ಬೊಗಳೆ ರಗಳೆ

header ads

ಶಾಕ್ ಹೊಡೆಸುವವರಿಗೆ ಹೀಗೊಂದು ಬೆಂಬಲ !

(ಬೊಗಳೂರು ಶಾಕ್ ಬ್ಯುರೋದಿಂದ)
ಬೊಗಳೂರು, ಆ.14- ಲೋಹಗಳಲ್ಲಿ ಮಾತ್ರ ವಿದ್ಯುತ್ ಪ್ರವಹಿಸುತ್ತದೆ ಎಂಬ ಸಿದ್ಧಾಂತವನ್ನೇ ಬುಡಮೇಲು ಮಾಡಿ, ಬರೇ ಕಾಗದ ಪತ್ರಗಳಿಂದಲೂ ಮನುಷ್ಯರಿಗೆ ವಿದ್ಯುತ್ ಶಾಕ್ ಹೊಡೆಸಬಹುದು ಎಂಬುದನ್ನು ಶೋಧನೆ ಮಾಡಿ ವಿಶ್ವ ವಿಖ್ಯಾತವಾಗಿರುವ ವಿದ್ಯುತ್ ವಿತರಣಾ ಕಂಪನಿಗಳ ಮತ್ತೊಮ್ಮೆ ದರ ಏರಿಸುವ ಪ್ರಸ್ತಾಪವನ್ನು ವಿರೋಧಿಸುವ ಅರ್ಜಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬರಲು ಕಾರಣವನ್ನು ಪತ್ತೆ ಹಚ್ಚಲಾಗಿದೆ.
 
ಇಲ್ಲಿ ಪ್ರಕಟವಾಗಿರುವ ವರದಿಯಿಂದ ರಸ್ತೆ ಬದಿಯಲ್ಲಿ ಬಿದ್ದ ವಿದ್ಯುತ್ ತಂತಿ ಮೆಟ್ಟಿದಂತೆ ಆಘಾತಕ್ಕೊಳಗಾದ ನಮ್ಮ ಬೊ.ರ. ಬ್ಯುರೋ ಸಿಬ್ಬಂದಿ ಬೊಗಳೂರಿನಿಂದ ಬೆಂಗಳೂರಿಗೆ ಧಾವಿಸುವ ದಾರಿ ಮಧ್ಯೆ ಅಲ್ಲಲ್ಲಿ ಬೋರಲಾಗಿ ಬಿದ್ದುಕೊಂಡ ಕರ್ನಾಟಕದ ಬಡ ಬೋರೇಗೌಡರ ಸ್ಥಿತಿ ಮರುಕ ಹುಟ್ಟಿಸುವಂತಿತ್ತು.
 
ಈ ವಿಷಯದ ಬಗ್ಗೆ ಅನ್ವೇಷಣೆ ನಡೆಸಿದಾಗ ಕಂಡುಬಂದ ಮಹತ್ವದ ಅಂಶವೆಂದರೆ, ಇವರೆಲ್ಲಾ ಹಿಂದಿನಿಂದಲೂ ವಿದ್ಯುತ್ ಇಲಾಖೆಯಿಂದ ಶಾಕ್ ಹೊಡೆಸಿಕೊಂಡವರಾಗಿದ್ದು, ಮೇಲೇಳಲಾರದಷ್ಟು ಹೊಡೆತ ತಿಂದಿದ್ದಾರೆ ಎಂಬುದು.
ಮತ್ತೆ ಕೆಲವು ಕಡೆ ವಿದ್ಯುತ್ ಇಲಾಖೆ ಕಳುಹಿಸಿದ ಬಿಲ್ ಅನ್ನು ಕೈಯಲ್ಲಿ ಹಿಡಿದ ತಕ್ಷಣವೇ ಶಾಕ್ ಹೊಡೆಸಿಕೊಂಡು ಹಾಸಿಗೆ ಪಾಲಾದವರೂ ಇದ್ದರು. ಇನ್ನೂ ಒಂದು ವರ್ಗದವರು ನಮ್ಮ ಬ್ಯುರೋದ ಕಣ್ತಪ್ಪಿ ಹೋಗುವುದರಲ್ಲಿದ್ದರು. ಅವರೆಂದರೆ ಕ್ಯಾಲೆಂಡರಿನಲ್ಲಿ ದಿನಾಂಕ ನೋಡಿದ ತಕ್ಷಣ "ವಿದ್ಯುತ್ ಬಿಲ್ ಬರೋ ಸಮಯವಾಯ್ತು" ಎಂದು ಯೋಚಿಸಿಯೇ ಹಾವು.... ಅಲ್ಲಲ್ಲ ವಿದ್ಯುತ್ ತಂತಿ ಮೆಟ್ಟಿದವರಂತೆ ಆಘಾತಕ್ಕೀಡಾದವರು.
 
