಿಂದ]
ಬೊಗಳೂರು,ಅ.19- ರಾಜ್ಯ ರಾಜಕೀಯದ ಕೆಸರಲ್ಲಿ ಮುಳುಗಿಯೇ ಇರುವ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ ದಿಢೀರ್ ಆಗಿ ತಲೆಮರೆಸಿಕೊಂಡಂತೆ ಕೊಂಡರೂ ಆಗಾಗ್ಗೆ ಕೆಸರಿನೊಳಗಿನಿಂದಲೇ ತಲೆ ಎತ್ತುತ್ತಿರುವುದರ ಹಿನ್ನೆಲೆಯನ್ನು ಸ್ವತಃ ಏಕಸದಸ್ಯ ಬ್ಯುರೋದ ಸಿಬ್ಬಂದಿಗಳೇ ಪತ್ತೆ ಹಚ್ಚಿದ ಘಟನೆಯೊಂದು ತಡವಾಗಿ ವರದ್ದಿಯಾಗಿದೆ.

ರಾಜ್ಯ ರಾಜಕಾರಣದಲ್ಲಿ ಕೋಟಿ ಕೋಟಿಗಳ ವ್ಯವಹಾರವೇ ನಡೆಯುತ್ತಿರುವುರದಿಂದಾಗಿ ಲಕ್ಷಕ್ಕೆ ಲಕ್ಷ್ಯವೇ ಇಲ್ಲ, ಸಾವಿರದ ಸರದಾರರೇ ಇಲ್ಲವೆಂಬಂತಹಾ ಪರಿಸ್ಥಿತಿ ಉದ್ಭವವಾಗಿದೆ. ಇದರ ನಡುವೆ, ಈ ಕೋಟಿ ಕೋಟಿ ವ್ಯವಹಾರಗಳಲ್ಲಿ ಯಾವ ಕುರಿಗಳು ಯಾರಿಗೆ ವ್ಯಾಪಾರವಾಗುತ್ತಿವೆ ಎಂಬುದನ್ನು ಲೆಕ್ಕಾಚಾರ ಹಾಕಲು ನಿಧಾನಸಭೆಯಲ್ಲಿ ಸಭೆಯ ಅದಕ್ಷರು ಕುರಿಗಳ ತಲೆ ಎಣಿಕೆಗೆ ಸೂಚಿಸಿದ್ದರು.

ಯುಪಿಎ ನೇತೃತ್ವದ ಸರಕಾರದ ರಾಜ್ಯಪಾಲರೂ ಕೂಡ, ಮೊದಲನೇ ವ್ಯಾಪಾರ ವಹಿವಾಟುಗಳು ಸರಿಯಾಗಿ ನಡೆದಿಲ್ಲ, ಎರಡನೇ ಬಾರಿ ಸರಿಯಾಗಿ ಲೆಕ್ಕಾಚಾರ ಮಾಡಿ ತೋರಿಸಿ ಎಂದು ಮಾನ್ಯ ಅಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು, ಸೆನ್ಸೆಕ್ಸ್ ಸೂಚ್ಯಂಕವು 10 ಕೋಟಿಯಿಂದ 25 ಕೋಟಿಗೆ ದಿಢೀರ್ ಏರಿಕೆಯಾಗಲು ಕಾರಣರಾಗಿದ್ದರು.

ಅದು 50 ಕೋಟಿಗೆ ತಲುಪಿತ್ತು, ಈ ಸೆನ್ಸೆಕ್ಸ್ ಸೂಚ್ಯಂಕದ ಹಿಂದೆ "ಸ್ಥಾಪಿತ" ಹಿತಾಸಕ್ತಿಗಳ ಕೈವಾಡವಿದೆ ಎಂದು ನಿದ್ದೆರಾಮಯ್ಯನವರು ಕೂಡ ಆರೋಪಿಸುತ್ತಲೇ ಬಂದಿದ್ದಾರೆ. ಅದಿರಲಿ, ಮೊನ್ನೆ ಮೊನ್ನೆ ಮಾರುಕಟ್ಟೆಯ ಹರಾಜು ಪ್ರಕ್ರಿಯೆ ವೇಳೆ, ತಲೆಗಳನ್ನು ಎಣಿಸುವಾಗ, ಸಾಕಷ್ಟು ಬಾರಿ ಎಣಿಸಿದರೂ ಆಗಾಗ್ಗೆ ಲೆಕ್ಕ ತಪ್ಪುತ್ತಲೇ ಇತ್ತು ಎಂಬುದನ್ನು ನಮ್ಮ ವರದ್ದಿಗಾರರು ಕಂಡುಕೊಂಡಿದ್ದಾರೆ.

