(ಬೊಗಳೂರು ಕಲ್ಲುಹೃದಯ ಬ್ಯುರೋದಿಂದ)
ಬೊಗಳೂರು, ಆ.24- ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂಬ ವರದಿ ಪ್ರಕಟವಾದ ಮೇಲೆ ಎಚ್ಚೆತ್ತ ಬೊಗಳೆ-ರಗಳೆಯ ಛಿದ್ರಹೃದಯಾಲಯ ಬ್ಯುರೋ, ಈ ಬಗ್ಗೆ ಭಾರವಾದ ಹೃದಯದಿಂದಲೇ ಅನ್ವೇಷಣೆ ಆರಂಭಿಸಿದಾಗ ಬಹಿರಂಗಪಡಿಸಲಾರದ ವಿಷಯಗಳೆಲ್ಲಾ ಬಯಲಾದವು.
 
ಬೊ.ರ. ಬ್ಯುರೋ ತನಿಖೆಯ ಪ್ರಕಾರ, ವಿಶೇಷವಾಗಿ ಕಾಲೇಜುಗಳಿರುವ ಪ್ರದೇಶದಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಾಸ್ಟೆಲ್, ಬಾಡಿಗೆ ಕೊಠಡಿ ಮುಂತಾದೆಡೆ ಈ ಹೃದ್ರೋಗ ಹೆಚ್ಚಾಗಿ ಕಂಡುಬರುತ್ತಿದೆ.
 
ಇದಕ್ಕೆ ಹಲವಾರು ಕಾರಣಗಳಿವೆಯಾದರೂ ಎಲ್ಲಕ್ಕಿಂತ ಪ್ರಮುಖವಾದ ಕಾರಣವೆಂದರೆ ಇತ್ತೀಚೆಗೆ ದೇಶಾದ್ಯಂತ ಆಚರಿಸಲಾದ ರಕ್ಷಾ ಬಂಧನ ಎಂಬುದು ಇತ್ತೀಚೆಗೆ ಪತ್ತೆಯಾಗಿದೆ. ತೀವ್ರ ಕಾಟ ಕೊಡುತ್ತಿದ್ದ ಅಪಾಪೋಲಿಗಳಿಗೆ ಬುದ್ಧಿ ಕಲಿಸಲು ತರುಣೀಮಣಿಯರು ಈ ರಕ್ಷಾ ಬಂಧನ ಕಾರ್ಯಾಚರಣೆಯನ್ನು ಸದುಪಯೋಗಪಡಿಸಿಕೊಂಡಿದ್ದರು.
 
ಇನ್ನು ಕೆಲವೆಡೆ, ತೀವ್ರ ಕಾಟ ಕೊಡುತ್ತಿದ್ದ ಕೆಲವು ರಸಿಕ ಶಿಖಾಮಣಿಗಳ ಪಾಲಿಗೆ ರಮಣಿಯರು 'ರುದ್ರ'ರಮಣಿಯರಾಗಿ ಕಾಡಿದ್ದು ಮತ್ತೊಂದು ಕಾರಣ.
 
ಆದುದರಿಂದ, ರಕ್ಷಾ ಬಂಧನಕ್ಕೂ ದೇಶದಲ್ಲಿ ಹೆಚ್ಚಿದ ಹೃದಯ ರೋಗಗಳಿಗೂ ಸಂಬಂಧವಿದೆ ಎಂಬ ಅಂಶವನ್ನು ಬಯಲಾಗಿಸಿದ್ದಕ್ಕಾಗಿ ಭಾರತ ರತ್ನ, ಜಾಗತಿಕ ರತ್ನ, ಮತ್ತಿತರ 'ರತ್ನ'ಳಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಈಗಾಗಲೇ ಅರ್ಜಿಗೆ ಆಕೆಯಿಂದ ಯಾವುದೇ ಉತ್ತರ ಬಾರದಿರುವ ಹಿನ್ನೆಲೆಯಲ್ಲಿ ಹೃದ್ರೋಗಿಗಳ ಸಂಖ್ಯೆಗೆ ಇನ್ನೂ ಒಂದು ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.
 
ಇದೂ ಅಲ್ಲದೆ, ಭಾರತೀಯರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳದಿದ್ದರೆ ಹೃದ್ರೋಗಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ ಎಂದು ವರದಿಗಳು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಜೀವನ ಶೈಲಿ ಬದಲಾವಣೆ ಹೇಗೆ ಮಾಡಿಕೊಳ್ಳಬಹುದು ಎಂಬುದರ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
 
ಹದಿಹರೆಯದ ಹುಡುಗರು ಹುಡುಗಿಯರತ್ತ ಕಣ್ಣೆತ್ತಿ ನೋಡಬಾರದು (ಹಾಗೂ vice versa) ಮತ್ತು ತಮ್ಮ ತಮ್ಮ ಹೃದಯಗಳನ್ನು ಬಚ್ಚಿಟ್ಟುಕೊಳ್ಳದೆ ಯಾರಿಗೂ ಗೊತ್ತಾಗದ ಕಡೆಗಳಲ್ಲಿ ಹೋಗಿ ಬಾಂಬ್ ಬಿಚ್ಚಿಡಬೇಕು ಎಂಬ ಸಾಧ್ಯತೆಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
 
