ಬೊಗಳೆ ರಗಳೆ

header ads

"ಲಂಚ-ಭ್ರಷ್ಟಾಚಾರ ಗಟ್ಟಿಯಾಗಿ 'ನಿಲ್ಲಿ'ಸಿದ್ದೇವೆ"!

(ಬೊಗಳೂರು ಸ್ವ-ತಂತ್ರ ಬ್ಯುರೋದಿಂದ)

ಬೊಗಳೂರು, ಆ.16- ದೇಶಾದ್ಯಂತ ಆಗಸ್ಟ್ 15ರ ಪುಣ್ಯದಿನವಾದ ಮಂಗಳವಾರ ರಾಜಕಾರಣಿಗಳು ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮದಿಂದಲೇ ಆಚರಿಸಿದರು. ಬ್ರಿಟಿಷರು ಭಾರತೀಯರನ್ನು ಸುಲಿಯುತ್ತಾ ಕೊಳ್ಳೆಹೊಡೆಯುತ್ತಿರುವುದನ್ನು ಮನಗಂಡು ಅವರನ್ನು ಓಡಿಸಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯರನ್ನು ಅವರು ಈ ಸಂದರ್ಭ ಸ್ಮರಿಸಿಕೊಂಡರು.

ಆದರೆ ಬಡ ಭಾರತೀಯ ಪ್ರಜೆ ಮಾತ್ರ ಆಗಲೂ, ಈಗಲೂ ಒಂದೇ ಪರಿಸ್ಥಿತಿ ಇದೆ, ಈಗಲೂ ನಮ್ಮನ್ನು ಎಲ್ಲರೂ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಭಾವನೆಯಲ್ಲಿ ಈ ರಾಜಕಾರಣಿಗಳ ಮಾತುಗಾರಿಕೆ ಪ್ರದರ್ಶನಕ್ಕೆ ಬರೇ ಮೂಕ ಪ್ರೇಕ್ಷಕನಾಗಿ ಹಾಜರಾಗಿದ್ದ ಎಂಬುದು ಎಲ್ಲೆಡೆ ಸುತ್ತಾಡಿದ ಬೊಗಳೆ-ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಕಪ್ಪು ಕೋಟೆಯಲ್ಲಿ ತ್ರಿ-ನಾಮ (3 ಪಂಗನಾಮ) ಧ್ವಜ ಹಾರಿಸಿ ತಮ್ಮ ರಾಷ್ಟ್ರದಲ್ಲಿರುವ ನರಪಿಳ್ಳೆಗಳನ್ನು ಉದ್ದೇಶಿಸಿ ಮಾತನಾಡಿದ ಮಾನಿನೀಯ ಸ್ವಗೃಹ ಮಂತ್ರಿಗಳು, 59 ವರ್ಷಗಳ ಹಿಂದೆ ನಮಗೂ ಸ್ವಾತಂತ್ರ್ಯ ಸಿಕ್ಕಿದೆ, ನಾವೂ ಭ್ರಷ್ಟಾಚಾರಿಗಳಾಗಿದ್ದೇವೆ ಎಂದು ಘೋಷಿಸಿದರು.

ಇಂಗ್ಲೀಷರು ಹಾಕಿಕೊಟ್ಟ ಹಾದಿಯಲ್ಲೇ ನಾವಿನ್ನೂ ಮುಂದುವರಿಯುತ್ತಿದ್ದೇವೆ, ಅವರ ಭಾಷೆ, ಅವರ ಮಾತು, ಅವರ ವಾಕ್ಚಾತುರ್ಯ, ಅವರ ನಡತೆಗಳನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ ಎಂದವರು ಇದೇ ಸಂದರ್ಭದಲ್ಲಿ ಉದಾಹರಣೆಗಳ ಸಹಿತ ಬಡಪ್ರಜೆಯನ್ನು ಕಾಲಿನಿಂದ ಒತ್ತಿ ಒತ್ತಿ ವಿವರಿಸಿದರು. ಅವರ ಭಾಷಣದ ಸಾರ-ಅಂಶಗಳು ಇಲ್ಲಿ ನೀಡಲಾಗಿದೆ.

