(ಬೊಗಳೂರು ಚುಚ್ಚುವ ಆಣೆ ಬ್ಯುರೋದಿಂದ)
ಬೊಗಳೂರು, ಏ.2- ಕೇಂದ್ರೀಯ ಚುಚ್ಚುವಾನಣೆ ಯೋಗಾಯೋಗದಲ್ಲಿ ಮುಖ್ಯ ಆಯೋಗಿ ನಿವೃತ್ತಿ ನಂತರ, ಇತ್ತೀಚೆಗಷ್ಟೇ ಕಿರಿಕಿರಿ ಅನುಭವಿಸಿದ ಮತ್ತೊಬ್ಬ ಆಯೋಗಿ ಬಡ್ತಿ ಹೊಂದಿರುವುದರಿಂದ ಅಲ್ಲಿ ಒಂದು ಸ್ಥಾನ ತೆರವಾಗಿದೆ. ಈ ಖಾಲಿ ಖಾಲಿ ಹುದ್ದೆಗೆ ಅರ್ಜಿಗಳನ್ನು ಬೊಗಳೆ ಮೂಲಕ ಆಹ್ವಾನಿಸಲಾಗಿದೆ. [ಇದಕ್ಕಾಗಿ ಯಾವುದೇ ರೀತಿಯಲ್ಲಿಯೂ ಹಣ ಪಡೆದಿಲ್ಲ ಮತ್ತು ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಬೊಗಳೂರು ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.]ಅರ್ಜಿ ಸಲ್ಲಿಸುವವರಿಗೆ ಹಲವಾರು ಅನ್‌ಅರ್ಹತೆಗಳಿರಬೇಕಾಗಿದ್ದು ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಇದು ಚುಚ್ಚುನಾವಣಾ ಆಯೋಗವು ನೀಡದಿರುವ ಜಾಹೀರಾತು ಆಗಿದ್ದು, ಬೊಗಳೆ ರಗಳೆಗೆ ಕಾಸು ನೀಡದೆ ಯಾರು ಕೂಡ ಇದನ್ನು ಓದುವಂತಿಲ್ಲ. ಹಾಗೊಂದು ವೇಳೆ ಓದಿದ್ದೇ ಆದರೆ, ಅವರು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.
- ಚುಚ್ಚುನಾವಣಾ ಯೋಗಾಯೋಗದಲ್ಲಿ ಖಾಲಿ ಬಿದ್ದಿರುವ ಸ್ಥಾನ ತುಂಬಲು ಇರಬೇಕಾದ ಅರ್ಹತೆಗಳು:
- ಸಾಕಷ್ಟು CD ಗಳನ್ನು ನೋಡಿ ಅಭ್ಯಾಸ ಇರಬೇಕು. ನಕಲಿ ಸೀಡಿಗಳನ್ನು ನೋಡಿ ಅಭ್ಯಾಸವಿರುವವರಿಗೆ ಆದ್ಯತೆ. ಚುನಾವಣಾ ಸಮಯವಾಗಿರುವುದರಿಂದ ನಿಮಿಷಕ್ಕೊಂದು ಸಿಡಿಗಳನ್ನು ನೋಡುವ ತುಡಿತ ಹೊಂದಿರಬೇಕು.
- "ಕೈ ಕತ್ತರಿಸುತ್ತೇನೆ" ಎಂದರೆ ಎನ್ಎಸ್ಎ ಹೇರುವಂತೆ ಸರಕಾರಕ್ಕೆ ಸಲಹೆ ಮಾಡುವಂತಿರಬೇಕು. ಆದರೆ ಇದಕ್ಕೆ * ಷರತ್ತುಗಳು ಅನ್ವಯ! ಒಂದು ವರ್ಗಕ್ಕೆ ಮಾತ್ರ ಸೀಮಿತ. ಮತ್ತು ಟಿವಿ ಮಾಧ್ಯಮಗಳಲ್ಲಿ ಪದೇಪದೇ ಯಾವುದನ್ನು ಮಾತ್ರ ಬಿತ್ತರಿಸಿ ಬಿತ್ತರಿಸಿ ದೇಶಾದ್ಯಂತ ಬಿಸಿಬಿಸಿ ಚರ್ಚೆ, ಆಕ್ರೋಶ ಮೂಡಿಸಬೇಕು. ಎಷ್ಟನ್ನು ಮಾತ್ರ ಕತ್ತರಿಸಿ ತೋರಿಸಬೇಕೆಂಬ ನಿರ್ಣಯ ಮಾಡುವ ಜಾಣ್ಮೆ ಇರಬೇಕು.
