ಬೊಗಳೆ ರಗಳೆ

header ads

ಬಜೆಟ್: ರೈಲಿನಲ್ಲಿ ಆಮ್ಲಜನಕ, ಸಂಸದರಿಗೆ ಉದ್ಯೋಗ

(ಬೊಗಳೂರು ರೈಲುಬಿಡುವ ಬ್ಯುರೋದಿಂದ)
ಬೊಗಳೂರು, ಫೆ.27- ಯಾವತ್ತೂ ನಿಧಾನವಾಗಿ ಬಜೆಟ್ ಮಂಡಿಸುವ ಕೇಂದ್ರದಿಂದ ರೈಲು ಬಿಡುವ ಮಂತ್ರಿ ಆಲೂ ಪ್ರಸಾದಿತ ಯಾದವೇಂದ್ರರು ಪ್ರತಿಪಕ್ಷಗಳ ಕೂಗಾಟದ ಮಧ್ಯೆಯೇ ಹಠಬಿಡದ ತ್ರಿವಿಕ್ರಮನಂತೆ ನಿನ್ನೆಯೇ ರೈಲು ಬಜೆಟ್ ಮಂಡಿಸಿದ ಹಿನ್ನೆಲೆ ಏನು ಎಂಬುದು ಪತ್ತೆಯಾಗಿದೆ.

ಬಿಹಾರದಲ್ಲಿರುವ ತಮ್ಮ in-law ಗಳು ಇತ್ತೀಚೆಗೆ out-law ಗಳಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಶೀಘ್ರವಾಗಿ ಹೇಗಾದರೂ ಇದಕ್ಕೊಂದು ಗತಿ ಕಾಣಿಸಬೇಕು ಎಂಬ ನಿರ್ಧಾರವೇ ಕಾರಣ ಎಂದು ಬೊಗಳೆ ಬೊಗಳೆ ಪತ್ತೆ ಹಚ್ಚಿದೆ.

ಈ ಬಜೆಟ್ ಮುಖ್ಯಾಂಶಗಳು ಹೀಗಿವೆ:

* In-law ಗಳಿಗೆ ಶೇ.101 ಪ್ರಯಾಣ ದರ ಕಡಿತ. ಇಲ್ಲದಿದ್ದರೆ ರೈಲ್ವೇ ಅಧಿಕಾರಿಗಳಿಗೂ ನಿಜವಾದ "ಕಡಿತ"ದ ಬಿಸಿ.

* ಕೊಳಚೆಯಂತಿರುವ ರೈಲು ನಿಲ್ದಾಣಗಳಲ್ಲಿ ಮೂಗು ಮುಚ್ಚಿಕೊಳ್ಳದೆ ಹೊರಬರುವ ಪ್ರಯಾಣಿಕರಿಗೆ ನೊಬೆಲ್ ಪ್ರಶಸ್ತಿಗೆ ಶಿಫಾರಸು

* ದುರ್ಗಂಧಭರಿತ ರೈಲುಗಳಲ್ಲಿ ರಿಯಾಯಿತಿ ದರದಲ್ಲಿ ಆಮ್ಲಜನಕ (oxygen) ಪೂರೈಕೆ ವ್ಯವಸ್ಥೆ

* 45 ವರ್ಷಕ್ಕಿಂತ ಹೆಚ್ಚು ವಯಸ್ಸಾದವರೇ ತಮ್ಮ ಮತ್ತು ಪಕ್ಷದ ಜನಗಳ In-law ಗಳಾಗುವುದರಿಂದ ಅವರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.

