(ಬೊಗಳೂರು ಪರಿಹಾರ ಬ್ಯುರೋದಿಂದ)
ಬೊಗಳೂರು, ಫೆ.10- ಯಾವುದೇ ರೀತಿಯ ವಿವಾದಗಳಿಗೆ ಪರಿಹಾರ ಕಲ್ಪಿಸುವ ಹೊಸ ಮಾರ್ಗವೊಂದನ್ನು ಇಲ್ಲಿ ಶೋಧಿಸಲಾಗಿದ್ದು, ಕರ್ನಾಟಕ-ತಮಿಳುನಾಡು ನಡುವಣ ಕಾವೇರಿ ವಿವಾದದ ಪರಿಹಾರ ಕುರಿತಂತೆ ಹೊಸ ಸಾಧ್ಯತೆಗಳಿಗೆ ಚಾಲನೆ ದೊರೆತಿದೆ.

ಮಹಿಳೆಯೊಂದಿಗೆ ಓಡಿಹೋದ ಫಾರೂಕ್ ಎಂಬಾತನಿಗೆ ಸ್ಥಳೀಯ ಪಂಚಾಯತು ಒಂದುವರೆ ಲಕ್ಷ ರೂ. ದಂಡ ವಿಧಿಸಿದ್ದು, ಐದು ವರ್ಷ ಊರಿಗೆ ತಲೆ ಹಾಕದಂತೆ ಎಚ್ಚರಿಕೆ ನೀಡಿತ್ತು. ಆದರೂ ಈ ಜೋಡಿ ವಿವಾಹವಾದ ಕಾರಣ ಮತ್ತೆ ಸಭೆ ಸೇರಿದ "ನ್ಯಾಯ ಮಂಡಳಿ", 4ರ ಪುಟ್ಟ ಹುಡುಗಿಯೊಂದನ್ನು 44ರ ಮತ್ತೂ ಪುಟ್ಟದಾದ ಹುಡುಗನಿಗೆ ಕಟ್ಟಿತು. ಇದು ಒಟ್ಟಾರೆ ಕಥೆ.

ಈ ಪಂಚಾಯತಿಯನ್ನು ನ್ಯಾಯಮಂಡಳಿ ಎಂದು ಪರಿಗಣಿಸಿ, ಕಾವೇರಿಯ ವಿವಾದವನ್ನೂ ಈ ಸೂತ್ರದ ಪ್ರಕಾರ ಪರಿಹರಿಸುವ ಸಾಧ್ಯತೆಗಳ ಬಗ್ಗೆ ದಪ್ಪ ಮಂಡೆಯವರು ಚಿಂತಾಕ್ರಾಂತರಾಗಿ ಆಲೋಚನೆಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಬೋ....ರ್ ಬ್ಯುರೋ ಪತ್ತೆ ಹಚ್ಚಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ನಿಯಾಯ ಮಂಡಳಿಗೆ ಲೆಕ್ಕ ತಪ್ಪಿದ್ದು. ಅಂದರೆ ಕರ್ನಾಟಕ ಕೋರಿದ್ದು 465 ಟಿಎಂಸಿ, ಆದರೆ ದಕ್ಕಿದ್ದು 270 ಮಾತ್ರ. ಆದರೆ ತಮಿಳುನಾಡು ಕೋರಿದ್ದು ಭರ್ಜರಿ 562, ಅದಕ್ಕೆ ದಕ್ಕಿದ್ದು ಕೂಡ ಭರ್ಜರಿ 419 ಟಿಎಂಸಿ. ಇದು ಲೆಕ್ಕ ತಪ್ಪಿದುದರ ಪರಿಣಾಮ ಎಂದೇ ಭಾವಿಸಲಾಗಿರುವುದರಿಂದ ಹೊಸ ವ್ಯಾಜ್ಯ ಮಂಡಳಿ ರಚನೆಗೆ ನಾಂದಿ ಹಾಡಲಾಗಿದೆ.

ಇದರಲ್ಲಿ ಯಾರು ಫಾರೂಕ್, ಯಾರು ಆ ಮಹಿಳೆ, ಯಾರು ಪಂಚಾಯತ್ ಎಂಬುದನ್ನು ಓದುಗರೇ ನಿರ್ಧರಿಸಬೇಕಿದ್ದು, 4ರ ಹರೆಯದ ಬಾಲೆಯ ಕುರಿತು ಒಂದು ಕ್ಲೂ ನೀಡಲಾಗುತ್ತದೆ. ಅದು ಕರ್ನಾಟಕದಲ್ಲಿರುವ ಒಂದು ಪುಟ್ಟ ತೊರೆ.

