(ಬೊಗಳೂರು ದೇವರ ಬ್ಯುರೋದಿಂದ)
ಬೊಗಳೂರು, ಆ.18- ಈ ದೇಶವನ್ನು ದೇವರೂ ರಕ್ಷಿಸಲಾರ ದೇಶದ ಪರಮೋಚ್ಚ ನ್ಯಾಯಾಲಯವೂ ಜಾರಕಾರಣಿಗಳ ಮುಖಕ್ಕೆ ಉಗುಳಿ ಹೇಳಿರುವುದರಿಂದ ಜಾರಕಾರಣಿಗಳಿಗೆ ಬಲ ಬಂದಂತಾಗಿದ್ದು, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು, ಹಿಂಸಾಚಾರ, ಭ್ರಷ್ಟಾಚಾರ, ಅರಾಜಕತೆ, ಹಾಹಾಕಾರ, ಬೆಲೆ ಏರಿಕೆ... ಇವುಗಳಿಗೆಲ್ಲಾ ದೇವರೇ ಕಾರಣ ಎಂದು ದೇವರ ಮೇಲೆ ದೂರು ಹಾಕುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಅಪ್ಪ-ಲೇಟ್ ಟ್ರಿಬ್ಯೂನಲ್‌ಗೆ ಮನವಿ ಹಾಕಲು ನಿರ್ಧರಿಸಲಾಗಿದೆ.

ಇಷ್ಟರವರೆಗೆ ದೇಶದ ಅರಾಜಕತೆಗೆ ನಾವೇ ಕಾರಣರು ಅಂದುಕೊಂಡಿದ್ದೆವು. ಆದರೇ ಈಗ ನಮಗೆ ಅಜ್ಞಾನೋದಯವಾಗಿದೆ. ಜ್ಞಾನದ ಪರದೆ ಸರಿದು ಕತ್ತಲು ಆವರಿಸಿ ಎಲ್ಲವನ್ನೂ ಮುಚ್ಚಿ ಹಾಕುವುದು ಸುಲಭವಾಗಿದೆ. ಎಲ್ಲವೂ ಆ ದೇವರೇ ಮೇಲಿನಿಂದ ನಿಯಂತ್ರಿಸುತ್ತಿರುವುದರಿಂದ ನಾವಿನ್ನು ಆರಾಮವಾಗಿರಬಹುದು. ಜನಸಾಮಾನ್ಯರು ಮತ್ತು ಮತದಾರರ ಉಗುಳುವಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೆ ಹಚ್ಚಿಕೊಳ್ಳಬೇಕಾಗಿಲ್ಲ ಎಂದು ಅಭೂತಪೂರ್ವ ಬೆಲೆ ಏರಿಕೆ ಪಕ್ಷದ ನೇತೃತ್ವದ ಸರಕಾರದ ಮುಖ್ಯಸ್ಥರು ಬೊಗಳೆ ರಗಳೆಗೆ ಮಾತ್ರವೇ ಪತ್ರಿಕಾ ಗೋಷ್ಠಿ ಕರೆದು ತಿಳಿಸಿದ್ದಾರೆ.

ನಮ್ಮ ಅವಸ್ಥೆ ನೋಡಿ ಆ ದೇವರಿಗೂ ಏನು ಮಾಡಲಾಗುವುದಿಲ್ಲ ಎಂಬುದೇ ನ್ಯಾಯಾಲಯದ ಹೇಳಿಕೆಯ ಪರೋಕ್ಷ ಅರ್ಥ. ಹೀಗಾಗಿ ನಾವೇಕೆ ಈ ಬಗ್ಗೆ ಇಲ್ಲದ ತಲೆಯನ್ನು ಕೆಡಿಸಿಕೊಳ್ಳಬೇಕು ಎಂದು ಅವರು ಪ್ರಶ್ನೆಗಳ ದಾಳಿಗೆ ತತ್ತರಿಸುತ್ತಾ ಉತ್ತರಿಸಿದರು.

