ಬೊಗಳೆ ರಗಳೆ

header ads

Anveshi.net: ಬೊಗಳೆ ರಗಳೆ ಮತಾಂತರ!

(ಬೊಗಳೂರು ಸೊಂಪಾದಕರ ಡೆಸ್ಕಿನಿಂದ)
ಚುನಾವಣೆಗಳು ಬಂದಿವೆ. ಹೀಗಾಗಿ ತೀರಾ ಹಿಂದುಳಿದ ಬೊಗಳೂರು ಕೂಡ ಬದಲಾಗಿದೆ. ಇದರ ಹಿಂದೆ ಜಾರಕಾರಣಿಗಳ ಕೃಪಾಕಟಾಕ್ಷವಿದೆ ಎಂದು ಸಾರಿ ಸಾರಿ ಹೇಳುವವರಿಗೂ, ಮತ್ತು ಬೊಗಳೂರಿನ ಬೊಗಳೆ ರಗಳೆಯ ಹುಟ್ಟಿದ ಹಬ್ಬ ಕೂಡ ಏಪ್ರಿಲ್ 1ರಂದು ಅಲ್ಲ ಎಂದು ಎಷ್ಟೇ ಹೇಳಿದರೂ ಕೇಳದ ಓದುಗ ವರ್ಗಕ್ಕೂ ಈ ಸೊಂಪಾದಕೀಯವೊಂದು ಸ್ಪಷ್ಟನೆ ಅಥವಾ ತಪ್ಪೊಪ್ಪಿಗೆ ಅಂದುಕೊಂಡರೂ ತಪ್ಪಲ್ಲ.

ಅದೊಂದು ದಿನ ನಮಗೆ ಏನೆಂದೇ ಗೊತ್ತಿರದಿದ್ದ ಅಂತರಜಾಲ ಲೋಕದಲ್ಲಿ ಹೀಗೇ ಸುತ್ತಾಡುತ್ತಿದ್ದಾಗ ಕೆಲವೊಂದು ಕನ್ನಡ ಅಕ್ಷರಗಳು ಕೂಡ ಈ ಜಾಲದಲ್ಲಿ ಅಲ್ಲಲ್ಲಿ ನಕ್ಷತ್ರಗಳಂತೆ ಗೋಚರಿಸತೊಡಗಿದ್ದವು. ಅದೇನು ಈ ರೀತಿ ಹೊಳೆಯುತ್ತಿದೆಯಲ್ಲ ಅಂತ ಅದರ ಬೆನ್ನು ಬಿದ್ದಾಗ ದೊರೆತದ್ದು ಬ್ಲಾಗು ಸ್ಪಾಟೆಂಬ ಬ್ಲಾಗರು ತಾಣ. ಹೇಗೆ ಏನು ಅಂತ ಗೊತ್ತಿಲ್ಲದೆಯೇ, ಜಿಮೇಲ್ ಅಕೌಂಟ್ ತೆರೆದು, ಬ್ಲಾಗರ್‌ಗೆ ಬಂದು, ಅದು ನೀಡಿದ ಸೂಚನೆಗಳನ್ನೆಲ್ಲಾ ಅನುಸರಿಸಿ, "ಬೊಗಳೆ ರಗಳೆ" ತಾಣವೊಂದನ್ನು ಸೃಷ್ಟಿಸಿದಾಗ ಸಾಕು ಬೇಕಾಗಿತ್ತು.

ಇದರಲ್ಲೇನು ಹಾಕೋದು ಎಂದು ಗೊತ್ತಿಲ್ಲದೆ, ಪರದಾಡುತ್ತಿದ್ದಾಗ, "ನಮ್ಮ ಮನೆಯ ಕಸ ಗುಡಿಸಿದೆ, ನಿನ್ನೆ ಊಟ ಮಾಡಲಿಲ್ಲ, ರಾತ್ರಿ ಆಫೀಸಿಂದ ಬಂದಾಗ ತಡವಾಗಿತ್ತು, ಇವತ್ತು ಆಫೀಸಿಗೆ ಹೋಗೋವಾಗ ತಡವಾಗುತ್ತದೆ ಮತ್ತು ಟ್ರಾಫಿಕ್ ಜಾಮ್ ಸಿಗುತ್ತದೆಯಾದ್ದರಿಂದ ಬ್ರೆಡ್ ಮಾತ್ರ ಹಿಡಿದುಕೊಂಡು ಹೋದರೆ ದಾರಿಯಲ್ಲಿ ತಿನ್ನುತ್ತಾ ಸಮಯದ ಸದುಪಯೋಗ ಮಾಡಿಕೊಳ್ಳಬಹುದು" ಅಂತೆಲ್ಲಾ ಬರೆದರೆ, ಇದರಲ್ಲಿ ಏನು ವಿಶೇಷ? ಎಂದು ಯೋಚಿಸಿದಾಗ ಹೊಳೆದದ್ದು- "ಎಲ್ಲರೂ ಸತ್ಯ ಹೇಳುತ್ತಾರೆ, ಅದು ಎಲ್ಲರಿಗೂ ಗೊತ್ತಿದೆ. ಅಸತ್ಯದ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಂಡಿಲ್ಲವಲ್ಲ" ಎಂಬುದು.