- ನೋಟು ಕಂಡ ತಕ್ಷಣ ಕಣ್ಣುಗಳು ಚುರುಕಾಗಬೇಕು. ಅದರಲ್ಲಿಯೂ 'ಕೈ' ಮೂಲಕ ನೋಟುಗಳು ಬಂದರೆ ಅತೀ ಹೆಚ್ಚು ಜಾಗೃತರಾಗಿ ಅದರ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವಷ್ಟೇ ಮುಂದುವರಿಯಬೇಕು.
- ಕೈಯಲ್ಲಲ್ಲದೆ, ಸೂಟುಕೇಸಿನಲ್ಲಿ, ಸೈಕಲ್ ಮೇಲೆ, ತಾವರೆ ಹೂವಿನೊಳಗೆ ಮುಂತಾದವುಗಳಲ್ಲಿ ನೋಟು ಕಂಡರಂತೂ ಕೆಂಡಾಮಂಡಲವಾಗಿ ದಿಢೀರ್ ಕೇಸು ಜಡಿಯುವ ಸಾಮರ್ಥ್ಯವಿರಬೇಕು.
- ಒಂದೇ ಕುಟುಂಬದ ಕುಡಿಯಾದರೂ, ಅದು ಕೈಜಾರಿ ಹೋಗಿದೆ ಎಂದು ತಿಳಿದ ಬಳಿಕ, ಆಡಳಿತಾರೂಢರು ಹೇಳುವಂತೆ ಕೇಳುವಂತಹ ಮನಸ್ಥಿತಿ ಹೊಂದಿರಬೇಕು.
- ಒಂದು ವರ್ಗದ ಪರವಾಗಿ ಧ್ವನಿಯೆತ್ತಿದರೆ ಮಾತ್ರವೇ ಅದನ್ನು ಕೋಮುವಾದ, ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ಎಂದು ಪರಿಗಣಿಸಬೇಕು. ಬೇರೆ ವರ್ಗದವರು ಏನು ಮಾಡಿದರೂ, ಏನೇ ಹೇಳಿದರೂ ಅದನ್ನು ಜಾತ್ಯತೀತತೆ ಎಂದೇ ಪರಿಗಣಿಸುವ ಮನೋ'ನಿಗ್ರಹ' ಅಲ್ಲಿರಬೇಕು.
5 ಕಾಮೆಂಟ್‌ಗಳು
Dear Sir,
ಪ್ರತ್ಯುತ್ತರಅಳಿಸಿnaavu apply madtivi
ಗುರುಮೂರ್ತಿಯವರೆ,
ಪ್ರತ್ಯುತ್ತರಅಳಿಸಿಜಾರಕಾರಣಿಗಳ ಮೂತಿಗೆ ಏನಾದ್ರೂ ಅಪ್ಲೈ ಮಾಡ್ಬೇಕಷ್ಟೆ...
ಅನ್ವೇಷಿಯವರೆ,
ಪ್ರತ್ಯುತ್ತರಅಳಿಸಿಭಾಳಾ ಕಠಿಣ ಶರ್ತು ಹಾಕಲಿಕ್ಕೆ ಹತ್ತೀರಪಾ. ನಮ್ಮಿಂದ ಇಷ್ಟೆಲ್ಲಾ ಸಾಧ್ಯ ಆಗೋದಿಲ್ಲ. ನವನವೀನ ‘ಛೂ’ವ್ಲಾ ಅನ್ನೋ ವ್ಯಕ್ತೀನ ಇದಕ್ಕ (ಅ)ಯೋಗ್ಯ ಇದ್ದಾನ ನೋಡ್ರಿ.
ಅನ್ವೇಷಿ,
ಪ್ರತ್ಯುತ್ತರಅಳಿಸಿನಿಮ್ಮ ಸುಂದರವಾದ ನೈಜ ರೂಪವನ್ನು ಬಚ್ಚಿಟ್ಟು, ಕಳ್ಳನ ಥರಾ ಕಾಣೋ photo ಹಾಕೀರೆಲ್ರಪಾ!
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಶೀಶೀ....ಫಾರಸ್ಸನ್ನು ಜಾರಿಗೊಳಿಸಲಾಗಿದೆ.
ಫೋಟೋ, ಇದ್ದಿದ್ದು ಇದ್ದಂತೆ ಹಾಕಿದ್ರೆ ಗುದ್ದು ಕೊಡ್ತೀರಲ್ರೀ...ಅದ್ಕೇ ಕಳ್ಳನ್ ಥರಾ ಕಾಣೋ ಫೋಟೋ ಹಾಕಲ್ರೀಯಪ್ಪಾ...
ಏನಾದ್ರೂ ಹೇಳ್ರಪಾ :-D