(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಅ.11- ಕರ್‌ನಾಟಕದ ರೆಸಾರ್ಟ್ ರಾಜಕಾರಣ ಹೊಸ ತಿರುವು ಪಡೆದುಕೊಂಡಿದ್ದು, ತಮಗೆ ವಿಧಾನಸಭೆಯೇ ಬೇಡ ಎಂದು ಎಲ್ಲ ಶಾಸಕರೂ ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಬೊಗಳೂರು ವಿಶೇಷ ತನಿಖಾ ತಂಡವು ಮಾಟ ಮಂತ್ರ ಬ್ಯೂರೋದ ಸಹಾಯ ಪಡೆದು ವಿಧಾನಸಭೆಯನ್ನು ಪರಿಶೀಲಿಸಲಾಗಿ, ವಿಧಾನಸಭೆಯ ಸುತ್ತಲೂ ಕೆಂಪು ಕೆಂಪು ರಕ್ತ, ಕುಂಕುಮ, ನಿಂಬೆಹಣ್ಣು, ಗೊಂಬೆ, ಆರ್ಯಭಟ ಉಪಗ್ರಹವನ್ನು ಹೋಲುತ್ತಿರುವಂತೆ ನಿಂಬೆ ಹಣ್ಣಿಗೆ ಮೊಳೆ ಚುಚ್ಚಿ ಮಾಡಿದ ತಂತ್ರಗಳು... ಇವುಗಳೆಲ್ಲವೂ ವಿಧಾನಸಭವನ್ನು ನಿರ್ನಾಮ ಮಾಡುವ ಸಂಚು ಎಂದು ಪತ್ತೆ ಹಚ್ಚಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಹೊರವಲಯ, ಗೋವಾ, ಪುಣೆ, ಕೊಚ್ಚಿ ಇತ್ಯಾದಿಗಳೇ ಶಾಸಕರನ್ನು ಹೆಚ್ಚಾಗಿ ಸೆಳೆಯುತ್ತಿರುವುದರಿಂದ, ಬೆಂಗಳೂರಿನಲ್ಲಿ ವಿಧಾನಸೌಧವನ್ನು ಒಡೆದು ಅಲ್ಲಿ ರೆಸಾರ್ಟ್ ಕಟ್ಟಿಸಬೇಕು, ಸಂಪುಟ ಸಭೆ, ವಿಧಾನಸಭೆ ಅಧಿವೇಶನ ಎಲ್ಲವೂ ಈ ರೆಸಾರ್ಟ್‌ಗಳಲ್ಲೇ ನಡೆಯಬೇಕು ಎಂದು ಶಾಸ-ಕರುಗಳೆಲ್ಲರೂ ಬೊಗಳೂರು ಬ್ಯುರೋದ ಮೂಲಕ ಒತ್ತಾಯಿಸಿದ್ದಾರೆ.

ಈ ಮಧ್ಯೆ, ಮತ್ತೊಂದು ಮೂಲವೊಂದು ಹೊಸ ಐಡಿಯಾವನ್ನು ಕೊಟ್ಟಿದ್ದು, ಅಷ್ಟೆಲ್ಲಾ ಐಷಾರಾಮಿ ರೆಸಾರ್ಟ್‌ಗಳನ್ನು ಕಟ್ಟಿಸಲು ಸಾಕಷ್ಟು ದುಡ್ಡು ಬೇಕಾಗುತ್ತದೆ. ಈಗಾಗಲೇ ರೆಸಾರ್ಟ್‌ಗಳಿಗೆ ತಿರುಗಾಡಲು ವಿಮಾನದ ಖರ್ಚು, ರೆಸಾರ್ಟ್ ಖರ್ಚು ಎಂದೆಲ್ಲಾ ರಾಜ್ಯದ ಖಜಾನೆ ಖಾಲಿಯಾಗಿದೆ. ಇನ್ನು ಕೊಡಲು ಜನರ ಬಳಿ ಹಣವೂ ಇಲ್ಲ. ಹೀಗಾಗಿ, ಗೋವಾವನ್ನೇ ಅಥವಾ ಪುಣೆಯ ಲೋನಾವಲದಲ್ಲಿರುವ ಆಂಬಿವ್ಯಾಲಿ ರೆಸಾರ್ಟ್ ಅನ್ನೇ ಬೆಂಗಳೂರಿನಲ್ಲಿ ತಂದು ಇಟ್ಟರೆ ಎಲ್ಲ ಸಮಸ್ಯೆಗಳೂ ಪರಿಹಾರವಾದಂತೆಯೇ ಎಂಬ ಅಮೂಲ್ಯ ಸಲಹೆ ನೀಡಿದ್ದಾರೆ.