* Matrimony ಎಂಬುದು ನಮಗೆ ಇಂಗ್ಲಿಷರು ನೀಡಿದ ಶಬ್ದ. ಅದರ ಹೆಸರಲ್ಲೇ money ಅಂಶವಿದೆ. ಇವೆಲ್ಲಾ Matter of money. ಆದುದರಿಂದ ವರದಕ್ಷಿಣೆ ಇಂದು ದೇಶಾದ್ಯಂತ ಪ್ರಬಲವಾಗಿ ಅನಿವಾರ್ಯವಿರುವ ಮತ್ತು ಚಾಲ್ತಿಯಲ್ಲಿರುವ ಸಂಗತಿ.

* ಯಾವುದೇ ಸರಕಾರೀ ಆಫೀಸನ್ನೇ ನೋಡಿ, ಅಲ್ಲಿ ಆ ಫೀಸು, ಈ ಫೀಸು ಇಲ್ಲದೆ ಕೆಲಸವೇ ಆಗದ ಹಾಗೆ ಇಂಗ್ಲಿಷರ ಶಬ್ದಪ್ರಯೋಗದ ಚಾತುರ್ಯಕ್ಕೆ ಮರುಳಾಗಿರುವ ನಾವು ಅದನ್ನ ಅಕ್ಷರಶಃ ಪಾಲಿಸುತ್ತಿದ್ದೇವೆ .

* ನಮ್ಮ ಸಂಚಾರ ವ್ಯವಸ್ಥೆಗೆ ಬ್ರಿಟಿಷ್ ಶಬ್ದ ಪ್ರಯೋಗವನ್ನೇ ಬಳಸಿ Push-Pull ರೈಲನ್ನು ಅಳವಡಿಸಿದ್ದೇವೆ. ಇದೇ Push-Pull ಅನ್ನು ನಾವು ( ಲಂಚ) Push ಮಾಡಿದರಷ್ಟೇ ನಿಮ್ಮ ನಿಮ್ಮ ಕೆಲಸ Pull ಮಾಡಿಕೊಳ್ಳಬಹುದು ಎಂದು ಜನತೆಗೆ ಸಾರಿ ಸಾರಿ ಹೇಳಿದ್ದೇವೆ.

* ಜನರ ಸೇವೆಗಾಗಿ Public sector undertaking ಮತ್ತು Government Undertaking ಮುಂತಾದ ಅದೆಷ್ಟೋ ಇಲಾಖೆಗಳನ್ನು, ಸಂಸ್ಥೆಗಳನ್ನು ರಚಿಸಿದ್ದೇವೆ. ಇಲ್ಲೆಲ್ಲಾ ಇರೋದು ಟೇಬಲ್‌ನ Underನಲ್ಲಿ (ಮನಿ)Take ಮಾಡುವವರೇ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಷಯ. ಇದೇ ವಿಷಯದಲ್ಲಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದೇವೆ.

* ದೇಶಕ್ಕೆ ಸ್ವಾತಂತ್ರ್ಯ ಬಂದು 60ರ ಅರಳುಮರಳಿನಲ್ಲಿದೆ. ಇಷ್ಟು ವರ್ಷಗಳಾದರೂ ಲಂಚ-ಭ್ರಷ್ಟಾಚಾರವನ್ನು ನಿಲ್ಲಿಸಿದ್ದೇವೆ. ಅದು ಎಷ್ಟರಮಟ್ಟಿಗೆ ನಿಂತಿದೆಯೆಂದರೆ ಯಾರು ಕೂಡ ಅಲುಗಾಡದಷ್ಟು ಭದ್ರವಾಗಿ ನಿಂತಿದೆ.

* ವಿವಿಧ ಜಾತಿಗಳಿಗೆ ಮೀಸಲಾತಿ ಮಾಡುತ್ತಿದ್ದೇವೆ. ವಿವಿಧ ಕುಶಲಕರ್ಮಿಗಳಿಗೆ ಪ್ರತ್ಯೇಕ ಒಳ ಮೀಸಲು ಇತ್ಯಾದಿ ನೀಡಲಾಗುತ್ತಿದೆ. ಅದೇ ರೀತಿ ಮಾನವನ ವರ್ಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಿ, ಅತ್ಯಾಚಾರಿ ಮತ್ತು ಲಂಚಾವತಾರಿ ಎಂಬ ಮೂರು ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಿ ಈ ಜಾತಿಗೆ ಸೇರಿದವರನ್ನು ಮುಂದೆ ತರುವುದು ನಮ್ಮ ನರಕ-ಕಾರದ ಉದ್ದೇಶ.

* ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತೀವ್ರವಾಗಿ ಶ್ರಮಿಸಿದವರು ಗಾಂಧಿ ತಾತ. ಇದೇ ಕಾರಣಕ್ಕೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅವರನ್ನು ದಿನಂಪ್ರತಿ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರಿ ಕಚೇರಿ ನೌಕರರು, ಅಧಿಕಾರಿಗಳೆಲ್ಲಾ (ಲಂಚ) ತಾ ತಾ ಎನ್ನುತ್ತಲೇ ಇರುತ್ತಾರೆ.

* ಈ ದೇಶದಲ್ಲಿ ಶಾಸಕ, ಸಂಸದರಿಗೆ ಹೆಸರು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ Income Tax ನವರು Raid ಮಾಡಿದರಷ್ಟೇ ಅವರ ಪ್ರತಿಷ್ಠೆ ಹೆಚ್ಚಾಗುತ್ತದೆ, ದೇಶಾದ್ಯಂತ ದೊಡ್ಡ ಹೆಸರು ಕೂಡ ಅವರಿಗೆ ತನ್ನಿಂದತಾನೇ ಬರುತ್ತದೆ. ಭ್ರಷ್ಟಾಚಾರ ಮಾಡದವನು ರಾಜಕಾರಣಿಯೇ ಅಲ್ಲ ಎಂಬಂಥ ದುಸ್ಥಿತಿ ಬಂದಿರುವಾಗ ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ನಾವು ಭ್ರಷ್ಟಾಚಾರಿಗಳಾಗುತ್ತಿದ್ದೇವೆ.

ಹೀಗೇ ಮಾತು ಮುಂದುವರಿಸುತ್ತಾ ಅವರು, ನೀವೆಲ್ಲಾ ಯೋಗಿ ಬಸವಣ್ಣನವರ ವಚನವನ್ನು ಸಮರ್ಥವಾಗಿಯೇ ಪಾಲಿಸುತ್ತೀರೆಂಬ ಆಶಯ ನಮಗಿದೆ. ಬಸವಣ್ಣನವರು ಹೀಗೆ ಹೇಳಿದ್ದಾರೆ:

"ಲೋಕದ ಡೊಂಕ ನೀವೇಕೆ ತಿದ್ದುವಿರಿ?
ಎನ್ನನು ಈ ಬಗ್ಗೆ ಕುರುಡನ ಮಾಡಯ್ಯ ತಂದೆ"


ಎಂಬ ಅಮೂಲ್ಯ ವಚನಗಳನ್ನು ಅವರು ಉಲ್ಲೇಖಿಸಿದರು.

ಅವರು ತಮ್ಮ ಭೀಷಣ-ಭಾಷಣವನ್ನು ಮುಗಿಸಿದ್ದು ಹೀಗೆ:

ಕಾಣಿಕೆಯಿಲ್ಲದ ಫೈಲು
ಕಾಣಿಸುವುದೇ ಇಲ್ಲ
ಲಂಚವಿಲ್ಲದ ಫೈಲು
ಕೊಂಚವೂ ಮುಂದೆ ಚಲಿಸುವುದೇ ಇಲ್ಲ!!!!


ಹೀಗಾಗಿ, ಬಡ ಪ್ರಜೆಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ನೀವು ಬಲೆಯನ್ನು ಮಾತ್ರವೇ ತೆಗೆದು ನಿರುಮ್ಮಳವಾಗುತ್ತೀರಿ. ಆದರೆ ಜೇಡನನ್ನೇ ಕೊಂದರೆ ಬಲೆಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದನ್ನು ಖಂಡಿತಾ ಗಮನಕ್ಕೆ ತೆಗೆದುಕೊಳ್ಳಬೇಡಿ. ಅದೇ ರೀತಿ ದೇಶದ ಲಂಚಾವತಾರ ಮತ್ತು ಭ್ರಷ್ಟಾಚಾರದ ಕುರಿತಾಗಿಯೂ ನೀವು ಅದೇ ರೀತಿಯ ನಿಲುವು ತಳೆದು ಸಹಕರಿಸುವಿರೆಂದು ಹಾರೈಸುತ್ತೇನೆ ಎನ್ನುತ್ತಾ ತಮ್ಮ ಎರಡೇ ಎರಡು ಮಾತುಗಳನ್ನು ಅವರು ಮುಗಿಸಿಯೇ ಬಿಟ್ಟರು.

