ಬೊಗಳೆ ರಗಳೆ

header ads

ಮುದುಕನ ಮದುವೆಯ Equation formula !

(ಬೊಗಳೂರು ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಆ.25- 100 ಆಗಲು 50+50 ಎಂದೇ ಆಗಬೇಕೇ? 5+95 ಅಂದರೂ ನೂರೇ ಆಗುತ್ತದಲ್ಲವೇ ಎಂಬುದನ್ನು ಸಾಬೀತುಪಡಿಸಲು ಹಿರಿ ಹಿರಿ ಹಿಗ್ಗುವ ಹಿರಿಯಜ್ಜ ಮತ್ತು ಮರಿ ಮರಿ ಮರಿಮೊಮ್ಮಗಳು ಸೇರಿ ತೀವ್ರ ಪ್ರಯತ್ನ ನಡೆಸಿದ ಘಟನೆಯೊಂದು ಇಲ್ಲಿ ವರದಿಯಾಗಿದೆ.
 
ಮಗುವನ್ನು ಆಟವಾಡಿಸುತ್ತಿದ್ದ ಅಜ್ಜನಿಗೆ ಆ ಮಗುವಿನ ಮೇಲೆ ಮಮತೆ ಹೆಚ್ಚಾಗಿ ಅದನ್ನು ಬಿಟ್ಟು ಬಾಳಲಾರೆ ಎಂಬುದನ್ನರಿತು ತೊಟ್ಟಿಲಲ್ಲೇ ಗಟ್ಟಿಯಾಗಿ ತಾಳಿ ಕಟ್ಟಿರುವ ಈ ಘಟನೆ ಹೊಸ ಹೊಸ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ. ಗಣಿತಜ್ಞರೆಲ್ಲಾ ಬೆಚ್ಚಿ ಬಿದ್ದಿದ್ದು, ಇಂಥದ್ದೊಂದು ಸಮೀಕರಣ ಸೂತ್ರ (Equation formula) ತಮಗೆ ಹೊಳೆಯಲೇ ಇಲ್ಲವಲ್ಲಾ ಎಂದು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.
 
ಆದರೆ ಈ ಬಗ್ಗೆ ಮುತ್ತಜ್ಜನನ್ನು ಮಾತನಾಡಿಸಿದಾಗ, ನಮಗೆ ಸಮೀಕರಣ ಸೂತ್ರ ಎಂಬುದೆಲ್ಲಾ ಗೊತ್ತಿಲ್ಲ.... ಸಮಾನತೆಯ ಸೂತ್ರ ಮಾತ್ರ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾಲ್ಲದೆ, 104ರ ಅಜ್ಜಿಯನ್ನು ಮದುವೆಯಾದ 33ರ ಯುವಕನನ್ನು ನೀವೇ ಸಂದರ್ಶನ ಮಾಡಿರಲಿಲ್ಲವೇ ಎಂದು ನಮಗೇ ತಿರುಗೇಟು ನೀಡಿದರು.
 
ಅದ್ಯಾವ ಸಮಾನತೆಯ ಸೂತ್ರ ಎಂದು ಪ್ರಶ್ನಿಸಲಾಗಿ, ಅಜ್ಜ ತಮ್ಮ ಬುತ್ತಿಯನ್ನು ಬಿಚ್ಚಿಟ್ಟರು.
 