ಈ ಸಲಹೆಯ ಪರಿಶೀಲನೆಗೆ ಮುಖ್ಯಕಂತ್ರಿಗಳು ಬೊಗಳೂರು ಏಕ ಸದಸ್ಯ ಬ್ಯುರೋದ ಸಮಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿದ್ದು, ಸಮಿತಿಯ ಸದಸ್ಯರಿಗೆ ತಲಾ ಕೋಟಿ ಕೋಟಿ ಕೊಡಲಾಗುತ್ತಿದೆಯಾದರೂ, 'ಕುದುರೆ ವ್ಯಾಪಾರ'ವೇನೂ ನಡೆಯಲಿಲ್ಲ ಎನ್ನುತ್ತಾ, ಈ ಸಮಿತಿ ಸದಸ್ಯತ್ವವನ್ನು ಒಪ್ಪಿಕೊಳ್ಳಲಾಗಿದೆ ಎಂದು ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಇತ್ತೀಚೆಗೆ ಬಂದಿರುವ ವರದ್ದಿಗಳ ಪ್ರಕಾರ, ದೇಶದ ಎಲ್ಲ ರೆಸಾರ್ಟ್‌ಗಳು 'ರೆಸಾರ್ಟ್ ರಾಜಕೀಯ ಪ್ಯಾಕೇಜ್'ಗಳನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ನೀಡುತ್ತಿದ್ದು, ಭರ್ಜರಿ ಡಿಸ್ಕೌಂಟ್, ಹಬ್ಬದುಡುಗೊರೆ ಇತ್ಯಾದಿಗಳಿವೆ ಎಂದು ನಮ್ಮ ಜಾಹೀರಾತುದಾರ ಬಾತ್‌ಮೀದಾರರು ಹೇಳಿದ್ದಾರೆ.

12 Comments

ಏನಾದ್ರೂ ಹೇಳ್ರಪಾ :-D

 1. ಇದೊಂದು ಸಲ ಮಾತ್ರ ನೀವು ಹೇಳಿದ್ದು ನಿಜವಾಗೋ ಹಾಗಿದೆ. ವಿಧಾನ ಸೌಧ ದ ಕಿಟಕಿ ಬಾಗಿಲುಗಳನ್ನೆಲ್ಲ ಆಗಲೇ ಒಡೆದಾಗಿದೆಯಂತೆ

  ReplyDelete
 2. ಅನ್ವೇಷಿಯವರೆ,
  ಸಂಕೀರ್ಣ ಸಮಸ್ಯೆಗಳಿಗೆ ದಂಗು ಬಡಿಸುವಂತಹ ಸರಳ ಪರಿಹಾರ ಕಂಡು ಹಿಡಿಯುವದರಲ್ಲಿ ನೀವು ನಿಷ್ಣಾತರು. ನಿಮಗೆ ಟೋಪಿ ಬಿಚ್ಚುತ್ತಿದ್ದೇನೆ,(Hats off), ಅನ್ವೇಷಿಯವರೆ!
  ಅಂದ ಹಾಗೆ ಈಗ ನಡೆಯುತ್ತಿರುವದು ‘ಕತ್ತೆ ವ್ಯಾಪಾರ’ ಎಂದು ಕರ್ನಾಟಕದ ಅಗಸರು
  ದಿಲ್ಲಿಗೆ ದೂರು ನೀಡಿದ್ದಾರಂತೆ.

  ReplyDelete
 3. ನೀವಿನ್ನೂ ಚಿಂತನೆಯಲ್ಲೇ ಇದ್ದೀರಲ್ಲ ಸ್ವಾಮಿ, ಅಲ್ಲಾಗಲೇ ಕೆಲಸ ಶುರುವಾಗಿದೆ !. ಆದರೆ ನೀವು ’ಚಿಂತನೆ’ ಎಂದಷ್ಟೆ ಹೇಳಿದ್ದರಿಂದ ರೆಸಾರ್ಟುಗಳಲ್ಲೇ ಜೀವಮಾನ ಕಳೇಯಬೇಕೆಂಬ ಆಸೆಯಿದ್ದ ಜಾರಕಾರಣಿಗಳಿಗೆ ನಿರಾಸೆಯಾಗಿಯಂತೆ !.

  ReplyDelete
 4. ಅವರ ಗುದ್ದಾಟಗಳಿಗೆ ನಮ್ಮ ಮನೆ ಟೀವಿ ಎಲ್ಲಿ ಒಡೆದು ಹೋಗುವುದೋ ಅನ್ನುವುದು ನನ್ನ ಚಿ೦ತೆ.....!!

  ReplyDelete
 5. ಸೊಂಪಾದಕರು ಈ ಸಮಿತಿಯಲ್ಲಿದ್ದುಕೊಂಡು ಕೋಟ್ಯಾನುಕೋಟಿ ನುಂಗಿದ್ದಾರೆ ಎಂದು ಗುಪ್ತಚಾರ ವರದಿ ಹೇಳುತ್ತಿದೆ..