ಪರೋಪಕಾರಿ ವಿದ್ಯುತ್ ಇಲಾಖೆ
 
ಮನೆಯಲ್ಲಿ ಮಂಗಳ ಕಾರ್ಯಕ್ಕೆ ರಾತೋರಾತ್ರಿ ತಯಾರಿ ನಡೆಸಬೇಕಾದ ಪರಿಸ್ಥಿತಿ ಇರುವಾಗ ವಿದ್ಯುತ್ ಇಲಾಖೆ ಅಂಥವರ ಮೇಲೆ ಕರುಣೆ ತೋರಿ, ಅವರು ಎಷ್ಟು ಶ್ರಮ ಪಡುತ್ತಿದ್ದಾರಲ್ಲಾ... ಸ್ವಲ್ಪವಾದರೂ ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಕಾರಣಕ್ಕೆ ವಿದ್ಯುತ್ ಪೂರೈಕೆಯನ್ನೇ ನಿಲ್ಲಿಸಿಬಿಡುತ್ತಾ ಪರೋಪಕಾರ ಕಾರ್ಯವನ್ನೂ ಮಾಡುತ್ತಿತ್ತು. ಮತ್ತು ವಿಪರೀತ ಸೆಕೆ ಇರುವಾಗಲೂ, ನೀರಿನ ಕೊರತೆ ಇರುವಾಗಲೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿತ್ತು. ಇದಕ್ಕೆ ಕಾರಣವೂ ಇದೆ. ಇದು ಕೂಡ ವಿದ್ಯುತ್ ಇಲಾಖೆಯ ಪರೋಪಕಾರ ಕಾರ್ಯವೇ ಆಗಿದೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
 
ಅಂದರೆ ವಿಪರೀತ ಸೆಕೆಯಿದ್ದಾಗ ಬೆವರು ಸುರಿಸುವುದು ಸಹಜ. ಈ ಬೆವರು ಹೆಚ್ಚು ಹೆಚ್ಚು ಸುರಿಯುತ್ತಿದ್ದಾಗ, ಅದನ್ನು ಬಕೆಟುಗಳಲ್ಲಿ ಸಂಗ್ರಹಿಸಿಟ್ಟುಕೊಂಡರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದು ವಿದ್ಯುತ್ ಇಲಾಖೆಯ ದೂ(ದು)ರಾಲೋಚನೆ.
ಮತ್ತೊಂದೆಡೆ ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಓದಬೇಕಾಗುತ್ತದೆ. ಮನೆಯವರೂ ಬಲವಂತ ಮಾಡುತ್ತಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳ ಹಿತರಕ್ಷಣೆಗೆ ಮುಂದಾಗುತ್ತಿರುವ ಇಲಾಖೆ, ರಾತ್ರಿ ವೇಳೆ ಮತ್ತು ಬೆಳ್ಳಂಬೆಳಗ್ಗೆ ವಿದ್ಯುತ್ ಪ್ರವಾಹವನ್ನೇ ಕಿತ್ತು ಹಾಕಿ ಅಂಥ ವಿದ್ಯಾರ್ಥಿಗಳ ವೇದನೆಯನ್ನು ನಿವಾರಣೆ ಮಾಡುತ್ತಿತ್ತು.
 
