Subscribe Us

ಜಾಹೀರಾತು
header ads

ಸಾಯೋ ಕಲೆ ಕಲಿಕಾ ಕೇಂದ್ರ ಮುಚ್ಚಲು ನಿರ್ಧಾರ !

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ಆ.17- ಮಾನವರಿಗೆ ಬದುಕುವ ಕಲೆ ಎಷ್ಟು ಅಗತ್ಯವೋ ಸಾಯುವ ಕಲೆಯೂ ಅಷ್ಟೇ ಅಗತ್ಯ ಎಂದು ಜೈನ ಯತಿಗಳಾದ ಶ್ರೀ ತರುಣಸಾಗರ ಮುನಿಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ಹೇಳಿಕೆ ನೀಡಿರುವುದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋ ಅತ್ತ ಇಣುಕಿ ನೋಡಿದಾಗಲೇ ಕೋಲಾಹಲ ಉಂಟಾದ ಪ್ರಕರಣವೊಂದು ಎಲ್ಲೂ ವರದಿಯಾಗಿಲ್ಲ!!!
 
 ಈ ಮಹಾತ್ಮರ ಮಾತಿನಿಂದ ಪ್ರೇರಣೆ ಪಡೆದಿರುವ ಹಣಹಣವೆಂದರೆ ಹೆಣವೂ ಬಾಯ್ಬಿಡುವ ಉದ್ಯಮಿ ಸಂಘವು, ಸಾಯುವ ಕಲೆ ಕಲಿಸಿಕೊಡುವ ಶಿಕ್ಷಣ ಸಂಸ್ಥೆಗಳನ್ನು ಭಾರೀ ಸಂಖ್ಯೆಯಲ್ಲಿ ಹುಟ್ಟು ಹಾಕಲು ನಿರ್ಧರಿಸಿರುವುದು ದೇಶಾದ್ಯಂತ ಬೇರೊಂದು ಕಾರಣಗಳಿಗೆ ಆಕ್ರೋಶ ಹುಟ್ಟಲು ಕಾರಣವಾಗಿದೆ. ಆದರೆ ಸಾಯೋ ಕಲೆಯ ಕುರಿತು ಆಕ್ರೋಶ "ಹುಟ್ಟಿದ್ದು" ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿರುವುದು ಬೇರೆ ಸಂಗತಿ.
 
ಬದುಕುವ ಕಲೆ ಕಲಿಸಿಕೊಡುವ ನಿಟ್ಟಿನಲ್ಲಿ ದೇಶಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳು ಭಾರಿ-ಭರ್ಜರಿ ಹಣ ಸಂಪಾದನೆಗಳಲ್ಲಿ ತೊಡಗಿವೆ. ಆದರೆ ಸಾಯುವ ಕಲೆ ಕಲಿಸಿಕೊಡಲು ಯಾವುದೇ ಶಿಕ್ಷಣ ಸಂಸ್ಥೆಗಳಿಲ್ಲ ಎಂಬುದನ್ನು ಮನಗಂಡ ಅಖಿಲ ಭಾರತ (ಬಡಪ್ರಜೆಗಳ) ಜೀವ ಹಿಂಡುವವರ ಸಂಘವೇ ಈ ಹೊಸ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅದಕ್ಕೆ "ಪರಮೋನ್ನತ" ಶಿಕ್ಷಣ ಎಂದು ಹೆಸರಿಸಲಾಗಿದೆ. ಪರಲೋಕ ಸೇರಿಕೊಂಡು ಉನ್ನತ ಮಟ್ಟಕ್ಕೇರಿಸುವುದೇ ಈ ಕಲೆಯ ಪರಮ ಗುರಿಯಾಗಿರುವುದರಿಂದ ಈ ಹೆಸರನ್ನಿರಿಸಲಾಗಿದೆ ಎಂಬುದು ಈ ಶಿಕ್ಷಣ ಕ್ಷೇತ್ರದ "ಉದ್ಯಮ" ಹುಟ್ಟುಹಾಕಿರುವ ಜಗತ್ತಿನ ಖ್ಯಾತ ವೈನೋದ್ಯಮಿ ಡಾ.ಡೆತ್ ಅವರ ಅಭಿಪ್ರಾಯ.
 
