(ಬೊಗಳೂರು ಬಾಲಕತ್ತರಿಸುವ ಬ್ಯುರೋದಿಂದ)
ಬೊಗಳೂರು, ಜು.23- ಡೊಂಕು ಬಾಲದ ನಾಯಕರೇ ಎಂದು ಹಿರಿಯರು ಹಾಡಿದ್ದನ್ನೇ ಧ್ಯೇಯವಾಗಿಸಿಕೊಂಡು ನಮ್ಮ ಜಾರಕಾರಣಿಗಳು ಕೂಡ ಡೊಂಕು ಬಾಲದ ನಾಯಕನ ಪಟ್ಟಕ್ಕೆ ಸಂಸತ್ತಿನಲ್ಲಿ ಕೂತು ಗದ್ದಲ ಎಬ್ಬಿಸುತ್ತಿರುವಂತೆಯೇ, ಬಾಲದ ಸಂಪಾದಕಿಗೆ ರಾಷ್ಟ್ರಪತಿಯವರು ಅಭಿನಂದಿಸಿದ ಸುದ್ದಿ ಇಲ್ಲಿ ಪ್ರಕಟವಾಗಿದೆ.

ಬಾಲ ಮತ್ತು ಸಂಪಾದಕಿ ಎಂಬ ಎರಡು ಶಬ್ದಗಳಿಗೆ ಹಲವು ಅರ್ಥಗಳಿರುವುದರಿಂದ ಇದರ ಬಗ್ಗೆ ಸಂಶೋಧನೆಯನ್ನೇ ಕೈಗೊಳ್ಳಬೇಕಾದ ಅನಿವಾರ್ಯತೆ ಬೊಗಳೆ ರಗಳೆ ಬ್ಯುರೋಗೆ. ಇದು ಬಾಲವಿರುವ ಸಂಪಾದಕಿಯೇ ಎಂಬ ಸಂದೇಹ ನಮ್ಮ ಓದುಗ ಬಳಗದ್ದು. ಆದರೆ ನಿರ್ಗಮನ ರಾಷ್ಟ್ರಪತಿಯವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟವೇ ಹೊರತು, ಬಾಲವಿರುವ ಪ್ರಾಣಿಗಳೆಂದರೆ ಇಷ್ಟ ಎಂಬುದನ್ನು ಬಿಂಬಿಸುವ ಸುದ್ದಿ ಇದುವರೆಗೆ ಎಲ್ಲೂ ಪ್ರಕಟವಾಗಿಲ್ಲ. ಹಾಗಾಗಿ ಅವರು ಅಂಥವರನ್ನು ಸನ್ಮಾನಿಸುವುದು ದೂರದ ಮಾತು. ಈ ಕಾರಣಕ್ಕೆ, ಈ ಬಾಲ ಎಂಬುದು ಬಾಲಕಿಯ ಅರ್ಧರೂಪ ಇರಬಹುದೇ ಎಂಬ ಶಂಕೆಯೂ ಒಂದು ವಿಭಾಗದ್ದು.

ಅದೇ ರೀತಿ ಸಂಪಾದಕಿ ಎಂಬ ಶಬ್ದವೂ ಕುತೂಹಲ ಮೂಡಿಸುತ್ತದೆ. ಆಕೆ ಇಷ್ಟು ಸಣ್ಣ ಪ್ರಾಯದಲ್ಲೇ ಸಂಪಾದನೆಗೆ ಹೊರಟಿದ್ದಾಳೆಯೇ? ಎಂಬ ಪ್ರಶ್ನೆ ಒಂದೆಡೆಯಾದರೆ, ಆಕೆ ಬಾಲಗಳನ್ನೇ ಸಂಪಾದಿಸುತ್ತಿದ್ದಾಳೆಯೇ ಎಂಬುದು ಮತ್ತೊಂದು ಶಂಕೆ. ಈ ಬಾಲಗಳನ್ನೆಲ್ಲಾ ಒಟ್ಟುಗೂಡಿಸಿದಲ್ಲಿ ಆಕೆಗೇನು ಲಾಭ? ಎಂಬುದು ಯಾರಿಗೂ ಅರ್ಥವಾಗದ ಪ್ರಶ್ನೆ.