ಮಾನವನೂ ಪ್ರಾಣಿಗಳಲ್ಲೊಂದಾಗಿರುವುದರಿಂದಾಗಿ ನಾಯಿಗಳ ಈರ್ಷ್ಯೆ ಕೂಡ ಹೃದ್ರೋಗ ಹೆಚ್ಚಳಕ್ಕೆ ಕಾರಣವೆಂಬ ಅಂಶವೂ ಸಂಶೋಧನೆಗೆ ವಸ್ತುವಾಗತೊಡಗಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಕಾಲೇಜು ಮಕ್ಕಳಿಗೂ ಹೃದಯವಿದೆಯೇ? ಆ ಹೃದಯಗಳಿಗೂ ರೋಗ ಬರುವುದೇ? ಮತ್ತೆ ಕೆಲವು ಹೆಣ್ಣು ಮಕ್ಕಳು ಹೃದಯವಿಲ್ಲದ ಹುಡುಗರು ಅಂತ ಹಲುಬುತ್ತಿರುತ್ತಾರೆ.

  ಅದೇನೋ ಭಯಾಗ್ರಾದಿಂದ ಹೃದ್ರೋಗ ಬರತ್ತೆ ಅಂತ ಯಾರೋ ಹೇಳ್ತಿದ್ರು. ಅದು ನಿಜವೇ?

  ಹೃದಯವನ್ನು ಬಿಚ್ಚಿಟ್ಟು ಕಾಲೇಜಿಗೆ ಹೋದರೆ ಒಳ್ಳೆಯದಲ್ಲವೇ?

  ಈ ಕಾಲೇಜು ಹುಡುಗರನ್ನು ಕಂಡರೆ ನಾಯಿಗಳಿಗೇಕೆ ಈರ್ಷ್ಯೆ?

  ಯಥಾಪ್ರಕಾರ ನನ್ನ ಪ್ರಶ್ನೆಗಳಿಗೆ ಸರಿಯುತ್ತರ ನೀಡದಿದ್ದರೆ ತಲೆ ಹೋಳು - ಬೇತಾಳ ಮರಳಿ ಮರಕ್ಕೆ.

  ReplyDelete
 2. ಶ್ರೀನಿವಾಸರೆ,
  ಶಾಪಗ್ರಸ್ತ ಇಂದ್ರನಿಗೆ ಮೈಯೆಲ್ಲಾ ಸಹಸ್ರ ಕಣ್ಣು ಇದ್ದಂತೆ, ಕಾಲೇಜಿನಲ್ಲಿರೋರಿಗೆ ಮೈಯೆಲ್ಲಾ ಹೃದಯಗಳಂತೆ.

  ಹೃದಯ ಬಿಚ್ಚಿಟ್ಟು ಹೋದ್ರೆ, ಯಾರಾದ್ರೂ ಕದೀತಾರೆ... ಬಚ್ಚಿಟ್ಟುಕೊಂಡ್ರೆ ತಾನೇ ತಾನಾಗಿ ಒಡೆಯುತ್ತದೆ... ಅದಕ್ಕಾಗಿ ಯಾರೆದುರಾದರೂ ಬುತ್ತಿ ಬಿಚ್ಚಿದ್ರೆ ಹಂಚಿಕೊಂಡು ಆರಾಮವಾಗಿರಬಹುದಂತೆ.

  ಕೊನೆಯ ಪ್ರಶ್ನೆಗೆ ಉತ್ತರ ಕೊಟ್ಟರೆ ನನ್ನ ತಲೆ ಖಂಡಿತಾ ಹೋಳಾದೀತು :)

  ReplyDelete
 3. ಅಸತ್ಯಿಗಳೇ,
  ಹೃದಯಕ್ಕೆ ಹೆಂಗೆ ರೋಗ ಬರುತ್ತೆ??
  ನಾನು ಅದು ಯಾವುದೋ ಲತಾಕ್ಕ ಹಾಡಿದ ಹಾಡು ನಂಬಿದ್ದೆ
  "ಶೀಶಾ ಯಾ ದಿಲ್ ಆಕಿರ್ ಟೂಟ್ ಜಾತಾ ಹೈ"

  ಈಗ ಹೇಳಿ ಅಂತಾ ಗಾಜಿನಂತ ಹೃದಯಕ್ಕೆ ರೋಗ ಹೆಂಗೆ ಬರುತ್ತೆ??

  ReplyDelete
 4. ಶಿವ್ ಅವರೆ,
  ಗಾಜಿಗೆ ಕಲ್ಲೇಟು ಕೊಟ್ರೆ ಟೂಟ್ ಆಗೋ ಹಾಗೆಯೇ ದಿಲ್‌ಗೆ ಕಣ್ಣೇಟು ಬಿದ್ರೆ ಪೀಸ್ ಪೀಸ್ ಆಗುತ್ತೆ ಅಂತ ಅನನುಭವಿಗಳ ನುಡಿ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post