(ಬೊಗಳೂರು ವೇತನ ಹೆಚ್ಚಳ ಬ್ಯುರೋದಿಂದ)
ಬೊಗಳೂರು, ಆ.18- ಕೇಂದ್ರದ ಯುಪಿಎ ಸರಕಾರವು ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಾ, ಕೂಗಾಟ, ಕಲಾಪ ಬಹಿಷ್ಕಾರ, ಪರಸ್ಪರ ಕೆಸರು ಎರಚಿಕೊಳ್ಳುವುದು, ಕಪ್ಪು ಮಸಿ ಬಳಿಯುವುದು, ಕಾಲೆಳೆಯುವುದೇ ಮೊದಲಾದ ಅದ್ಭುತ ಕೌಶಲ್ಯಗಳನ್ನು ಪ್ರದರ್ಶಿಸುತ್ತಿರುವ ಸಂಸತ್ ಸದಸ್ಯರ ವೇತನವನ್ನು ಅತ್ಯಲ್ಪ ಪ್ರಮಾಣದಲ್ಲಿ ಏರಿಸುವುದು ಜನಸಾಮಾನ್ಯರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
 
100 ಕೋಟಿ ಭಾರತೀಯರ ಧ್ವನಿಯನ್ನು 100 ಮೀಟರ್ ವ್ಯಾಪ್ತಿಯ ಸಂಸತ್ತಿನಲ್ಲಿ ತುಂಬಿಸುವುದೇನು ಕಾಲ್ಚೆಂಡಾಟ ಆಡಿದಷ್ಟು ಸುಲಭವೇ? ಯಾರು ಏನು ಹೇಳಿದರು ಎಂದು ಯಾರಿಗೂ ಗೊತ್ತಾಗದಷ್ಟು ಬಲವಾಗಿ ಅರಚಾಡುವುದು ಸುಲಭದ ಕೆಲಸವೇ? ಎಂದು ಪ್ರಶ್ನಿಸಿರುವ ಜನಸಾಮಾನ್ಯರು, ಇದಕ್ಕಾಗಿ ಅವರು ಮೈಕ್ ಇಲ್ಲದೆ ತಮ್ಮ ಧ್ವನಿಯನ್ನು ಪಣವಾಗಿಡುತ್ತಿದ್ದಾರೆ. ಅಷ್ಟೊಂದು ಗದ್ದಲವೆಬ್ಬಿಸಲು ಇಷ್ಟು ಕಡಿಮೆ ಮೊತ್ತದ ಸಂಬಳ ಕೊಡುವುದೇ? ಎಂಬುದು ಅವರ ಆಕ್ರೋಶದ ಮೂಲ ಕಾರಣ.
 
ಈಗ 40 ಸಾವಿರ ರೂ. ತಿಂಗಳ ವೇತನ-ಭತ್ಯೆ ಇತ್ಯಾದಿ ಪಡೆಯುತ್ತಿರುವ ಸಂಸದರ ಗಂಟಿನ ಮೊತ್ತವನ್ನು ಕೇವಲ 25 ಸಾವಿರದಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿರುವುದು ಪ್ರಜಾ ಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಬಡಪ್ರಜೆಗಳು ತಮ್ಮ "ಪ್ರಭು"ಗಳ ಪರವಾಗಿ ಧ್ವನಿಯೆತ್ತತೊಡಗಿದ್ದಾರೆ.
 
ಇಷ್ಟು ಕಡಿಮೆ ಸಂಬಳ ಕೊಟ್ಟರೆ ಪ್ರಜೆಗಳೇ ಪ್ರಭುಗಳು ಎಂಬ ಮಾತಿಗೆ ಬೆಲೆ ಎಲ್ಲಿ ಬಂತು? ಪ್ರಜೆಗಳಾಗಿರುವ ಅವರು ಕೂಡ ಪ್ರಭುಗಳಾಗುವುದು ಯಾವಾಗ? ದೇಶಾದ್ಯಂತ ಈ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಸರಕಾರದ ಖಜಾನೆಯಲ್ಲಿ ತುಂಬುವ ಹಣ ಎಲ್ಲಿಗೆ ಹೋಗುತ್ತದೆ. ಇದೆಲ್ಲವೂ ಅವರಿಗಾಗಿಯೇ ಅಲ್ಲವೇ? ಎಂಬ ಪ್ರಶ್ನೆಗಳು ಕಾಡತೊಡಗಿವೆ. ಅಲ್ಪ ಪ್ರಮಾಣದ ವೇತನ ಏರಿಕೆ ಪ್ರಕಟಿಸಲಾಗಿದ್ದು, ಉಳಿದ ಹಣ ಎಲ್ಲಿಗೆ ಹೋಗುತ್ತದೆ, ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
 
