(ಬೊಗಳೂರು ಮನೋವೇದನಾ ಬ್ಯುರೋದಿಂದ)
ಬೊಗಳೂರು, ಜು.19- ದೇಶದ ಜನತೆ ಹಸಿವಿನಿಂದ, ಏರಿದ ಬೆಲೆಗಳಿಂದ ಹಾಗೂ ಇತರ ಜೀವನಾವಶ್ಯಕ ಸೌಲಭ್ಯ ಕೊರತೆಗಳಿಂದಾಗಿ ಕಂಗೆಟ್ಟಿದ್ದರೆ, ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಹೊಸದೊಂದು ಕ್ರಮಕ್ಕೆ ಮುಂದಾಗಿದೆ.

ಅದೆಂದರೆ, ಹಸಿವು ತಡೆದುಕೊಂಡಾದರೂ ಟಿವಿ ಮನೋರಂಜನೆಯನ್ನು ನೋಡಿ ಮನೋವೇದನೆ ತೊಲಗಿಸಿಕೊಳ್ಳೋಣ ಎಂದುಕೊಂಡ ಜನತೆಗಾಗಿಯೇ ಇದು ವಿಶೇಷ ಪ್ಯಾಕೇಜ್. ಟೀವಿ ನೋಡುವವರ ಮೇಲೆ ವಾರ್ಷಿಕ 500 ರೂ. ಕರ"ಭಾರ" ಘೋಷಿಸಲಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಅಪಪ್ರಚಾರ ಖಾತೆ ಸಚಿವರು ತಿಳಿಸಿರುವುದಾಗಿ ಇಲ್ಲಿ ವರದಿಯಾಗಿದೆ.

ದೇಶವನ್ನು ಕಾಡುತ್ತಿರುವ ದೈನಂದಿನ ಸಮಸ್ಯೆಗಳನ್ನು ಸರಿಪಡಿಸುವ ಬದಲಾಗಿ ಮೀಸಲಾತಿ, ತರಕಾರಿ ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆ, ಶಂಕಿತ ಭಯೋತ್ಪಾದಕರ ರಕ್ಷಣೆಗೆ ಒತ್ತಾಯ, ರಾಷ್ಟ್ರಪತಿ ಸ್ಥಾನಕ್ಕೆ ಯಾರಿಗೂ ತಿಳಿಯದ "ಪ್ರತಿಭಾ"ವಂತರ ನೇಮಕ ಮುಂತಾದ ನಿದ್ದೆಕೆಡುವ ಅಪೂರ್ವ, ಅಪ್ರತಿಭ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ಸರಕಾರದ ಮುಕುಟದ ಗರಿಗೆ ಮತ್ತೊಂದು ಸೇರ್ಪಡೆ ಈ ಟಿವಿ ಕರ.

ಈ ರೀತಿಯ ತೀರ್ಮಾನಗಳು ಈಗಾಗಲೇ ವಿಶ್ವದ ಗಮನ ಸೆಳೆದಿದ್ದು, ದೇಶ-ವಿದೇಶದ ಆಡಳಿತಗಾರರು ಭಾರತೀಯ ರಾಜಕಾರಣಿಗಳಿಂದ ಪಾಠ ಕಲಿಯಲು ಮತ್ತು ಇಂಥಹ ತೀರ್ಮಾನಗಳನ್ನು ಕೈಗೊಳ್ಳುವುದಕ್ಕಾಗಿಯೇ ವಿಶೇಷ ಕೋರ್ಸ್ ಒಂದನ್ನು ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಪಾಕಿಸ್ತಾನದಂತಹ ಕೆಲವು ರಾಷ್ಟ್ರಗಳಂತೂ, ದೇಶದ ಹಿತ ಕಾಯುವುದಕ್ಕೂ ಹೆಚ್ಚಾಗಿ ಜನತೆಗೆ ಹೊರೆಯಾಗುವ ಇಂಥಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಭಾರತದ ಅದ್ಭುತ ಮೇಧಾ ಶಕ್ತಿ, ಭಾರೀ ದು(ದೂ)ರಾಲೋಚನೆಯುಳ್ಳ ರಾಜಕಾರಣಿಗಳನ್ನೇ ಅಪಹರಿಸಿ, ತಮ್ಮ ದೇಶದ ಘನ ಹುದ್ದೆಯಲ್ಲಿ ಕುಳ್ಳಿರಿಸುವ ಯತ್ನ ನಡೆಸುತ್ತಿದೆ ಎಂದು ನಮ್ಮ ಗುಪ್ತ ವರದಿಗಾರರು ಒದರಿದ್ದಾರೆ.

