ಬೊಗಳೆ ರಗಳೆ

header ads

ಆನೆಗಳಿಗೆ ಚಳ್ಳೆಹಣ್ಣು ತಿನ್ನಿಸುವ ಯತ್ನ ವಿಫಲ

(ಬೊಗಳೂರು ಚಳ್ಳೆಹಣ್ಣು ಬ್ಯುರೋದಿಂದ)
ಬೊಗಳೂರು, ಫೆ.23- ಆನೆಗಳು ಆಹಾರ ಹುಡುಕಿಕೊಂಡು ಸಮೃದ್ಧವಾದ ಬೆಳೆ ಇರುವಲ್ಲಿಗೇ ಹೋಗುತ್ತವೆ. ಇದಕ್ಕಾಗಿ ಅವುಗಳಿಗೆ ಚಳ್ಳೆಹಣ್ಣನ್ನೇ ಬೆಳೆಯಲು ಜಾರೋಖಂಡದ ಜನತೆ ನಿರ್ಧರಿಸಿರುವುದು ಚಳ್ಳೆಹಣ್ಣು ತಿನ್ನುವವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದರೂ, ಅದು ನಿಧಾನವಾಗಿ ವಿಫಲವಾಗುತ್ತಿರುವುದು ಬೆಳಕಿಗೆ ಬರತೊಡಗಿದೆ.

ತಾವೆಲ್ಲ ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ನುಂಗಲು ಬರುವ ಈ ಆನೆಗಳು, ಕೊಡಲು ಒಪ್ಪದವರ ಮೇಲೆ ಜಡಿದು ಒಳಗೆ ಹಾಕುತ್ತವೆ ಅಥವಾ ಬೂಟುಕಾಲಿನಿಂದ ತುಳಿಯುತ್ತವೆ. ಈ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಅಧಿಕಾರದ ಕುರ್ಚಿ ಜಾರುತ್ತಲೇ ಇರುವ ಜಾರೋಖಂಡದ ಜನತೆ ಕಂಡುಹುಡುಕಿರುವುದರಿಂದ ಬಿಳಿಆನೆಗಳು ಕಂಗಾಲಾಗಿವೆ ಎಂದು ತಿಳಿದುಬಂದಿದೆ.

ಆದರೂ ಆನೆಗಳು ತಿನ್ನುವುದಿಲ್ಲ ಎಂದು ತಾವು ಸಾಸಿವೆ, ಮೂಲಂಗಿ ಇತ್ಯಾದಿ ಅಪಥ್ಯ ಬೆಳೆಗಳನ್ನು ಬೆಳೆದರೂ ಈ ಆನೆಗಳು ಖಂಡಿತಾ ಅವುಗಳಲ್ಲಿಯೂ ಪಾಲು ಕೇಳುತ್ತವೆ ಎಂಬುದು ಈ ರೈತರಿಗೆ ತಡವಾಗಿ ಜ್ಞಾನೋದಯವಾಗತೊಡಗಿದೆ.

ಚಳ್ಳೆಹಣ್ಣು ತಿಂದ ಆನೆಗಳು ತಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂಬ ಅವರ ವಿಶ್ವಾಸದ ಸೌಧವು ಕುಸಿದುಬಿದ್ದಿದೆ. ಆನೆಗಳು ಸ್ವಲ್ಪವಾದರೂ ಏನನ್ನಾದರೂ ಕೊಡುವಂತೆ ಕೈಚಾಚತೊಡಗಿವೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಇದೀಗ ಆನೆಗಳ ದಾಳಿಗೆ ಕಡಿವಾಣ ಹಾಕಲು ಸರಕಾರಗಳೂ ವಿಫಲವಾಗಿದೆ. ಬಿಸಿಯಾಗದೆ ಬೆಣ್ಣೆ ಕರಗದು ಎಂಬಂತೆ ಈ ಬಿಳಿಯಾನೆಗಳ ಕೈಗೆ ಬಿಸಿ ಮುಟ್ಟಿಸದಿದ್ದರೆ ಕೆಲಸವೇ ನಡೆಯದಿರುವುದರಿಂದ ಚಳ್ಳೆಹಣ್ಣುಗಳೊಂದಿಗೆ ಇತರ ಫಲಾ-ಫಲಗಳನ್ನೂ ನೀಡಲು ಜನತೆ ನಿರ್ಧರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಕರ್ನಾಟಕದ ಸಂದರ್ಭದಲ್ಲಿ ಮದದಿಂದ ಉಬ್ಬಿ-ಕೊಬ್ಬಿ-ಗಬ್ಬಾಗಿರುವ ಆನೆಗಳಿಗೆ ಖೆಡ್ಡ ತೋಡುವ ಪಣತೊಟ್ಟಿದ್ದ ವೆಂಕಟಾಚಲರನ್ನು ಆನೆಗಳೇ ಖೆಡ್ಡಕ್ಕೆ ನೂಕಿ ಮಣ್ಣು ಹಾಕಿಬಿಟ್ಟರಲ್ಲಾ!

    ಮದಭರಿತ ಆನೆಗಳನ್ನು ತಮ್ಮ `ಬಾಯಿ' ಶಕ್ತಿಯ ಅಂಕುಶದಿಂದ ಮಣಿಸಲು ಯತ್ನಿಸಿ ಯತ್ನಿಸಿ ಸುಸ್ತಾದ ಹಿರಣ್ಣಯ್ಯನವರ ಯತ್ನವೇ ವಿಫಲವಾಗಿರುವಾಗ ಚಳ್ಳೆ ಹಣ್ಣು ತಿನ್ನಿಸುವ ಯೋಜನೆ ವಿಫಲವಾದದ್ದು ಅಂಠಾ ರಾಷ್ಟ್ರೀಯ ದುರಂತವೇನಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ!

