ಬೊಗಳೆ ರಗಳೆ

header ads

ಸಮಯಕ್ಕೆ ಮುಂಚೆ ಪರಾರಿಯಾದ ರೈಲು!

(ಬೊಗಳೂರು ರೈಲು ಬಿಡೋ ಬ್ಯುರೋದಿಂದ)
ಬೊಗಳೂರು, ಆ.21- ಭಾರತೀಯ ರೈಲ್ವೇ ಇಲಾಖೆಯನ್ನು ವಿಶ್ವ ದಾಖಲೆ ಅಥವಾ ವಿಶ್ವದ ಮತ್ತೊಂದು ಅದ್ಭುತ ಎಂದು ಕರೆಸುವ ಮೂಲಕ ಗಿನ್ನೆಸ್ ದಾಖಲೆ ಪುಸ್ತಕದೊಳಗಿರಿಸಿ ಗಟ್ಟಿಯಾಗಿ ಬೈಂಡ್ ಹಾಕಲು ಹೊಸದೊಂದು ಸಂಚು ನಡೆಯುತ್ತಿರುವುದು ತೀರಾ ನಿಧಾನವಾಗಿ ಆದರೂ ತಡವಾಗಿ ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಈ ಸಂಶೋಧನೆ ಪತ್ತೆಯಾಗಿದ್ದು ಇಲ್ಲಿ ಪ್ರಕಟವಾಗಿರುವ ವರದಿಯಿಂದ. (ಆದರೆ ಇಲ್ಲಿ ಪ್ರಯಾಣಿಕರನ್ನು ಸ್ಟಂಪ್ ಔಟ್ (Passengers stumped) ಮಾಡಿದ್ದೇಕೆಂಬ ಬಗ್ಗೆ ತನಿಖೆ ನಡೆಯುತ್ತಿದೆ.) ಯಾವತ್ತೂ ನಿದ್ರಿಸುತ್ತಿರುವ ಬೊಗಳೆ ರಗಳೆ ಬ್ಯುರೋ ವರದಿಗಾರರು, ಎಂದಿನಂತೆ ತಮ್ಮ ದೈನಂದಿನ ದಿಢೀರ್ ಬೀಟ್‌ಗೆ 2 ಗಂಟೆ ತಡವಾಗಿಯೇ ಹೊರಟಿದ್ದರು. ಇದಕ್ಕೆ ಕಾರಣವೆಂದರೆ, ರೈಲ್ವೇ ಇಲಾಖೆಯ ಸಮಯ ನಿಷ್ಠೆ. ಹೇಗೂ ಎರಡ್ಮೂರ್ನಾಲ್ಕೈದಾರು ಗಂಟೆ ತಡವಾಗಿಯೇ ರೈಲು ಬರುತ್ತದಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ.

ಆದರೆ, ಬೊ.ರ. ಬ್ಯುರೋದವರ ಹೊರತಾಗಿ, ಸಮಯ ಪಾಲನೆ ಎಂಬ ದುರ್ವ್ಯಸನಕ್ಕೆ ತುತ್ತಾಗಿ ಯಾವತ್ತೂ ಕಾಯುತ್ತಲೇ ಇರಬೇಕಾದ ಪ್ರಯಾಣಿಕರು ಈ ಬಾರಿ ಮೋಸ ಹೋಗಿದ್ದರು. ಆದರೂ ಅವರಿಗೆ ಕಾಯುವುದು ತಪ್ಪಲಿಲ್ಲ. ಅದೆಂದರೆ, ಈ ಬಾರಿ ರೈಲು ನಿಗದಿತ ಗಂಟೆಗೆ ಮೊದಲೇ ಹೊರಟಾಗಿತ್ತು. ಹೀಗಾಗಿ 2.30ಕ್ಕೆ ಎಂದು ನಿಗದಿಪಡಿಸಲಾಗಿದ್ದ ರೈಲು ಪ್ರಯಾಣವನ್ನು "ಅದು ಮರುದಿನದ 2.30" ಎಂದು ಬರೆಯಲು ಬಹುಶಃ ರೈಲ್ವೇ ಇಲಾಖೆ ಅಧಿಕಾರಿಗಳು ಮರೆತಿದ್ದರು.