(ಸೂಚನೆ: ಇದರಲ್ಲಿ "ಹರಟೆ" ಕಾರ್ಯಕ್ರಮದಲ್ಲಿ ಬಿದ್ದ ಅಣಿಮುತ್ತುಗಳನ್ನು ಸೇರಿಸಿಕೊಳ್ಳಲಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

  1. ಮಹನೀಯರ ಅಷ್ಟು ಚಿಕ್ಕ ಭಾಷಣವನ್ನು ಸಾರಾ ಸಗಟಾಗಿ ಭಟ್ಟಿ ಇಳಿಸಿದ್ದೀರಿ. ಈ ಗುಡಾರವನ್ನು ನಿಲ್ಲಿಸಲು ಅದೆಷ್ಟು ಕೊಕ್ಕೆಗಳನ್ನು ಬೆಸುಗೆ ಹಾಕಿದ್ದೀರಿ. ಬ್ರಿಟೀಷರು ನಮ್ಮನ್ನು ಬಿಟ್ಟರೂ ಕುಟಿಲೀಶರು ಬಿಡೋಲ್ಲ. ಎಂದಿಗೂ ನಾವು ಇವರ ಕೆಳಗೇ ಇರಬೇಕಲ್ವೇ? ಇಂತಹ ಸಾಂದರ್ಭಿಕ ಲೇಖನಗಳು ಇನ್ನೂ ಬರ್ತಾ ಇರಲಿ.

    ಅಂದ ಹಾಗೆ ನನ್ನ ನಮಸ್ಕಾರವನ್ನು ನೀವು ಪಂಗನಾಮ ಅಂತ ಆಡಿಕೊಳ್ತಿದ್ದೀರಾ? ಇಂದು ಚೊತ್ತ ರಾಜನ್ ನನ್ನ ಹತ್ತಿರ ಬರ್ತಿದ್ದಾನೆ (ಅದೇ ದಹಿ ಹಂಡಿ ಫೋಡಿಸೋಕ್ಕೆ) - ಒಂದು ಕೈ ನೋಡಿಕೊಳ್ಳಲು ಹೇಳುವೆ.

    ಪ್ರತ್ಯುತ್ತರಅಳಿಸಿ
  2. ಅಸತ್ಯಿಗಳೇ,

    ಸ್ವಾತಂತ್ರ್ಯೋತ್ಸವದ ಶುಭಾಶಯಗಳು!

    ಜೇಡರ ಬಲೆಯ ಬಗ್ಗೆ ಮಾತಾಡ್ತಾ ಇದೀರಾ..ಅದು ಅಣ್ಣಾವ್ರ ಫಿಲ್ಮ್ ಅಲ್ವಾ..ಅದಕ್ಕೂ ಭ್ರಷ್ಟಾಚಾರಕ್ಕೂ ಎನ್ರೀ ಸಂಬಂಧ !

    ಪ್ರತ್ಯುತ್ತರಅಳಿಸಿ
  3. ಮಾವಿನಯನಸರೆ,
    _/|\_ ಈ ಪಂಗನಾಮ ನೋಡಿಯೇ ನಾನು ನಿಮಗೆ ಕೈ ಕೊಡಲು ಯತ್ನಿಸಿದ್ದು!!! ಈಗ ನೀವು ಖೋಟಾ ರಾಜನ್ ಹೆಸರು ಹೇಳಿ ಹೆದರಿಸ್ತೀರಿ... ಅದಕ್ಕೆ ಒಂದು ಕೈ ನೋಡಿಕೊಳ್ಳುತ್ತೇನೆ, ಮತ್ತೊಂದನ್ನು ಮುಗಿಸಿಬಿಡುತ್ತೇನೆ...!!

    ಪ್ರತ್ಯುತ್ತರಅಳಿಸಿ
  4. ಶಿವ್ ಅವರೆ,
    ನಿಮಗೂ ಸ್ವಾತಂತ್ರ್ಯೋತ್ಸವದ ಶುಭಾಶಯ.

    ಜೇಡರ ಬಲೆ ಎಷ್ಟೇ ತೆಗೆದರೂ ಮತ್ತೆ ಮತ್ತೆ ಬರುತ್ತೆ, ಭ್ರಷ್ಚಾಚಾರದ ವಿರುದ್ಧ ಕ್ರಮ ತೆಗೆದುಕೊಂಡಂತೆ....