* ರೈಲಿನಲ್ಲಿ ಮಣ್ಣಿನ ಕುಡಿಕೆಯಲ್ಲಿ ಮಜ್ಜಿಗೆ ನೀಡುವ ಯೋಜನೆ ವಿಫಲವಾದ ಕಾರಣ, ಬಡಿಗೆಯಲ್ಲಿ ನೀರಾ (ಬೀರಾ?) ಪೂರೈಸಲಾಗುತ್ತದೆ. ಜತೆಗೆ ಛಂಯ್ಯ ಛಂಯ್ಯ ಹಾಡನ್ನೂ, ಮನರಂಜನೆಯನ್ನೂ ಒದಗಿಸಲಾಗುತ್ತದೆ.

* ಗರೀಬ್ ರಥ ಎಂದು ಹೊಸ ರೈಲು ಬಿಡಲಾಗಿದೆ. ಆದರೆ ಬರೇ ಗರೀಬರೇ ಇದರಲ್ಲಿ ಬರುವುದಿಲ್ಲ, ಅಮೀರರೇ ಇದರಲ್ಲಿ ಹೇಗಾದರೂ ಮಾಡಿ ಬರುತ್ತಾರೆ ಎಂಬುದು ತಮಗೆ ತಿಳಿದಿರುವುದರಿಂದ ಈ ಮೂಲಕ ರೈಲಿನ ಆದಾಯ ಹೆಚ್ಚಳವಾಗುತ್ತದೆ

* ಇಂಥ ಕೊಳೆಗೇರಿಯಂತಿರುವ ರೈಲುಗಳನ್ನು ಹಳಿ ಮೇಲೆ ಬಿಟ್ಟದ್ದರಿಂದಾಗಿಯೇ ಕಳೆದ ಹಣಕಾಸು ವರ್ಷದಲ್ಲಿ 300 ಕೋಟಿ ರೂ. ಆದಾಯವಾಗಿದ್ದರೆ, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕೊಳಚೆ ಸೇರಿಸುವ ಮೂಲಕ ಆದಾಯ ಹೆಚ್ಚಿಸಲು ಶತಪ್ರಯತ್ನ.

* ಸಂಸತ್ತಿನಲ್ಲಿ ಕೆಲಸವಿಲ್ಲದೆ ಕೂಗಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಒಬ್ಬೊಬ್ಬ ಸಂಸದನನ್ನೂ ರೈಲಿನ ಎಂಜಿನ್‌ಗೆ ಕಟ್ಟಿ ಬಿಟ್ಟರೆ ರೈಲಿನ ಕೂ....... ಎಂಬ ಸದ್ದಿಗೆ ಬೇರೆ ಉಪಕರಣದ ಅಗತ್ಯವೇ ಇರುವುದಿಲ್ಲ. ವಿದ್ಯುತ್ತೂ ಉಳಿತಾಯ, ರೈಲು ಚಾಲಕನ ಶ್ರಮವೂ ಉಳಿತಾಯ. ಕೆಲಸವಿಲ್ಲದ ಸಂಸದರಿಗೂ ಹೊಸ ಉದ್ಯೋಗ ದೊರೆತಂತಾಗುತ್ತದೆ.

* ಮಾತ್ರವಲ್ಲ, ಇದುವರೆಗೆ ಕಳೆದ 60 ವರ್ಷಗಳಿಂದಲೂ ಸಂಸತ್ತಿನಲ್ಲಿ ಹಳಿಯಿಲ್ಲದ ರೈಲೇ ಓಡಾಡುತ್ತಿತ್ತು. ಈ ಕಾರಣಕ್ಕೆ ಇದೇ ಹಳಿಯಿಲ್ಲದ ರೈಲುಗಳನ್ನು ಇನ್ನು ಮುಂದೆ ಪ್ರಯಾಣಿಕರ ಸಾಗಾಟಕ್ಕೂ ಉಪಯೋಗಿಸಲಾಗುತ್ತದೆ. ವಿಶೇಷವಾಗಿ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಈ ಹಳಿಯಿಲ್ಲದ ರೈಲು ಭರ್ಜರಿಯಾಗಿಯೇ ಓಡಾಡುತ್ತಿದೆ. ಇದರಿಂದಾಗಿ ಖಾಸಗಿ ಬಸ್ಸು ಮಾಲೀಕರಿಗೆ ಭರ್ಜರಿ ಆದಾಯ ಉಂಟಾಗುತ್ತದೆ. ಹಾಗಿರುವಾಗ ಬಸ್ಸು ಮಾಲಕರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ.

