ಬೊಗಳೆ ರಗಳೆ

header ads

ಕಂಪ್ಯೂಟರುಗಳಿಗೆ Love Virus ದಾಳಿ, ಅಪಾರ ಹಾನಿ

(ಬೊಗಳೂರು ವ್ಯಾಲೆಂಟೈನ್ ಬ್ಯುರೋದಿಂದ)
ಬೊಗಳೂರು, ಫೆ.14- ವಿಶ್ವಾದ್ಯಂತ ಕಂಪ್ಯೂಟರ್‌ಗಳಿಗೆ ಮತ್ತು ಮೊಬೈಲ್ ಫೋನ್‌ಗಳಿಗೆ ವೈರಸ್‌ಗಳು ನುಗ್ಗಿ ಹಾನಿ ಮಾಡುತ್ತಿರುವುದಾಗಿ ವರದಿಗಳು ಬರಲಾರಂಭಿಸಿವೆ. ಇತ್ತೀಚಿನ ವರೆಗೆ ವಿದೇಶಗಳಿಗಷ್ಟೇ ಸೀಮಿತವಾಗಿದ್ದ ಈ ವೈರಸ್, ಇತ್ತೀಚಿನ ವರ್ಷಗಳಲ್ಲಿ ಪ್ರತಿ ಫೆ.14ರಂದು ಭಾರತದಲ್ಲೂ ತನ್ನ ಪ್ರಭಾವವನ್ನು ತೀವ್ರವಾಗಿಯೇ ಪ್ರಕಟಪಡಿಸಲಾರಂಭಿಸಿದೆ.

"I am programmed to love you forever" ಎಂಬ ಸಂದೇಶವೊಂದು ವಿಶ್ವದ ಬಹುತೇಕ ಕಂಪ್ಯೂಟರುಗಳು ಮತ್ತು ಮೊಬೈಲ್ ಫೋನ್‌ಗಳಲ್ಲಿ ಒಂದರ ಮೇಲೊಂದರಂತೆ ಹರಿದಾಡಲಾರಂಭಿಸಿರುವುದು ಹೊಸ ಬೆಳವಣಿಗೆಯಾಗಿದೆ.

ಈ ಸಂದೇಶಗಳು ವಿಶೇಷವಾಗಿ ಯುವಜನರು ಬಳಸುತ್ತಿರುವ ಕಂಪ್ಯೂಟರುಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿರುವುದರ ಹಿಂದಿನ ರಹಸ್ಯ ಪತ್ತೆಗೆ ತೀವ್ರ ತನಿಖೆ ಆರಂಭವಾಗಿದೆ.

ವಿಶೇಷವಾಗಿ ಸೈಬರ್ ಸೆಂಟರ್‌ಗಳಲ್ಲಿ ಈ ವೈರಸ್‌ಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಬಹುತೇಕ ಶಾಲಾ-ಕಾಲೇಜುಗಳು ಇಂದು ಅಘೋಷಿತ ರಜೆ ಆಚರಿಸತೊಡಗಿದ್ದು, ಕಂಪ್ಯೂಟರ್-savvy ವೈರಸ್‌ಗಳೆಲ್ಲವೂ ಈ ಸೈಬರ್ ಸೆಂಟರ್‌ಗಳಲ್ಲೇ ಜಮಾಯಿಸಿದ ಪರಿಣಾಮವಾಗಿ ಅಲ್ಲಿ ಜನಜಂಗುಳಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದಾಗಿ ತಿಳಿದುಬಂದಿದೆ.

ಇ-ಮೇಲ್‌ನಲ್ಲಿ ಬರುವ ಸಂದೇಶದ subject line ನಲ್ಲಿ "My heart belongs to you" ಅಥವಾ "Together you and me" ಮುಂತಾದ ಸಾಲುಗಳಿರುತ್ತವೆ. ಇದನ್ನು ತೆರೆದು ಓದಿದ ತಕ್ಷಣ ಪ್ರೇಮಿಗಳೆಲ್ಲರೂ ತಕ್ಷಣವೇ ಎದ್ದು ಈ ಸಂದೇಶ ಕಳುಹಿಸಿದವರತ್ತ ಧಾವಿಸುತ್ತಿರುವುದು ಈ ವೈರಸ್‌ನ ಮತ್ತೊಂದು ಪ್ರಭಾವ ಎಂದು ತಿಳಿದುಬಂದಿದೆ.