    ಪ್ರತ್ಯುತ್ತರಅಳಿಸಿ
  2. ತುಪ್ಪವನ್ನೇ ನುಂಗಲಾರದ ಆನೆಗಳು, ಹಾಳು ಮೂಳಿ, ಕೊಳಕು ಚಳ್ಳೆಹಣ್ಣು, ಸಾಸುವೆ {!} ಇವುಗಳನ್ನು ಹೇಗೆ ತಾನೇ ತಿಂದಾವು. ಬೆಣ್ಣೆಯನ್ನು ಬಿಸಿ ಮಾಡಿದ್ರೆ ತುಪ್ಪ ಆಗತ್ತಾ? ಬೆಣ್ಣೆಯನ್ನು ಬೆಂಕಿಗೆ ಒಡ್ಡಿದರೆ ಬೆಂಕಿ ಜೋರಾಗಿ ಉರಿದು, ಕೈಗೇನೂ ಸಿಗೋಲ್ಲ ಅಲ್ವೇ?
    ಅದ್ಸರಿ ಈ ಜಾರೋ ಗುಂಡ ಎಲ್ಲಿದೆ, ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ಪಕ್ಕದ ಜಾರಕಿ ಬಂಡಿ ಕಾವಲ್ ಇರಬಹುದಾ?

    ಪ್ರತ್ಯುತ್ತರಅಳಿಸಿ
  3. ಚಳ್ಳೆಹಣ್ಣು ಅಂದರೆ ಚಳ್ಳಕೆರೆ ಹತ್ತಿರ ಬೆಳೆಯುವ ಹಣ್ಣೇ?
    ಅದನ್ನು ತಿನಿಸಿದರೆ ಆನೆ ದೂರ ಇರುತ್ತೆ ಅಂತಾ ಯಾರು ಹೇಳಿದ್ದು? ಅದರ ಬದಲು 'ಬೊಗಳೆ ರಗಳೆ' ಕಚೇರಿಗೆ ಹಾದಿ ಅಂತಾ ಒಂದು ಬೋರ್ಡ್ ಹಾಕಿದರೆ ಅನೆಗಳು ಅಲ್ಲಿಂದ ಪರಾರಿ..

    ಪ್ರತ್ಯುತ್ತರಅಳಿಸಿ
  4. ಹೌದಲ್ಲ ಸುಪ್ರೀತರೆ,
    ವೆಂಕಟಾಚಲರನ್ನು ಅಲುಗಾಡದಂತೆ ಅಚಲವಾಗಿಸಿಬಿಟ್ಟಿದ್ದಾರೆ.
    ಲೋಕಾಯುಕ್ತದ ಖೆಡ್ಡ ಹಾಗೆಯೇ ಪಾಳುಬೀಳುತ್ತಿದೆ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ಆನೆಗಳು ಏನನ್ನು ಬೇಕಾದರೂ ನುಂಗುತ್ತವೆ ಎಂಬ ಸಾರ್ವತ್ರಿಕ ಸತ್ಯ ನಿಮಗೆ ಅರಿವಾಗದೇ ಹೋಯಿತೇ? ಅಯ್ಯೋ... ಛೆ...

    ಬೆಣ್ಣೆಯನ್ನು ಬೆಂಕಿಗೊಡ್ಡುವ ಬದಲು, ಬೆಂಕಿಯನ್ನೇ ಬೆಣ್ಣೆ ಇರುವತ್ತ ಕೊಂಡೊಯ್ಯುವವರಿರುವಾಗ ನಿಮ್ಮ ಪ್ರಶ್ನೆ ಸಕಾಲಿಕವಲ್ಲ, ಅದು ಅಕಾಲಿಕ.

    ಜಾರುಬಂಡಿ ರಾಜಕೀಯ ಎಲ್ಲಿ ನಡೆಯುತ್ತೋ ಅಲ್ಲಿ ಜಾರೋಗುಂಡ ಇರುತ್ತದೆ. ಜಾರ್ಖಂಡದ ಎಮ್ಮೆ(ಲ್ಲೆ)ಗಳೆಲ್ಲಾ ಪಕ್ಷದಿಂದ ಪಕ್ಷಕ್ಕೆ ಜಾರುತ್ತಾ ಇರುತ್ತಾರಲ್ವಾ... ಅದಕ್ಕೇ ಆ ಹೆಸರನ್ನು ಆ ರಾಜ್ಯಕ್ಕೆ ಇರಿಸಲಾಗಿದೆ ಎಂದು ನಂಬಲನರ್ಹ ಮೂಲಗಳು ಸ್ಪಷ್ಟಪಡಿಸಿವೆ.

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ನಮ್ಮ ಕಚೇರಿಗೆ ಬಿಳಿಯಾನೆಗಳು ಮುತ್ತಿಕ್ಕುವುದನ್ನು ತಡೆಯುವ ನಿಮ್ಮ ಪ್ರಯತ್ನ ಶ್ಲಾಘನೀಯ.

    ಆದರೆ ನಿಮ್ಮ ಕಡೆಯ ಜನರು ಹಾಕುವ ಬೋರ್ಡನ್ನು ನಾವು ತಿರುಗಿಸಿಬಿಡುತ್ತೇವೆ. ಆಗ ಬೊಗಳೆ ರಗಳೆ ಕಚೇರಿಗೆ ಹಾದಿ ಎಂದು ತೋರಿಸುವ ಬಾಣವು ಉಲ್ಟಾ ಮಾರ್ಗವನ್ನು ತೋರಿಸುತ್ತವೆ. ಆನೆಗಳು ಅತ್ತ, ನಾವು ಇತ್ತ ಸುರಕ್ಷಿತ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D