  ReplyDelete
 6. ತೇಜಸ್ವಿನಿ ಹೆಗಡೆ ಅವರೇ,
  ಹೌದು ಹೌದು, ಇವೆಲ್ಲವೂ ಈ ಐಡಿಯಾಗಳಿಗಾಗಿ Eye ದಿಯಾ ಅಂದರು ನಮ್ಮ ಬೊಗಳೂರು ಮಂದಿ!

  ReplyDelete
 7. ಶ್ರೀನಿಧಿ ಹಂದೆಯವರೇ,
  ನೀವು ಕಿಟಕಿ ಬಾಗಿಲುಗಳನ್ನೆಲ್ಲಾ ಒದ್ದು ಒಡೆದದ್ದನ್ನು ಪತ್ತೆ ಹಚ್ಚಿ, ನಮ್ಮ ಹೆಸರನ್ನು ಸತ್ಯಾನ್ವೇಷಿ ಅಂತ ಅಪಪ್ರಚಾರ ಮಾಡುವ ಪ್ರಯತ್ನದಲ್ಲಿ ಸಫಲರಾಗುತ್ತಿರುವುದು ನಮ್ಮ ಬ್ಯುರೋದ ಸಮಸತ್ತ ಸಿಬ್ಬಂದಿಗೆ ಆತಂಕಕಾರಿಯಾಗಿ ಪರಿಣಮಿಸಿದೆ.

  ReplyDelete
 8. ಸುನಾಥರೇ
  ನೀವು ಟೋಪಿ ಬಿಚ್ಚಿದ ತಕ್ಷಣವೇ, ಟೋಪಿಧಾರಿ ಪಕ್ಷದವರು ಜನರಿಗೆ ಟೋಪಿ ಹಾಕುವ ಬದಲು ನಿಮಗೇ ಟೋಪಿ ಹಾಕಲು ಬರಬಹುದು, ಹುಷಾರ್!
  ಅದೇ ರೀತಿ, ನಿಮ್ಮ ಬಗ್ಗೆ ನಮ್ಮ ಗಾರ್ದಭ ಸಂಘವು ಕೂಡ ಶೀಘ್ರವೇ ಕೋರ್ಟ್ ಮೆಟ್ಟಿಲೇರಿ, ಮೂರನೇ ಒಂದು ಭಾಗವನ್ನು ಪಡೆಯಲು ಕಾತುರವಾಗಿದೆಯಂತೆ. ಅದರ ಬಗ್ಗೆಯೂ ಗಮನದಲ್ಲಿರಲಿ.

  ReplyDelete
 9. ಸುಬ್ರಹ್ಮಣ್ಯರೇ,
  ನಾವು ಚಿಂತನೆಯಲ್ಲಿ ಮುಳುಗಿದ್ದೇವೆ ಅಂತ ಒಂದು ಗಾಳಿ ಸುದ್ದಿ ಹಬ್ಬಿಸಿದ್ದಷ್ಟೇ. ಈ ಸುದ್ದಿ ಹಬ್ಬಿದ ತಕ್ಷಣವೇ ಸಾಕಷ್ಟು ಸೂಟ್ ಕೇಸುಗಳು ಬರಲಾರಂಭಿಸಿವೆ. ಇನ್ನು ರೆಸಾರ್ಟೂ ಬೇಡ, ವಿಧಾನಸೌಧವೂ ಬೇಡ.

  ReplyDelete
 10. ಚುಕ್ಕಿಗಳಿಂದ ಚಿತ್ತಾರ ಬಿಡಿಸುವವರೇ,
  ಇನ್ನು ಮುಂದೆ ಟೀವಿಗಳನ್ನು ಕೂಡ ಕಲ್ಲಿನಿಂದಲೇ ನಿರ್ಮಿಸಿಕೊಡುವ ತಂತ್ರಜ್ಞಾನವನ್ನು ಹೊರತರುವಂತೆ ಇದೇ ಜಾರಕಾರಣಿಗಳು ವಿಜ್ಞಾನಿಗಳಿಗೆ ಆದೇಶಿಸಿದ್ದಾರೆಂದು ವರದ್ದಿಯಾಗಿದೆ.

  ReplyDelete
 11. ಅಪ್ಪ-ಅಮ್ಮನವರೇ,
  ನಿಮ್ಮ ಹೇಳಿಕೆಯನ್ನು ನಾವು ಖಡಾ ಖಂಡಿತವಾಗಿ ನಿರಾಕರಿಸುತ್ತೇವೆ. ಆದರೆ ಈ ಕೋಟ್ಯಾನುಕೋಟಿ ಎಲ್ಲಿಟ್ಟಿದ್ದೇವೆ ಎಂಬುದನ್ನು ಮಾತ್ರ ಹೇಳಲಾರೆವು ನಾವು...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post