ಈ ಮಧ್ಯೆ, ಶತಕೋಟಿಗಿಂತಲೂ ಹೆಚ್ಚು ಮಂದಿಯನ್ನು ಅತ್ಯಂತ ಅಪರೂಪವಾಗಿ ನಿಶ್ಶಬ್ದವಾಗಿರುವ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವವರೆಲ್ಲಾ ಸೇರಿಕೊಂಡು Adults Only ಚಲನಚಿತ್ರದ ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದರು ಎಂಬುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಆಲೂ ಪ್ರಸಾದರು ಅಮೆರಿಕಾಕ್ಕೂ ಏನಾದರೂ ರೈಲು ಹಾಕಿದ್ದಾರಾಂತ ಸ್ವಲ್ಪ ನೋಡಿ ಹೇಳಿ ಅನ್ವೇಷಿಗಳೇ.

    ಪ್ರತ್ಯುತ್ತರಅಳಿಸಿ
  2. ಅಭೂತ ಪೂರ್ವವಾದ ಬಜೆಟ್‍ನ್ನು ಮಂಡಿಸಿ ಸುಸ್ತಾಗಿ ಎಸಿಯಡಿಯಲ್ಲಿ ಕುಳಿತು ಬಿಹಾರಿ ಎಮ್ಮೆ ಹಾಲಿನ ಲಸ್ಸಿ ಕುಡಿಯುತ್ತಾ ದಣಿವಾರಿಸಿಕೊಳ್ಳುತ್ತಿರುವ ಲಾಲ್-ಊಗೆ ನಮ್ಮ ಅಭಿನಂದನೆ. `ಏನೊ ಸ್ವಲ್ಪ ಜನರ ಪರವಾಗಿ ಬಜೆಟ್ ಮಾಡಿಕೊಡ್ರಯ್ಯಾ ಅಂದರೆ ಈ ಐ ಎ ಎಸ್ ಯದ್ವಾತದ್ವಾ ಸುಧಾರಣೆಗಳನ್ನು ತಂದುಬಿಟ್ಟಿದ್ದಾರಲ್ಲ ಬಡ್ಡಿ ಮಕ್ಕಳು' ಎಂಬ ಉವಾಚವನ್ನು ನಮ್ಮ ಪ್ರತಿನಿಧಿಗಳ ಕಿವಿಗೆಮಾತ್ರ ಬೀಳುವಂತೆ ಹೇಳಿರುವುದಾಗಿ ವರದಿಯಾಗಿದೆ.