ಈ ವೈರಸ್‌ನಿಂದಾಗಿ ಹೆಚ್ಚಿನವರ ಹೃದಯ ಬಡಿತ ಜಾಸ್ತಿಯಾಗುತ್ತಿರುವುದರಿಂದಾಗಿ ಎಲ್ಲೆಡೆ ಹೃದಯ ಬಡಿತದ ಸದ್ದಿನಿಂದಾಗಿ ಶಬ್ದ ಮಾಲಿನ್ಯವೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಕಾಲೇಜು ಪರಿಸರದಲ್ಲಿ ಈ ಶಬ್ದ ಮಾಲಿನ್ಯ ಅತಿಯಾಗಿ ಕೇಳಿಬಂದಿದೆ.

ಈ ವೈರಸ್‌ನ ಮತ್ತೊಂದು ಪ್ರಭಾವವೆಂದರೆ, ಪಕ್ಕದ ಮನೆಯ ಗುಲಾಬಿ ಗಿಡಗಳಿಂದ ಎಲ್ಲಾ ಗುಲಾಬಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿರುವುದಾಗಿದೆ. ಅಲ್ಲದೆ ಮಾರುಕಟ್ಟೆ ಪರಿಸರದಲ್ಲೂ ಇದೇ ಪ್ರಭಾವ ವ್ಯಕ್ತವಾಗಿದ್ದು, ಗುಲಾಬಿ ವ್ಯಾಪಾರಿಗಳೇ ಕಂಗಾಲಾಗುವಷ್ಟರ ಮಟ್ಟಿಗೆ ಈ ವೈರಸ್ ಬಾಧೆಯು ಗುಲಾಬಿಗಳನ್ನು ಸಂಪೂರ್ಣವಾಗಿ ಗುಡಿಸಿ ಸಾರಿಸಿದ್ದು, ಕಾಲೇಜು ಪರಿಸರದ ತುಂಬಾ ಗುಲಾಬಿ ಪಕಳೆಗಳ ರಾಶಿಯೋ ರಾಶಿ ಕಂಡುಬರುತ್ತಿದೆ.

ಮತ್ತೆ ಕೆಲವು ತಿರಸ್ಕೃತ ಗುಲಾಬಿಗಳ ಪಕ್ಕದಲ್ಲೇ ಜಲ ಮಾಲಿನ್ಯವೂ ಹೆಚ್ಚಾಗತೊಡಗಿದೆ. ಇದರ ಹಿಂದಿನ ಕಾರಣ ಶೋಧಿಸಹೊರಟಾಗ, ಪ್ರೇಮಿಗಳ ಕಣ್ಣಿನಿಂದ ಉದುರಿದ ಜಲಧಾರೆಯಿಂದಾಗಿ ಜಲ ಮಾಲಿನ್ಯ ಉಂಟಾಗಿರುವುದು ಪತ್ತೆಯಾಯಿತು.

ಈ ನಡುವೆ ಟಿವಿ ಚಾನೆಲ್‌ಗಳಲ್ಲೂ ಈ ವೈರಸ್ ಬಹುತೇಕ ಕಾಣಿಸಿಕೊಂಡಿದ್ದು, ಸುದ್ದಿ ಚಾನೆಲ್‌ಗಳಲ್ಲೂ ಇದೇ ವೈರಸ್ ಪ್ರಭಾವ ತೀವ್ರವಾಗಿಬಿಟ್ಟಿರುವುದು ಎಲ್ಲೆಡೆ ಕೋಲಾಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ವೈರಸ್ ಹರಡಲು ಪ್ರಮುಖವಾಗಿ ಸುದ್ದಿ ಮಾಧ್ಯಮಗಳೇ ಕಾರಣ, ಟಿವಿ ಚಾನೆಲ್‌ಗಳಲ್ಲದೆ ಪತ್ರಿಕಾ ಮಾಧ್ಯಮಗಳಲ್ಲೂ ಈ ವೈರಸ್ ಪ್ರಭಾವ ಪ್ರಕಾಶನಗೊಂಡಿರುವುದು ಕಾರಣ ಎಂದು ಪತ್ತೆ ಹಚ್ಚಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಅದ್ಸರಿ.....ಗುಲಾಬಿ ಹೂವಾನೇ ಕೊಡ್ಬೇಕು ಅಂತ ಯಾರು ರೂಲ್ಸ್ ಮಾಡಿದ್ದು?? ಬೇರೆ ಹೂವು ಕೊಟ್ರೆ.."ಬ್ಯಾಡ ಹೋಗ್" ಅಂತಾರಾ?

