ಬೊಗಳೆ ರಗಳೆ

header ads

ಫೆಬ್ರ"ವರಿ" 14ರ ವಿಫಲ ಪ್ರೇಮ ದಿನಾಚರಣೆ

(ಬೊಗಳೂರು ಹಳಸಲು ಸುದ್ದಿ ಬ್ಯುರೋದಿಂದ)
ಬೊಗಳೂರು, ಫೆ.15- ವಿಶ್ವಾದ್ಯಂತ ವಿಫಲ ಪ್ರೇಮಿಗಳ ದಿನವನ್ನು ನಿನ್ನೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿವಿಧೆಡೆಗಳಿಂದ ನಮ್ಮ ವದರಿಗಾರರು ಕಳುಹಿಸಿರುವ ವದರಿಯ ಪ್ರಕಾರ, ಇತ್ತೀಚೆಗಷ್ಟೇ ಭಾರತಕ್ಕೆ ಅಂಟಿಕೊಂಡಿರುವ ಫೆಬ್ರವರಿ ತಿಂಗಳಲ್ಲಿ ನಡೆಯುವ ಆ ಆಚರಣೆಯು ನಿಜಕ್ಕೂ ವರಿ ಮಾಡಿಕೊಂಡ"ವರಿ"ಗೆಲ್ಲಾ ತರಾ"ವರಿ" ವಿಧಾನಗಳಲ್ಲಿ ಆತ್ಮಕ್ಕೆ ಶಾಂತಿ ಮಾಡಿಸಿಕೊಳ್ಳುವ ಅವಕಾಶವೂ ಹೌದು ಎಂಬುದನ್ನು ತಿಳಿದುಕೊಳ್ಳಲಾಗಿದೆ.

ವಿಫಲ ಪ್ರೇಮಿಗಳೆಲ್ಲರೂ ಈ ದಿನವನ್ನು ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ ಸಂತೋಷದಿಂದ ಆಚರಿಸಿಕೊಂಡರು. ಅವರಲ್ಲೊಬ್ಬ ವಿಫಲೇಶನನ್ನು ಮಾತನಾಡಿಸಿದಾಗ, ಆತ ತನ್ನ ಸವಿನೆನಪುಗಳನ್ನು spam ವರದಿಗಳಿಂದಲೇ ಬೇಳೆ ಬೇಯಿಸಿಕೊಳ್ಳುತ್ತಿರುವ ಬೊಗಳೆ ರಗಳೆ ಬ್ಯುರೋದೆದುರು ಬಿಚ್ಚಿಟ್ಟ.

ತಾನು ಪ್ರೀತಿಸಿದ ಹುಡುಗಿಗೆ ಕಳೆದ ಫೆ.14ರಂದು ಪಕ್ಕದ ಮನೆಯ ತೋಟದಲ್ಲಿ ಬೆಳೆದಿದ್ದ ಸುಂದರ ಗುಲಾಬಿಯೊಂದನ್ನು ಬೆಳಗ್ಗೆ ಎದ್ದ ತಕ್ಷಣ ಕೊಟ್ಟಾಗ, ಗಬಕ್ಕನೆ ಅದನ್ನು ಸೆಳೆದುಕೊಂಡು ಥ್ಯಾಂಕ್ಸ್ ಸಹ ಹೇಳದೆ ಬಿರಬಿರನೆ ಧಾವಿಸಿದ ಆಕೆ, ಪಕ್ಕದ ಮನೆಯಾತ ನೀಡಿದ ಗುಲಾಬಿಯೊಂದಿಗೆ ಅದನ್ನು exchange ಮಾಡಿಕೊಂಡ ಸಂಭ್ರಮವನ್ನು ಆತ ವಿವರಿಸಿದ. ಹೀಗಾಗಿ ತಾನು ಪ್ರತಿವರ್ಷ ಈ ದಿನವನ್ನು ತನ್ನ ಪ್ರೇಮ ವೈಫಲ್ಯ ದಿನವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ಆತ ಸಮಜಾಯಿಷಿ ನೀಡಿದ.

