ಬೊಗಳೆ ರಗಳೆ

header ads

ಕೋಪನ್ ಹೇಗನ್‌ಗೆ ಓಪನ್ ಏಗೋಣ್? ಬೊಗಳೂರು ಘೋಷಣ್

(ಬೊಗಳೂರು ವಾಯುಮಾಲಿನ್ಯ ಬ್ಯುರೋದಿಂದ)
ಬೊಗಳೂರು, ಡಿ.8- ಕೋಪನ್ ಹೇಗನ್‌ನಲ್ಲಿ ಭೂಮಿಯ ಓಪನ್ ವಾತಾವರಣದಲ್ಲಿ ಹೇಗೆ ಏಗೋಣ್? ಅಥವಾ ಅಲ್ಲಿ ತೀವ್ರ ಪ್ರತಿರೋಧ ಇದ್ದರೂ ಹೇಗೆ ಏಗೋಣ್ ಎಂದು ಚಿಂತಿಸಲು ಬೊಗಳೂರಿನ ನಿಧಾನಮಂತ್ರಿಗಳು ಏನಕ್ಕೋ ಸಹಿ ಹಾಕಲು ತೆರಳಿರುವ ಹಿನ್ನೆಲೆಯಲ್ಲಿ ಬೊಗಳೂರುವಿನ ಏಕಸದಸ್ಯ ಬ್ಯುರೋದ ಸರ್ವರನ್ನೊಳಗೊಂಡ ತಂಡವು ಈ ಬಗ್ಗೆ ತನಿಖೆ ಕೈಗೊಳ್ಳಲು ನಿರ್ಧರಿಸಿತು.

ಇದೀಗ ಈ ತನಿಖೆಯಿಂದ ಪತ್ತೆಯಾಗಿರೋ ಅಂಶಗಳ ಪ್ರಕಾರ, ವಾತಾವರಣದ ತಾಪಮಾನ ಏರಿಕೆ ತಗ್ಗಿಸಲು ಮತ್ತು ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು ಕೆಲವೊಂದು ಉಪಕ್ರಮಗಳನ್ನು ಬೊಗಳೂರಿನ ಆಮ್ ಆದ್ಮೀಗಳು, ಮಾನ್ಯ ನಿಧಾನ ಮಂತ್ರಿಗಳ ಕೈಗೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಅದನ್ನು ನಿಧಾನಮಂತ್ರಿಗಳು ಹೋಪ್ ಇಲ್ಲದೆಯೇ ಓಪನ್ ಹೇಗನ್‌ನಲ್ಲಿ ವಾಚಿಸಲಿದ್ದಾರೆ ಎಂದು ಕೂಡ ಮೂಲಗಳು ವರದ್ದಿ ಮಾಡಿವೆ.

ಇದರಲ್ಲಿರುವ ಸಲಹೆಗಳ ಪ್ರಕಾರ, ವಾತಾವರಣದ ತಾಪಮಾನ ಏರಿಕೆಗೆ ಬೊಗಳೂರು ಜನರು ದಯನೀಯವಾಗಿ ನೀಡಿದ ಕೆಲವೊಂದಿಷ್ಟು ಸಲಹೆಗಳು:

* ವಾತಾವರಣ ಬಿಸಿಯಾಗದಂತೆ ತಡೆಯಲು ಹಾಟ್ ಹಾಟ್ ಚಲನಚಿತ್ರಗಳನ್ನು, ಬಹಿರಂಗ ಚುಂಬನ ಮತ್ತಿತರ ರೋಮ್ಯಾಂಟಿಕ್ ದೃಶ್ಯಗಳನ್ನು ಕಡಿವಾಣ ಹಾಕಬೇಕು.

* ಚಲನಚಿತ್ರಗಳಲ್ಲಿ ನಟಿಯರಿಗೆ ಮತ್ತು ಕೆಲವೊಮ್ಮೊಮ್ಮೆ ನಟರಿಗೂ - ಕನಿಷ್ಠ ಉಡುಪು (ಗರಿಷ್ಠ ಎಷ್ಟಿದ್ದರೂ ಆದೀತು) ತೊಡುವುದು ಕಡ್ಡಾಯ ಮಾಡಬೇಕು.

* ಈ ಮೇಲಿನ ಎಲ್ಲಾ ಸಲಹೆಗಳು ವಾತಾವರಣದ ಉಷ್ಣತೆ ತಡೆಯಲು ವಿಫಲವಾದರೆ, ಸೂರ್ಯನ ಬಿಸಿಲು ಸೋಕದ ಜಾಗದೊಳಗೆ, AC ಹಾಕಿಕೊಂಡು ತಣ್ಣಗೆ ಬಾಯಿ ಮುಚ್ಚಿ ಕೂರಬೇಕು.

ವಾತಾವರಣದ ಮಾಲಿನ್ಯ ತಡೆಗೆ ಬೊಗಳೂರು ಜನತೆ ಸೂಚಿಸಿದ ಸಲಹೆಗಳು:

* ಮೊತ್ತ ಮೊದಲನೆಯದಾಗಿ, ವಾಹನಗಳು ಹೊಗೆಯುಳುವ ಪ್ರದೇಶಗಳಾದ ಸೈಲೆನ್ಸರ್ ಅನ್ನು ಕಡ್ಡಾಯವಾಗಿ ಕಿತ್ತು ಹಾಕಬೇಕು. ಹೀಗೆ ಮಾಡಿದ್ರೆ ಅದರ ಸದ್ದು ಹೆಚ್ಚಾಗುತ್ತದೆ ಎಂಬ ಆತಂಕವಿದ್ದರೆ, ಸೈಲೆನ್ಸರ್ ಅನ್ನೇ ಸೈಲೆನ್ಸ್ (ಬಂದ್) ಮಾಡಿಬಿಡಬೇಕು.