ಹೌದು. 2006ರ ಮೂರ್ಖರ ದಿನದಂದೇ ಈ ಬೊಗಳೆ ಬ್ಲಾಗು ಕಣ್ತೆರೆದದ್ದು. ಆದ್ರೆ ಹೇಗೆ ಮುಂದುವರಿಯುವುದು ಎಂದೆಲ್ಲಾ ಗೊತ್ತಾಗದೆ ನಾಲ್ಕೈದು ದಿನ ಒದ್ದಾಡಿ, ಮೊದಲ ಪೋಸ್ಟ್ ಮಾಡಿದಾಗ ಏಪ್ರಿಲ್ 4 ಆಗಿತ್ತು. ಹೀಗಾಗಿ ಅಧಿಕೃತ ಜನ್ಮದಿನ ಏಪ್ರಿಲ್ 1 ಆಗಿದ್ದರೂ, ನೆಟ್ಟೋದುಗರು ಮತ್ತು ಇಲ್ಲಿಗೆ ಬಂದು ಇಣುಕಿದ ತಕ್ಷಣ ಬ್ಲಾಗು ಬಿಟ್ಟೋಡುಗರಾಗುವವರ ತೀವ್ರ ಕೆಂಗಣ್ಣಿನಿಂದ ಪಾರಾಗಲು ಏಪ್ರಿಲ್ 4 ನಮ್ಮ ಬೊಗಳೂರು ಸ್ಥಾಪನಾ ದಿನಾಚರಣೆ ಎಂದೆಲ್ಲಾ ಸುಳ್ಳುಹೇಳಬೇಕಾಯಿತು.

ಆ ಬಳಿಕ ಒದೆಗಳು ಒಂದೊಂದಾಗಿ ಬೀಳುತ್ತಾ, ನಮ್ಮ ಒದೆಯ ಕೌಂಟರು ಹತ್ತು ಸಾವಿರ ದಾಟಿದಾಗ ನಮ್ಮ ಜಗತ್ತಿನಲ್ಲಿ ಕೋಟಿಗೆ ಸಾಟಿಯಿಲ್ಲದ ಓದುಗರೆಲ್ಲಾ ಬಂದು ಧಮಕಿ ಹಾಕಿ ಹೋದಾಗ, ಏನೇ ಬರಲಿ, ಬೊಗಳೆ ಮುಂದುವರಿಸಬೇಕು ಅಂತ ಪಣತೊಟ್ಟಿದ್ದಾಯ್ತು. ಹಾಗಾಗಿ ಒಂದು ವರ್ಷದ ಮಗುವಿಗೆ 25 ಸಾವಿರ ಒದೆಗಳು ಸಿಕ್ಕಿದ್ದನ್ನೂ ಇಲ್ಲಿ ಉಲ್ಲೇಖಿಸಿದ್ದೆವು.

ಇದೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಇಂದು ಬೊಗಳೂರಿನ ಹುಟ್ಟು ಹಬ್ಬ. ಇಷ್ಟರವರೆಗೆ ಬೊಗಳೆಯ ರಗಳೆಯನ್ನು ಸಹಿಸಿಕೊಂಡು, ಇನ್ನೂ ಬೊಗಳೆಗೆ ಮರಳಿ ಭೇಟಿ ನೀಡುವ ಧೈರ್ಯತೋರಿದವರಿಗೆಲ್ಲರಿಗೂ ನಾಲ್ಕನೇ ವರ್ಷಕ್ಕೆ ಕುಂಟುತ್ತಾ ಸಾಗುತ್ತಿರುವ ಈ ಏಕಸದಸ್ಯ ಬೊಗಳೂರು ಬ್ಯುರೋದಲ್ಲಿರುವ ಸಮಸ್ತರು ಧನ್ಯವಾದ ಹೇಳತೊಡಗಿದ್ದಾರೆ.

