[ಬೊಗಳೂರು ರೆಸಾರ್ಟ್ ವರದ್ದಿಗಾರಿಕೆ ಬ್ಯುರೋದಿಂದ]
ಬೊಗಳೂರು, ಅ.25- ಕರುನಾಟಕದಲ್ಲಿ ಸಾಕಷ್ಟು ನಾಟಕಗಳು ನಡೆಯುತ್ತಿರುವಂತೆಯೇ, 224 ಮಂದಿ ಶೋಷಕರಿರುವ ಆ ರಾಜ್ಯದ ಶೋಷಕರೆಲ್ಲರೂ ಇತ್ತೀಚೆಗೆ ರೆಸಾರ್ಟ್‌ನ ಈಜುಕೊಳಗಳಲ್ಲಿ ಮುಳುಗೇಳುತ್ತಿರುವುದು ಮತ್ತು ಅಲ್ಲಿಗೇ ಅಂಟಿಕೊಂಡಿರುವುದರಿಂದಾಗಿ, ಬೊಗಳೆ ರಗಳೆ ಏಕ ಸದಸ್ಯ ಬ್ಯುರೋದಲ್ಲಿ ಒಬ್ಬ ಪತ್ರಕರ್ತರನ್ನು ರೆಸಾರ್ಟ್ ಬೀಟ್‌ಗೇ ಹಾಕಬೇಕಾದ ಅನಿವಾರ್ಯತೆಗೆ ಬೊಗಳೆ ರಗಳೆ ಬ್ಯುರೋ ಸಿಲುಕಿದೆ.

ಬೆಳಿಗ್ಗೆ ಎದ್ದ ತಕ್ಷಣವೇ ರೆಸಾರ್ಟಿಗೆ ಹೋಗುವುದೇ ಈ ವರದ್ದಿಗಾರರ ಕೆಲಸ. ಹೀಗಾಗಿ ಅವರಿಗೆ ರೆಸಾರ್ಟ್ ರದ್ದಿಗಾರ ಎಂಬ ವಿಶೇಷ ಡೆಸಿಗ್ನೇಷನ್ ನೀಡಲಾಗಿದ್ದು, ರೆಸಾರ್ಟಿನಲ್ಲಿ ಹೇಗೆ ಈಜಬೇಕು, ಅಲ್ಲಿ ಯಾವ ಥರದ ಆಹಾರ ತಿನ್ನಬೇಕು, ಅಲ್ಲಿ ಫೋನ್ ಬಳಕೆ ಮಾಡಬೇಕೇ ಬೇಡವೇ, ಸಾಧ್ಯವಾಗದಿದ್ದರೆ ಹೇಗೆ ಎಂದೆಲ್ಲಾ ತರಬೇತಿ ನೀಡಿ ಕಳುಹಿಸಲಾಗುತ್ತಿದೆ ಎಂದು ಸೊಂಪಾದ-ಕರುಗಳು ಹೇಳಿದ್ದಾರೆ.

ತಮಗೆ ಮಾತ್ರ ರಾಜಕೀಯ ಮಾಡಲು ಗೊತ್ತಿರುವುದು ಎಂದು ಕೈಗಳು, ತೆನೆ ಹೊತ್ತ ಮಹಿಳೆಯರು ತಿಳಿದುಕೊಂಡಿದ್ದರೆ, ನಮಗೂ ರಾಜಕೀಯ ಬರುತ್ತದೆ ಎಂದು ಕಮಲ ತೋರಿಸಿಕೊಟ್ಟಿದ್ದಾಳೆ. ಹೀಗಾಗಿ ಎಲ್ಲರೂ ಪರಸ್ಪರ ಪತರಗುಟ್ಟತೊಡಗಿದ್ದಾರೆ ಎಂದು ಅರಾಜಕೀಯ ವರದ್ದಿಗಾರರು ರೆಸಾರ್ಟಿನಿಂದ ಮೊದಲ ವರದ್ದಿ ಕಳುಹಿಸಿದ್ದಾರೆ.