7 Comments

ಏನಾದ್ರೂ ಹೇಳ್ರಪಾ :-D

 1. ಧಗ ಧಗನೆ ಉರಿಯುತ್ತಿರುವ ಸಮಸ್ಯೆಗೆ ನೀವು ಸೂಚಿಸಿದ ಪರಿಹಾರವನ್ನು ಕಂಡ ಮಾಜಿ ಘ್ನಾನ ಪೀಠಿಯೊಬ್ಬರು ಬಿಸಿಬಿ ಚಾನಲ್ ಸಂದರ್ಶನದಲ್ಲಿ `ನಾನೂ ಇಂಥದ್ದೇ ಶಾಂತಿಯುತ ಪರಿಹಾರ ಕಂಡುಕೊಳ್ರಿ, ಕಿತ್ತಾಡ ಬೇಡಿ ಅಂದೆ ಆದರೆ ಅವ್ರು ನನ್ನ ಮೇಲೇ ಮುರುಕೊಂಡು ಬಿದ್ದಿದ್ದಾರೆ.ಪಾಪ ಅಜ್ಞಾನಿಗಳು ಹ್ಹೆ...ಹ್ಹೆ...' ಎಂದಿರುವುದು ಬೆಳಕಿಗೆ ಬರಲು ನಮ್ಮ ಅನುಮತಿ ಕೇಳುತ್ತಿದೆ.

  ಅಂದಹಾಗೆ ಯಾರ್ಯಾರ ಮೇಲೋ ನಮ್ಮನ್ನು ಎತ್ತಿ ಕುಟ್ಟುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಾನ ನಷ್ಟ ಮೊಕದ್ದಮೆ ಹಾಕಬೇಕೆಂದು ಯೋಚಿಸಿದೆವು. ಆದರೆ ಮಾನ ನಮ್ಮ ಬಳಿ ಲೋಡು ಗಟ್ಟಲೆ ಇರೋದರಿಂದ ಬಡಪಾಯಿಗಳು ಸ್ವಲ್ಪ ನಷ್ಟ ಮಾಡಿದರೆ ಮರುಗಲು ನಾವೇನೂ ಬಿಎಂಟಿಸಿಯವರಲ್ಲ ಅಂದುಕೊಂಡು ಸುಮ್ಮನಾಗಿದ್ದೇವೆ.

  ReplyDelete
 2. ಹುಡುಗಿಗೆ ಇನ್ನೂ ೪ ವರ್ಷ ವಯಸ್ಸಾದುದರಿಂದ ಕಾವೇರಲು ಅವಕಾಶವೇ ಇಲ್ಲ. ಹಾಗಾಗಿ ಕಾವೇರದೇ ತಣ್ಣಗಿರುವ ನಾಲ್ಕೇ ಹೆಜ್ಜೆ ಇಟ್ಟು ದೊಡ್ಡ ಪಾತ್ರವನ್ನು ಸೇರುವವಳಾದ್ದರಿಂದ ಕಪಿಲೆ ಎಂದು ಹೆಸರಿಸಬಹುದೇ? ಇನ್ನು ಫಾರೂಕ್ ೪೦ಕ್ಕಿಂತ ಹೆಚ್ಚಿನ ವಯಸ್ಸಾದವರಿಂದ, ಜಲವಿವಾದದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿರುವ ಮತಿಳುರ ನಾಡು ಎನ್ನುಬಹುದು. ಇನ್ನು ಉಳಿದ ಪಂಚಾಯತಿ ಎಂದರೆ, ಹಿಂದೆ ಮುಂದೆ ನೋಡದೇ, ಪಂಚಾಯತಿ ಕಟ್ಟೆಯ ಕಟಕಟೆಯಲ್ಲಿ ನಿಂತಿರುವ ಜೋಬುಗಳ ಕಡೆಗೇ ದೃಷ್ಟಿ ಇಟ್ಟಿರುವುವರೆಂದರೆ, ಅದು ಜಲವಿವಾದ ಟ್ರಿಬ್ಯುನಲ್ ಎಂದೇ ಹೇಳಬಹುದು. ನನ್ನ ಉತ್ತರ ಸರಿ ಇದ್ದಲ್ಲಿ ಬೇತಾಳ ಓಡಿ ಹೋಗಬಾರದು ಎಂದು ಅಣತಿ ನೀಡುತ್ತಿದ್ದೇವೆ.

  ReplyDelete
 3. This comment has been removed by the author.