ಕಾಲೇಜು ಪರಿಸರದಲ್ಲೇ ಈ ರೀತಿಯ ದಿನವನ್ನು ಆಚರಿಸಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗಿದ್ದುದರಿಂದಾಗಿ ಬೊಗಳೆ ರಗಳೆ ಬ್ಯುರೋ ಭೇಟಿ ನೀಡಿದ ಶ್ರೀ ಪ್ರೇಮೇಶ್ವರ ಕಾಲೇಜು (ಎಸ್‌ಪಿಎಂ) ಕೆಂಗುಲಾಬಿಗಳಿಂದಲೇ ತುಂಬಿಕೊಂಡಿದ್ದು, ಕಾಲೇಜು ಪರಿಸರದ ಜತೆಗೆ ಕಾಲೇಜು ಹುಡುಗಿಯರ ಕೆನ್ನೆ ಕೆಂಪಾಗಿದ್ದರೆ, ಮೇಲೆ ಹೇಳಿದ ಮಾದರಿಯಲ್ಲಿ ಪ್ರೇಮ-exchangeನಿಂದ ನೊಂದವರ ಕಣ್ಣುಗಳ ತುಂಬಾ ಆನಂದ ಭಾಷ್ಪ ಧಾರೆ ಹರಿಯುತ್ತಿದ್ದುದರಿಂದ ಕಣ್ಣುಗಳು ಕೆಂಪಾಗಿದ್ದವು. ಮತ್ತೊಂದೆಡೆ, ಹುಡುಗಿಯರು ಯಾವ ಬ್ರಾಂಡ್‌ನ ಪಾದರಕ್ಷೆ ಧರಿಸಿದ್ದಾರೆ ಎಂಬುದನ್ನು ಅಚಾನಕ್ ಆಗಿ ತಿಳಿದುಕೊಳ್ಳಬೇಕಾಗಿ ಬಂದ ಇನ್ನು ಕೆಲವರ ಕೆನ್ನೆ ಊದಿಕೊಂಡು ಕೆಂಪಾಗಿತ್ತು. ಒಟ್ಟಿನಲ್ಲಿ ಇಡೀ ಕಾಲೇಜು ಕೆಂಪು ಕೆಂಪಾಗಿ ರಂಗೇರಿತ್ತು ಎಂದು ನಮ್ಮ ವದರಿಗಾರರು ಪ್ರತ್ಯಕ್ಷದರ್ಶಿ ವರದಿ ಕಳುಹಿಸಿದ್ದಾರೆ.

ಪ್ರೇಮ ವೈಫಲ್ಯ ದಿನಾಚರಣೆಯ ಹಿಂದಿನ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದ ವರದಿಗಾರರ ಕೈಯಲ್ಲಿ ಸಾಕಷ್ಟು ಖಾಲಿ ಕಾಗದಗಳಿಲ್ಲದ ಕಾರಣ ಎಲ್ಲವನ್ನೂ ಪಟ್ಟಿ ಮಾಡುವುದು ಅಸಾಧ್ಯವಾಗಿ ಒಂದನ್ನು ಇಲ್ಲಿ ಬರೆದು ಕಳುಹಿಸಿದ್ದಾರೆ.

ಹಲವಾರು ವರ್ಷಗಳಿಂದ ನಾನಾಕೆಯನ್ನು ಪ್ರೀತಿಸುತ್ತಿದ್ದೆ, ಪ್ರೇಮ ಪರೀಕ್ಷೆಗೆ ಫೆ.14ರ ದಿನವೊಂದು ಸುಸಮಯವಾಗಿರುವುದರಿಂದ ತಾನು ಪ್ರೇಮ ನಿವೇದನೆ ಮಾಡಿಕೊಂಡಿದ್ದೆ. ಆದರೆ ಆಕೆ ತಿರಸ್ಕರಿಸಿದಳು. ಇದರಿಂದಾಗಿ ಪ್ರತಿ ವರ್ಷ ತಾನು ಈ ಸಂಭ್ರಮದ ಸವಿನೆನಪಿಗಾಗಿ ಪ್ರೇಮ ವೈಫಲ್ಯ ದಿನ ಆಚರಿಸುತ್ತಿರುವುದಾಗಿ ಒಬ್ಬಾತ ಹೇಳಿಕೊಂಡಿರುವುದು ಈ ರೀತಿ ದಿನ ಆಚರಿಸುತ್ತಿರುವವರಿಗೆಲ್ಲಾ ಸಾಮೂಹಿಕವಾಗಿ ಅನ್ವಯವಾಗುವ ಸೂತ್ರವಾಗಿತ್ತು.

ಮತ್ತೆ ಕೆಲವು ಹುಡುಗಿಯರನ್ನು ಈ ಬಾರಿ ವಿಶೇಷವಾಗಿ ಮಾತನಾಡಿಸಲಾಯಿತು. ನಮ್ಮ ಆರಾಧ್ಯದೈವವಾದ ಶಾರೂಖ್ ಖಾನ್ ಈ ರೀತಿ ಹೇಳಿಬಿಟ್ಟನಲ್ಲಾ ಎಂಬುದೇ ಅವರಿಗೆ ನೋವು ತಂದ ಕಾರಣಕ್ಕೆ ಫೆ.14ರಂದು ವೇದನಾ ದಿನಾಚರಣೆಯಾಗಿ ಆಚರಿಸಲು ಅವರು ತೀರ್ಮಾನಿಸಿದ್ದಾರಂತೆ.

