{ಜಾಹೀರಾತು: ನಾಳೆ ಮತ್ತೆ ವಾರ ಭವಿಷ್ಯ ಪ್ರಕಟವಾಗಲಿದೆ...! ಎಲ್ಲರೂ ನಿಮ್ಮ ಭವಿಷ್ಯವೇ ತಲೆಕೆಳಗಾಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಿ!}
 
(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಸೆ.26- ಬೊಗಳೆ ರಗಳೆ ಬ್ಯುರೋ ಕೂಡ ಭವಿಷ್ಯ ನುಡಿಯಲಾರಂಭಿಸಿರುವುದರಿಂದಾಗಿ ಜನರು ಇತ್ತೀಚೆಗೆ ಜಾತಕ ನೋಡಿ ಮದುವೆಯಾಗುವುದರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಗಂಭೀರ ವಿಷಯದಿಂದ ಚಿಂತಾಕ್ರಾಂತವಾಗಿರುವ ಜಾನುವಾರುಗಳು, ನಾವಾದರೂ ಜಾತಕ ನೋಡಿಯೇ ಮದುವೆಯಾಗೋಣ ಎಂದು ತೀರ್ಮಾನಿಸಿವೆ.
 
ಇದಕ್ಕಾಗಿ ಜಾನುವಾರುಗಳಿಗೆ ಮೇವು ತಿನ್ನಿಸುವುದಕ್ಕಾಗಿ ಮತ್ತು ಮೇವು ತಿಂದದ್ದಕ್ಕಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಹಿಂದಿನ ಬಿಹಾರದ (ಇಂದು ಜಾರ್ಖಂಡ್ ರಾಜಧಾನಿ)  ರಾಂಚಿಗೆ ಧಾವಿಸಿರುವ ಮೇವುಪ್ರಿಯ ಜಾನುವಾರುಗಳು, ಅಲ್ಲಿನ ವಿಶ್ವವಿದ್ಯಾನಿಲಯದ ಮೊರೆ ಹೋಗಿವೆ ಎಂದು ಇಲ್ಲಿ ತಿಳಿದುಬಂದಿದೆ.
 
'ಋಣಾನುಬಂಧೇನ ರೂಪೇಣ, ಪಶು-ಪತ್ನಿ ಸುತಾಲಯ' ಎಂದು ತಮ್ಮ ಹಿರಿಯರು ಯಾವತ್ತೂ ಹೇಳುತ್ತಿದ್ದರು. ಆದರೆ ಪಶು ಮತ್ತು ಪತ್ನಿಯರ ಮಧ್ಯೆ ಯಾವಾಗಲೂ ಕೊಟ್ಟಿಗೆಯಲ್ಲಿ ಜಗಳವಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ತಮ್ಮ ಬಾಲ(ಇರುವ)ಕರುಗಳಿಗೆ ಜಾತಕ ಸಿದ್ಧಪಡಿಸುವಂತಾಗುವ ಯೋಜನೆಯನ್ನು ಪಶುಗಳು ಹಾಕಿಕೊಂಡಿವೆ.
 
ಹೀಗೆ ತಯಾರಿಸಲಾದ ಕುಂಡಲಿಯನ್ನು ತಮ್ಮ ಕಿವಿಗೆ ಸಿಲುಕಿಸಿಕೊಂಡು ಸುತ್ತಾಡಿದರಾಯಿತು. ಇಷ್ಟ ಇದ್ದವರು ಜಾತಕ ನೋಡಿ ಸಂಬಂಧ ಕಟ್ಟಲು ಮುಂದೆ ಬರುತ್ತಾರೆ. ಈ ರೀತಿಯಾದರೂ ಬೇರೆಯವರ ಜಾತಕ ಜಾಲಾಡಬಹುದಲ್ಲವೇ ಎಂಬುದು ಈ ಮೇಧಾವಿ ಪ್ರಾಣಿಗಳ ಅಭಿಮತ.

4 Comments

ಏನಾದ್ರೂ ಹೇಳ್ರಪಾ :-D

 1. ಪಶುಪತಿ ಅಂತಾರಲ್ಲ ಅದ್ಯಾರು? ಈ ಪಶು ಪತ್ನಿಯ ಜಾತಕ ನಿಮ್ಮ ಹತ್ರಾನೂ ಬಂದಿದೆಯಾ? ನಾಳೆ ಹೊರಹಾಕುವ ಭವಿಷ್ಯವಾಣಿ ಅವರುಗಳಿಗೂ ಅನ್ವಯಿಸುವುದಾ?

  ಇವತ್ತಿನ ಪತ್ರಿಕೆಯ ವಿಷಯ ನನಗ್ಯಾಕೋ ಅರ್ಥವೇ ಆಗ್ತಿಲ್ಲ. ಬಹುಶಃ ಪಶುಗಳಿಗೆ ಬರೆದ ವರದಿ ಇರ್ಬೇಕು.

  ReplyDelete
 2. ಮಾವಿನ ರಸರೆ,

  ಕೊಟ್ಟಿಗೆಯಲ್ಲಿ ಪಶುಗಳನ್ನು ಬಂಧನದಲ್ಲಿರಿಸಲು ಹಗ್ಗ ಅಗತ್ಯವಾದುದರಿಂದ ಬಂಧೇನ ಎಂಬ ಶಬ್ದದಲ್ಲೇ ನೀವು ಕೇಳಿದ ಪತಿ ಯಾರು ಎಂಬುದು ಅಡಗಿಕೊಂಡಿದೆಯಲ್ಲಾ...:)

  ReplyDelete
 3. ತಲೆ ತಿರಗ್ತಾ ಇದೆ ...

  ReplyDelete
 4. ಮನಸ್ವಿನಿ ಅವರೆ,
  ತಲೆ ಎಷ್ಟು ತಿರುಗಿದರೂ ಅದನ್ನು ಮರಳಿ ಸಹಜ ಸ್ಥಿತಿಗೆ ತಂದುಕೊಳ್ಳಿ. :)

  ಯಾಕೆಂದರೆ, ಜನರು ಬಿಟ್ಟದ್ದನ್ನಲ್ಲವೇ ಜಾನುವಾರುಗಳಿಗೆ ಕೊಡೋದು? ಅನ್ನ ಮಿಕ್ಕಿದರೆ, ಕಲಗಚ್ಚಿಗೆ ಸೇರಿಸಿ ಜಾನುವಾರುಗಳಿಗೆ ಕೊಡಲಾಗುತ್ತದೆ.

  ಆದರೆ ಈ ಬಾರಿ ಜನ ಕೊಡೋ ಮೊದ್ಲೇ ಜಾನುವಾರುಗಳು ಜಾತಕ ಜಾಲಾಡಲು ಹೊರಟಿವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post