ಆದರೆ, ಸಾಯೋ ಕಲೆ ಶಿಕ್ಷಣ ಕೇಂದ್ರ ಹುಟ್ಟು ಹಾಕಿರುವ ಬಗ್ಗೆ ಆಕ್ರೋಶಗೊಂಡಿರುವ ಭಾರತೀಯ ಬಡ ಪ್ರಜೆಗಳ ವೇದಿಕೆಯು, ನಾವೀಗಾಗಲೇ ಸಾಯೋ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ, ಏರಿದ ಬೆಲೆಗಳ ಮಧ್ಯೆ ಜೀವನ ಸಾಗಿಸುತ್ತಿರುವುದೇ ಒಂದು ಜೀವಂತವಾಗಿ ಸಾಯೋ ಕಲೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಂಥ ಕಲೆಯನ್ನು ನಮಗೆ ಸರಕಾರವೇ ಉಚಿತವಾಗಿ ಕಲಿಸಿಕೊಡುತ್ತಿರುವಾಗ ಹಣ ತೆತ್ತು ಸಾಯಬೇಕೇಕೆ ಎಂಬುದು ಅವರ ಪ್ರಶ್ನೆ.
 
ಅಖಿಲ ಭಾರತ ಕುಡುಕರ ಸಂಘವೂ ಈ ಪ್ರಶ್ನೆಗೆ ಧ್ವನಿಗೂಡಿಸಿದೆ. ಬಹುರಾಷ್ಟ್ರೀಯ ಕಂಪನಿಗಳು Pesti-cola ಕುಡಿಸುತ್ತಿವೆ. ಇದನ್ನು ಮೇಲ್ವರ್ಗದ ಮಂದಿಯೇ ಹೆಚ್ಚು ಸೇವಿಸುತ್ತಾರೆ. ಆದುದರಿಂದ ಅವರಿಗೂ ಸಾಯೋ ಕಲೆ ಶಿಕ್ಷಣ ಕೇಂದ್ರದ ಅಗತ್ಯವಿಲ್ಲ. ಮತ್ತೊಂದೆದೆ, ಗದ್ದೆ, ತೋಟಗಳಿಗೆ ತಗುಲುವ ಕೀಟ ಬಾಧೆ ನಿವಾರಣೆಗೂ ಈ Pesti-cola ಬಳಸಲಾಗುತ್ತಿದ್ದು, ಕೀಟ ಮತ್ತಿತರ ಪ್ರಾಣಿಗಳಿಗೂ ಸಾಯೋ ಕಲೆ ಕರಗತವಾಗಿಬಿಟ್ಟಿದೆ ಎಂದು ಸಂಘದ ಮಹಾನ್ ಕುಡಿರಾಯ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಅಖಿಲ ಭಾರತ ಧನಪಿಶಾಚಿಗಳ ಸಂಘವೂ ಆಕ್ರೋಶ ಹುಟ್ಟೋ ಕಲೆಗೆ ಧ್ವನಿಗೂಡಿಸಿದೆ. ಸೀಮೆಎಣ್ಣೆ, ಪೆಟ್ರೋಲ್ ಮತ್ತಿತರ (ಏರೋ ಬೆಲೆಗಳಿಂದಾಗಿ) ಅಕ್ಷರಶಃ ಅ-ಮೂಲ್ಯ ವಸ್ತುಗಳ ಮೂಲಕ ನಾವೀ ಕಲೆಯನ್ನು ವರದಕ್ಷಿಣೆ ತಾರದ ವಧು ದಹನಕ್ಕಾಗಿ ಕರಗತ ಮಾಡಿಕೊಂಡಿದ್ದೇವೆ. ನಮಗಂತೂ ಅದರ ಅಗತ್ಯವಿಲ್ಲ, ಇದು ಜನರನ್ನು ಸುಲಿಯೋ ವಿಧಾನ ಎಂದಿದ್ದಾರೆ ಸಂಘದ ಅಧ್ಯಕ್ಷೆ ವರದಕ್ಷಿಣೇಶ್ವರಿ ಅವರು.
 
