ಬೊಗಳೆ ರಗಳೆ

header ads

'ಕಂತ್ರಿ' ಎಂದು ಅವಮಾನ: ಡಾಗ್ ಸಂಘ ಪ್ರತಿಭಟನೆ

(ಬೊಗಳೂರು ಗುಂಡುಹಾಕುವ ಬ್ಯುರೋದಿಂದ)
ಬೊಗಳೂರು, ಜೂ.7- ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವು ಸಿದ್ಧಿ-ಪ್ರಸಿದ್ಧಿ ಗಳಿಸುತ್ತಿರುವಾಗ, ಹೆಸರಿಗೆ ಒಂದಿಷ್ಟು ಮಸಿ ಬಳಿಯಲು ಪ್ರಯತ್ನಿಸುತ್ತಿರುವ ಬೆಂಗಳೂರು ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರ ವರ್ತನೆಯನ್ನು ಖಂಡಿಸಿರುವ ಬೊಗಳೂರಿನ ನಾಯಿಗಳು, ಮರ್ಯಾದೆ ಮಣ್ಣುಪಾಲಾಯ್ತು ಎಂದು ಗುಲ್ಲೆಬ್ಬಿಸಿವೆ.

ಪೊಲೀಸರು, ಕೇಂದ್ರ ಗೃಹ ಸಚಿವರು, ರಾಜ್ಯದ ಮಂತ್ರಿಗಳು, ಮುಖ್ಯಮಂತ್ರಿಗಳೆಲ್ಲರೂ, ಶ್ರೀಶ್ರೀ ಅವರ ಮೇಲೆ ದಾಳಿ ಉದ್ದೇಶವಾಗಿರಲಿಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿರುವಂತೆಯೇ, ಇಲ್ಲ, ಇಲ್ಲ, ಇದು ತನ್ನ ಮೇಲೆಯೇ ದಾಳಿ ನಡೆದದ್ದು ಎಂದು ಗುರೂಜಿವರ್ಯರು ಹೇಳುತ್ತಲೇ ಬಂದಿದ್ದರು. ಇದೀಗ ಪೊಲೀಸರು ತನಿಖೆ, ಪ್ರಯೋಗಾಲಯ, ಎಂದೆಲ್ಲಾ ಸುತ್ತಾಡಿ, ಒಂದಷ್ಟು ಗುಂಡುಗಳನ್ನು ಪತ್ತೆ ಹಚ್ಚಿ ತಾಳೆ ನೋಡಿ, ಇದು ನಾಯಿಗಳಿಗೆ ಹಾರಿಸಲಾದ ಗುಂಡು, ತಪ್ಪಾಗಿ ಶ್ರೀಶ್ರೀಗಳ ಅನುಯಾಯಿ ಮೇಲೆ ಬಿದ್ದಿದೆ ಎಂದು ಸಂಚೋದನೆ ಮಾಡಿ ಹೇಳಿದ್ದರು.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರು, ಬರೇ ನಾಯಿಗಳನ್ನು ಓಡಿಸಲು ಹಾರಿಸಿದ ಗುಂಡಾಗಿತ್ತದು ಎಂದು ಹೇಳಿದ್ದರೆ ನಾವು ತೆಪ್ಪಗಿರುತ್ತಿದ್ದೆವು, ಆದರೆ ಅವರು ಅದಕ್ಕೆ ಸೇರಿಸಿದ ಇನ್ನೊಂದು ಪದ 'ಕಂತ್ರಿ' ನಾಯಿ ಅಂತ. ಇದನ್ನೆಂದಿಗೂ ಸಹಿಸುವುದು ಸಾಧ್ಯವಿಲ್ಲ ಎಂದಿರುವ ನಾಯಿಗಳ ಸಂಘದ ಅಧ್ಯಕ್ಷ ಶ್ವಾನ ಕುಮಾರ್ ಅವರು, ಇದನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿದೆ, ನಮಗೆ ಬೊಗಳದೇ ಇರಲು ಆಗುತ್ತಲೇ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ, ತಮ್ಮ ಹೇಳಿಕೆಯನ್ನು ಭಾಷಾಂತರಿಸಿ ಇಂಗ್ಲಿಷಿನಲ್ಲಿ ಹೇಳುವಾಗ, ಸರಿಯಾಗಿಯೇ Country ನಾಯಿಗಳು ಅಂತ ಉಚ್ಚರಿಸಿದ್ದಾರೆ. ಇದು ನಮ್ಮ ದೇಶಭಕ್ತಿಯ ಸೂಚಕವೂ ಹೌದು. ಆದರೆ, ಸ್ಥಳೀಯ ಭಾಷೆಯಲ್ಲಿ, ಅಚ್ಚಕನ್ನಡದ ಪತ್ರಿಕೆಗಳವರಿಗೆ ಮಾಹಿತಿ ನೀಡುವಾಗ, ಕಂತ್ರಿ ಎಂಬ ಪದ ಪ್ರಯೋಗಿಸಿದ್ದರು ಎಂದು ಅವರು ದೂರಿದ್ದಾರೆ.