ತಮ್ಮ ಅತ್ಯುತ್ತಮ ಮಂಡೆಯ ತೀರ್ಮಾನದಿಂದಾಗಿ ವಿಶ್ವಾದ್ಯಂತ ಬೇಡಿಕೆ ಕುದುರಿಸಿಕೊಂಡಿರುವ ಜಾರಕಾರಣಿಗಳು ತಮ್ಮ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಲೆಮರೆಸಿಕೊಳ್ಳಲಾರಂಭಿಸಿದ್ದು, ಬೇಡಿಕೆ ಕುದುರಿದ ತಕ್ಷಣ ಅವರು (ಇಲ್ಲದ) ತಲೆ ತೋರಿಸತೊಡಗುತ್ತಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಟಿ ವಿ ಆದಮೇಲೆ ಮೊಬೈಲು, ಕ೦ಪ್ಯೂಟರು, ವಿಡಿಯೋ ಗೇಮು ಇತ್ಯಾದಿ ಇದ್ದವರು ಕೂಡ ತೆರಿಗೆ ಕೊಡಬೇಕ೦ತೆ

  ReplyDelete
 2. ಹುಟ್ಟುತ್ತಲೇ ತೆರಿಗೆ,ಸತ್ತಾಗಲೂ ತೆರಿಗೆ,ಬದುಕಿನುದ್ದಕ್ಕೂ ಬಗೆಬಗೆಯ ತೆರಿಗೆ. ಈ ಬಾಳಿನಲ್ಲಿ ಏನಿದೆಯಣ್ಣಾ ತೆರಿಗೆ ಬಿಟ್ಟರೆ?
  ಅದಿರಲಿ, ಬಗೆಬಗೆಯ ತೆರಿಗೆ ಕಂಡುಹಿಡಿಯುವ ನಮ್ಮ
  ಅ(ನ)ರ್ಥ ಮಂತ್ರಿ ಸುಬ್ರಹ್ಮಣ್ಯಮ್ ಅವರ ಮಂಡೆಯನ್ನು
  "ಐನ್‍ಸ್ಟೈನ್ ಮಂಡೆ" ತರಹ ಪ್ರಿಜರ್ವ್ ಮಾಡಿ ಇಡುತ್ತಾರಾ?

  ReplyDelete
 3. ಶ್ರೀನಿಧಿಯವರೆ,

  ನೀವು ಇಷ್ಟು ಬೇಗ ಹಾರ್ಟ್ ಅಟ್ಯಾಕ್ ಮಾಡಿಸುವ ಯತ್ನ ಮಾಡಬಾರದಿತ್ತು...

  ಆ ಥರಾ ಮಾಡಿದ್ರೆ ನಮ್ಮ ರದ್ದಿ ಪತ್ರಿಕೆ ನಡೆಯುವುದಾದರೂ ಹೇಗೆ?

  ReplyDelete
 4. ಸುಧೀಂದ್ರ ಅವರೆ,
  ನೀವು ಹೇಳಿದಂತೆ ಮಂಡೆ ಪ್ರಿಸರ್ವ್ ಮಾಡೋಕ್ಕೂ ತೆರಿಗೆ ನೀಡಬೇಕಂತೆ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post