ಇದಲ್ಲದೆ, ಸಾಯೋ ಕಲೆ ಕರಗತ ಮಾಡಿಕೊಂಡು ಮುಂದಿನ ಪೀಳಿಗೆಗೆ ದಾರಿ ದೀಪವಾಗುತ್ತಿರುವವರ ಸಾಲಿನಲ್ಲಿ ಪರೀಕ್ಷೆಯಲ್ಲಿ ಫೇಲಾಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪ್ರೇಮ ವೈಫಲ್ಯ ಅನುಭವಿಸುವ ಯುವಜನತೆ, ಪ್ರೇಮ ಸಾಫಲ್ಯವಾದರೂ ಮನೆಯವರ ಕೋಪಕ್ಕೆ ತುತ್ತಾಗುವವರು, ಕಿರುಕುಳ ಅನುಭವಿಸುವವರು, ಸಾಲದ ಬಾಧೆಯಿಂದ ನೊಂದವರು, ಖಿನ್ನತೆಯಿಂದ ಬಳಲುತ್ತಿರುವವರು.... ಮುಂತಾದವರ ದೊಡ್ಡ ಪಟ್ಟಿಯೇ ಇದೆ. ಅವರು ತಮ್ಮದೇ ಆದ ವಿಧಿ ವಿಧಾನಗಳ (ತುಂಡು ಹಗ್ಗ, ಒಂದು ಪುಟ್ಟ ಬಾಟಲಿ ವಿಷ, ಒಂದಿಷ್ಟು ನಿದ್ದೆ ಮಾತ್ರೆಗಳು, ಬಾವಿ-ಕೆರೆ ಮುಂತಾದ ನೈಸರ್ಗಿಕ ಸಂಪತ್ತುಗಳು) ಮುಖಾಂತರ ಸಾಯೋ ಕಲೆಯನ್ನು ಪ್ರದರ್ಶಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಹೇಳುತ್ತಾ ಈ ಸಮುದಾಯವೂ ಕೂಡ ಬಾವಿಗೆ ಹಾರಲು... ಅಲ್ಲಲ್ಲ ಬೀದಿಗಿಳಿಯಲು... ಸಿದ್ಧತೆ ಮಾಡಿಕೊಳ್ಳುತ್ತಿದೆ.
 
ಹಣವಿದ್ದ ಜನಾಂಗದವರು ಅತ್ಯಾಧುನಿಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದು, ಅವರು ಏಡ್ಸ್ ಮುಂತಾದ ಹೊಸ ಮಾದರಿಯ ಮಾರ್ಗವನ್ನು ಅರಸುತ್ತಾ ನಿಧಾನವಾಗಿ ಸಾಯಲು ಹೋಗುತ್ತಿದ್ದಾರೆ ಎಂಬ ಅಂಶವೂ ಇದೇ ಸಂದರ್ಭ ಬಯಲಾಗಿದೆ.
 
ಕೊಟ್ಟ ಕೊನೆಯಲ್ಲಿ ಬಂಡಾಯವೆದ್ದವರು ಭಾರತ ಮಣ್ಣಿನ ಕೋಣೆ ಕೋಣೆಯಲ್ಲೂ ಸೇರಿಕೊಂಡುಬಿಟ್ಟು, ನಮ್ಮವರೇ ಆಗಿಬಿಟ್ಟಿರುವ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳು. ನಾವು ಇಷ್ಟೆಲ್ಲಾ ಕಷ್ಟಪಟ್ಟು ಸಾಯಿಸೋ ಕಲೆಯನ್ನು ಕರಗತ ಮಾಡಿಕೊಂಡಿರುವಾಗ ನೀವು ಅವರಿಗೆ ಸಾಯೋ ಕಲೆ ಹೇಗೆ ಹೇಳಿಕೊಡುತ್ತೀರಿ ಅಂತ ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಅವರು ಆರ್‌ಡಿಎಕ್ಸ್‌ನಂತೆ ಸಿಡಿದೆದ್ದಿದ್ದಾರೆ.
 