ಈ ಮಧ್ಯೆ, ಆಶ್ರಮದ ಪಕ್ಕದಲ್ಲಿದ್ದ ಫಾರ್ಮ್ ಹೌಸ್ ಮಾಲೀಕರು ನೀಡಿದ ಸ್ಪಷ್ಟನೆಗೂ ಈ ನಾಯಿಗಳು ಕಿಡಿ ಕಾರಿವೆ. "ತಾವು ಯಾರನ್ನೂ ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿರಲಿಲ್ಲ" ಎಂದವರು ಒಂದು ಕಡೆ ಹೇಳಿದ್ದರು. ಇದನ್ನು ಖಂಡಿಸಿರುವ ಶ್ವಾನ್ ಕುಮಾರ್, ಇಲ್ಲ, ಇಲ್ಲ, ಖಂಡಿತಾ ಇದನ್ನು ನಮ್ಮನ್ನು ಗುರಿಯಾಗಿರಿಸಿಕೊಂಡು ಮಾಡಿದ ದಾಳಿ, ನಮಗೆ ರಕ್ಷಣೆ ಇಲ್ಲ, ಬೆಂಗಳೂರಲ್ಲಿ ಎಲ್ಲಿ ಹೋದರೂ ನಮಗೆ ಬಾಲ ಅಲ್ಲಾಡಿಸುವುದಕ್ಕೂ ಜಾಗ ಸಿಗುತ್ತಿಲ್ಲ. ಹೀಗಾಗಿ, ಖಂಡಿತಾ ಇದು ನಮ್ಮ ವಿರುದ್ಧ ಮಾಡಿರುವ ಸಂಚು ಎಂದು ಆರೋಪಿಸಿವೆ.

ಕುರಿ ಮೇಲೆ ನಮ್ಮ ಸಮುದಾಯದವರು ದಾಳಿ ಮಾಡಿದ್ದು ನಿಜ ಎಂಬುದನ್ನು ಒಪ್ಪಿಕೊಂಡ ಅವರು, ಹೀಗಿರುವಾಗ, ಅವರು ಬರೇ ಗಾಳಿಯಲ್ಲಿ ಗುಂಡು ಹಾಕುವುದು ಹೇಗೆ ಸಾಧ್ಯ? ಖಂಡಿತಾ ಈ ಹೇಳಿಕೆ ನೀಡುತ್ತಿರುವಾಗ ಅವರು ಗುಂಡು ಹಾಕಿರಲೇ ಬೇಕು. ನಮ್ಮನ್ನೇ ಗುರಿಯಾಗಿರಿಸಿಯೇ ಅವರು ಗುಂಡು ಹಾಕಿದ್ದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ, ಆ ಬುಲೆಟ್ ನಮ್ಮನ್ನೇ ಗುರಿಯಾಗಿರಿಸಿ ಹೊರಬಂದಿರುವುದೇ ಅಲ್ಲವೇ ಎಂಬುದನ್ನು ತನಿಖೆ ನಡೆಸಲು ಐತಲಕಡಿ ಖ್ಯಾತಿಯ ಬುಲೆಟ್ ಪ್ರಕಾಶ್ ಅವರ ಮೊರೆ ಹೋಗುವುದಾಗಿಯೂ ಅವರು ಹೇಳಿದ್ದಾರೆ.