ವಿರೋಧ ಸಲ್ಲ
 
ಹೀಗೆ ಹತ್ತು ಹಲವು ಪುಣ್ಯ ಕಾರ್ಯಗಳಲ್ಲಿ ಭಾಗಿಯಾಗಿರುವ ವಿದ್ಯುತ್ ಇಲಾಖೆಯ ವಿರುದ್ಧ ಯಾರಾದರೂ ದೂರು ಕೊಡುತ್ತಾರೆಯೇ? ದರ ಏರಿಕೆಯ ಪ್ರಸ್ತಾಪವನ್ನು ವಿರೋಧಿಸುವುದು ವಿಹಿತವೇ? ಎಂಬ ಪಾಪಪ್ರಜ್ಞೆಯಿಂದಾಗಿಯೇ ಅರ್ಜಿಗಳ ಸಂಖ್ಯೆಯಲ್ಲಿ ಕೊರತೆ ಕಂಡುಬಂದಿತ್ತು ಎಂಬುದು ಸಮಗ್ರ ತನಿಖೆಯಿಂದ ಗೊತ್ತಾದ ಅಂಶ.
 
ಇನ್ನೂ ಒಂದು ಉಪ-ಕಾರಣವೂ ಲಭ್ಯವಾಗಿದೆ. ರಾಜ್ಯದ ಜನತೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಇಲಾಖೆಯಿಂದ ಆಗಾಗ್ಗೆ ಶಾಕ್ ಹೊಡೆಸಿಕೊಂಡವರೇ ಆಗಿರುವುದರಿಂದ ಅರ್ಜಿ ಬರೆಯಲು ಅಥವಾ ದೂರು ನೀಡುವುದಕ್ಕಾಗಿ ವಿದ್ಯುತ್ ಕಚೇರಿವರೆಗೆ ಹೋಗಲು ಸಂಪೂರ್ಣವಾಗಿ ಅಶಕ್ತರಾಗಿದ್ದರು.
 
ಅರ್ಜಿಗಳ ಸಂಖ್ಯೆ ಕುಸಿತಕ್ಕೆ ಕೊನೆಯ ಪ್ರಧಾನ ಕಾರಣವೆಂದರೆ, ಅಭ್ಯಾಸಬಲದಿಂದ ಬಂದ ನಿರ್ಲಕ್ಷ್ಯ. ಇಲಾಖೆ ಆಗಾಗ್ಗೆ ವಿದ್ಯುತ್ ದರ ಏರಿಸುತ್ತಲೇ ಇರುವುದರಿಂದ "ಅವರದು ಇದ್ದದ್ದೇ, ಇದು ಮಾಮೂಲಿ" ಅಂದುಕೊಂಡು ಸುಮ್ಮನಾದವರು ಕೆಲವರಾದರೆ, ಏನೂ ಮಾಡಿದರೂ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾಗುವವರು ಹಲವರು. ಮತ್ತೆ ಕೆಲವರಿಗೆ "ವಿದ್ಯುತ್ ದರ ಏರಿಸುತ್ತಿದ್ದಾರಾ... ಇದೆಲ್ಲೋ ಹಳೆಯ ಸುದ್ದಿಯಾಗಿರಬೇಕು" ಎಂಬ ಮಹಾನ್ ಆಶಾವಾದ!

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. >ಇಲ್ಲಿ ಪ್ರಕಟವಾಗಿರುವ ವರದಿಯಿಂದ ರಸ್ತೆ ಬದಿಯಲ್ಲಿ ಬಿದ್ದ ವಿದ್ಯುತ್ ತಂತಿ

    ವರದಿಯಿಂದ ವಿದ್ಯುತ್ ತಂತಿ ಹೇಗೆ ಬಿತ್ತು ಎಂಬುದನ್ನು ವಿವರಿಸುತ್ತೀರಾ?