ಆದರೆ, ಇದು ರೈಲ್ವೇ ಇಲಾಖೆಯನ್ನು ಗಿನ್ನಿಸ್ ಪುಸ್ತಕದೊಳಗೆ ಹಾಕುವ ಸಂಚು (ಅಂದರೆ ಇತಿಹಾಸದೊಳಗೆ ತಳ್ಳುವ ಸಂಚು) ಎಂದು ರೈಲ್ವೇ ಅಧಿಕಾರಿಗಳು ದೂಷಿಸಿದ್ದಾರೆ. ಅಲ್ಲೇ ಅಡ್ಡಾಡುತ್ತಿದ್ದ ಬೊ.ರ. ಬ್ಯುರೋದವರನ್ನು ದಬಾಯಿಸಿ ಕರೆದು ಮಾತನಾಡಿದ ಅಧಿಕಾರಿ, "ಇಲ್ಲ, ಇಲ್ಲ, ಇಂಥದ್ದು ಸಾಧ್ಯವೇ ಇಲ್ಲ. ರೈಲ್ವೇ ಇಲಾಖೆಯ ಇತಿಹಾಸದಲ್ಲಿಯೇ ರೈಲು ನಿಗದಿತ ಅವಧಿಗೆ ಹೋದ ಮತ್ತು ಅದಕ್ಕಿಂತಲೂ ಮೊದಲು ಹೊರಟ ದಾಖಲೆಯೇ ಇಲ್ಲ" ಎಂದು ಕೈಕಾಲು ಹಿಡಿಯುತ್ತಾ ಅಲವತ್ತುಕೊಂಡರು.

ಯಾವತ್ತಿಗೂ ತಡವಾಗಿಯೇ ಸಂಚರಿಸುವ ದಾಖಲೆ ಸ್ಥಾಪಿಸುವ ರೈಲ್ವೇ ಇಲಾಖೆಗೆ ಇದೊಂದು ಒಲಿಂಪಿಕ್ಸ್ ಕೂಟ ದಾಖಲೆ, ಅಥವಾ ಬಹುಶಃ ಒಲಿಂಪಿಕ್ಸ್‌ನಲ್ಲಿ ಪದಕಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅದರಿಂದ ಉತ್ತೇಜಿತವಾಗಿ ಈ ರೈಲು ವೇಗವಾಗಿ ಓಡಿರಬಹುದು, ಅಥವಾ ಈ ರೈಲಿನ (ಉಸೈನ್) ಬೋಲ್ಟ್ ಲೂಸ್ ಆಗಿರಬಹುದು ಎಂದು ಶಂಕಿಸಲಾಗಿದೆ.

ತಮಗೆ ತಿಳಿಯದೆಯೇ ರೈಲು ಪರಾರಿಯಾಗಿದ್ದು ಹೇಗೆ ಎಂಬ ಬಗ್ಗೆ ತಲೆ ಕೆರೆದು ಕೆರೆದು ಕೆರೆಕೆರೆದುಕೊಂಡಿರುವ ಅಧಿಕಾರಿಗಳು, ಈ ಕುರಿತು ಪತ್ರಿಕಾ ಹೇಳಿಕೆಯನ್ನು ಇನ್ನಿಲ್ಲದ ವೇಗದಿಂದ ಅರ್ಧ ಗಂಟೆ ತಡವಾಗಿ ಕಳುಹಿಸಿದೆ.