ಬೆದರಿಕೆ ಪತ್ರ ಬರೆಯುವುದಕ್ಕಾಗಿ ಇದುವರೆಗೆ ನೀಡಲಾಗುತ್ತಿದ್ದ 1000 ರೂ. ಮಾಸಿಕ ಭತ್ಯೆಯನ್ನು ಕೇವಲ 5 ಸಾವಿರಕ್ಕೆ ಏರಿಸಲಾಗಿದೆ. ಕನಿಷ್ಠ ಹತ್ತಿಪ್ಪತ್ತು ಸಾವಿರವಾದರೂ ಮಾಡಬೇಕಿತ್ತು. ಸಂಸದರ ಪ್ರವಾಸ ಭತ್ಯೆಯಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ. ಕಿಲೋಮೀಟರಿಗೆ ಅತ್ಯಂತ ನಿಕೃಷ್ಟವೆನ್ನಬಹುದಾದಷ್ಟು ಅಂದರೆ 5 ರೂ. (8 ಇದ್ದದ್ದು 13 ರೂ.) ಮಾತ್ರ ಹೆಚ್ಚಿಸಲಾಗಿದೆ.
 
ಗೂಂಡಾ ಮಿತ್ರರೊಂದಿಗೆ ಮಾತನಾಡಲು, ಸುಪಾರಿ ದೊರಕಿಸಲು, ವಿರೋಧಿಗಳನ್ನು ಮಟ್ಟ ಹಾಕಲು, ಸುಳ್ಳು ಆರೋಪ ಹೊರಿಸಲು, ಲಂಚ ತೆಗೆದುಕೊಳ್ಳಲು, ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುವ ನಿಧಿಯ ದುರ್ಬಳಕೆಗೆ ಈಗಿನ ಜಮಾನಾದಲ್ಲಿ ಎಷ್ಟೊಂದು ಕಷ್ಟ-ನಷ್ಟ, ಅಡೆ ತಡೆಗಳಿವೆ. ಇವುಗಳಿಂದ ಪಾರಾಗಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದ ಅರಿವು ಸರಕಾರಕ್ಕಿದೆಯೇ?
 
ನಮ್ಮನ್ನಾಳುವವರಿಗೆ ತಿರುಗಾಡಲು ಒಂದು ಒಳ್ಳೆಯ ಗೂಟದ ಕಾರಿಲ್ಲ. ಅತ್ಯಂತ ಕಡಿಮೆ ಬೆಲೆಯ ಭಾರತೀಯ ವಾಹನಗಳನ್ನು ಒದಗಿಸಲಾಗುತ್ತಿದೆ. ಸಮಾಜಸೇವೆ ಮಾಡುವುದಕ್ಕೆ ತಲಾ ನೂರಾರು ಕೋಟಿ ರೂ. ಬೆಲೆಯ ವಿದೇಶೀ ಕಾರುಗಳೇ ಸೂಕ್ತವಲ್ಲವೇ? ಎಂಬುದು ಸಾಮಾನ್ಯ ನಾಗರಿಕನನ್ನು ಕಾಡುವ ಪ್ರಶ್ನೆ.
 
ಸಂಸತ್ತಿನಲ್ಲಿ ಸಂಸದರ ವೇತನ ಹೆಚ್ಚಿಸುವ ನಿರ್ಣಯ ಮಂಡನೆ ವೇಳೆ ಎಲ್ಲಾ ಸಂಸದರೂ ಕೋಪಗೊಂಡಿದ್ದುದು ಸ್ಪಷ್ಟವಾಗಿತ್ತು. ಎಲ್ಲರೂ ಕೂಡ ಇವತ್ತೊಂದು ದಿನವಾದರೂ ಮೌನವಾಗಿಯೇ ತಮ್ಮ ಪ್ರತಿಭಟನೆ ಸಲ್ಲಿಸೋಣ ಎಂದುಕೊಂಡು ಪಕ್ಷಭೇದ ಮರೆತು ಸುಮ್ಮನೇ ಕುಳಿತು ಒಗ್ಗಟ್ಟು ಪ್ರದರ್ಶಿಸಿದ್ದರು. ಇದು ಸಂಸದೀಯ ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಪ್ರಕಟವಾಗುವ ಒಗ್ಗಟ್ಟು.
 