ನೋಡಿ, ನಾನು ಹುಟ್ಟಿ ನೂರಾರು ವರ್ಷಗಳೇ ಆಯಿತು. ಹೆಣ್ಣು ಮಕ್ಕಳಿಗೆ ಯಾವುದೇ ಸ್ಥಾನ-ಮಾನ ಸಿಗುತ್ತಿಲ್ಲ. ಕೆಲವರಿಗೆ ಸ್ಥಾನ ಸಿಕ್ಕರೂ ಮಾನ ಬೇಡ ಅಂದ್ಕೊಂಡು ಬಿಚ್ಚೋಲೆಗಳಾಗುತ್ತಿರುವವರನ್ನು ನನ್ನ ಡಿಕ್ಷನರಿಯಿಂದ ಕಿತ್ತು ಹಾಕಿದ್ದೇನೆ. ಅದು ಬಿಡಿ.....
ಇಷ್ಟು ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ಎಂಬುದು ಪಾರ್ಲಿಮೆಂಟಿನಲ್ಲಿ ಮಂಡನೆಯಾಗುತ್ತಿದೆಯೇ? ರಾಜಕಾರಣಿಗಳು ಅದಕ್ಕೆ ಖಂಡಿತಾ ಬಿಡುವುದಿಲ್ಲ. ಮಹಿಳೆಯರಿಗೂ ಸಮಾನತೆಯ ಹಕ್ಕಿದೆ. ಇದಕ್ಕಾಗಿ ನಾನು ಮಹಿಳೆಯರನ್ನು ಹುಟ್ಟಿನಿಂದಲೇ ಮುಂದೆ ತರಲು ತಾಳಿ.... ಸ್ವಲ್ಪ ತಾಳಿ.. ತಾಳಿ ಕಟ್ಟಿರುವೆ. ಈ ಹೆಣ್ಣುಮಗು ಈಗಲೇ ಗೃಹಿಣಿ ಅಂತ ಅನಿಸಿಕೊಳ್ಳಲಿಲ್ಲವೇ? ಸಮಾಜದಲ್ಲಿ ಆಕೆಯ ಸ್ಥಾನ ಮಾನ ಹೆಚ್ಚಾಗುತ್ತದಲ್ಲವೇ... ನೀವೇ ಒಂದು ಬಾರಿ ಯೋಚಿಸಿ ನೋಡಿ.
 
ಇನ್ನೂ ಒಂದು ವಿಷಯವಿದೆ. ಬೆಳೆಯುತ್ತಿರುವ ಹೆಣ್ಣು ಮಕ್ಕಳಿಗೆ ತಾಳಿ ಅನ್ನೋದು ಒಂದು ರೀತಿಯಲ್ಲಿ ಆಯುಧವಿದ್ದಂತೆ. ಸಣ್ಣ ಪ್ರಾಯದಲ್ಲೇ ತಾಳಿ ಕಟ್ಟಿ ಬಿಟ್ಟರೆ ಆಕೆ ಸುರಕ್ಷಿತಳಾಗಿರುತ್ತಾಳೆ. ಅಂತೂ ಸಾಯೋದಿಕ್ಕೆ ಮೊದಲಾದರೂ ಹೆಣ್ಣು ಮಕ್ಕಳು ಉದ್ಧಾರವಾಗುವುದನ್ನು ನೋಡಿದಂತಾಗಿದೆ..
-ಎಂದು ಏದುಸಿರುವ ಬಿಡುತ್ತಾ ಈ ಅಜ್ಜಯ್ಯ ವಿವರಿಸಿದ್ದಾರೆ.
 
ಆದರೂ ಒಂದು ಕೊರಗು ಈ ಅಜ್ಜಯ್ಯನನ್ನು ಬಾಧಿಸುತ್ತಲೇ ಇದೆ. ಈ ಸಣ್ಣ ಮಗುವನ್ನು ತನ್ನ ಮೊಮ್ಮಕ್ಕಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದೇ ಆತನಿಗೆ ಚಿಂತೆಯಂತೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಈ ವಿಚಿತ್ರ ನಾನೆಲ್ಲೂ ಕೇಳಿರ್ಲಿಲ್ಲ. ಅಂದ ಹಾಗೆ 1 + 99 ಕೂಡಾ 100 ಆಗುತ್ತದೆ. ಅದಲ್ಲದೇ ಅಜ್ಜನಿಗೆ ಮೊಮ್ಮಕ್ಕಳಿಂದ ಭಯವೂ ಇರುವುದಿಲ್ಲ.