ಆದರೆ ಈ ಕುರಿತು ರೈಲು ಸಚಿವ ಆಲೂ ಪ್ರಸಾದರನ್ನು ಸಂಪರ್ಕಿಸದೆಯೇ ಮಾತನಾಡಿಸಿದಾಗ, ಅವರು ಉತ್ತರ ನೀಡಿದ್ದು ಹೀಗೆ: "ನಮ್ಮದು ಯಾವತ್ತಿದ್ದರೂ ರೈಲು ಬಿಡುವ ಸಚಿವಾಲಯ, ಹೀಗಾಗಿ ಪ್ರಯಾಣಿಕರಿಗೆ ಕೂಡ ಸೂಕ್ತ ಮಾಹಿತಿಯನ್ನು ಹಳಿಯಿಲ್ಲದ ರೈಲು ಬಿಟ್ಟೇ ತಲುಪಿಸಿದ್ದೇವೆ."!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಅಯ್ಯೋ ಇದು ಪ್ರಾರಂಭ ಮಾತ್ರ. ಘನತೆಗೆಟ್ಟ ಮಂತ್ರಿ ಆಲೂ ಪರಶಾದರ ಪ್ಲ್ಯಾನ್ ಇನ್ನೂ ವಿಸ್ತಾರವಾಗಿದೆ. ಕಾಶ್ಮೀರಕ್ಕೆ ಹೊರಟಿರುವ ಪ್ರವಾಸಿಗರನ್ನು ಕನ್ಯಾಕುಮಾರಿಗೆ, ಕೊಲ್ಕತ್ತಾಕ್ಕೆ ಹೊರಟಿರುವವರನ್ನು ಮುಂಬಯಿಗೆ ಕರೆದೊಯ್ದು, ಎಲ್ಲೆಲ್ಲೂ
  ಅರಾಷ್ಟ್ರೀಯ ಭಾವನೆಯನ್ನು ಹಬ್ಬಿಸುವ ಅವಿಚಾರ ಇಟ್ಟುಕೊಂಡಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ಅಲ್ಲ ಈ ಲಾಲೂ ಪ್ರಸಾದ್ ಯಾದವ್ ಬಂದ ಮೇಲೆ ಭಾರತೀಯ ರೈಲ್ವೇ, ಭಾರೀ ಲಾಭದತ್ತ ಮುನ್ನುಗ್ಗುತ್ತಿದೆ ಎಂಬ ಕೆಲವು ಜೋಕರ್‌ಗಳು ನಾಲಗೆ ಆಡಿಸುತ್ತಿರುವುದು ಚೋದ್ಯವೆನಿಸುತ್ತದೆ. ಒಬ್ಬ ಅನಕ್ಷರಸ್ಥ ಹ್ಯಾಗ್ರೀ ಈ ರೈಲ್ವೇ ಇಲಾಖೆ ಲಾಭ ಹೊಂದುವಂತೆ ಮಾಡಬಲ್ಲ?. ರೈಲ್ವೇ ಬಜೆಟ್ ಏನು ಈ ಲಾಲೂ ಮಾಡಿದ್ದಾ?. ಅವ ಕೇವಲ ಒಪ್ಪಿಗೆ ಕೊಟ್ಟಿದ್ದು ಅಷ್ಟೆ...ನಿಜವಾಗಿ ಮಾಡಿದವರಿಗೆ ಮೂರುಕಾಸಿನ ಬೆಲೆ ಇಲ್ಲ. ಇವ ರೈಲ್ವೇ ಮಂತ್ರಿಯಾಗಿ ಹಾಗೆ ಮಾಡಿದ ಹೀಗೆ ಮಾಡಿದ ಎಂದು ಬೊಗಳುವ ಈ ಅನಕ್ಷರಸ್ಥ ಮಂದಿಗೆ ಸತ್ಯ ಗೊತ್ತಾಗದಿರುವುದು ನಮ್ಮ ದೇಶದ ದುರಂತ. ಪುಟಗೋಸಿಯ ಬೆಲೆ ಕೂಡಾ ಇಲ್ಲದಿರುವ ಈ ಲಾಲೂ ರೈಲ್ವೇ ಮಂತ್ರಿಯಾದದ್ದು ಮತ್ತೊಂದು ದುರಂತ.

  ಪ್ರತ್ಯುತ್ತರಅಳಿಸಿ
 3. ಸುನಾಥರೆ,
  ಲಾಲೂ ಅವರು ಹೇಗೂ ಶ್ರೀಕೃಷ್ಣನ ಅಂದರೆ ವಾಸುದೇವನ ಕುಟುಂಬದವರು. ಹೀಗಾಗಿ ವಸುಧೈವ ಕುಟುಂಬಕಂ ಎಂಬಂತೆ ಅವರು ಎಲ್ಲರೂ-ಎಲ್ಲಾ ಊರುಗಳೂ ಒಂದೇ ಎಂಬಂತೆ ಬಿಂಬಿಸಲು ಶತಪ್ರಯತ್ನ ಮಾಡ್ತಾ ಇದ್ದಾರೆ.

  ಪ್ರತ್ಯುತ್ತರಅಳಿಸಿ
 4. ಗುರುಗಳೆ,
  ನಷ್ಟದಲ್ಲಿದ್ದ ರೈಲ್ವೇ ಇಲಾಖೆಯು ಆಲೂ ಗಡ್ಡೆಯಿಂದಾಗಿ ಲಾಭದತ್ತ ನಡೆಯುತ್ತಿದೆ. ಸೋ... ಖಜಾನೆಯಲ್ಲಿರುವ ಮೇವು ಕಬಳಿಸಲು ಮತ್ತೊಂದು ಅವಕಾಶ ಸಿಕ್ಕಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D