ಅವರೆಲ್ಲಾ ಮೌನವಾಗಿಯೇ ಕುಳಿತಾಗ ಈ ನಿರ್ಣಯ ಯಾವುದೇ ಸದ್ದು ಗದ್ದಲವಿಲ್ಲದೆ ಅಂಗೀಕಾರವಾಗಿರುವುದು- ಅವರ ಮನಸ್ಸಿನಲ್ಲೂ ಎಷ್ಟು ಬೇಸರ ಮಡುಗಟ್ಟಿದೆ ಎಂಬುದರ ಸೂಚನೆಯಾಗಿತ್ತು ಎಂದು ಬೊಗಳೆ-ರಗಳೆ ಬ್ಯುರೋ Epi-top ಮೇಲೆ ಬರೆಯಲು ನಿರ್ಧರಿಸಿದೆ.

7 Comments

ಏನಾದ್ರೂ ಹೇಳ್ರಪಾ :-D

 1. ಅನಾನಸ ರಸದವರು ಬರುವ ಮೊದಲೇ ಒಂದು ಸಾಲು ಗೀಚಿ ಓಡುವೆ. ಇಲ್ಲದೇ ಇದ್ರೆ ಅವರ ಸಹವಾಸದಿಂದ ಸಂಜೆ ಮನೆಗೆ ತೂರಾಡಿಕೊಂಡು ಹೋಗಿ, ಪೆಟ್ಟು ತಿನ್ನಬೇಕಾದೀತು.

  ಜನತೆಯ ಆಕ್ರೋಶದೊಂದಿಗೆ ನಾನೂ ದನಿಗೂಡಿಸುವೆ. ಸಂಸದರಿಗೆ ಏರಿಸಲೇಬೇಕು. ಅವರನ್ನು ನಾವೆತ್ತಿದರೆ ತಾನೆ ನಮ್ಮನ್ನು ಅವರು ಮೇಲೆಕ್ಕೇರಿಸಿಕೊಳ್ಳಲಾಗುವುದು. ನಾಣಿ ಕಂಪನಿಯವರೇ ೧೨೫ ಕೋಟಿ ರೂಪಾಯಿಯನ್ನು ಅವರ ಹಿಂಬಾಲಕರಿಗೆ ಕೊಡುವಾಗ, ೧೦೦ ಕೋಟಿ ಜನತೆಯನ್ನು ನೋಡಿಕೊಳ್ಳುವವರಿಗೆ ಸಂಭಾವನೆ ಹೆಚ್ಚಿಸಬೇಡವೇ?
  ಈಗಂತೂ ಬೋಫೋರ್ಸ್, ಸ್ಟಾಕ್ ಸ್ಕ್ಯಾಮ್ ಅಂತ ಹಣ ಕೊಡುವ ಮರಗಳ ಬಗ್ಗೆ ನಂಬೋಕ್ಕೆ ಆಗೋಲ್ಲ. ಯಾವಾಗ ನಟವರ ಗಂಗಾಧರರು ಹಿಡಿಯುವರೋ ಗೊತ್ತಾಗೋಲ್ಲ. ಸುತ್ತಲಿನಲ್ಲಿ ಇರುವವರೆಲ್ಲರೂ ನಮ್ಮ ಮಹಾನ್ ಸಂಸದರ ಮೇಲೆಯೇ ಕಣ್ಣಿಟ್ಟಿದ್ದಾರೆ.

  ಇದರ ಬಗ್ಗೆ ಒಂದು ತೆರೆದ ಪಂಚೆ ಕ್ಷಮಿಸಿ ಅಂಚೆಯನ್ನು ತಕ್ಷಣವೇ ಸುತ್ತೋಲೆಯನ್ನಾಗಿ ದೇಶದಲ್ಲಿ ರವಾನಿಸಿ ಜನಜಾಗೃತಿ ಮೂಡಿಸಬೇಕು.

  ಸೆಪ್ಟೆಂಬರ್ ಮಾಹೆಯಲ್ಲಿ ೧೦ ಕೆ ಒದೆ ತಿನ್ನುವ ಸುಸಂದರ್ಭಕ್ಕೆ ಏನಾದ್ರೂ ವಿಶೇಷ ಪೂಜೆಯುಂಟಾ?

  ReplyDelete
 2. ಮಾವಿನರಸರೆ,
  ಈ ಬಾರಿ ಎಲ್ರೂ ನಮಗೇ ಪೂಜೆ ಮಾಡೋಕೆ ಸಿದ್ಧತೆ ನಡೆಸ್ತಾ ಇರೋ ಹಾಗಿದೆ.... ನಾನಂತೂ ಬೊಗಳೆಯೊಳಗೆ ತಲೆ ಮರೆಸಿಕೊಂಡಿರ್ತೀನಿ....

  ಆದರೆ ತೆರೆದ ಪಂಚೆಯಲ್ಲಿ ತಲೆ ಮರೆಸಿಕೊಳ್ಳೋದು ಹೇಗೇಂತಾನೇ ಗೊತ್ತಾಗ್ತಾ ಇಲ್ಲ...