ಎಮ್ಮೆ ತರುವ ವಿಷಯವೆಂದರೆ, ನಮ್ಮದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಕಂಗೆಡಿಸುತ್ತಿರುವ ಪತ್ರಿಕೆ! ಬಾಯಿಗೆ ಬಂದದ್ದನ್ನು ಬೊಗಳುತ್ತಲೇ, ತೋಚಿದ್ದನ್ನು ಗೀಚುತ್ತಾ, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗಾಗಿ ಹೋರಾಡುತ್ತಿರುವ ಈ ಬೊಗಳೆ ರಗಳೆ ಬ್ಯುರೋ, ತಮ್ಮ ಊರಿನಲ್ಲಿ ಮುರಿದು ಲಟಾರಿಯಾಗತೊಡಗಿದ ಕೀಬೋರ್ಡನ್ನು ಎತ್ತಿ ಎತ್ತಿ ಕುಕ್ಕಿ ಕುಕ್ಕಿ ಎಲ್ಲರಿಗೂ ಕೈಬಾಯಿ ಬಿಟ್ಟು ಧನ್ಯವಾದ ಹೇಳುತ್ತಿದೆ.

ಇದೀಗ, 525ಕ್ಕೂ ಹೆಚ್ಚು ಬೊಗಳೆಗಳಿಗೆ ಅರುವತ್ತೆಂಟುವರೆ ಸಾವಿರ ಒದೆತಗಳು (ಇದರಲ್ಲಿ ನನಗೆ ನಾನೇ ಒದ್ದುಕೊಂಡದ್ದೆಷ್ಟೋ!), ಮತ್ತೊಂದಷ್ಟು ಮಂದಿಯ ಹೊಗಳಿಗೆ, ತೆಗಳಿಗೆ, ಹೀಗಳಿಕೆಗಳು.... ಇವುಗಳ ಮೂಲಕವಾಗಿ ಆರಂಭಿಕ ದಿನಗಳಿಂದಲೂ ಈ ಬೊಗಳೂರು ಬ್ಯುರೋವು ಈ ಹಂತಕ್ಕೆ ಇಳಿಯುವಲ್ಲಿ ಬಂದು ತಲುಪುವಲ್ಲಿ ಪ್ರೋತ್ಸಾಹಿಸುತ್ತಿರುವವರಿಗೆಲ್ಲರಿಗೂ ನಮೋ ನಮಃ.

ನಾಲ್ಕನೇ ವರ್ಷದ ಹುಟ್ಟುಹಬ್ಬಕ್ಕೆ ಟ್ರೀಟ್ ಕೇಳ್ತೀರಾ ಅಂತ ಗೊತ್ತಿತ್ತು. ಹೀಗಾಗಿ ಅದಕ್ಕೊಂದು ಕೊಡುಗೆ. ಯುಆರ್ಎಲ್‌ನಲ್ಲಿ blog ಎಂಬ ನಾಲ್ಕಕ್ಷರ ಬಂದ ತಕ್ಷಣ ನಿಮ್ಮ ನಿಮ್ಮ ಕಚೇರಿಯಲ್ಲಿ ಅದನ್ನು (ಹೆಚ್ಚಿನವರ ಕಚೇರಿಗಳಲ್ಲಿ) ಬ್ಲಾಕ್ ಮಾಡಲಾಗಿದೆ ಎಂಬುದು ಗೊತ್ತಿದೆ. ಇನ್ನು ನಮ್ಮ ಬೊಗಳೂರು ಬ್ಯುರೋ ಬೊಗಳೆರಗಳೆ ಡಾಟ್ ಬ್ಲಾಗ್‌ಸ್ಪಾಟ್ ಎಂಬುದು ಬ್ಲಾಕ್‌ಸ್ಪಾಟ್ ಆಗದಂತಿರಲು www.anveshi.net ಎಂಬ ತಾಣಕ್ಕೆ ಮತಾಂತರಗೊಂಡಿರುತ್ತದೆ. ಆ ಮೇಲೆ, ಇನ್ನು ಮುಂದೆ ಯಾರು ಕೂಡ "ಮಂಗ ಮುಸುಡಿನವ ಬಂದ" ಎಂದುಕೊಳ್ಳದಂತೆಯೂ ಅವ್ಯವಸ್ಥೆ ಮಾಡಿಕೊಂಡಿದ್ದೇವೆ!

ನೀವೆಲ್ಲರೂ ಕೂಡ ಬ್ಲಾಗ್ತಾ ಇರಿ, ನಮ್ಮಂತವರನ್ನು ಬ್ಲಾಗಿಸ್ತಾ ಇರಿ...