ಇದರೊಂದಿಗೆ, ಸಮೀಪದ ಫಾರ್ಮ್‌ಹೌಸ್ ಮಾಲೀಕರು ಕತ್ತಲಲ್ಲಿಯೇ ಗುಂಡು ಹಾಕಿದ್ದರೇ ಎಂಬುದರ ಕುರಿತೂ ತನಿಖೆ ನಡೆಸಬೇಕೆಂದು ಕೊಟ್ಟ ಕೊನೆಗೆ ಬೊಗಳೂರಿನ ಅಸತ್ಯಾನ್ವೇಷಿ ನೇತೃತ್ವದ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಆಗ್ರಹಿಸತೊಡಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

14 ಕಾಮೆಂಟ್‌ಗಳು

  1. " ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡುವಿರಿ ? ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ , ಹುಗ್ಗಿ ಮಾಡೊ ಸೌಟಲಿ ಹೊಡೆದರೆ ಕುಂಯ್ ಕುಂಯ್ ರಾಗವ ಪಾಡುವಿರಿ " ( ಬೌ ಬೌ ರಾಗವ ಪಾಡುವಿರಿ ??!)

    ಪ್ರತ್ಯುತ್ತರಅಳಿಸಿ
  2. sir, One should learn your way of narration of a serious issue with full of sattire.
    Guru.K
    http://myblog-gururaj.blogspot.com

    ಪ್ರತ್ಯುತ್ತರಅಳಿಸಿ
  3. ಕಾಡು ನಾಯಿ ಸೇನಾ ಸಮಿತಿಜೂನ್ 08, 2010 4:29 ಅಪರಾಹ್ನ

    ನಮ್ಮ ಹೆಸರನ್ನು ದುರುದ್ದೇಶ ಪೂರ್ವಕವಾಗಿ ಹೇಳಲಾಗಿದೆ ಇದರ ವಿರುದ್ದ ಉಗ್ರ ಪ್ರತಿಬಟನೆ ಮಾಡಲಾಗುತ್ತದೆ

    ಪ್ರತ್ಯುತ್ತರಅಳಿಸಿ
  4. ನಾಯಿಗಳು ಆಶ್ರಮದ ಹೊರಗೇ ಇರಲಿ, ಒಳಗೇ ಇರಲಿ, ಎಲ್ಲೆಲ್ಲೂ ಅವುಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಆದುದರಿಂದ ಎಲ್ಲ ನಾಯಿಗಳಿಗೆ z+ security ಕೊಡುವದು ಅವಶ್ಯ.

    ಪ್ರತ್ಯುತ್ತರಅಳಿಸಿ
  5. I like your blog, particularly, the present writing. No isms, no themes, pure humour!.

    D.M.Sagar

    ಪ್ರತ್ಯುತ್ತರಅಳಿಸಿ
  6. ಗುರುಪ್ರಸಾದ್ಜೂನ್ 13, 2010 9:23 ಅಪರಾಹ್ನ

    ಕರ್ನಾಟಕದಲ್ಲಿ ಕನ್ನಡವಿರೋಧಿ, ಕರ್ನಾಟಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ಸರಕಾರ ಇರುವುದರಿಂದ ಅವರಿಗೆ ಕನ್ನಡ ಮಾತನಾಡಲು ಸರಿಯಾಗಿ ಬರುತ್ತಿಲ್ಲ. (ಮುಂಡೇವಕ್ಕೆ ನಾಲಗೆ ಸರಿಯಾಗಿ ಹೊರಳುತ್ತಿಲ್ಲ.) ಇದೆಲ್ಲಾ ಈ ಕರ್ನಾಟಕ ದ್ರೋಹಿ ರೆಡ್ಡಿಗಳ ಕಿತಾಪತಿ, ಅವರ ಸಹವಾಸ ಮಾಡಿ ನಮ್ಮ ಯೆಡ್ಡಿ ಕೂಡಾ ಈಗ ಕನ್ನಡ ಮರೆತಿದ್ದಾನೆ. ಇವುಗಳಿಗೆ ಕಂಟ್ರಿ ಹಾಗೂ ಕಂತ್ರಿಗೆ ಸರಿಯಾದ ಅರ್ಥ ಗೊತ್ತಿಲ್ಲ. ಏಕೆಂದರೆ ಇವೆಲ್ಲಾ ಎನ್ನಡ-ಎಕ್ಕಡಗಳು. ಭಾರತದ ಯಾವುದೇ ಭಾಷೆಗಿಂತ ನಮ್ಮ ಭಾಷೆಯೇ ಸ್ಪಷ್ಟ ಹಾಗೂ ಸರಳ ಭಾಷೆ. ಇದನ್ನು ತಿಳಿಯದ ಈ ಬಿ.ಜೆ.ಪಿ. ಮಂದಿ ಎನ್ನಡ-ಎಕ್ಕಡಗಳ ಕಾಲುನೆಕ್ಕುತ್ತಿರುವುದು ನಮ್ಮ ಕನ್ನಡಿಗರ ದುರ್ದೈವ.

