(ಬೊಗಳೂರು ವಿಟಮಿನ್ ಬ್ಯುರೋದಿಂದ)
ಬೊಗಳೂರು, ಸೆ.25- ಆಂಧ್ರ ಪ್ರದೇಶದಲ್ಲಿ ಪೆಸ್ಟಿ ಕೋಲಾಗಳು ದಿಢೀರನೇ ಮಾರುಕಟ್ಟೆಯಿಂದ ನಾಪತ್ತೆಯಾಗುತ್ತಿರುವುದು ಮತ್ತು ಮೆಣಸಿನ ಸ್ಪ್ರೇ ಕೂಡ ದಿಢೀರನೆ ನಾಪತ್ತೆಯಾಗಿದ್ದ ಬಗ್ಗೆ ಭಯಾನಕ ವರದಿ ಮಾಡಿದ್ದ ಬೊಗಳೆ ರಗಳೆ ಬ್ಯುರೋ, ಇದೀಗ ಚಿಣ್ಣರ ಚಾಕಲೇಟ್ ನಾಪತ್ತೆಯಾಗುತ್ತಿರುವುದರ ಬೆನ್ನ ಹಿಂದೆ ಬಿದ್ದಿದೆ.
ಮಕ್ಕಳಿಗೆ ಚಾಕಲೇಟುಗಳು ಯಾಕೆ ಅಷ್ಟೊಂದು ಇಷ್ಟವಾಗುತ್ತವೆ ಎಂಬುದರ ಕುರಿತು ಸಂಶೋಧನೆ ಮಾಡಹೊರಟ ನೈಜೀರಿಯನ್ನರು ಹೊಸ ಸಂಶೋಧನೆ ಮಾಡಿದ್ದಾರೆ. ಅವರೀಗ ವಯಾಗ್ರಾ ಮಾತ್ರೆಗಳನ್ನೆಲ್ಲಾ ಚರಂಡಿಗೆ ಹಾಕುತ್ತಿದ್ದು, ಮಾರುಕಟ್ಟೆಯಲ್ಲಿರುವ ಚಾಕಲೇಟುಗಳನ್ನೆಲ್ಲಾ ಸಂಗ್ರಹಿಸಿ ದರ ಏರಿಸುವ ಯೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವಯಾಗ್ರಾದ ಬದಲು ಚಾಕಲೇಟುಗಳನ್ನು ಉಪಯೋಗಿಸುತ್ತಿರುವ ಕಾರಣಕ್ಕೆ, ಇದಕ್ಕೆ ಚಾಕ ಲೇಟು ಎಂದು ಹೆಸರಿಟ್ಟರೆ ಮಾರಾಟವಾಗದು ಎಂಬ ನಿರ್ಧಾರಕ್ಕೆ ಬಂದಿರುವ ನೈಜೀರಿಯನ್ನರು, ಲೇಟಾಗಿ ನಿರ್ಧಾರ ತೆಗೆದುಕೊಂಡು ಸೆಕ್‌ಸ್ಲೇಟ್ ಎಂಬ ನಾಮಕರಣ ಮಾಡಿದ್ದಾರೆ. ಆದರೆ ಈ ಪದಪುಂಜದಿಂದ ಅವರು ಲೇಟ್ ಪದವನ್ನು ಪ್ರತ್ಯೇಕಿಸಿಲ್ಲದಿರುವುದು ಹುಬ್ಬೇರಿಸಿದೆ.
ಇದೀಗ ಮಾದಕ ದ್ರವ್ಯಗಳಿಗೆ ಹೆಸರಾದ ನೈಜೀರಿಯನ್ನರು ಉನ್ಮಾದಕ ದ್ರವ್ಯಗಳನ್ನೂ ತಯಾರಿಸಹೊರಟಿರುವುದರಿಂದ ವ್ಯಗ್ರರಾಗಿರುವ ವಯಾಗ್ರಾ ತಯಾರಕರು, ಈ ಕ್ಷೇತ್ರದಲ್ಲಿ ತಮ್ಮ ಅಗ್ರಸ್ಥಾನ ಬಿದ್ದುಹೋದ ಕಾರಣದಿಂದ, ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸುತ್ತಿದ್ದಾರೆ.
ಇದೂ ಅಲ್ಲದೆ, ಸ್ಲೇಟು ಹಿಡಿಯಬೇಕಾದ ಮಕ್ಕಳು ಚಾಕಲೇಟು ತಿನ್ನದಂತೆ ಮಾಡುವ ಹುನ್ನಾರವಿದು ಎಂದು ಅವರು ಹುಯಿಲೆಬ್ಬಿಸಿದ್ದಾರಲ್ಲದೆ, ಈ ಕಂಪನಿಗಳ ಕೈಯಲ್ಲೂ ಸ್ಲೇಟು ಹಿಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೆಕ್‌ಸ್ಲೇಟ್ ತಯಾರಿಕಾ ಕಂಪನಿಗಳು, ತಾವೇನೂ ಮಕ್ಕಳಿಗೆ ಚಾಕಲೇಟು ತಿನ್ನಲು ಬಲವಂತ ಮಾಡಿಲ್ಲ. ಅವರಿಗಿಷ್ಟವಾಗುತ್ತಿದೆ, ತಿನ್ನುತ್ತಾರೆ. ಅವರಿಗೆ ಬಲವಂತವಾಗಿ ತಿನ್ನಿಸುವ ದೊಡ್ಡ ಸಾಹಸ ಕಾರ್ಯವೊಂದು ಮಾಡಬೇಕಾಗಿಲ್ಲವಲ್ಲ ಎಂದು ನಾವು ನಿಟ್ಟುಸಿರು ಬಿಡುತ್ತಿದ್ದೇವೆ. ನಾವು ಅದರ ಪರಿಣಾಮಗಳನ್ನು ಮಾತ್ರವೇ ಸಂಶೋಧನೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