ಥಾಯ್ಲೆಂಡಿಗೆ ಭೇಟಿ ನೀಡಿದ ನಮ್ಮ ವರದಿಗಾರರಿಗೆ ಪ್ರೇಮ ವೈಫಲ್ಯ ದಿನಾಚರಣೆಗೆ ಮತ್ತೊಂದು ಕಾರಣವೂ ಸಿಕ್ಕಿತು. ಅಲ್ಲಿ ಫೆ.14ರ ಬಗ್ಗೆ ಭರ್ಜರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಯುವಜನರ ಮೇಲೆ ಸರಕಾರವೇ ಸಿಡಿದೆದ್ದು ಕಡಿವಾಣ ಹಾಕಲು ನಿರ್ಧರಿಸಿತ್ತು.

ಪ್ರೇಮಿಗಳ ಸಂಖ್ಯೆಯು ಲಂಡನ್‌ನಲ್ಲಿ ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣಗಳನ್ನು ಶೋಧಿಸಿದಾಗ ಈ ವಿಷಯ ತಿಳಿದುಬಂತು.

ಈ ನಡುವೆ, ಫೆ.14ರ ಪ್ರೇಮಿಗಳ ದಿನಾಚರಣೆ ಕಳೆದು ಸರಿಯಾಗಿ 9 ತಿಂಗಳ ಬಳಿಕ ನ.14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯ ಕುರಿತು ಎಷ್ಟು ಕಷ್ಟಪಟ್ಟರೂ ತನಿಖೆ ನಡೆಸಲು ಬೊಗಳೆ ರಗಳೆ ಬ್ಯುರೋ ವಿಫಲವಾಗಿರುವುದು ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಅಸತ್ಯಿಗಳೇ,

  ಎಂತಹ ವರಿ-ಫುಲ್ ಸುದ್ದಿ!

  ನೀವು ನಿಮ್ಮ ಪ್ರೇ.ದಿನವನ್ನು spensor ಶಾಪಿಂಗ್ ಮಾಲ್‍ನಲ್ಲಿ ಆಚರಿಸಿದರಿ ಅನ್ನೋ ಸುದ್ದಿ ಇದೆ..ಹೌದೇ? ಥ್ಯಾಲೆಂಡ್ ಈಗ ಮುಂದುವರಿದ ದೇಶಗಳ ಪಟ್ಟಿಯಲ್ಲಿದೆಯೇ?

  ಲಂಡನ್ ಸುದ್ದಿ..
  ನೀಲಾ ಆಸಮಾನ್ ಔರ್ ...

  ಪ್ರತ್ಯುತ್ತರಅಳಿಸಿ
 2. ಪ್ರೇಮೇಶ ವಿಫಲೇಶನ ಬಗ್ಗೆ ನಿಮಗೂ ಗೊತ್ತಾಗಿ ಹೋಯ್ತಾ? ಅಂದ ಹಾಗೆ ಅವನ ಕೆನ್ನೆಯ ಮೇಲೆ ಮೂಡಿದ್ದ ಪಾದರಕ್ಷೆಯ ಸಂಖ್ಯೆ ನೆನಪಿದೆಯಾ?
  ನಿಮ್ಮ ನೆನಪಿನ ಶಕ್ತಿ ಪರೀಕ್ಷಿಸಲು ಕೇಳುತ್ತಿರುವೆ.

  ಪ್ರೇಮೇಶನ ಬಗ್ಗೆ ನನಗೆ ಹೇಗೆ ಗೊತ್ತು ಅಂತ ಪಬ್ಲಿಕ್ಕಾಗಿ ಕೇಳ್ಬೇಡಿ.

  ಪ್ರತ್ಯುತ್ತರಅಳಿಸಿ
 3. ಶಿವ್ ಅವರೆ,
  ಅಪ್ರೇಮಿಗಳ ದಿನವನ್ನು ನಮ್ಮ ಪ್ರೇಮಿಗಳು Spencer Plaza ದಲ್ಲಿ ಬೇರೆಯವರ ಜತೆಗೆ ಚೆನ್ನಾಗಿಯೇ ಆಚರಿಸಿದರು ಎಂದು ತಿಳಿಸಲು ಸಂತೋಷಪಡುತ್ತೇವೆ.

  ಲಂಡನ್ನಲ್ಲಿ ನೀಲಾ ಆಸ್ಮಾನ್ನಲ್ಲಿ ತೇಲಾಡುತ್ತಾ, ಕಾಲಾ ಭವಿಷ್ಯ್ ಅಂತಾನೂ ಹಾಡ್ತಾ ಇದ್ದಾರಂತೆ.

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸರೆ,
  ಪಾದರಕ್ಷೆಯ ಸಂಖ್ಯೆಯನ್ನು ದಯವಿಟ್ಟು ನೀವೇ ತಿಳಿಸಿಬಿಡಿ ಎಂದು ಕೋರುತ್ತೇವೆ. ನಾನದನ್ನು ಯಾರಿಗೂ ಹೇಳುವುದಿಲ್ಲ ಎಂಬ ಆಶ್ವಾಸನೆಯನ್ನೂ ನೀಡುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D