* ತಿನ್ನುವ ವಸ್ತುಗಳ ಬೆಲೆಗಳನ್ನು ಏರಿಸಿ, ಈಗಾಗಲೇ ತಿನ್ನದಂತೆ ಮಾಡಲಾಗಿದ್ದು, ಆಮ್ ಆದ್ಮೀಗಳು ಇದರ ಸದುಪಯೋಗ ಪಡೆದುಕೊಂಡು ಉಸಿರಾಡುವುದನ್ನು ನಿಲ್ಲಿಸಬೇಕು. ಉಸಿರಾಟದಿಂದಲೂ ವಾಯು ಮಾಲಿನ್ಯ ಹೆಚ್ಚಾಗುವುದರಿಂದ ಈ ಕ್ರಮ.

* ಅಪ್ಪಿ ತಪ್ಪಿ ಯಾರಾದರೂ ಉಸಿರಾಡಲು ಸಮರ್ಥರಾದರೆ, ಅವರು ಕಡ್ಡಾಯವಾಗಿ ದಿನಕ್ಕೆ ನಾಲ್ಕೈದು ಬಾರಿ ಹಲ್ಲುಜ್ಜಬೇಕು.

* ಕೊಟ್ಟ ಕೊನೆಯದಾಗಿ, ಈಗಾಗಲೇ ತೊಗರಿಬೇಳೆ, ಸಕ್ಕರೆ, ಈರುಳ್ಳಿ, ಅಕ್ಕಿ ಮುಂತಾದ ಬಡವರ ವಸ್ತುಗಳು ಆಕಾಶದಲ್ಲೇ ಇರುವುದರಿಂದ, ಭೂಮಿಯಲ್ಲಿ ಯಾರು ಕೂಡ ಅಡುಗೆ ಮಾಡಬೇಕಿಲ್ಲ. ಆಕಾಶದಲ್ಲೇ ಬೆಂದು ಬೆಂದು ಉದುರಿದಾಗ ತಿಂದರೆ ಸಾಕು. ಅಡುಗೆ ಮಾಡಿದರೆ ಹೊಗೆ ಬರುತ್ತದೆ, ಇದು ಮಾಲಿನ್ಯ ಕಾರಕ ಎಂಬ ಕಾರಣಕ್ಕೆ ನಮ್ಮ ಸರಕಾರವೇ ಅದರ ಬೆಲೆಯನ್ನು ಆಕಾಶದಲ್ಲೇ ಇರಿಸಿ ಉತ್ತಮ ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದಗಳು.

* ಇಷ್ಟಾಗಿಯೂ, ಯಾರೆಲ್ಲಾ ಈ ಆಹಾರವಸ್ತುಗಳನ್ನು ಖರೀದಿಸಿ ತಿನ್ನಲು ಸಮರ್ಥರಾಗುತ್ತಾರೋ, ಅಂಥವರು ಕೂಡ ಒಲೆ ಉರಿಸಬಾರದು. ಒಲೆ ಉರಿಸುವುದರಿಂದ ಹೊಗೆ ಬಂದು ವಾಯು ಮಾಲಿನ್ಯ ಉಂಟುಮಾಡುವ ಬದಲು ಇಷ್ಟೆಲ್ಲಾ ಆಹಾರವನ್ನು ಆಮ್ ಆದ್ಮೀಗಳಿಗೆ ತೋರಿಸಿಯೇ ತಿಂದು ಅಥವಾ ಒಂದೊಂದು ಕಿಲೋ ತರಕಾರಿಯೋ, ಒಂದು ಕಿಲೋ ಸಕ್ಕರೆಯೋ ಇಲ್ಲವೇ ಒಂದು ಕಿಲೋ ತೊಗರಿಬೇಳೆ ಅಥವಾ ಅಕ್ಕಿಯನ್ನು ಖರೀದಿಸಿ, ಅದನ್ನು ಎತ್ತಿ ಎತ್ತಿ ತೋರಿಸುತ್ತಾ ಆಮ್ ಆದ್ಮೀಗಳ ಹೊಟ್ಟೆ ಉರಿಸಿದರೆ ಸಾಕು.

ಹಾಗಿದ್ದರೆ ಮಾಲಿನ್ಯ ಕಾರಕಗಳಲ್ಲಿ ಇನ್ನೂ ಒಂದು ಬಾಕಿ ಉಳಿಯಿತಲ್ಲಾ? ಅದುವೇ ಶಬ್ದ ಮಾಲಿನ್ಯ... ಅದರ ತಡೆಗೆ?

ಇದೋ ಇಲ್ಲಿದೆ ಬೊಗಳೂರು ಜನ ನೀಡಿದ ಸಲಹೆ: ಅಲೂಗಡ್ಡೆ, ಗೆಣಸು ಮತ್ತಿತರ ವಾಯುಕಾರಕ ವಸ್ತುಗಳ ಸೇವನೆ ಕಡಿಮೆ ಮಾಡಬೇಕು!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

ಏನಾದ್ರೂ ಹೇಳ್ರಪಾ :-D