    ಪ್ರತ್ಯುತ್ತರಅಳಿಸಿ
  2. ಛೇ, ಛೇ, ನಿಮಗೆ ಯಾರಿಗೂ ಗಣಿತ ಸರಿಯಾಗಿ ಗೊತ್ತೇಇಲ್ಲ. ಅದೂ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೂ ಸರಿ ಗೊತ್ತಿಲ್ಲ ಎಂದರೆ ಈ ದೇಶವನ್ನು ಹೆಂಡಕುಡುಕರೇ ಕಾಪಾಡಬೇಕು. ಅಲ್ಲ ಸ್ವಾಮಿ,
    100 + 0 = 100 ಅಲ್ಲವೇ?
    ಅಥವಾ 0 + 100 = 100 ಕೂಡ ಆಗಬಹದು.

    ಅಂದರೆ 100 ವರ್ಷ ಪ್ರಾಯದ ಅಜ್ಜ ಅಥವಾ ಅಜ್ಜಿ ಮದುವೆಯೇ ಅಗದೆ ಉಳಿದಿರುವುದು. ಇಷ್ಟೂ ಗೊತ್ತಿಲ್ಲವೇ? ಹರ ಹರಾ ಶ್ರೀ ಚೆನ್ನ ಪಬ್ಬೇಶ್ವರಾ

    -ಪಬ್

    ಪ್ರತ್ಯುತ್ತರಅಳಿಸಿ
  3. ಎಂಥಾ ಮಾವಿನಯನಸರೇ,
    ಅಜ್ಜನಿಗೆ ಮೊಮ್ಮಕ್ಕಳಿಂದ ಭಯ ಇಲ್ಲ ಅಂತ ಹೇಳ್ತಿದೀರಾ...
    ಅಂದ್ರೆ ನೀವು ಹೇಳೋದು ಮೊಮ್ಮಕ್ಕಳಿಗೆ ಅಜ್ಜನಿಂದ ಭಯೋತ್ಪಾದನೆಯೇ?

    ಪ್ರತ್ಯುತ್ತರಅಳಿಸಿ
  4. ಪಬ್ಬೇಶ್ವರರೇ,
    0 ವಯಸ್ಸಿನವರನ್ನು ಮದುವೆಯಾಗುವ ಅಜ್ಜ-ಅಜ್ಜಿಯರ ಬಗ್ಗೆ ಅಂದ್ರೆ ಹುಟ್ಟೋ ಮೊದಲೇ ಮದುವೆ ಬಗ್ಗೆ ಹೊಸ ಹೊಸ ಸಂಶೋಧನೆಗಳು ಶೀಘ್ರವೇ ನಡೆಯುತ್ತಿವೆ. ಶೀಘ್ರದಲ್ಲೇ ನಿರೀಕ್ಷಿಸಿ...

    ಪ್ರತ್ಯುತ್ತರಅಳಿಸಿ
  5. :ಓ,

    ಇದು ಎಂತ ಲೋಕವಯ್ಯ?
    ಶುನ್ಯ ಬೆರೆತು, ನಮ್ಮ ಕೂಡ, ಇರ್ಬೇಕಾದವ್ನಿಗು
    ಶೂನ್ಯದಿಂದ ಬಹಳ ದೂರ ಇರುವ ಒಗುವಿಗು ಮದುವೆ :ಓ

    ಎಲ್ಲ ಮಾಯೆಯೊ ಪ್ರಭುವೇ ಎಲ್ಲ ಮಾಯೆಯೋ

    ಪ್ರತ್ಯುತ್ತರಅಳಿಸಿ
  6. ಇತ್ತೀಚೆಗೆ ಭೂತ ಮಹಾಶಯರು
    ಹಾಡು ಗುನುಗುನಿಸತೊಡಗಿದ್ದಾರಲ್ಲಾ..
    ಏನು ಮಾಯೆಯೋ ಇದರ ಹಿಂದೆ ಯಾವ ಮಾಯಾವೋ?