(ಮನವಿ: ಏಪ್ರಿಲ್ 1ರಂದು ನಮ್ಮನ್ನು ಎಲ್ಲರೂ ಮೂರ್ಖರಾಗಿಸುತ್ತಿದ್ದಾರೆ ಚಿಂತೆ ಬೇಕಿಲ್ಲ. ಇದು ಬೊಗಳೂರಿನ ವಿಶೇಷ. ಹೀಗಾಗಿ anveshi.net ಅಂತ ತಾಣಗಳಲ್ಲಿ ಬೊಗಳೂರಿನ ಲಿಂಕ್ ಬದಲಾಯಿಸಿಕೊಳ್ಳ್ಳುವಂತೆ ಸಹಬ್ಲಾಗಿಗರಲ್ಲಿ ಕೋರಿಕೆ.)
-ಸೊಂಪಾದಕರು

(ದಯವಿಟ್ಟು ನೆನಪಿಡಿ: IE-8 ಯಾರೆಲ್ಲಾ install ಮಾಡಿಕೊಂಡಿದ್ದಾರೋ... ಅದು ಕೆಲವು ವೆಬ್ ಸೈಟುಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದು, ಅದೇ ರೀತಿ ಬೊಗಳೆ ರಗಳೆಯೂ ಅದರ ಕಪ್ಪು ಪಟ್ಟಿಗೆ ಸೇರಿಕೊಂಡುಬಿಟ್ಟಿದೆ. ಆದುದರಿಂದ, IE-8ಕ್ಕಿಂತ ಹಿಂದಿನ versions, ಫೈರ್‌ಫಾಕ್ಸ್ ಅಥವಾ ಗೂಗಲ್ ಕ್ರೋಮ್‌ನಲ್ಲಿ ಮಾತ್ರ ಬೊಗಳೆಗೆ ಅನುಮತಿ ಇದೆ!)

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಮತ್ತೆ ಹುಟ್ಟಿದಹಬ್ಬಕ್ಕೆ ಶುಭಾಶಯ.. ವಿಳಾಸ ಬದಲಾದರೂ ಬೊಗಳೂರಿನನ್ವೇಷಿ ಕಳೆದು ಹೋಗದಿರಲಿ.

    ಪ್ರತ್ಯುತ್ತರಅಳಿಸಿ
  2. ಹುಟ್ಟು ಹಬ್ಬದ ಶುಭಾಶಯಗಳು. ಒಮ್ಮೆ ತಮ್ಮ ಅಸಲೀ ನಾಮ ಮತ್ತು ಮುಖ ದರ್ಶನ ಮಾಡಿಸಿಕೊಟ್ಟಿದ್ದರೆ ಧನ್ಯರಾಗುತ್ತಿದ್ದೆವು...

    ಪ್ರತ್ಯುತ್ತರಅಳಿಸಿ
  3. ಸುಶ್ರುತರೇ,
    ಮತ್ತೆ ಮತ್ತೆ ಹುಟ್ಟಿದ್ದಕ್ಕೆ ಶುಭಾಶಯ ಕೋರಿದ್ದೀರಿ. ಅನ್ವೇಷಣೆ ಮಾಡೋರೇ ಕಳೆದು ಹೋಗದಂತೆ ನೀವೆಲ್ಲಾ ನೋಡಿಕೊಳ್ಳಬೇಕಾಗಿದೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿಧಿಯವರೆ,
    ನಾವು ಈಗಾಗ್ಲೇ ಎಲ್ಲರಿಗೂ ನಕಲಿ ನಾಮ ಹಾಕ್ತೀವಿ ಅಂತ ತಿಳ್ಕೊಂಡಿದ್ದೀರಿ. ಶೀಘ್ರವೇ ಅಸತ್ಯ ದರ್ಶನ ಪ್ರಾಪ್ತವಾಗಲೂಬಹುದು ಅಂತ ಭರವಸೆ ಅಲ್ಲಲ್ಲ... ಆಶ್ವಾಸನೆ ಕೊಡ್ತೀವಿ.

    ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ಶುಭಾಶಯಗಳು....

    ನಿಜ ಮುಖ ದರ್ಶನ ಮಾಡಿಸಿ ಸ್ವಾಮಿ...!

    ಪ್ರತ್ಯುತ್ತರಅಳಿಸಿ
  6. ಡಾ.ಗುರುಮೂರ್ತಿ ಹೆಗ್ಡೆಯವರೆ,
    ಬೊಗಳೂರಿಗೆ ಸ್ವಾಗತ.
    ಧನ್ಯವಾದ

    ಪ್ರತ್ಯುತ್ತರಅಳಿಸಿ
  7. ಇಟ್ಟಿಗೆ ಸಿಮೆಂಟಿನವರೆ,
    ಹೇಗಿದ್ದರೂ ಏಪ್ರಿಲ್ 1 ದಾಟಿ ಹೋಯಿತು. ಇನ್ನು ಮೂರ್ಖ ದರ್ಶನ ಖಂಡಿತವಾಗಿಯೂ ಶೀಘ್ರವೇ ಆಗುತ್ತದೆ.

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ಅದೇನೋ ಕಿಕ್ಕು ಮಾತ್ರ ನಮಗೆ ಕೇಳಿಸಿತು.
    ನೀವು ಕಿಕ್ಕಿದ ಕಾರಣ ನಮಗಂತೂ ಕಿಕ್!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D