ಬೊಗಳೆ-ರಗಳೆಯಲ್ಲಿ ಈ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆಯೇ ಕಳವಳಗೊಂಡಿರುವ ಡಾ.ಡೆತ್ ಅವರು, ಸಾಯೋ ಕಲೆ ಶಿಕ್ಷಣದಿಂದ ಹಣ ಮಾಡುವುದು ಈ ದೇಶದಲ್ಲಿ ಸರ್ವಥಾ ಸಾಧ್ಯವಿಲ್ಲ ಎಂದುಕೊಂಡು ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಇತ್ತೀಚೆಗೆ ಬಂದಿರುವ ವರದಿಗಳು ತಿಳಿಸಿವೆ.

Post a Comment

9 Comments

 1. ಎಲ್ಲೇ ಏನಾದರೂ, ಮುಂಬಯಿ ಪೂರ್ತ ಮಳೆಯಲ್ಲಿ ಮುಳುಗಿದರೂ, ಕಾಮೆಂಟಿಸುವುದನ್ನು ಬಿಡದ ಮಾವಿನ ರಸಾಯನರು ಇನ್ನೂ ಯಾಕೆ ಕಾಮೆಂಟಿಸಿಲ್ಲ?

  -ಪಬ್

  ReplyDelete
 2. ಅನಾನಸರ ಹತ್ತಿರ ಬಂದ್ರೆ ನನಗೆ ಕೈ ಕಾಲು ನೆಟ್ಟಗಿರೋಲ್ಲ. ಅದಕ್ಕೇ ದೂರದಿಂದ ನೋಡ್ತಾ ಇದ್ದೆ. ಅದೂ ಅಲ್ದೇ ನನಗೆ ಸಾಯೋಕ್ಕೆ ಇಷ್ಟ ಇಲ್ಲ - ಇನ್ನು ಆ ಕಲೆ ಯಾಕೆ ಬೇಕು. ಬೋರಣ್ಣನವರೂ ಆ ಕಲಿಕಾ ಕೇಂದ್ರವನ್ನು ಮುಚ್ಚಿಸಬೇಕು ಅಂತ ಹೇಳ್ತಿರೋದ್ರಿಂದ ನಾನು ಅವರೊಂದಿಗೇ ಇರುವೆ.

  ಅಂದ ಹಾಗೆ ಅನಾನಸ ರಸ ಎಲ್ಲಿ ಸಿಗತ್ತೆ (ರಸ್ತೆ, ಬಡಾವಣೆ, ನಗರ, ಜಿಲ್ಲೆ)?

  ReplyDelete
 3. ಅನಾನಸ್ ರಸ ಮತ್ತು ಮಾವಿನರಸಗಳು ನಮ್ಮ ಬೊಗಳೆ-ರಗಳೆ ಬ್ಯುರೋ ಎದುರು ನಿಂತು ಎಲ್ಲರ ಬಾಯಲ್ಲಿ ನೀರೂರಿಸುತ್ತಿರುವುದನ್ನು ನೋಡಿದರೆ ನಮ್ಮ ಬೊಗಳೆ ಒದ್ದೆಯಾಗುವ ಆತಂಕವಿದೆ.


  ಮಾವಿನರಸ ಗೊತ್ತಿಲ್ಲ, ಆದರೆ ಅನಾನಸ್ ರಸವನ್ನು ತುಂಬಾ ದಿನ ತೆಗೆದಿಟ್ಟರೆ... ಅದು ಅಮಲ್ ರಸ ಆಗುತ್ತದೆಯೋ... ಪಬ್ಬಿನಲ್ಲೂ ಅದನ್ನೇ ಕೊಡುತ್ತಾರೋ...?