    ಪ್ರತ್ಯುತ್ತರಅಳಿಸಿ
  7. ಸ್ವಾಮಿ ಬರೀ ಮುದುಕ್ರಿಗ್ ಮದುವಿ ಮಾಡುಸ್ತೀರೋ, ಅಥ್ವಾ ಯದ್ವಾತದ್ವಾ ಲೆಕ್ಕಾ ಹೇಳ್ತೀರೋ? ನನಿಗಂತೂ ಪಬ್ ಲಾಜಿಕ್ಕ್ ಬಾಳ್ ಇಷ್ಟಾತ್ ನೋಡ್ರಿ!

    ಪ್ರತ್ಯುತ್ತರಅಳಿಸಿ
  8. ಇದು ಒಳ್ಳೆ ಗಣಿತದ ಮದುವೆ ಸೂತ್ರ ಅಯ್ತು ಕಣ್ರೀ..
    ೧೦೦ ಮಾಡೋಕೆ...೦+೧೦೦,೧+೯೯,೨+೯೮..ಹಿಂಗೆ ೫೦ ಕಾಂಬಿನೇಷನ್ ಇವೆ..

    ಅಸತ್ಯಿಗಳು..ಈ ಎಲ್ಲಾ ಕಾಂಬಿನೇಷನ್‍ಗೆ ಒಂದೊಂದು ಉದಾಹರಣೆ ಸಹಿತ ಅಂತ ಮದುವೆ ಸುದ್ದಿ ಪ್ರಕಟಿಸಬೇಕೆಂದು ಅಭಾಬ್ಲಾಪ ವತಿಯಿಂದ ಮನವಿ..

    ಪ್ರತ್ಯುತ್ತರಅಳಿಸಿ
  9. ಹೆಂಡ ಕುಡಿದರೂ ಲಾಜಿಕ್ ಮರೆಯದಿರುವುದೇ ನಮ್ಮ ವಿಶೇಷತೆ.

    -ಪಬ್

    ಪ್ರತ್ಯುತ್ತರಅಳಿಸಿ
  10. ಕಾಳೂ ಅವರೆ,
    ಪಬ್ ಲಾಜಿಕ್ಕು ಅಂದ್ರೆ... ನೀವ್ ಕೂಡ....
    ಶೂನ್ಯದಿಂದ್ಲೇ ಆರಂಭಿಸ್ತೀರಾ.... ?ಅಬ್ಬಬ್ಬಾ.... ಬೇಡ... ಬೇಡ....!!!!

    ಶಿವ್ ಅವರೆ,
    ನೀವು ಹೇಳಿದ ಕಾಂಬಿನೇಶನ್‌ಗಳಿಗೆಲ್ಲಾ ಪ್ರಯೋಗ ಮಾಡಿ ನೋಡ್ತಾ ಕೂತ್ರೆ... ಆ ಹೊತ್ತಿಗಾಗಲೇ
    100-0, 101-1, 102-2... ಅಂತೆಲ್ಲಾ ಶುರುವಾಗ್ಬಿಟ್ಟಿರುತ್ತೆ... ಮಾರಾಯ್ರೇ...!!!!

    ಪಬ್ಅವರೆ,
    ಹೆಂಡ ಕುಡಿದ್ರೂ ಲಾಜಿಕ್ ಮರೆಯಲ್ಲ ಅಂದ್ರೆ... ಏನರ್ಥಾರೀ?
    ಲಾಜಿಕ್ ಇರೋ ಜಾಗ ಸ್ಥಳಾಂತರ ಆಗಿದೆಯಾ?
    ಮಂಡೆಯಲ್ಲಿ ಕಿಡ್ನಿ ಇರೋದಲ್ವೇ? :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D