ಬೊಗಳೆ ರಗಳೆ

header ads

ರಾತೋರಾತ್ರಿ ತೆಲಂಗಾಣಕ್ಕೆ ಅಸ್ತು: ಸಂಚು ಬಯಲು

(ಬೊಗಳೂರು ರಾಜ್ಯ ಆಗ್ರಹ ಬ್ಯುರೋದಿಂದ)
ಬೊಗಳೂರು, ಡಿ.11- ತೆಲಂಗಾಣ ರಾಜ್ಯ ಘೋಷಣೆಗೆ ಕೇಂದ್ರ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ, ಬೊಗಳೂರು ಸೇರಿದಂತೆ ಅಲ್ಲಲ್ಲಿ ರಾಜ್ಯ-ರಾಷ್ಟ್ರ ಘೋಷಣೆಯ ಕೂಗುಗಳು ಕೇಳಿಬರತೊಡಗಿವೆ.

ಇದೀಗ ಬೋಡೋಲ್ಯಾಂಡ್, ಗೂರ್ಖಾಲ್ಯಾಂಡ್, ಕಾಶ್ಮೀರ, ಕೊಡಗು, ಸೌರಾಷ್ಟ್ರ, ವಿದರ್ಭ, ಬುಂದೇಲ್‌ಖಂಡ, ಪೂರ್ವಾಂಚಲ, ಸೌರಾಷ್ಟ್ರ, ಮಿಥಿಲಾಂಚಲ, ಮಹಾಕೋಸಲ ಮುಂತಾದ ರಾಜ್ಯಗಳಿಗೂ ಬೇಡಿಕೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಉಪವಾಸ ಸತ್ಯಾಗ್ರಹಗಳು ಕೂಡ ಆರಂಭವಾಗಿದೆ.

ಕೆಲವರು ಸಾಯುವವರೆಗೂ ನಾಲ್ಕು ದಿನ ಉಪವಾಸ ಮಾಡ್ತೀವಿ ಅಂತ ಪ್ರತಿಭಟನೆಗೆ ಇಳಿದಿದ್ದರೆ, ಇನ್ನು ಕೆಲವರು ನಾವು ಒಂದೆರಡು ದಿನ ಮಾತ್ರವೇ ಆಮರಣಾಂತ ಉಪವಾಸ ಮಾಡ್ತೀವಿ ಅಂತ ಬೊಗಳೆ ಬಿಡ್ತಿದ್ದಾರೆ. ಒಟ್ಟಿನಲ್ಲಿ ಉಪವಾಸ ಉಪವಾಸವೇ ಎಂಬುದು ಗೊತ್ತಾಗಿದೆ. ಅಂದರೆ ಮುಂದಿನ ಬಾರಿ ನೀರು-ಆಹಾರ-ಪಾನೀಯ ಸೇವಿಸುವವರೆಗೂ ಅದು ಉಪವಾಸವೇ ಆಗಿರುತ್ತದೆ ಎಂಬ ಅಮೂಲ್ಯ ದಾರ್ಶನಿಕ ತತ್ವವನ್ನು ಬೊಗಳೂರು ಬ್ಯುರೋ ಕಂಡುಹಿಡಿದಿದೆ.

ಇದೀಗ, ಅಲ್ಲಲ್ಲಿ ಪ್ರತ್ಯೇಕ ದೇಶ-ರಾಜ್ಯ ಸ್ಥಾಪನೆಗಾಗಿ ಇಷ್ಟೆಲ್ಲಾ ಹೈಪ್ ಹೆಚ್ಚಾಗಿದ್ದರ ಹಿಂದಿನ ಕಾರಣವನ್ನು ಬೊಗಳೂರು ಕೊನೆಗೂ ಪತ್ತೆ ಮಾಡಿದೆ.

ದೇಶಾದ್ಯಂತ ಆಹಾರಧಾನ್ಯಗಳು ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನರು ಹಸಿವಿನಿಂದ ಹೊಟ್ಟೆಗಿಲ್ಲದೆ ಅಲ್ಲಲ್ಲಿ ಸಾಯುವ ಹಂತದಲ್ಲಿದ್ದಾರೆ. ಲಿಬರ್ಹಾನ್, ಭಾರತ-ಪಾಕ್ ಸಂಬಂಧ, ಕೋಪನ್ ಹೇಗನ್‌ನಲ್ಲಿ ಹೇಗೆ ಏಗೋಣ ಅಂತೆಲ್ಲಾ ಬ್ಯುಸಿಯಾಗಿರುವಾಗ ಈ ಬಗ್ಗೆ ಗಮನ ಹರಿಸಲು ಸರಕಾರಕ್ಕೂ ಪುರುಸೊತ್ತಿಲ್ಲ. ಹೀಗಾಗಿ ಬೆಲೆ ನಿಯಂತ್ರಣಕ್ಕೆ ದೇವರೇ ಕೊಟ್ಟ ಅವಕಾಶವಿದು. ಎಲ್ಲರೂ ಉಪವಾಸ ಮಾಡಿದರೆ, ಆಹಾರಕ್ಕೆ ಬೇಡಿಕೆ ತಗ್ಗುತ್ತದೆ. ಪೂರೈಕೆ ಹೆಚ್ಚಾಗುತ್ತದೆ. ಬೆಲೆ ಇಳಿಯುತ್ತದೆ ಎಂಬ ತಂತ್ರಗಾರಿಕೆಯನ್ನು ಬೊಗಳೂರು ನಿಧಾನಿಗಳು ಉಪಯೋಗಿಸಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ.