ಎಲ್ಲ ಪಕ್ಷಗಳಲ್ಲೂ ಹೂವಿನಿಂದ ಹೂವಿಗೆ ಹಾರುವ ದುಂಬಿಗಳದ್ದೇ ಕಾರುಬಾರು. ಅಲ್ಲಿ ಜೇನು ಮುಗಿದ ತಕ್ಷಣ ಮರಳಿ ಹಿಂದಿದ್ದ ಹೂವಿಗೋ, ಬೇರೊಂದು ಹೂವಿಗೋ ಹಾರಾಟ ಮುಂದುವರಿಸುತ್ತವೆ. ಆದರೆ ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳನೇ ಆಗಿರುವುದರಿಂದ ಎಲ್ಲ ಪಕ್ಷಗಳಲ್ಲಿರುವ ಶೋಷಕರಲ್ಲಿ ನಿಜವಾದ ಶಾಸಕರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಭಾರೀ ತ್ರಾಸದಾಯಕ ಕೆಲಸ ಎಂದಿದ್ದಾರೆ ರೆಸಾರ್ಟು ಬಾತ್ಮೀದಾರರು.

ಪಕ್ಷಕ್ಕೇ ಕೈಮುಗಿದು ಆಚೆ ಹೋದ, ಕಮಲದ ಕೈ ಹಿಡಿದ ಮತ್ತು ಈ ರೀತಿ ಮಾಡಿ ಹಸ್ತವನ್ನೇ ಕತ್ತರಿಸಿದವರ ಕೈ ಕತ್ತರಿಸುತ್ತೇವೆ ಎಂದು ಈಗಾಗಲೇ ಮಹಿಳೆಯ ತಲೆಯಲ್ಲಿದ್ದ ತೆನೆ ಕತ್ತರಿಸಿ ಅಭ್ಯಾಸವಿದ್ದ ಆರ್. ವಿದೇಶಪಾಂಡೆಯವರು ಘೋಷಿಸಿದ್ದಾರೆ.

ಒಟ್ಟಿನಲ್ಲಿ ಹೆಂಡ ಕುಡಿದ ಕೋತಿಗಳಂತೆ ಆಡುವವರ ಬಾಲ ಕತ್ತರಿಸಲು ಜನತೆ ಸಿದ್ಧತೆ ಮಾಡಿದ್ದಾರೆ. ಸುಮ್ನೇ ಕೈ, ಕಾಲು, ಅದೂ, ಇದು ಕತ್ತರಿಸಿ ಅಂತೆಲ್ಲಾ ಹೇಳುತ್ತಾ ರಾಜ್ಯದ ಜನತೆಗೆ ಬಿಟ್ಟಿ ಮನರಂಜನೆ ಕೊಡುವ ಬದಲು, ಒಂದೇ ಏಟಿಗೆ ಶೋಷಕತ್ವವನ್ನೇ ಕತ್ತರಿಸಿದರೆ ಹೇಗೆ ಎಂಬ ವಿಧ್ವಂಸಕಾರಿ, ಪ್ರಳಯಾಂತಕ, ತಲೆ ಹೋಗುವ ಸಲಹೆಯನ್ನು ಕೂಡ, ರೆಸಾರ್ಟಿನಲ್ಲೇ ಉಳಿದುಕೊಂಡು ವಿಶ್ಲೇಷಕರಾಗಿ ಪರಿವರ್ತನೆಗೊಂಡಿರುವ ನಮ್ಮ ರದ್ದಿಗಾರರು ತಿಳಿಸಿದ್ದಾರೆ.

7 Comments

ಏನಾದ್ರೂ ಹೇಳ್ರಪಾ :-D

 1. ಏನ್ರೀ ಅನ್ವೇಷಿಗಳೆ,
  ‘ಬಾಲಾ ಹೋತು, ಸೂಟ್ ಕೇಸ್ ಬಂತು ಡುಂ ಡುಂ!’ ಎಂದು ಶಾಸಕೋತಿಗಳನ್ನು ಅಣಕಿಸುತ್ತೀರಲ್ರೀ!ಇದು (ಪ್ರಜೆಗಳ) ಧರ್ಮವೆ?