    ಐಐಎಂ‍ನಲ್ಲಿ ತಮ್ಮ ಉಪನ್ಯಾಸವನ್ನು ಕೊಟ್ಟು ಜೈ ಅನ್ನಿಸಿಕೊಂಡ ಲಾಲೂ ಮಹಾರಾಜರಿಗೆ ಅಮೇರಿಕಾದಲ್ಲೊಂದು ಅಂಥದ್ದೇ ಉಪನ್ಯಾಸ ನೀಡುವ ಬಯಕೆ ಉಂಟಾಗಿದ್ದು ಅಮೇರಿಕಾಕ್ಕೂ ಹಳಿಯಿಲ್ಲದ ರೈಲನ್ನು ಬಿಡುವ ಯೋಜನೆಯನ್ನು ಮುಂದಿನ ಬಜೆಟ್‍ನಲ್ಲಿ ಪ್ರಸ್ತಾಪಿಸುವ ಸಂಭವವಿದ್ದು. ಅಮೇರಿಕನ್ನರು ಯಾವುದಕ್ಕೂ ಜೀವ ವಿಮೆಯ ಪಾಲಸಿಗಳನ್ನು ಜೋಪಾನ ಮಾಡತಕ್ಕದ್ದೆಂದು ತಿಳಿಯಪಡಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  3. ಶ್ರೀತ್ರೀ ಅವರೆ,
    ಅಮೆರಿಕಕ್ಕೆ ರೈಲು ಬಿಡಲು ಬುಷ್ ಸುತಾರಾಂ ಒಪ್ಪುತ್ತಿಲ್ಲ ಎಂದು ಫೋನಾಯಿಸಿದ್ದಾರೆ. ಯಾಕೆಂದರೆ ತಮ್ಮ ತಮ್ಮೊಳಗೆ ಸಂಝೋತಾ ಇಲ್ಲದೆಯೇ ಇತ್ತೀಚೆಗೆ ಉಗ್ರರು ರೈಲಿಗೆ ಬಾಂಬ್ ಹಾಕಿ ಬೇಯಿಸಿದ್ದರಲ್ಲ. ಬುಷ್ಷಣ್ಣ ಆಂಟಿ-ಉಗ್ರರ ಕಾರ್ಯಾಚರಣೆಯಲ್ಲಿ ತೊಡಗಿರುವುದರಿಂದ ಆಲು ರೈಲುವಿಗೆ ಪ್ರವೇಶವಿಲ್ಲವಂತೆ. ಆದರೆ ಈ ಬಾರಿಯ ಬಜೆಟಿನಲ್ಲಿ ಭಾರತ-ಅಮೆರಿಕ ಮಧ್ಯೆ ಮೃಚ್ಛಕಟಿಕವನ್ನು ಇಲ್ಲವೇ ಆಟೋರಿಕ್ಷಾವನ್ನು ಅಳವಡಿಸುವ ಪ್ರಸ್ತಾಪ ಬಂದಿದೆ.

    ಪ್ರತ್ಯುತ್ತರಅಳಿಸಿ
  4. ಸುಪರೀತರೆ,
    ನಿಮ್ಮ ಜೀವ ವಿಮೆಯ ಸಲಹೆಯನ್ನು ಕೆಂಪು ಪ್ರಸಾದರ ಕಿವಿಗೆ ಹಾಕಲಾಗುತ್ತದೆ.

    ಏನೇ ಆದರೂ ಆಲೂ ಮಸಾಲೆ ಮಾತ್ರ ಸೂಪರ್ ಆಗಿತ್ತು.

    ಪ್ರತ್ಯುತ್ತರಅಳಿಸಿ
  5. ಅಬ್ಬಾ ರಾಲೂ ದಾಯವ್ ಇಷ್ಟೆಲ್ಲಾ ಕಿತಾಪತಿ ಮಾಡಿದ್ದಾರಾ? ಅದಕ್ಕೇ ಸಂಸತ್ತಿನಲ್ಲಿ ಗಲಾಟೆಯೇ ಇಲ್ಲ.
    ಒಳಗಿನ ಮನೆಯಲ್ಲೂ ಸಿಗದ ಇಂತಹ ವಿಷಯವನ್ನು ಅದು ಹೇಗೆ ಪತ್ತೆ ಮಾಡಿದ್ರಿ. ಅದನ್ನು ಹುಡುಕಲು ಹೊರಟ
    ನಮ್ಮ ವರದಿಗಾರ ಎರಡು ದಿನಗಳಾದರೂ ಪತ್ತೆಯೇ ಇಲ್ಲ

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,
    ನೀವೂ ರೈಲು ಬಿಡಬಹುದು. ಆ ರೀತಿ ಇದೆ ರೈಲ್ವೇ ಬಜೆಟ್ ! ನಿಮ್ಮ ವರದಿಗಾರ ಮತ್ತಷ್ಟು ರೈಲು ಬಿಡಲು ಹೊರಟಿರಬಹುದು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D