ಸಂಪಾದಿಸು ಅನ್ನುವುದಕ್ಕೆ ಮತ್ತೊಂದು ಅರ್ಥವೂ ಇದೆ ಎಂಬುದು ಭಾರಿ ಸಂಶೋಧನೆ ಬಳಿಕ ತಿಳಿದುಬಂತು. ಅದೆಂದರೆ ಉದ್ದವಾದ ಸುದ್ದಿಯೊಂದನ್ನು ಸೊಂಪಾಗಿ ಕತ್ತರಿಸಿ ಬ್ರೇಕಿಂಗ್ ನ್ಯೂಸ್ ನೀಡುವುದು... (ಅಂದರೆ... ಬಾಲವನ್ನು ಬ್ರೇಕ್ ಮಾಡುವ ನ್ಯೂಸ್ ಅಲ್ಲ) ಸುದ್ದಿಯನ್ನು ತಿದ್ದಿ ತಿದ್ದಿ ಪ್ರಕಟಿಸುವುದು ಎಂಬುದು ಮತ್ತೊಂದು ವ್ಯಾಖ್ಯಾನ. ಅದು ಕೂಡ ಇಲ್ಲಿ ಅನ್ವಯಿಸಬಹುದು. ಹೇಗೆಂದರೆ ಆಕೆ ಬಾಲಗಳನ್ನೆಲ್ಲಾ ಕತ್ತರಿಸಿ ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಳೆ? ಅಂದರೆ ಸುದ್ದಿ ಕತ್ತರಿಸಿ(ತಿದ್ದಿ)ದಂತೆ, ಬಾಲವನ್ನು ತಿದ್ದಿ ತೀಡುತ್ತಿದ್ದಳೇ? ಅದಕ್ಕಾಗಿಯೇ ಆಕೆ ಬಾಲ ಸಂಪಾದಕಿ ಎನಿಸಿಕೊಂಡಿದ್ದಾಳೆಯೇ...

ಈ ಉತ್ತರ ತಿಳಿಯದ ಪ್ರಶ್ನೆಗಳ ಗೊಂದಲದಲ್ಲಿ ಮುಳುಗಿದ್ದಾಗ ಹೊಳೆದ ಮತ್ತೊಂದು ವಿಷಯವೆಂದರೆ ಇದು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದಕ್ಕೆ ಸಂಬಂಧಿಸಿದ ಸುದ್ದಿಯಾಗಿರಬಹುದೇ? ಎಂಬುದು.

ಶತಕೋಟಿ ಜನಸಂಖ್ಯೆ ಇರುವ ದೇಶದ ಜಾರಕಾರಣಿಗಳೆಲ್ಲಾ ತಮ್ಮ ಅಧಿನಾಯಕಿಯ ಮನೆಬಾಗಿಲಲ್ಲಿ ಬಾಲ ಮುದುಡುತ್ತಾ, ಬಾಲ ಅಲ್ಲಾಡಿಸುತ್ತಿರುವುದೇಕೆ? ಆಕೆ ಹೇಳಿದವರೇ ಅಗ್ರಪಟ್ಟ ಅಲಂಕರಿಸುತ್ತಿದ್ದಾರೆ... ಆಕೆಯ ಕೃಪಾ ಕಟಾಕ್ಷವಿದ್ದರೆ ಅರ್ಹತೆ ಎಲ್ಲಾ ಅನಗತ್ಯ. ಪಕ್ಷವನ್ನು ಮುನ್ನಡೆಸುವ ಘಟಾನುಘಟಿ ನಾಯಕರಿದ್ದರೂ ಅವರೆಲ್ಲಾ ಆಕೆಯೆದುರು ಬಾಲ ಮುದುಡಿರುತ್ತಾರೆ, ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಹಾಗಾಗಿ ಆಕೆಯೇ ಇವರನ್ನೆಲ್ಲಾ ತಿದ್ದುವ, ತೀಡುವ, ಆಡಿಸುವ, ಸಂಪಾದನೆಗೆ ದಾರಿ ತೋರುವ ಸಂಪಾದಕಿಯೇ ಆಗಿರಬಹುದೇ? ಅಂದರೆ ಆಕೆಯೇ ಬಾಲ ಸಂಪಾದಕಿಯಾಗಿರಬಹುದೇ?