  ReplyDelete
 2. ಕರ್ನಾಟಕದ ಮಾನ ಹರಾಜು ಹಾಕಿದ ಕೈ, ತೆನೆ ಹೊತ್ತ ಮಹಿಳೆಯ ಪಕ್ಷಗಳ ನಾಯಕರನ್ನು ಬಹಿರಂಗವಾಗಿ ಮೆಟ್ಟಲ್ಲಿ ಹೊಡೆದು ಬುದ್ದಿ ಹೇಳಬೇಕು. ಏಕೆಂದರೆ ಕರ್ನಾಟಕ ಈಗ ಅಭಿವೃದ್ದಿಯಲ್ಲಿ ದೇಶದ ಎರಡನೇ ರಾಜ್ಯವಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದನ್ನು ಹೇಳಿರುವುದು ಬೇರಾರೂ ಅಲ್ಲ, ಕೇಂದ್ರದ ಕಾಂಗ್ರೆಸ್ ಸರಕಾರ. ಈ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿರುವ ಅಪ್ಪ ಮಕ್ಕಳು ಹಾಗೂ ಮುಖ್ಯಮಂತ್ರಿಯಾಗುವ ಕನಸು ಹೊತ್ತ ಸಿದ್ರಾಮು ಇವತ್ತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಇಂತಹ ಕೆಲ ಪಕ್ಷಗಳ ನಾಯಕರನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ನಮಗೆ ನಾವೇ ಚಪ್ಪಲಿ ಸೇವೆ ಮಾಡಿಕೊಂಡಂತಾಗುತ್ತದೆ. ರಾಜ್ಯದ ಅಭಿವೃದ್ದಿಗೆ ಮಾರಕವಾದ ನಾಯಿಕೊಡೆ ಜೆ.ಡಿ.ಎಸ್.ನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೂ ಅವಕಾಶ ಮಾಡಿಕೊಟ್ಟರೆ ಅದು ರಾಜ್ಯದ ಘನತೆಗೆ ಕುಂದು.

  ReplyDelete
 3. ಕರ್ನಾಟಕದ ಮಂಗ ರಾಜಕಾರಣಿಗಳಿಗೆ ಪಕ್ಷದಿಂದ ಪಕ್ಷಕ್ಕೆ ಹಾರುವ ಬುದ್ದಿ ಏನಿದ್ದರೂ ಹುಟ್ಟುಗುಣ, ಜಾತಿ ಗುಣ. ಈಗ "ಅಖಿಲ ಭಾರತ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಘದ" ಅಜೀವ ಅಧ್ಯಕ್ಷರಾದ ವರ್ತೂರು ಪ್ರಕಾಶ್, ಮತ್ತೆ ಯಾವ ಪಕ್ಷ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.

  ReplyDelete
 4. ಸುನಾಥರೇ,
  ಶಾಸಕೋತಿಗಳನ್ನು ಅಣಕಿಸುವ ಬದಲು ಅವುಗಳೇ ಕೋತಿಗಳನ್ನು ಅಣಕಿಸುತ್ತಿರುವುದರಿಂದ, ಇದು ಅವುಗಳ ಕರ್ಮವೆಂಬುದನ್ನು ಕಂಡುಕೊಳ್ಳಲಾಗಿದೆ.

  ReplyDelete
 5. ಗುರುಗಳೇ,
  ವರ್ತೂರು ಪ್ರಕಾಶ್ ಅವರ ಅವಮಾನಿಗಳ ಸಂಘದವರೆಲ್ಲರೂ ಕಟೌಟ್, ಫ್ಲೆಕ್ಸ್, ಬ್ಯಾನರ್ ಮಾಡಿಸಿದ್ದೇ ಮಾಡಿಸಿದ್ದು... ಕೊನೆ ಕ್ಷಣದಲ್ಲಿ ಅವುಗಳನ್ನು ಎಲ್ಲಿ ಬಿಸಾಡುವುದು ಎಂದು ಗೊತ್ತಾಗದೆ ಪರದಾಡುತ್ತಿದ್ದಾರಂತೆ!

  ReplyDelete
 6. ವೆಂಕಟ್ರಮಣ ಭಟ್ಟರೇ,
  ಬೊಗಳೂರಿಗೆ ಸ್ವಾಗತ.
  ಡಬ್ಲ್ಯುಎಡಬ್ಲ್ಯು ಹೇಳುವ ಮೂಲಕ ಡಬ್ಬಾ ಅಂತ ಹೊಗಳಿದ್ದಕ್ಕೆ ಧನ್ಯ-ವಾದನಗಳು. ಬರುತ್ತಾ ಇರಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post