  ReplyDelete
 4. ಸೂರ್ಯ ಉರಿಯುತ್ತಿರುವಾಗ ಹುಲ್ಲು ಒಣಗಿಸ್ಕೋ ಅ೦ತ ಒ೦ದು ಗಾದೆ ಇದೆ ಗೊತ್ತಲ್ಲ, ಹಾಗೇ ಕಾವೇರಿ ಹೊತ್ತಿ ಉರೀತಿರುವಾಗ ರೋಡ್ ಸೈಡ್ ನಲ್ಲಿ ನಮ್ಮ ರಾಜಕಾರಣಿಯೊಬ್ರು ಅಡಿಗೆ ಮಾಡಿ ರೈತಾಪಿ ವರ್ಗದ ಪ್ರೀತಿಗೆ ಪಾತ್ರರಾಗಿದ್ದಾರ೦ತೆ.. ನ್ಯೂಸ್ ಪೇಪರ್ ನಲ್ಲಿ ಇವತ್ತು ಇದೇ ಹೆಡ್ ಲೈನ್..!!!
  ಮು೦ದಿನ ದಿನಗಳಲ್ಲಿ ರೋಡ್ ಸೈಡ್ ನಲ್ಲಿ ಅಡಿಗೆ ಮಾಡಲು ರಾಜಕಾರಣಿಗಳ ದ೦ಡೇ ಬರಲಿದ್ದು, ಈ ಬಗ್ಗೆ ಪಾಕಶಾಸ್ತ್ರ ಪ್ರವೀಣರಿ೦ದ ಕೋಚಿ೦ಗ್ ತೆಗೆದುಕೊಳ್ಳುತ್ತಿದ್ದಾರ೦ತೆ. ಮತ್ತೆ ಯಾರ ಅಡಿಗೆ ಹೆಚ್ಚು ಚೆನ್ನಾಗಿದೆ ಅ೦ತ ಸ್ಪರ್ಧೆಯೂ ಇರತ್ತ೦ತೆ, ಟಿವಿ ಚಾನೆಲ್ ಗಳು LIVE TELECAST ಹೊಡೀತಾರ೦ತೆ.
  ಹಾಗೇನೆ, ಬೆ೦ಗಳೂರಲ್ಲಿ ನೆನ್ನೆ ಕೆಲವ್ರು ಪಾರ್ಲಿಮೆ೦ಟ್ನಲ್ಲಿ ಕೂತ್ಕೊಳ್ಳೋರ ಪೈಕಿ ಕ೦ಡ್ರೆ ಆಗದಿದ್ದೋರ್ನೆಲ್ಲಾ ೨೫ ಪೈಸೆಗೆ ಮಾರಿದ್ರ೦ತೆ!!!

  ReplyDelete
 5. ಸುಪ್ರೀತರೆ,
  ನಿಮಗೆ ಲೋಡುಗಟ್ಟಲೆ ಮಾನ ಇದೆ. ಆದರೆ ಅದು ಎಲ್ಲಿದೆ ಎಂಬುದು ತಿಳಿದಿಲ್ಲವೆಂದು ನೆನಪಿಸಿದ್ದೀರಿ. ದಿನಾಲೂ ಸ್ವಲ್ಪ ಸ್ವಲ್ಪವೇ ಅದನ್ನು ನಷ್ಟ ಮಾಡಲಾಗುತ್ತದೆ ಎಂದು ಭರವಸೆ ನೀಡುತ್ತಿದ್ದೇವೆ.

  ReplyDelete
 6. ಶ್ರೀನಿವಾಸರೆ,
  ನಿಮ್ಮ ಉತ್ತರ ಸರಿಯಾಗಿದ್ದು, ಬೇತಾಳವು ತಮಿಳುನಾಡಿಗೆ ಟ್ರಾನ್ಸ್‌ಫರ್‌ಗಾಗಿ ಕೋರಿಕೆ ಸಲ್ಲಿಸಿದೆ.

  ReplyDelete
 7. ಶ್ರೀ ಅವರೆ,
  ನಿಮ್ಮ ಸಂಶೋಧನೆಯಲ್ಲಿ ಒಂದು ತಪ್ಪಾಗಿದ್ದು, ಅದು ಪಾಕ ಶಾಸ್ತ್ರ ಪ್ರವೀಣರ ಬದಲು, ಮತಶಾಸ್ತ್ರ ಪ್ರವೀಣರು ಎಂದಾಗಬೇಕಿತ್ತು. ತಿದ್ದುಪಡಿಗಾಗಿ ವಿಷಾದಿಸುತ್ತೇವೆ.
  ಪಾರ್ಲಿಮೆಂಟಲ್ಲಿ ಕುಳಿತುಕೊಳ್ಳೋರಿಗೆ 25 ಪೈಸೆ ಬೆಲೆಯಾದ್ರೂ ಸಿಕ್ಕಿತಲ್ಲಾ ಎಂಬುದು ಬೊಗಳೆ ರಗಳೆ ಬ್ಯುರೋಗೆ ಆಶ್ಚರ್ಯ ತಂದಿರುವ ವಿಚಾರವಾಗಿದ್ದು, ತನಿಖೆ ಮುಂದುವರಿಸಲಾಗುತ್ತದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post