6 Comments

ಏನಾದ್ರೂ ಹೇಳ್ರಪಾ :-D

 1. ಇದೆಂತಹಾ ಕಾಲ ಬಂತಪ್ಪಾ ದೇವರೇ!

  ಏನೇನೋ ಚಮತ್ಕಾರಗಳು ನಡೆಯುತ್ತಿವೆ. ಈ ಚಾಕಲೇಟುಗಳು ಎಲ್ಲಿ ಸಿಗುತ್ತಿವೆ. ಚಾಕಲೇಟು ಬದಲಿಗೆ ಪೆಪ್ಪರ್‍ಮೆಂಟು ತಿಂದರೆ ಪರವಾಗಿಲ್ವಾ?

  ಒದೆತ ಬೀಳೋದು ಸ್ವಲ್ಪ ಕಡಿಮೆ ಆದಂತಿದೆ ಅಲ್ವಾ? ಒದೆತಗಳನ್ನು ಹೆಚ್ಚು ಮಾಡಲು, ಸ್ಕೋರರ್ ಅವರಿಗೆ ಏನಾದ್ರೂ ಕೊಟ್ಟರೆ ಆಗುತ್ತಾ ನೋಡ್ಬೇಕು.

  ReplyDelete
 2. ಮಾವಿನಯನಸರೆ,
  ಚಾಕಲೇಟು ನಾನು ಕೂಡ ಕಳಿಸುವೆ... ಸೊಲ್ಪ ಲೇಟು ಆದೀತು... ಆದರೆ

  ಗೊತ್ತಲ್ಲ...

  ಮಾಮೂಲಿ ಮಾತ್ರ ಲೇಟು ಆಗಬಾರದು...!

  ReplyDelete
 3. ಕಳೆದ ವರ್ಷ (2005) ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ವಿಚಿತ್ರಾನ್ನ 'ಚಾಕೊಲೇಟ್' ವಿಶೇಷಾಂಕ ದಲ್ಲಿ ಈ ಕೆಳಗಿನ ಮಾಹಿತಿಯನ್ನು ಒದಗಿಸಲಾಗಿತ್ತು:

  "ಪ್ರೀತಿಗೂ ಚಾಕಲೇಟ್‌ಗೂ ಏನು ಸಾಮ್ಯ-ಸಂಬಂಧಗಳಿರಬಹುದು ಎಂದಿರಾ? ನಿಜವಾಗ್ಲೂ, ವೈಜ್ಞಾನಿಕವಾಗಿಯೇ ಸಾಮ್ಯ ಇದೆಯಂತೆ! ಚಾಕಲೇಟ್‌ನಲ್ಲಿರುವ `ಫೀನೈಲ್‌ಈಥೈಲ್‌ಎಮೀನ್' ಎಂಬ ರಾಸಾಯನಿಕ ಪದಾರ್ಥವೇ `ಪ್ರೀತಿ'ಯ ಅನುಭವ-ಅನುಭೂತಿಯ ವೇಳೆ ಮನುಷ್ಯಜೀವಿಯ ಮೆದುಳಲ್ಲಿ ಸ್ರಾವವಾಗುವ ರಾಸಾಯನಿಕ ಸಹ! ಚಾಕಲೇಟ್ ತಿಂದಾಗ `ಹಿತಾನುಭವ' ಆಗುವುದು ಕೇವಲ ಅದರ ಸಿಹಿಯಿಂದಲ್ಲ, ಬದಲಿಗೆ ಈ ರಾಸಾಯನಿಕದಿಂದ! ಶತಮಾನಗಳ ಹಿಂದೆ ಚಾಕಲೇಟ್‌ಗೆ (ಮತ್ತು ಅದರ ಕಚ್ಚಾವಸ್ತುವಾದ ಕೊಕೊ ಬೀಜಗಳಿಗೆ) ಉದ್ದೀಪನಶಕ್ತಿಯಿದೆಯೆಂದೇ ತಿಳಿದಿದ್ದರು. ಅದು ಸ್ವಲ್ಪ ಉತ್ಪ್ರೇಕ್ಷೆಯಾದರೂ ಚಾಕಲೇಟ್ ಮತ್ತು ಲವ್ ಒಂದೇನಾಣ್ಯದ ಎರಡು ಮುಖಗಳೆನ್ನುವುದಕ್ಕೆ ವೈಜ್ಞಾನಿಕ ಪುಷ್ಟೀಕರಣವಿದೆ".

  =======

  ವಯಾಗ್ರ ಪ್ರಭಾವದಿಂದ ಹುಟ್ಟಿದವನು ಅಗ್ರಜ (ವಯಾಗ್ರಜ).
  ಚಾಕ'ಲೇಟ್' ಪ್ರಭಾವದಿಂದ ತಡವಾಗಿ ಹುಟ್ಟಿದವನು ಅನುಜ.

  =======

  ReplyDelete
 4. ಜೋಷಿಯವರೆ,
  ನಿಮ್ಮ ವಿಚಿತ್ರಾನ್ನದ ಮೆನುವಿನಲ್ಲಿ ಈಗಾಗಲೇ ಚಾಕಲೇಟ್ ತಯಾರಿ ಬಗ್ಗೆ ಉಲ್ಲೇಖಿಸಿರುವುದರಿಂದ ನೀವು ನಮ್ಮ ಹಾಗೆ ಲೇಟ್ ಆಗಿಲ್ಲ ಎಂಬುದು ತಿಳಿಯಿತು.

  ನಿಮ್ಮ ವಿವರಣೆ ಕೇಳಿದ ಬಳಿಕ, ಇನ್ನು ಮುಂದೆ ಬ್ಯುರೋದ ಸಕಲರಿಗೂ ಚಾಕಲೇಟು ವಿತರಿಸಲು ಪ್ರಯತ್ನಿಸುವ ನಿರ್ಧಾರ ಕೈಗೊಳ್ಳಲಾಗಿದೆ.

  ಆದರೆ ಅಗ್ರಜ, ಅನುಜ ಎಲ್ಲಾ ಇದ್ದಾರೆ... ಉಗ್ರಜ? ವಯಾಗ್ರದ ಉಗ್ರ ಪ್ರಭಾವದಿಂದ ಜನಿಸಿದವರೆ? :)

  ReplyDelete
 5. ವಯಾಗ್ರದ ಉಗ್ರ ಪ್ರಭಾವದಿಂದ ಹುಟ್ಟಿದವನು 'ವ್ಯಗ್ರಜ'!

  ReplyDelete
 6. ಸುನಾಥ್ ಅವರೆ,
  ನಿಮ್ಮ ಉಗ್ರ ಕಾಮೆಂಟ್ ಕೇಳಿ ಅತ್ಯುಗ್ರಜರೂ ಸಂತೋಷದಿಂದ ವ್ಯಗ್ರರಾಗಿದ್ದಾರಂತೆ!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post