ಇದರ ನಡುವೆ, ಅಂತಾರಾಷ್ಟ್ರೀಯ ಸಂಚನ್ನು ಕೂಡ ಬೊಗಳೂರಿನ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರ ತಂಡವು ಬಯಲಿಗೆಳೆದಿದ್ದು, ಜನಸಂಖ್ಯೆಯಲ್ಲಿ ನಂ.1 ಪಟ್ಟವನ್ನು ತನ್ನಿಂದ ಕಸಿದುಕೊಳ್ಳುವತ್ತ ದಾಪುಗಾಲಿಡುತ್ತಿರುವ ಭಾರತದ ಜನಸಂಖ್ಯೆ ಕಡಿತಗೊಳಿಸಲು ಚೀನಾದ ಷಡ್ಯಂತ್ರಗಳಲ್ಲಿ ಇದೂ ಒಂದಾಗಿದೆ ಎಂದು ನಮ್ಮ ಗುಪ್ತರಲ್ಲದ ಚರರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅನ್ವೇಷಿ,
    ಈ ಒಳಗುಟ್ಟುಗಳು, ಒಳಸಂಚುಗಳು ನಿಮಗೆ ಕ್ಷಣಾರ್ಧದಲ್ಲಿ ಹೊಳೆಯುವದನ್ನು ನೋಡಿದರೆ, ನಿಮಗೆ ಮೂರನೆಯ ಕಣ್ಣೊಂದು (ಕ್ಷ-ಕಣ್ಣು) ಇರಬಹುದು ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ.

    ಪ್ರತ್ಯುತ್ತರಅಳಿಸಿ
  2. ಇನ್ನೈವತ್ತು ರಾಜ್ಯಗಳಾದ್ರೆ ನಮಗೂ ಒಳ್ಳೆಯದೇ! ಪ್ರತಿ ರಾಜ್ಯಕ್ಕೊಂದು ಮುಟ್ಠಾಳ ಮಂತ್ರಿ, ಅವನ ಬಾಲ ಹಿಡಿದ ಹಿಂಬಾಲಕರು, ಮುಂದೆ ಬಾಯ್ಬಡುಕರು ಅಂತ ಇದ್ರೆ, ಎಲ್ಲರಿಗೂ ಕಮಾಯಿಯೋ ಕಮಾಯಿ. ಇದು ಪ್ರಗತಿಯ ಲಕ್ಷಣ ಅಂತ ನಮ್ಮ ಬೀರುವಿನವರು ಹೇಳ್ತಿದ್ದಾರೆ :P

    ಪ್ರತ್ಯುತ್ತರಅಳಿಸಿ
  3. ಸುನಾಥರೇ,
    ನಿಮ್ಮ ಸಂದೇಹದ ಬಗ್ಗೆ ನಮಗೂ ಸಂದೇಗಳಿವೆಯಾದುದರಿಂದ, ಈ ಬಗ್ಗೆ ತನಿಖೆಯನ್ನು ಮುಚ್ಚಿ ಹಾಕಲು ನಾವು ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ವಾಹ್, ನಮೋನ್ನಮಹಾ ಅವರೆ,
    ಮುಟ್ಠಾಳ ಅನ್ನೋ ಪದವನ್ನು ಈಗ್ಲೇ ನಿಮ್ಮ ಡಿಕ್ಷನರಿಯಿಂದ ಅಳಿಸಿಹಾಕಿಬಿಡಿ, ಯಾಕಂದ್ರೆ, ಈ ರೀತಿ ರಾಜ್ಯಗಳ ಸಂಖ್ಯೆ ಹೆಚ್ತಾ ಹೋಗಿ, ಒಂದಲ್ಲ ಒಂದು ದಿನ ನಿಮ್ಮನ್ನು ಕೂಡ ಒಂದು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿಸುವ ಸಾಧ್ಯತೆಗಳು ದಟ್ಟವಾಗಿವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D