    -ಪಬ್

    ಪ್ರತ್ಯುತ್ತರಅಳಿಸಿ
  2. ಜೀವನದ ಪ್ರತಿ ಹೆಜ್ಜೆಯಲ್ಲೂ ಶಾಕ್ ಹೊಡೆಸಿಕೊಳ್ಳುತ್ತಿರುವವರಿಗೆ ವಿದ್ಯುತ್ ದರ ಏರಿಕೆಯೊಂದು ಶಾಕ್ ಅಲ್ಲವೇ ಅಲ್ಲ. ವಿದ್ಯುತ್ ಹಣವನ್ನು ಕಟ್ಟದೇ ಹೇಗೆ ತಪ್ಪಿಸಿಕೊಳ್ಳುವುದು ಎಂಬುದನ್ನು ತಿಳಿಸಿಕೊಡಿ, ಅದರಿಂದ ಸರಕಾರಕ್ಕೇ ಶಾಕ್ ಕೊಡೋಣ.

    ಅದೇ ಒಂದು ದಿನ ಬೊ-ರ ನೋಡದೆ ಇದ್ದರೆ ನನಗೆ ಶಾಕ್ ಹೊಡೆದ ಹಾಗಾಗುತ್ತದೆ.

    ಅಂದ ಹಾಗೆ ಈ ಅನಾನಸರು ಮಬ್ಬು ಬೆಳಕಿನ ಪಬ್ಬಿನಲ್ಲೇ ಯಾಕೆ ಕುಳಿತಿರುತ್ತಾರೆ?

    ಪ್ರತ್ಯುತ್ತರಅಳಿಸಿ
  3. ಅನಾನಸ್ ಪಬ್ಬಿಗರೆ
    ನೀವು ಪಬ್ಬಿನಿಂದ ಹೊರ ಬರುತ್ತಿರುವ ವರದಿ ಅಲ್ಲಿ ಪ್ರಕಟವಾಗುವಾಗಲೇ ತೂರಾಡುತ್ತಾ ಇದ್ದ ವಿದ್ಯುತ್ ತಂತಿ ಕಡಿದುಬಿತ್ತು ಅಂತ ತಿಳಿದುಬಂದಿದೆ. ಬಹುಶಃ ಅದಕ್ಕೆ ನಿಮ್ಮ ಬಗ್ಗೆ ಎಲ್ಲಾ ತಿಳಿದಿದ್ದಿರಬೇಕು!!!! ಎಚ್ಚರಿಕೆ ವಹಿಸಿ!

    ಪ್ರತ್ಯುತ್ತರಅಳಿಸಿ
  4. ಮಾವಿನರಸರೆ,

    ಶಾಕ್ ಹೊಡೆಸಿಕೊಳ್ಳದಂತಿರಲು ಮತ್ತು ಬಿಲ್ ಕಟ್ಟದೆಯೂ ಬಚಾವ್ ಆಗುವುದು ಹೇಗೆಂಬ ಬಗ್ಗೆ ಈ ಲೋಕ ಕಂಡ ಅತ್ಯದ್ಭುತ ಬಿಲ್ಲುಗಾರ ಅರ್ಜುನನ್ನೋ, ಅಥವಾ ಅವನನ್ನು ಮೀರಿಸಿದ ಏಕಲವ್ಯನನ್ನೋ ಶೀಘ್ರವೇ ಮಾತನಾಡಿಸಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  5. ಬಿಲ್ಲುಗಾರರನ್ನು ಮಾತನಾಡಿಸಲು ಹೋಗುವಂತಿದ್ದರೆ ನಮ್ಮ ಕಡೆಯವನೊಬ್ಬ ಬಿಲ್ಲಣ್ಣ ಅಂತಿದ್ದಾನೆ. ಅವನನ್ನೂ ವಿಚಾರಿಸಿಕೊಳ್ಳಿ - ನಿಮಗೆ ಸಹಾಯವಾದರೂ ಆಗಬಹುದು.

