ಬೊಗಳೆ ರಗಳೆ

header ads

ನಿಮ್ಮ ಭವಿಷ್ಯ- ಕಣ್ಣು ಮುಚ್ಚಿ ಓದಿಕೊಳ್ಳಿ!

ಮೇಕೆ
ವಾರಾಂತ್ಯದಲ್ಲಿ ಪತ್ನಿ ಪೀಡನೆಯಿಂದಾಗಿ ಮನರಂಜನೆಗೋಸ್ಕರ ಹಣ ಹೆಚ್ಚು ಖರ್ಚಾಗುವ ಕಾರಣ ಮನರಂಜನೆಯೆಲ್ಲಾ ಕರಗಿ ಮನೋವೇದನೆಯಾಗುತ್ತದೆ.

ಟಗರು
ವೇತನ ಏರಿಸುತ್ತಾರೆಯೇ ಇಲ್ಲವೇ ಎಂಬುದು ಅನಿಶ್ಚಿತವಾಗಿರುವುದರಿಂದ ಯಾವಾಗಲೂ ಇರುವಂತೆ ಇಂದು ಕೂಡ ಆತಂಕ ಮುಂದುವರಿಯುತ್ತದೆ. ಇದೇ ಆತಂಕ ಹೆಚ್ಚು ಮುಂದುವರಿದರೆ ಅದು ಸಹಜವಾಗಿ ಅತಿರೇಕವಾಗಿ ಅತಿಶೋಕಕ್ಕೆ ಕಾರಣವಾಗುತ್ತದೆ.
 
ಜೋಡಿ
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಇರುವುದರಿಂದ ಬಂದ ನೆಂಟರನ್ನು ಧಢಾರನೆ ಬಾಗಿಲುಮುಚ್ಚಿ ಸ್ವಾಗತಿಸುವಿರಿ. ಒಳಗೆ ಬಂದ ತಕ್ಷಣ ಯಾವಾಗ ಹೊರಡುವುದು ಅಂತ ಕೇಳುತ್ತೀರಿ.

ಏಡಿ
ಯಾವಾಗಲೂ ಬೈಯುತ್ತಿರುವ ಪತಿರಾಯರಿಗೆ ಜ್ವರ ಬಂದು ಮಲಗುವ ಸಾಧ್ಯತೆ ಇದೆ. ಗೃಹಿಣಿಯರಿಗೆ ಈ ದಿನ ಬೈಗುಳವಿಲ್ಲದೆ ಮನಶ್ಶಾಂತಿ.
 
ಸಿಂಗ(ಳೀಕ)
ಅಶುಚಿಯಾಗಿರುವ ರುಚಿಕರ ಪಾನೀಯಗಳ ಅತಿ ಸೇವನೆಯಿಂದ ಅದು ಉದರದಲ್ಲಿ ನಿಲ್ಲದೆ ಹೊರಬರಲು ಪ್ರಯತ್ನಿಸುವುದರಿಂದ ನಿಮ್ಮ ಇಂದಿನ ಎಲ್ಲ ಕೆಲಸಗಳೂ ಹಾಳಾಗಲಿವೆ.
 
ಮದುವೆಯಾಗದವಳು
ವೈವಾಹಿಕ ಮಾತುಕತೆಗಳಲ್ಲಿ ಗಣನೀಯ ಪ್ರಗತಿಯಾಗಿ ಇಂದು ಒಂದೇ ದಿನದಲ್ಲಿ ನೀವು 14 ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತ್ ತಿನ್ನುವಿರಿ. ಈ ಕಾರಣಕ್ಕೆ ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಬೇಗನೇ ಏಳಬೇಕಾಗಬಹುದು.
 
ತೂಗು ತಕ್ಕಡಿ
ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಅಧಿಕವಾಗಿ ಉಕ್ಕೇರಿ ಹೊರಚೆಲ್ಲಿ ಅದೆಲ್ಲಾ ನಷ್ಟವಾಗುವುದರಿಂದ ಮಹಿಳಾ ಕಾಲೇಜುಗಳ ಸುತ್ತಮುತ್ತ ಗಿರಕಿ ಹೊಡೆಯುವ ಸಾಧ್ಯತೆ. ಕಪಾಳ ಮೋಕ್ಷದ ಸಾಧ್ಯತೆಗಳು ಅಧಿಕವಾಗಿವೆ.
 