  ReplyDelete
 4. anAnasa amala rasa agodara bagge doubt ide anweShigaLe,adeniddaru nimage gottalla hEge agutte aMta..
  innu kola-hala anno padada baLake nannanu confusion taLLutte. A kAraNa i padada baLakeyAdaga braketnalli aMdre KaMsadalli vivaraNe kottew nannaMta baDapAyigaLige help agutte...
  Srigale,neevu dayaviTTu nimma varuNadevanige heLi maLe kaDime madsi...alli( south maharaShtadalli) maLeyadare aLodu naavu.( bagalkot mattu bijapur jillegaLu).

  ReplyDelete
 5. ಸಾಯೋ ಆಸೆ ಇರುವ ನರರೇ ಸಿಗದ ಕಾರಣ ಸಾಯೋ ಕಲೆ ಕಲಿಕಾ ಕೇಂದ್ರಕ್ಕೆ 'ಸಾಯೋನಾರಾ... ಸಾಯೋನಾರಾ...'

  (ಜಪಾನಿ ಭಾಷೆಯಲ್ಲಿ 'ಸಾಯೋನಾರಾ' = adieu/ adios/ goodbye/ so long)

  ReplyDelete
 6. ಮಹಾಂತೇಶರೇ,
  ಕಂಸನನ್ನು ನಿಮಗೇ ಮಾರುತ್ತೇವೆ.... ನಮಗೆ ಬೇಡ....
  ಆಲ್ಕೋಹಾಲಾಹಲವನ್ನು ಮಾತ್ರವೇ ನಿಮಗೆ ಉಚಿತ ಕೊಡುತ್ತೇವೆ. ಆಗದೆ?

  ReplyDelete
 7. ಜೋಷಿ ಅವರೆ,
  ಪ್ರಜೆಗಳು ಸಾಯೋಣವಾ ಅಂತ ಕೇಳುತ್ತಾ ಇರುವಾಗ
  ಪ್ರಭುಗಳು ಸಾಯೋ....ನರಾ ಅಂತ ಹೇಳುತ್ತಾರೆ.

  ReplyDelete
 8. ಅಸತ್ಯಿಗಳೇ,

  ಇದು ಒಳ್ಳೆ ಬೊಗಳೆ-ರಗಳೆ ಯವರಿಗೆ ಹೆಂಗೆ ಬೊಗಳೆ ಬಿಡೋದು ಅಂತಾ ಟ್ರೈನಿಂಗ್ ಕೊಡ್ತೀವಿ ಬನ್ರೀ ಅನ್ನೋ ತರ ಆಯ್ತು..

  ಪಾಪ..ಆ ಸಾಯೋ ಕ್ಲಾಸ್‍ನವರಿಗೆ ಗೊತ್ತಿಲ್ಲ..ನಾವು ಭಾರತೀಯರು ಸಾವಿನಲ್ಲಿ ಬದುಕು ಕಾಣೋರು ಅಂತಾ..

  ReplyDelete
 9. ಹೌದು ಹೌದು ಶಿವ್ ಅವರೆ,
  ಭಾರತೀಯರಲ್ಲಿ ಹಲವರು ಸಾವಿನಲ್ಲೂ ದುಡ್ಡು ಮಾಡುವುದು ಹೇಗೇಂತ ಯೋಚಿಸುತ್ತಾ ತಮ್ಮ ತಮ್ಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ....
  ಹೆಣ ಸುಡುವುದಕ್ಕೂ ಕೈಚಾಚುತ್ತಾರೆ, ಡೆತ್ ಸರ್ಟಿಫಿಕೆಟಿಗೂ ಕೇಳುತ್ತಾರೆ... ಎಲ್ಲಾ ದುಡ್ಡು ಮಾಡೋದೇ ಆಯ್ತು...

  ReplyDelete

ಏನಾದ್ರೂ ಹೇಳ್ರಪಾ :-D