    ಆದ್ರೆ ಯಾರು ಕೂಡ ಜೇಡನನ್ನೇ ಮುಗಿಸುವ ಬಗ್ಗೆ ಯೋಚಿಸೋದೇ ಇಲ್ಲ...

    ಇಷ್ಟಿರುವಾಗ,
    ಜೇಡನ ವಿಷ್ಯ ಬೇಡವೋ ಶಿಷ್ಯ ಅಂತಿದ್ದೀರೇನು?

    ಪ್ರತ್ಯುತ್ತರಅಳಿಸಿ
  5. ಅಣ್ಣಾವ್ರ ಜೇಡರ ಬಲೆ ನೆನಪಿಸಿದರೆ ಹಳೆಯದು (ಹಾಳಾದ) ನೆನಪುಗಳು ಕಾಡುತ್ತವೆ. ಅದನ್ನೆಲ್ಲಾ ನೆನಪಿಸಬೇಡಿ. ವಾನಪ್ರಸ್ಥಕ್ಕೆ ಹೋಗುತ್ತಿರುವವರನ್ನು ವಾನರನ್ನಾಗಿ ಮಾಡಿಸುತ್ತದೆ ಆ ಚಿತ್ರ.

    ಜೇಡನನ್ನು ಮುಗಿಸಿದ್ರೆ ಹೇಗೆ ಬೇಡ ವಾಲ್ಮೀಕಯಾದನೋ ಹಾಗೆ ಜ್ಞಾನೋದಯವಾಗುತ್ತದೆ. ಹುಷಾರಾಗಿರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಜೇಡರ ಬಲೆ ಚಿತ್ರ ನೋಡಿ, ಸಂತೋಷವಾಗಿರಿ. ಜೇಡನನ್ನು ಮುಗಿಸೋಕ್ಕೆ ಹೋಗ್ಬೇಡಿ ಶಿಷ್ಯರೇ.

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,

    ಲಂಚದ ಜೇಡನನ್ನು ನಾವು ಮುಗಿಸ್ಬೇಕಾಗಿಲ್ಲ, ಅದ್ಕೆ ಮೊದಲು ನಮ್ಮನ್ನೇ ಅದು ಮುಗಿಸುತ್ತೆ..

    ಪ್ರತ್ಯುತ್ತರಅಳಿಸಿ
  7. "ಲೋಕದ ಡೊಂಕ ನೀವೇಕೆ ತಿದ್ದುವಿರಿ?
    ಎನ್ನನು ಈ ಬಗ್ಗೆ kaDakana ಮಾಡಯ್ಯ ತಂದೆ" aMta yarO kilaDi aMda haage ayitu...
    idanne naMbikoMda janagaLu laMchada jadar baleyalli sikkibidraa?

    ಪ್ರತ್ಯುತ್ತರಅಳಿಸಿ
  8. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಓಹ್ ಮಹಾಂತೇಶರೇ,
    ನೀವು ಭಾರೀ ಅನ್ವೇಷಣೆಯಲ್ಲಿ ತೊಡಗಿದಂತಿದೆ.

    ಲೋಕದ ಡೊಂಕ ನೀವೇಕೆ ತಿದ್ದುವಿರಿ
    ಎನ್ನ ಕಟುಕನ ಮಾಡಯ್ಯ ತಂದೆ
    ಎನ್ನ ಕುಡುಕನ ಮಾಡಯ್ಯ ತಂದೆ

    ಎಂದ ತಕ್ಷಣ ಈಗ ಬಂದೆ.... ಅಂತ ನಾವು ಕಾಲು ಕೀಳುತ್ತಿದ್ದೇವೆ... :)

    ಪ್ರತ್ಯುತ್ತರಅಳಿಸಿ
  10. ಮಹಾಂತೇಶರೇ,

    ನೀವೂ ಪಬ್ಬಿಗೆ ಬನ್ನಿ. ಆಗ ಕುಡುಕನ ಮಾಡಯ್ಯ ತಂದೆ ಎನ್ನುವುದು ಸಾರ್ಥಕವಾಗುತ್ತದೆ.

    -ಪಬ್

    ಪ್ರತ್ಯುತ್ತರಅಳಿಸಿ
  11. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  12. ಕ್ಷಮಿಸಿ....ಹಾಗೆ ಹಾಕಿದ್ದು ಸರಿ ಇರಲಿಲ್ಲ ಅನ್ನಿಸಿತ್ತು ನನಗೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D