ತಾಂತ್ರಿಕವಾಗಿ ಮುಂದುವರಿದ ಈ ಯುಗದಲ್ಲಿಯೂ ಈ ರೀತಿ ತಪ್ಪುಗಳಾಗುತ್ತವೆಯೇ ಎಂದು ಜನ ಸಾಮಾನ್ಯರು ಬೆರಳನ್ನು ಮೂಗಿನೊಳಗೆ ಹಾಕಿ ಗಣಿಗಾರಿಕೆ ನಡೆಸುತ್ತಾ ಅಚ್ಚರಿಪಡುತ್ತಿರುವಂತೆಯೇ, ಲೆಕ್ಕ ತಪ್ಪಲು ಕಾರಣವನ್ನು ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳ ಮುಖ್ಯಸ್ಥ ಅನ್ವೇಷಿ ಪತ್ತೆ ಹಚ್ಚಿದ್ದಾರೆ.

ಅವರ ಪ್ರಕಾರ, ಲೆಕ್ಕ ತಪ್ಪಲು ಕಾರಣಗಳು ಹಲವು. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
1. ನಾವು ಆರಿಸಿ ಕಳುಹಿಸಿದ ಕೆಲವರಿಗೆ ತಲೆಯೇ ಇರಲಿಲ್ಲ.
2. ಇನ್ನು ಕೆಲವರು ಕೋಟಿ ಕೋಟಿ ತೆಗೆದುಕೊಂಡಾಗ ತಲೆ 'ಮರೆಸಿ'ಕೊಂಡಿದ್ದರು.
3. ಮತ್ತೆ ಕೆಲವರಿಗೆ ಸಾಕ್ಷಿ ಪ್ರಜ್ಞೆ ಕಾಡಿ, ಮತದಾರರ ಎದುರು ತಲೆ ಎತ್ತುವುದು ಹೇಗೆ ಎಂಬ ಚಿಂತೆಯಿಂದಾಗಿ, ತಲೆ ತಗ್ಗಿಸಿ ಕುಳಿತಿದ್ದರು.
4. ಇನ್ನು ಕೆಲವರ ತಲೆ ಕಂಡರೂ, ಅದಕ್ಕೆ ಬಡಿದು ನೋಡಿದಾಗ ಟಣ್ ಟಣ್ ಅಂತ ಧ್ವನಿ ಹೊರಟು, ಒಳಗೆ ಪೊಳ್ಳು ಎಂಬುದು ಸಾಬೀತಾದ ಕಾರಣ, ಈ ತಲೆಗಳನ್ನು ರಿಜೆಕ್ಟ್ ಮಾಡಲಾಯಿತು.
5. ಮತ್ತೆ ಕೆಲವರ ತಲೆ ಸರಿ ಇಲ್ಲದ ಕಾರಣದಿಂದಾಗಿ ಅದು ಲೆಕ್ಕಕ್ಕೇ ಸಿಕ್ಕಿರಲಿಲ್ಲ.
6. ಮತ್ತೆ ಕೆಲವರ ಬೋಳು ತಲೆಯನ್ನು ಬಿಚ್ಚಿ ನೋಡಿದಾಗ, ಅಲ್ಲಿ ಬರೇ ಕಲ್ಲು ಮಣ್ಣು, ಹುಲ್ಲು, ಸಗಣಿಯೇ ತುಂಬಿದ್ದ ಕಾರಣ, ಅವುಗಳೂ ಲೆಕ್ಕದಿಂದ ತಿರಸ್ಕೃತವಾದವು.

ಈ ಕಾರಣದಿಂದಾಗಿಯೇ ಲೆಕ್ಕ ತಪ್ಪಿತು, ವಿಶ್ವಾಸಮತ ಸಾಬೀತಾಗದಿದ್ದರೂ, ಅವಿಶ್ವಾಸ ಮತವಂತೂ ಸಾಬೀತಾಯಿತು ಎಂದು ಮೂಲಗಳು ವರದ್ದಿ ತಂದು ಸುರಿದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ಕಾಲುಗಳನ್ನು ಎಣಿಸಿ ೨ ರಿಂದ ಭಾಗಿಸುವುದು ಒಳಿತಿತ್ತು

    ಪ್ರತ್ಯುತ್ತರಅಳಿಸಿ
  2. ಟೀ. ವೀ ಗಿಂತ ನಿಮ್ಮ ವರದ್ದಿಯೇ ಸಖತ್ತಾಗಿದೆ!

