ಬೊಗಳೆ ರಗಳೆ

header ads

ಗೋಚರವಾಗದ ಚಂದ್ರ ಗ್ರಹಣ: ತನಿಖೆಗೆ ಆದೇಶ

(ಬೊಗಳೂರು ಹೊಸವರ್ಷ ತೇಲಾಡುವ ಬ್ಯುರೋದಿಂದ)
ಬೊಗಳೂರು, ಜ.4- ಕಳೆದ ವರ್ಷದಿಂದೀಚೆಗೆ ನಿಸ್ತೇಜವಾಗಿ, ಸ್ತಬ್ಧವಾಗಿ ಮತ್ತು ನಿಶ್ಚೇಷ್ಟಿತವಾಗಿ ಬಿದ್ದಿದ್ದ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರು ಹಾಗೂ ಮತ್ತೊಬ್ಬ ವರದ್ದಿಗಾರರು, 2010 ಬಂದು ನಾಲ್ಕು ದಿನಗಳೇ ಕಳೆದರೂ ಏಳದೇ ಇರುವುದಕ್ಕೆ ನ್ಯೂ ಇಯರ್ ಪಾರ್ಟಿ ಅಲ್ಲವೆಂದು ಸ್ಪಷ್ಟಪಡಿಸುತ್ತಾ, ಹೊಸದೊಂದು ವರದ್ದಿಯನ್ನು ತಂದು ಸುರುವಿದ್ದಾರೆ.

2010ನೇ ಇಸವಿ ಆರಂಭವಾಗುವ ಸ್ವಲ್ಪ ಹೊತ್ತಿಗೆ ಮುಂಚೆ ಚಂದ್ರನಿಗೆ ಗ್ರಹಣ ಹಿಡಿಯುತ್ತದೆ ಎಂಬ ಸುದ್ದಿ ಕೇಳಿ, ಆತಂಕಿತರಾಗಿದ್ದ ಬೊಗಳೂರು ಬ್ಯುರೋದ ರದ್ದಿಗಾರ ಅನ್ವೇಷಿ, ಅಷ್ಟೂ ದಿನಗಳ ಕಾಲ ತಲೆ ಮರೆಸಿಕೊಂಡು, ಚಂದ್ರ ಗ್ರಹಣವನ್ನೇ ಕಾಯುತ್ತಿದ್ದ ಎಂದು ಮೂಲಗಳು ಹೇಳಿವೆ.

ಆದರೆ, ಮತ್ತಷ್ಟು ಸಂಶೋಧಿಸಿದಾಗ, ಚಂದ್ರಗ್ರಹಣಕ್ಕಾಗಿ ಕಾತರಿಸುತ್ತಾ ಹಾತೊರೆಯುತ್ತಿದ್ದವರಲ್ಲಿ ತಾನು ಮಾತ್ರವೇ ಅಲ್ಲ, ಇಡೀ ವಿಶ್ವ ಸಮುದಾಯದ ಮಂದಿಯೂ ಸೇರಿದ್ದಾರೆ ಎಂಬುದು ಅನ್ವೇಷಿಗೆ ತಿಳಿದಾಗ ತಡವಾಗಿತ್ತು. ಹೀಗಾಗಿ ಮೂರ್ನಾಲ್ಕು ದಿನ ಕಳೆದು ವರದಿ ತಂದು ಒಪ್ಪಿಸಲಾಗಿದೆ ಎಂದು ಸೊಂಪಾದಕೀಯ ಮೂಲಗಳು ಹೇಳಿವೆ.

ಮರುದಿನ ಸುದ್ದಿ ಪತ್ರಿಕೆಗಳನ್ನೆಲ್ಲಾ ಹರವಿಕೊಂಡು, ಅಂತರಜಾಲದಲ್ಲಿ ಸಂಚೋಧನೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಆ ದಿನ ಅಲ್ಲಲ್ಲ... ರಾತ್ರಿಯಲ್ಲಿ, ಚಂದ್ರಗ್ರಹಣವು ಪಾರ್ಶ್ವ ಚಂದ್ರಗ್ರಹಣ ಎಂದು ನಿಗದಿಯಾಗಿದ್ದರೂ, ಕೆಲವು ಕಡೆ ಅದು ಗೋಚರಿಸಲೇ ಇರಲಿಲ್ಲ, ಇನ್ನು ಕೆಲವೆಡೆ ಅದು ಖಗ್ರಾಸ (ಪೂರ್ಣ) ಗ್ರಹಣವಾಗಿ ಗೋಚರಿಸಿತ್ತು, ಮಾತ್ರವೇ ಅಲ್ಲ, ಕೆಲವರಿಗೆ ಹಗಲಲ್ಲೂ ನಕ್ಷತ್ರಗಳು ಕಾಣಿಸತೊಡಗಿದ್ದವು!