    ಪ್ರತ್ಯುತ್ತರಅಳಿಸಿ
  6. Where there is a ಬಿಲ್, there is a way...to torture already कष्ट से जो मर्ता है वो customers ಅಂತ ವಿದ್ಯುತ್‍ಇಲಾಖೆಗೂ ಗೊತ್ತು. ಬಿಲ್ವಿದ್ಯೆಯಲ್ಲಿ ಎಲ್ಲರೂ ಪಾರಂಗತರಾದರೆ ವಿದ್ಯುತ್ ಇಲಾಖೆಯ ಬಿಲ್ವಿದ್ಯೆಯ shockನಿಂದ ಪರಲೋಕಗತರಾಗಬೇಕಾದೀತು. ಇಲಾಖೆಗೆ shockಆಚರಣೆ, ತಟ್ಟಿಸಿಕೊಂಡವರಿಗೆ ಶೋಕಾಚರಣೆ.

    ಈ ಎಲ್ಲ ಉಸಾ'ಬರಿ' ಯಾಕಬೇಕು ಎಂದು ಬೆಲೆಯೇರಿಕೆ ವಿರುದ್ಧ ಅರ್ಜಿ ಬರಿಯುವುದನ್ನು ಜನ ಬಿಟ್ಟುಬಿಟ್ಟಿದ್ದಾರೆ.

    ಪ್ರತ್ಯುತ್ತರಅಳಿಸಿ
  7. ಮಾವಿನಯನಸರೆ,
    ನಿಮ್ಮ ಬಿಲ್ಲಣ್ಣನ ಕನಸು ಇಲ್ಲಿ ನನಸಾಗುತ್ತಿದೆ.... ನಮ್ ಐಟಿ ಹಬ್ ಎಂಬೋ ಬೆಲೆಏರೋ ಊರಲ್ಲಿ....!

    ಪ್ರತ್ಯುತ್ತರಅಳಿಸಿ
  8. Joshಇ ಅವರೆ,

    ಸರಕಾರ ಬಿಲ್-ವಿದ್ಯೆ ಪ್ರದರ್ಶಿಸಿ ಖಜಾನೆ ತುಂಬುತ್ತಿದ್ದರೆ, ಇಲಾಖೆ ನೌಕರರು ಬಿಲ-ವಿದ್ಯೆ ಮೂಲಕ ಆ ಖಜಾನೆ ಬರಿದು ಮಾಡುತ್ತಿದ್ದಾರೆ. ಹೊಸ ಲೋಕಾಯುಕ್ತರು ಬಿಲ ಕೊರೆಯಲು "ಸಂತೋಷ"ದಿಂದಲೇ ಹೊರಟಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಅಲ್ಲ್ ಸ್ವಾಮೀ ಮ್ಯಾಗ್ ಹೋಗಿರೋ ಬೆಲೀನ ಕಂಬಾ ಹತ್ತಾದ್ರೂ ಕೆಳಕ್ ಇಳಸ್ತೀರೋ ಅಂದ್‌ಕೊಂಡ್ರೆ ನೀವೂ ಈ ಪರಿ ಶಾಕ್ ಕೊಡೋದೇ...ಆ ಕಂಬದ್ ಇಲಾಖ್ಯೆರೋ ನೆಗದ್‌ಬಿದ್ ಹೋಗಾ!

    ಪ್ರತ್ಯುತ್ತರಅಳಿಸಿ
  10. ಕಾಳೂ ಅವರೆ,

    ದೇಶದಲ್ಲಿ ನಿಮ್ಮ ಬೆಲೆನೂ ಜಾಸ್ತಿ ಆಗ್ತಾ ಇದೆ ಅಂತ ಜನ ಎಲ್ಲಾ ಬೊಬ್ಬೆ ಹೊಡೀತಿದ್ದಾರಲ್ಲಾ.... ಅವರೆ ಕಾಳು ಕೈಗೇ ಸಿಗುತ್ತಿಲ್ಲವಂತೆ!!!!

    ಏರುವ ಬೆಲೆಗಳನ್ನು ಪ್ರಧಾನಿಯವರು ನೋಡಲು ಹೋಗಿ ಆಗಸದಲ್ಲಿ ಕೋಲಾಹಲ ಆಗಿದ್ದು ನಿಮಗೆ ಗೊತ್ತಿಲ್ಲವೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D