    ಪ್ರತ್ಯುತ್ತರಅಳಿಸಿ
  3. ಕೆಲವು ಕುರಿಕಳ್ಳರು ಕುರಿಗಳನ್ನು ಮೇಯಿಸಲು ಗೋವಾಕ್ಕೆ ಹೋಗಿದ್ದರಂತಲ್ಲ? ಕೆಲವು ತೋಳಗಳು ಕುರಿವೇಷದಲ್ಲಿ ತಿರುಗಾಡುತ್ತಿವೆಯಂತೆ?--ತಲೆ ಮೇಲೆ ಹುಲ್ಲಿನ ಹೊರೆ ಹೊತ್ತುಕೊಂಡು!

    ಪ್ರತ್ಯುತ್ತರಅಳಿಸಿ
  4. ಅನ್ವೇಷಿಗಳೇ,

    ಎಲ್ಲಾ ಓಕೆ..ಆದರೆ ಕುರಿಗಳು ತಲೆ ತಗ್ಗಿಸಿ ಕುಳಿತಿದ್ದರು ಎನ್ನುವುದುಸ್ ಶುದ್ಧಾನುಶುದ್ಧ ಸುಳ್ಳು ಅನಿಸುತ್ತೆ..

    ಅಷ್ಟೆಲ್ಲಾ ಪಾಪಪ್ರಜ್ಞೆ ಇದ್ದರೆ ಈ ಸ್ಥಿತಿ ಬರುತಿತ್ತೇ..ವಿಧಾನಸೌಧ ರಿಸಾರ್ಟ್ ಆಗುತಿತ್ತೇ..

    ಪ್ರತ್ಯುತ್ತರಅಳಿಸಿ
  5. ಶ್ರೀನಿಧಿಯವರೇ,
    ನಿಮ್ಮ ಸೂತ್ರದ ಪ್ರಕಾರ, ಸಮಾ ಅರ್ಧರ್ಧ ಪಾಲು ಮಾಡುವುದು ಅಂತ... ಅಂದರೆ ಕತ್ತರಿಸಬೇಕೂಂತ.... ನಿಮ್ಮ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ.

    ಪ್ರತ್ಯುತ್ತರಅಳಿಸಿ
  6. ಕುಮಾರರೇ, ಬೊಗಳೂರಿಗೆ ಸ್ವಾಗತ.
    ಟೀವೀಯವರಿಗೇನಾದರೂ ಹೇಳಿಬಿಟ್ಟೀರಾ ಮತ್ತೆ....ನಮಗೆ ಪುರುಸೊತ್ತಿಲ್ಲಪ್ಪ... ಅಲ್ಲಿನೂ ವರದ್ದಿ ಸುರಿಯುವುದಕ್ಕೆ!

    ಪ್ರತ್ಯುತ್ತರಅಳಿಸಿ
  7. ಸುನಾಥರೇ,
    ನೀವು ಕೇಳಿದ್ದೆಲ್ಲಾ ಸುಳ್ಳೂಂತ ಸಾಬೀತಾಗಿವೆ. ಕುರಿ ವೇಷದಲ್ಲಿ, ತೋಳದ ವೇಷದಲ್ಲಿ ಇರೋದೆಲ್ಲಾ ಮಂಕಿಗಳು, ಅದು ಕೂಡ ಹೆಂಡ ಕುಡಿದ ಮಂಕಿಗಳು ಅಂತ ಜಗಜ್ಜಾಹೀರಾಗಿದೆ...

    ಪ್ರತ್ಯುತ್ತರಅಳಿಸಿ
  8. ಅಪ್ಪ-ಅಮ್ಮಾವ್ರೇ,
    ತಲೆ ತಗ್ಗಿಸೋದು ನೆಪ ಮಾತ್ರಕ್ಕೆ ಮಾತ್ರ... ಯಾಕಂದ್ರೆ ತಗ್ಗಿಸಿದ್ರೆ ಮಾತ್ರಾ ಯಾರಾದರೂ ರೇಟು ಏರಿಸಲು ಬರ್ತಾರೆ ಅನ್ನೋ ಚಾಣಾಕ್ಷ ತಂತ್ರವದು. ನಮಗೂ ಅಸಮಾಧಾನವಾಗಿದೆ, ನಮಗೂ ಹಣ ಎಲ್ಲಿಂದ್ಲಾದ್ರೂ ಬರ್ಲಿ ಅನ್ನೋ ಸದುದ್ದೇಶ!

    ಪ್ರತ್ಯುತ್ತರಅಳಿಸಿ
  9. ಮಹೇಶ ಅವರೆ, ಬೊಗಳೂರಿಗೆ ಸ್ವಾಗತ.
    ವೆರಿ ಗುದ್ದು ಕೊಟ್ಟು ಹೋಗಿದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D