    ಪ್ರತ್ಯುತ್ತರಅಳಿಸಿ
  7. ಹಾಗಲ್ಲ ಸುಬ್ರಹ್ಮಣ್ಯರೇ,

    ಹುಗ್ಗಿ ಮಾಡೋ ಸೌಟಿನ ಬದಲು ನಿಮ್ ಬಾಲವ ಹಾಕಿ ಅಲುಗಾಡಿಸಿದರೆ... ಕುಂಯ್ ಕುಂಯ್ ರಾಗವ ಪಾಡುವಿರಿ ಅಂತ ಎಂದು ನಮ್ಮ ಶ್ವಾನ ಸಂಘದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ಗುರು ಅವರೆ,
    ಬೊಗಳೂರಿಗೆ ಸ್ವಾಗತ. ಪರಿಸ್ಥಿತಿ ತುಂಬಾ ಸೀರಿಯಸ್ ಆಗಿದ್ದರೆ ಇಲ್ಲಿಗೆ ಸೇರಿಸಿದರೆ ಆಯಿತು.! ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ
  9. ಕಾಡು ನಾಯಿ ಸೇನಾ ಸಮಿತಿಯವರಿಗೆ ಶುಭ ವಿದಾಯ... ಅಲ್ಲಲ್ಲ ಸುಸ್ವಾಗತ...

    ನೀವು ಎಷ್ಟೇ ಉಗ್ರ ಪ್ರತಿಭಟನೆ ಮಾಡಿದರೂ, ಪ್ರತಿಭಟನೆ ಮಾಡುವಲ್ಲೆಲ್ಲಾ ಸೈಲೆನ್ಸರ್ ಅಳವಡಿಸ್ತೀವಿ... ಅಂತ ಯುಪಿಎ ಸರಕಾರವು ಭೋಪಾಲ್ ಸಂತ್ರಸ್ತರಿಗೆ ಮಾಡಿದ ಉಪಾಯವನ್ನು ನಾವೂ ಬಳಸುತ್ತೇವೆ.

    ಪ್ರತ್ಯುತ್ತರಅಳಿಸಿ
  10. ಸುನಾಥರೇ,
    ಗುಂಡು ಹಾಕುವವರು ಜಾಸ್ತಿಯಾಗಿದ್ದರಿಂದಾಗಿಯೇ ಗುಂಡಿನ ದಾಳಿ ನಡೆದಿರುವುದರಿಂದ, Z+ ಬದಲು XXX ಸೆಕ್ಯುರಿಟಿ ಕೊಡಿಸಲು ತೀರ್ಮಾನಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  11. ಡಿ.ಎಂ. ಸಾಗರ್ ಅವರೆ, ಬೊಗಳೂರಿಗೆ ಸುಸ್ವಾಗತ.

    ಮೆಚ್ಚುಗೆ ನುಡಿಗೆ ಧನ್ಯವಾದ. ಬರುತ್ತಿರಿ...

    ಪ್ರತ್ಯುತ್ತರಅಳಿಸಿ
  12. ಗುರುಪ್ರಸಾದ್ ಅವರೆ,
    ಕಂಟ್ರಿ-ಕಂತ್ರಿ ವಿವಾದವನ್ನೂ ಯಡ್ಡಿ-ರೆಡ್ಡಿಗಳಿಗೆ ಪ್ರಾಸಂಗಿಕವಾಗಿ ಸಂಬಂಧ ಕಲ್ಪಿಸಿ ಹೊಸ ವಿವಾದ ಸೃಷ್ಟಿ ಹಾಕಿದ್ದೀರಿ. ಆದರೆ, ಇಂತಹಾ ಬಾಲ್ಯವಿವಾ"ದ"ಗಳನ್ನು ಈಗಾಗಲೇ ನಿಷೇಧಿಸಲಾಗಿದೆ ಎಂಬುದು ನೆನಪಿರಲಿ!

    ಪ್ರತ್ಯುತ್ತರಅಳಿಸಿ
  13. ಕೃಷ್ಣ ಭಟ್ರೇ... ಬೊಗಳೂರಿಗೆ ನೀವು ಬಂದಿದ್ದೇ ಗೊತ್ತಾಗಿಲ್ಲ... ಏನ್ ಸೀಕ್ರೇಟುರೀ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D