(ಕುಟುಕೋ)ಚೇಳು
ಮದುವೆ ಔತಣಕೂಟಕ್ಕೆ ಹೋಗಿ ಅಲ್ಲಿ ಅಗತ್ಯಕ್ಕಿಂತ ಹೆಚ್ಚು ತಿನ್ನುವುದರಿಂದ ಮರುದಿನ ನೀವು ಕಾಯಿಲೆ ಬೀಳುವಿರಿ. ಆದುದರಿಂದಾಗಿ ನಿಮ್ಮ ಮನೆ ಪಕ್ಕದ ವೈದ್ಯರಿಗೆ ಈ ದಿನ ಶ್ರೇಯಸ್ಕರ.
 
(ರಾಮ)ಬಾಣ
ಚಾಕಲೇಟ್‌ಗೆ ನೀವು ಹಣ ಕೊಡದಿರುವುದರಿಂದ ಪುತ್ರ ಮನಸ್ತಾಪ. (ನಿನ್ನೆಯ ವರದಿ ನೋಡಿ ದಯವಿಟ್ಟು ಮಕ್ಕಳನ್ನು ಚಾಕಲೇಟ್‌ವಂಚಿತರನ್ನಾಗಿಸದಿರಿ. ಇದರಿಂದ ನಿಮಗೇ ನಷ್ಟ!) ನಿಮ್ಮೂರಿನಲ್ಲಿ ಜನಸಂಖ್ಯಾ ಹೆಚ್ಚಳಕ್ಕೆ ಕಾರಣರಾಗುವಿರಿ.
 
ಮೊಸಳೆ
ಪ್ರಯಾಣ ಸಂದರ್ಭ ಕಳ್ಳರ ಹಾವಳಿಯಿರುವುದರಿಂದ ಪ್ರಾಣಕ್ಕೆ ಅಪಾಯವಾಗದಂತಿರಬೇಕಿದ್ದರೆ ಹಣದ ಪರ್ಸನ್ನು ಷರ್ಟ್ ಜೇಬಿನಲ್ಲೇ ಇರಿಸಿಕೊಳ್ಳಿ.
 
ಕುಡಿಕೆ
ತೀವ್ರ ಬೆಲೆ ಏರಿಕೆ ಪರಿಣಾಮ ಇಂದು 100 ಮಿ.ಲೀ. ಹಾಲು ಖರೀದಿಗೆ ನೀವು ಚಿನ್ನ ಒತ್ತೆ ಇಡಬೇಕಾಗಬಹುದು.
 
ಮೀನು
ನಿಮ್ಮ ಗೆಳೆಯರ ಸಲಹೆ ಮೇರೆಗೆ ಸಂಜೆ ವೇಳೆಗೆ 'ತೀರ್ಥ' ಯಾತ್ರೆ ಕೈಗೊಳ್ಳುವ ಕಾರಣ, ತೀರ್ಥ ತಲೆಗೇರಿ ರಾತ್ರಿ ಯಾರದೋ ಮನೆ ಬಾಗಿಲು ಬಡಿಯುವಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಗೊತ್ತಾಯಿತು ಗೊತ್ತಾಯಿತು ಮಾವಿನಸರರೆ,
  ನಿಮ್ಮ ಕೀಬೋರ್ಡ್ ಸೆಟ್ಟಿಂಗ್ ಇಂಗ್ಲಿಷಿನಲ್ಲೇ ಇದೆ ಎನ್ನೋ ವಿಷಯ ಕಣ್ಣು ಮುಚ್ಚಿಕೊಂಡರೂ ನಿಮಗೆ ಕಾಣದಿದ್ದುದು ವಿಶೇಷವೇ ಸರಿ ! :)

  ಪ್ರತ್ಯುತ್ತರಅಳಿಸಿ
 2. ನಮ್ಮ ರಾಶಿಯೇ ನಿಮ್ಮ ಪಟ್ಟಿಯಲ್ಲಿ ಇಲ್ವಲ್ಲ? ಯಾಕೆ?