4 Comments

ಏನಾದ್ರೂ ಹೇಳ್ರಪಾ :-D

 1. ಯಾವಾಗೆಲ್ಲಾ ಧರ್ಮಕ್ಕೆ ಹಾನಿಯಾಗುತ್ತದೆಯೋ, ಅಧರ್ಮವು ಮೆರೆಯಲು ಶುರು ಮಾಡುತ್ತದೆಯೋ ಆಗೆಲ್ಲಾ ನಾನು ಧರೆಗಿಳಿದು ಬಂದು ಧರ್ಮ ಸ್ಥಾಪನೆ ಮಾಡುತ್ತೇನೆ ಎಂದದ್ದು ಶ್ರೀಕೃಷ್ಣ ಮಾತ್ರ. ಆತ ಒಬ್ಬ ಹಿಂದೂ ದೇವರು. ಹೀಗಾಗಿ ಭಾರತವನ್ನು ಕಾಪಾಡುವ ಜವಾಬ್ದಾರಿ ಇರುವುದು ಹಿಂದೂ ದೇವರ ಮೇಲೆ ಮಾತ್ರ. ಆದರೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ‘ದೇವರು’ ಎಂಬ ಪದವನ್ನು ಬಳಸಿದ್ದು ಅದು ಅಲ್ಪ ಸಂಖ್ಯಾತರ ದೇವರುಗಳಿಗೆ ಮಾಡಿದ ಅಪಮಾನವಾಗಿದೆ. ಬೇರಾವ ಧರ್ಮದ ದೇವರೂ ಭಾರತವನ್ನು ಕಾಪಾಡುವ ಬವಾಬ್ದಾರಿಯನ್ನು ಹೊಂದಿಲ್ಲ. ಹೀಗಾಗಿ ಅವರ ದೇವರನ್ನು ನ್ಯಾಯಧೀಶರು ತಮ್ಮ ಹೇಳಿಕೆಯಿಂದ ಹೊರಗಿಡಬೇಕು ಎಂದು ಅಖಿಲ ಭಾರತ ‘ಸಿಕ್ಯುಲರ್’ ಸಂಘದ ಬುದ್ಧಿ ಜೀವಿ ನಮಗಷ್ಟೇ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

  ReplyDelete
 2. ಸೋಮನಾಥ ದೇವರು ತನ್ನ ಪಟ್ಟಕ್ಕೆ ರಾಜೀನಾಮೆ ಕೊಡಲಿಕ್ಕೆ ಗುರ್ ಎನ್ನುತ್ತಿದೆ. ಮೋಹನ ದೇವರಂತೂ ಅಮೆರಿಕೆಯ ಬುಶ್‌ನ ಬೂಟ್ ಪಾಲಿಶ್ ಮಾಡುತ್ತ ಕೂತಿದೆ.ಹಾನಿಯಾ ದೇವಿಯಂತೂ ತನ್ನ ಪುತ್ರದೇವನ ಮೇಲೆ ಧನಕನಕ ಸುರಿಸುತ್ತ ಕೂತಿದೆ. ಇನ್ನು ಕೋಲಾಮಂದಿರದಲ್ಲಿದ್ದ ೫೦೦ ಚಿಲ್ಲರೆ, ಚಿಲ್ಲರೆ ದೇವರುಗಳು ಚಿಲ್ಲರೆ ಎಣಿಸುತ್ತ ಕೂತಿವೆ. ದೇಶವನ್ನು ರಕ್ಷಿಸಲಿಕ್ಕೆ ಪುರಸೊತ್ತು ಯಾರಿಗಿದೆ, ಸ್ವಾಮಿ?

  ReplyDelete
 3. ಓಹ್ ಸುಪ್ರೀತರೆ,
  ನೀವು ಹೇಳಿದ್ದು

  ದಯಾ ದಯಾ ಹಿ ಧರ್ಮಸ್ಯ-ಗ್ಲಾನಿರ್ಭವಂತು ಅನ್ನೋ ಶ್ಲೋಕವನ್ನೇ? ಸರಿ ಬಿಡಿ.

  ಹಾಗಿದ್ದರೆ ಭಾರತವನ್ನು ಕಾಪಾಡುವುದು ಯಾರು ಎಂಬ ಬಗ್ಗೆ ವಿವಿಧ ಧರ್ಮಗಳ ದೇವರುಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದ್ದು, ಇದಕ್ಕಾಗಿ ದೇವರ ಲೋಕದಲ್ಲಿಯೂ ಮೀಸಲಾತಿ ಜಾರಿಗೆ ತರಲು ಉದ್ದೇಶಿಸಲಾಗುತ್ತಿದೆಯಂತೆ.

  ReplyDelete
 4. ಸುನಾಥರೆ,
  ದೇಶವನ್ನು ಮೇಯಲು ನಾವಿದ್ದೇವೆ, ರಕ್ಷಿಸಲು ಅ-ರಕ್ಷಕರಿದ್ದಾರೆ ಅಂತ ಸಂಸತ್ತಿನ ದೇವರುಗಳು ಈಗ ಸೂಟುಕೇಸು ಹುಡುಕುತ್ತಾ ದುಡ್ಡೆಣಿಸುತ್ತಲೇ ಇವೆ ಎಂದು ನಿಮ್ಮ ಸುಳಿವಿನ ಆಧಾರದಲ್ಲಿ ಕಂಡುಕೊಂಡಿದ್ದೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post