  ಬೇಕಿದ್ರೆ ಪಬ್ಬನ್ನೇ ಅಲ್ಲಿಗೆ ಕರೆಸಿಕೊಂಡು.... ಒಂದಿಷ್ಟು ಆರಾಮವಾಗಿರ್ಬೋದು.... ಪಬ್ ಅವರೇ ತೀರ್ಥ ಕೊಡ್ತಾರೆ...

  ReplyDelete
 3. ಪಬ್ಬು ಪಬ್ಬೆಂದೇಕೆ ಬೀಳುಗಳೆವಿರಿ
  ಪಬ್ಬು ನೋಡದ ಗಾಂಧಿಗಳು
  ಪಬ್ಬಲ್ಲವೆ ನಮ್ಮ ನಾಡ ಆಳುತಿರುವುದು?

  ಮಬ್ಬು ಬೆಳಕಲ್ಲೇನು ಮಾಡುತಿರುವಿರಿ
  ಎದ್ದು ಪಬ್ ಕಡೆ ಬನ್ನಿ

  -ಪಬ್

  ReplyDelete
 4. ಅಸತ್ಯಿಗಳೇ,

  ಮುಂದಿನ ಚುನಾವಣೆಯಲ್ಲಿ ನೀವು ಚಿನೈನಿಂದ ಅಥವಾ ನಿಮಗೆ ಇಷ್ಟಬಂದ ಕಡೆಯಿಂದ ಅಖಿಲ ಭಾರತ ಬ್ಲಾಗ್‍ಗಿರ ಪಕ್ಷ(ಅಭಾಬಾಪ)ದ ಅಭ್ಯರ್ಥಿಯೆಂದು ತೀರ್ಮಾನಿಸಲಾಗಿದೆ.

  ನೀವು ಸಂಸತ್ತು ಎಂಬ ಪರಮ ಪೂಜ್ಯ ಕಛೇರಿಯಲ್ಲಿ ಹೋಗಿ ನಾವು ಆರಿಸಿ ಕಳುಹಿಸಿದವರ ಬವಣೆ, ಅವರು ಪಡೆಯುತ್ತಿರುವ ಪುಡಿಸಂಬಳದ ಬಗ್ಗೆ ಬೊಗಳೆ ಬಿಟ್ಟು ಜನಜಾಗೃತಿ ಉಂಟು ಮಾಡುತ್ತೀರಿ ಅಂದು ನಮ್ಮೆಲ್ಲರ ವಿಶ್ವಾಸ.

  ಸಂಬಳದ ಹೆಚ್ಚಳವೇನೋ ಒಳ್ಳೆಯದೇ, ನಮ್ಮ ಇತರ ಉದ್ಯಮದರಲ್ಲಿರುವಂತೆ allowance based on performance ಅಂತಾ ಏನಾದರೂ ಇದೆಯೇ ??

  ReplyDelete
 5. ಹ್ಹ ಹ್ಹ ಹ್ಹ

  ಪಬ್‌ನಲ್ಲಿದ್ದಾಗ ನಿಮ್ಮ ಮಂಡೆ ಚೆನ್ನಾಗಿ ಓಡುತ್ತದೆಯಲ್ಲಾ... ಪಬ್ಬಿಗರೇ...?

  ಹಿಂದಿನ ಹಿರಿ ಕವಿಗಳಿಗೂ ಪಬ್ಬಿನ ಚುರುಕು ಮುಟ್ಟಿಸುತ್ತಿದ್ದೀರಿ ನೀವು...

  ReplyDelete
 6. ಶಿವ ಸರ್ವೋತ್ತಮರೇ,
  ನೀವು ಹೇಳಿದ್ಹಾಗೆ ಅಭಾಬಾಪ ದಿಂದ ಸ್ಪರ್ಧಿಸುವುದು ಅಸಾಧ್ಯ.
  ಅಭಾ ಪಾಪಿ ಪಕ್ಷದಿಂದ ಬೇಕಿದ್ದರೆ ಸ್ಪರ್ಧಿಸಬಹುದು..

  ಹಾಗೆ ಬಂದಾಗ allowance based on performance ಅಂತ ನಿಧಿ ರಚಿಸುತ್ತೇವೆ... ಅದು ಯಾರಿಗೂ ಸಿಗುವುದಿಲ್ಲ ಅನ್ನೋದು ಖಚಿತವಾಗಿರುವುದರಿಂದ ಸಾಕಷ್ಟು ಮೇಯಬಹುದು!!!

  ReplyDelete
 7. very good keep it up

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post