  -ಪಬ್

  ಪ್ರತ್ಯುತ್ತರಅಳಿಸಿ
 3. ಪಬ್ಬೋತ್ತಮರೇ,
  ಸ್ವಲ್ಪ ಸುಧಾರಿಸಿಕೊಳ್ಳಿ... ಯಾಕಂದ್ರೆ ನಮ್ಮ ಬ್ಯುರೋ ಸದಸ್ಯರು ಕೂಡ ತೀರ್ಥ ಯಾತ್ರೆಗಾಗಿ ನಿಮ್ಮ ಪಬ್ಬಿಗೇ ಬಂದ ಕಾರಣ ಹೀಗಾಗಿದೆ. ಅದೂ ಅಲ್ಲದೆ, ಅಷ್ಟೊಂದು ರಾಶಿಗಳಿರುವಾಗ ಹೆಕ್ಕಿಕೊಳ್ಳುವುದಾದರೂ ಏನನ್ನು ಅಂತ ಗೊತ್ತೇ ಆಗಿರಲಿಲ್ಲ.

  ಪ್ರತ್ಯುತ್ತರಅಳಿಸಿ
 4. ಜಿತೇಂದ್ರರೆ,
  ಎಚ್ಚರಿಕೆ.... ಬೆನ್ನಿಗೆ ಹಾಳೆ ಕಟ್ಟಿಕೊಂಡರೆ ಕಣ್ಣು ಬಿಟ್ಟು ಹೋಗಬಹುದು. ಇಲ್ಲವಾದಲ್ಲಿ, ಕಣ್ ಕಣ್ ಬಿಡಬೇಕಾದೀತು !!!!

  ಅದಕ್ಕಾಗಿ, ಕಣ್ಣು ಮುಚ್ಚಿಕೊಂಡೇ ಹೋಗುವುದೊಳಿತು. (ಒಂದು ಕಣ್ಣು ಮುಚ್ಚುವುದಲ್ಲ, ಎರಡೂ ಕಣ್ಣು !)

  ಪ್ರತ್ಯುತ್ತರಅಳಿಸಿ
 5. Dear ಜ್ಯೋತಿshe:

  ಒಂಬತ್ತನೇ ರಾಶಿ 'ಧನು'( ರಾಜೀವಗಾಂಧಿಯನ್ನು ಕೊಂದ ಶಿವರಸನ್ ಜತೆಗೆ ಇದ್ದಳಲ್ಲ,ಅವಳೇ!).

  ಅದನ್ನು ಧನುಸ್ಸು ಎನ್ನಬಹುದು. ಕನ್ನಡದಲ್ಲಿ 'ಬಿಲ್ಲು' ಎನ್ನಬಹುದು. ಈ ರಾಶಿಯವರ ಭವಿಷ್ಯ "ನಿಮ್ಮ ಯಾವ ಬಿಲ್ಲೂ ಎಪ್ರೂವ್ ಆಗುವುದಿಲ್ಲ" ಎಂದೋ, "ಫೇಕ್‍ಮೆಡಿಕಲ್‍ ಧನು(ಬಿಲ್)ನಿಂದ ಧನಲಾಭ" ಎಂದೋ "Where there is a ಬಿಲ್, there is a way" ಎಂದೋ ಗೀಚಬಹುದು.

  ಅದನ್ನೆಲ್ಲ ಬಿಟ್ಟು ನೀವು 'ಬಾಣ' ಎಂದು ಭಾಷಾಂತರಿಸಿದರೆ ಸಂಸ್ಕ್ಟತದ ಬಾಣಭಟ್ಟನ ಹೊರತಾಗಿ ಬೇರಾರಿಗೂ ಖುಶಿಯಾಗದು!

  ಪ್ರತ್ಯುತ್ತರಅಳಿಸಿ
 6. ಹೌದು ಜೋsheಗಳೆ,

  ರಾಮನಿಗೂ ಇದ್ದಿದ್ದು ಅದೆ, ಮದನನಿಗೂ ಇದ್ದಿದ್ದು ಅದೆ... ಆದರೆ ಬಿಲ್ ಕೊಟ್ಟಿದ್ದನ್ನು ಉಲ್‌ಲೇಖಿಸಿರಲಿಲ್ಲವಷ್ಟೇ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D