    ಪ್ರತ್ಯುತ್ತರಅಳಿಸಿ
  2. ಕಂಪ್ಯೂಟರ್‍ಗಳನ್ನು, ಮೊಬೈಲ್ ಫೋನ್‍ಗಳನ್ನು ಕಾಡಿ, ಹಿಂಸಿಸಿ, ಪೀಡಿಸುತ್ತಿರುವ ಈ ಲವ್ ವೈರಸ್ ಗೆ `ಜಬರಂಗ ದಳ ಯಾಂಟಿ ವೈರಸ್' ಎಂಬ ಹೊಸ ಸಾಫ್ಟವೇರ್ ಮುಫ್ತಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆಯಂತೆ. ಕೇವಲ ಒಂದು ಫೋನ್ ಮಾಡಿದರೆ ಸಾಕು ಸಕಲ `ಶಸ್ತ್ರ' ಸಜ್ಜಿತವಾಗಿ ಪ್ರತ್ಯಕ್ಷವಾಗುವ ಈ `ಯಾಂಟಿ ವೈರಸ್' ಲವ್ ವೈರಸ್‍ನ್ನು ಚಿಂದಿ ಉಡಾಯಿಸುತ್ತದೆಯೆಂದು ನಿಕ್ಕರ್ ಪಕ್ಷದ ಕಾರ್ಯದರ್ಶಿ ನಮಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
    `ಫೆ. ೧೪ರ ಒಂದು ದಿನ ಮಾತ್ರ ಮುಡಿಗೇರಿಸಲ್ಪ ಪಡುವ ನಾವು ವರ್ಷದ ಉಳಿದ ದಿನ ಯಾರ್ಯಾರದೋ ಕಿವಿ ಮೇಲಿರಿಸಪ್ಲಡುತ್ತೇವೆ' ಎಂದು ಜಿಗುಪ್ಸೆಗೊಂಡರುವ ಹೂಗಳು ಸಾಮೂಹಿಕ ಆತ್ಮಹತ್ಯೆಗೆ ಸಜ್ಜಾಗಿವೆ ಎಂಬ ಹೃದಯ ವಿದ್ರಾವಕ ವಾರ್ತೆ ವರದಿಯಾಗಲು ಕಾಯುತ್ತಿದೆ.

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ
    ಬೊ.ರ.ದಿಂದ ಗುಲಾಬಿಗಳು ಬಂದಿದ್ದರೆ ಅವನ್ನು ಮಂಗಣ್ಣನ ಕೈಯಿಂದ ಕಿತ್ಕೊಂಡೋರೇ ಕಳುಹಿಸಿರಬಹುದು ಅನ್ಸುತ್ತೆ. ಕೂಡಲೇ ಅವರ ವಿಳಾಸ, ಅಡ್ರೆಸ್, ಜಾತಕ ಎಲ್ಲಾ ಕಳಿಸಿ ತಿಳಿಸಿ.

    ಪ್ರತ್ಯುತ್ತರಅಳಿಸಿ
  4. ಅನಾನಿಮಸ್ಗಿರಿಯವರೆ,
    ಶ್ವೇತಗುಲಾಬೀನೂ ತಗಳಲ್ವಂತೆ. ಕೆಂಪು ಕೆಂಪಾಗಿರೋ ಮುದ್ದಾಗಿರೋ ಗುಲಾಬಿನೇ ಬೇಕು ಅಂತ ಹಠ ಹಿಡಿದು ಕೂತಿರ್ತಾರೆ.

    ಪ್ರತ್ಯುತ್ತರಅಳಿಸಿ
  5. ಸುಪ್ರೀತರೆ,
    ನಿಮ್ಮ ವರದಿಗಾಗಿ ನಿಮಗೆ ತ್ರಿಶೂಲ್ ಪ್ರಶಸ್ತಿ ನೀಡಿ ಸತ್ಕರಿಸಲು ತೀರ್ಮಾನಿಸಲಾಗಿದ್ದು, ಓಡಿ ಹೋಗದಿರುವಂತೆ ಕೋರಲಾಗಿದೆ.

    ಪ್ರತ್ಯುತ್ತರಅಳಿಸಿ
  6. ಅಸತ್ಯಿಗಳೇ,

    ಲವ್ ವೈರಸ್ ನ ಹೆಚ್ಚಿಗೆ ಆಗಲು 'ಆರ್ಚೀಸ್', 'ಹಾಲ್ಮಾರ್ಕ್' ಮುಂತಾದವರು ಉರಿಯುವ ಲವ್‍ಗೆ ಆಸೆ ತುಪ್ಪ ಹಾಕಿದ್ದೆ ಕಾರಣವಾಯಿತಂತೆ..

    ಪ್ರತ್ಯುತ್ತರಅಳಿಸಿ
  7. ಶಿವ್ ಅವರೆ,
    ನಿಮಗೆ ಅದು ವೈರಸ್ ಅಲ್ಲ ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ. ;)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D