ತಕ್ಷಣವೇ ಇದನ್ನು ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿ, ಎರಡೂ ಸರಕಾರಗಳು ಸಿಬಿಐ ಮತ್ತು ಸಿಐಡಿ ತನಿಖೆಗೆ ಆದೇಶ ನೀಡಿದ್ದು, ಒಂದಿಪ್ಪತ್ತು ಮೂವತ್ತು ವರ್ಷಗಳಲ್ಲೇ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅದಕ್ಕೆ ಮುಂಚೆಯೇ ಬೊಗಳೂರು ಬ್ಯುರೋದ ಸಮಸ್ತರು ಹಲವರನ್ನು, ಕೆಲವರನ್ನು, ಅಳಿದವರನ್ನು, ಉಳಿದವರನ್ನು ಮಾತನಾಡಿಸಿ, ತನಿಖೆ ನಡೆಸಿ ವರದಿ ಸಲ್ಲಿಸಿದೆ. ಯಾಕ್ರೀಯಪಾ ಇಂಗಾತು? ಎಂದೆಲ್ಲಾ ಬೊಗಳೂರು ಬ್ಯುರೋ ಸಮಸಮಶೋಧಿಸಿದಾಗ ಗೊತ್ತಾಗಿಬಿಟ್ಟ ವಿಷಯವೆಂದರೆ:

ಹಲವರಿಗೆ ಚಂದ್ರಗ್ರಹಣವೇ ಕಾಣಿಸದಿರಲು ಮತ್ತು ಕೆಲವರಿಗೆ ಪೂರ್ಣ ಚಂದ್ರಗ್ರಹಣದೊಂದಿಗೆ ನಕ್ಷತ್ರಗಳೂ ಕಾಣಿಸಲು ಕಾರಣವೆಂದರೆ, ಅವರೆಲ್ಲರೂ ಅಂದು ಹೊಸ ವರ್ಷಾಚರಣೆಯ ಸಂಭ್ರಮದ ರಾತ್ರಿ ಪಾರ್ಟಿಯಲ್ಲಿ 'ತೇಲಾಡುತ್ತಿದ್ದುದು'! ತೇಲಾಡುತ್ತಲೇ ಮನೆಗೆ ಬಂದಾಗ ಅವರಿಗೆ ಮನೆಯಲ್ಲಿಯೂ ಪೂಜೆ ಆಗಿತ್ತು, ಇದರಿಂದಾಗಿ ಹಗಲಲ್ಲೂ ಅವರಿಗೆ ನಕ್ಷತ್ರಗಳು ಕಾಣಿಸುತ್ತಿದ್ದವು ಎಂಬುದನ್ನು ವರದ್ದಿಗಾರ ಅನ್ವೇಷಿ ಪತ್ತೆ ಹಚ್ಚಿದ್ದಾನೆ.

ಸಮಸ್ತ ಓದುಗರಿಗೆ, ಓದುವವರಿಗೆ, ಓದಿಸುವವರಿಗೆ 2010ಕ್ಕಾಗಿ ಹ್ಯಾಪಿ ನ್ಯೂ ಇಯರ್!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ನಗೋದಷ್ಟೇ ನನ್ ಕಾಮೆಂಟು ಸರ್....ಒಂದೊಂದು ವಾಕ್ಯಾನೂ ರಂಜಿತವಾಗಿದೆ. ತೇಲಾಡುವವರಿಗೆಲ್ಲಾ ಗ್ರಹಣ ಹಿಡಿದ ಮೇಲೆ ಇನ್ಯಾವ ಗ್ರಹಣ ಬುದ್ದಿ ..!!??

  ಪ್ರತ್ಯುತ್ತರಅಳಿಸಿ
 2. ಕೆಲವೇ ದಿನ ಮುಚಿತವಾಗಿ ಇನ್ನೂ ಕೆಲವು ಗ್ರಹಣಗಳು ನಡೆದ ಸುದ್ದಿ ಬಂದಿವೆ. ಅದರಲ್ಲಿ ಚಡ್ಯೂರಪ್ಪ ಎನ್ನುವ ಸೂರ್ಯನಿಗೆ ರೇಣು ಎನ್ನುವ ರಾಹು ಹಿಡಿದ ಗ್ರಹಣ ತುಂಬ ಕ್ರೂರವಾಗಿತ್ತು ಎಂದು ಹೇಳಲಾಗಿದೆ. ಚಡ್ಯೂರಪ್ಪನವರು ಈಗ ಶಾಂತಿ ಮಾಡಿಸಿ ಅಪಾಯದಿಂದ ಪಾರಾಗಿದ್ದಾರಂತೆ.

  ಪ್ರತ್ಯುತ್ತರಅಳಿಸಿ
 3. ಸುಬ್ರಹ್ಮಣ್ಯ ಭಟ್ಟರೇ, ಬೊಗಳೂರಿಗೆ ಸುಸ್ವಾಗತ.
  ನಗದಂತಿರುವುದಕ್ಕೆ ಔಷಧ ಬೇಕಿದ್ದರೆ ದೇವೇಗೌಡರ-ಕುಮಾರಸ್ವಾಮಿ ಅವರನ್ನು ಕೇಳಿಯೂ, ಯಡಿಯೂರಪ್ಪ ಅವರನ್ನು ಕೇಳಿಯೂ ತರಿಸಿಕೊಳ್ಳಬಹುದು....
  ಬರ್ತಾ ಇರಿ...

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ಚಡ್ಯೂರಪ್ಪ ಅಪಾಯದಿಂದ ಪಾರಾಗಿದ್ರೂ, ಬೇರೆಡೆಗಳಿಂದ ಕೇತುಗಳು, ರಾಹುಗಳು ಬಡೀತಾ ಇವೆ. ಒಂದು ತಪ್ಪು ಮಾಡಿ, ಅದನ್ನು ಸರಿಪಡಿಸಿಕೊಳ್ಳಲು ಮತ್ತಷ್ಟು ತಪ್ಪುಗಳ ಸರಣಿಯೇ ನಡೀತಾ ಇದೆ.

  ಪ್ರತ್ಯುತ್ತರಅಳಿಸಿ
 5. ಚುಕ್ಕಿ ಚಿತ್ತಾರಿಗಳೇ,
  ನಿಮಗೂ ಹ್ಯಾಪಿ ನ್ಯೂ ಇಯರ್, ತಡವಾಗಿ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D