ಪ್ರಶ್ನೆಗೆ ಉತ್ತರಕ್ಕಾಗಿ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂಬುದು ಅರಿವಾಗಿದ್ದೇ ತಡ, ಈ ಕುರಿತ ಶೋಧನೆಯನ್ನು ಇಲ್ಲಿಗೇ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

2 Comments

ಏನಾದ್ರೂ ಹೇಳ್ರಪಾ :-D

 1. ಬಾಲ ಸಂಪಾದಕಿ ಎಂದರೆ
  (೧)ಬಾಲ ಇದ್ದ ಸಂಪಾದಕಿಯೆ?
  (೨)ಅಥವಾ ಬಾಲ ಕತ್ತರಿಸುವ ಸಂಪಾದಕಿಯೆ?
  (೩)ಅಥವಾ ಬಾಲ ಸಂಗ್ರಹಿಸುವ ಸಂಪಾದಕಿಯೆ?
  ವಾಹ್!ಅಸತ್ಯಾನ್ವೇಶಿಗಳೆ! ನಿಮ್ಮ ಸಂಶೋಧನೆ ಬಹಳ ಚನ್ನಾಗಿ ಸಾಗುತ್ತಿದೆ. ದಯವಿಟ್ಟು ಅರ್ಧಕ್ಕೆ ನಿಲ್ಲಿಸಿ ನಮ್ಮಂತಹ
  ಅ(ನ)ರ್ಥ ಜಿಜ್ಞಾಸುಗಳಿಗೆ ನಿರಾಶೆ ಮಾಡದಿರಿ.

  ReplyDelete
 2. ಸುಧೀಂದ್ರರೆ,

  ನೀವಾದರೂ ನಮ್ಮ ಸಂಶೋಧನೆಯನ್ನು ಕ್ಯಾಕರಿಸಿ ಮೆಚ್ಚಿಕೊಂಡು ಅರ್ಧಕ್ಕೆ ನಿಲ್ಲಿಸುವಂತೆ ಸಲಹೆ ನೀಡಿದಿರಲ್ಲಾ... ಅದು ನಮಗೆ ಸಂತೋಷ.

  ನೀವು ಹೇಳಿದಂತೆಯೇ ಅರ್ಧಕ್ಕೆ ನಿಲ್ಲಿಸಲಾಗುವುದು. (ನಿಮ್ಮ ಕಾಮೆಂಟಿನ ಕರಡು ತಿದ್ದುವವರ ತಪ್ಪಿನಿಂದಾಗಿ, "ನಿಲ್ಲಿಸಿ" ಆದ ಮೇಲೆ ಪೂರ್ಣವಿರಾಮ ಹಾಕಿಲ್ಲ, ಆಮೇಲೆ, "ಮಾಡಿರಿ" ಎಂಬ ಶಬ್ದವು "ಮಾಡದಿರಿ" ಎಂದು ಮೂಡಿಬಂದಿರುವುದರಿಂದ ನೀವು ಅನಾಯಾಸವಾಗಿ ನಿಮ್ಮ ಕರಡಚ್ಚು ತಜ್ಞರನ್ನು ಕೆಲಸದಿಂದ ಕಿತ್ತುಹಾಕಬಹುದು ಎಂದು ನಾವು ಶಿಫಾರಸು ಮಾಡುತ್ತೇವೆ.)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post