ಬೊಗಳೆ ರಗಳೆ

header ads

ಪೊಲೀಸರಿಗೆ ಗುರುದಕ್ಷಿಣೆಯಾಗಿ ಕೈ ಕೊಟ್ಟೆ!

(ಬೊಗಳೂರು ಪೋಲಿ-ಶ್ ಬ್ಯುರೋದಿಂದ)
ಬೊಗಳೂರು, ಆ.11- ಪೊಲೀಸರು ಯಾವತ್ತೂ ಕಳ್ಳರನ್ನು, ಅಪರಾಧಿಗಳನ್ನು ಕೈಯಲ್ಲೇ ಹಿಡಿದು ಕರೆದುಕೊಂಡು ಹೋಗುತ್ತಾರೆ, ಬಹುಶಃ ಅವರಿಗೆ ಇಂತಹ ಕೈಗಳು ಇಷ್ಟ ಇದ್ದಿರಬೇಕುಎಂಬುದನ್ನು ತಿಳಿದ ವಿಚಾರಣಾಧೀನ ಕೈದಿಯೊಬ್ಬ ಅವರಿಗೆ ಕೈಗಳನ್ನು ಕೊಟ್ಟು ಓಡಿಹೋದ ಪ್ರಕರಣ ಇಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋ ಅಲ್ಲಿಗೆ ಧಾವಿಸಿತು.
 
ಈ ಹಿಂದೆ ಚಳ್ಳೆ ಹಣ್ಣು ಚೆನ್ನಾಗಿತ್ತು, ಅದಕ್ಕಾಗಿ ತಿಂದೆವು ಎಂದು ಹೇಳಿಕೆ ನೀಡಿದ್ದ ಪೊಲೀಸರೇ ಈ ಬಾರಿಯೂ ಮಾ ಥೂ... ಕತೆಗೆ ಸಿಕ್ಕರು. "ಆತ ಕೈ ಕೊಟ್ಟಾಗ ನಾವು ಬೇಡವೆನ್ನಲಾಗುತ್ತದೆಯೇ, ಎಷ್ಟಾದರೂ ಆತ ಮನುಷ್ಯನಲ್ಲವೇ, ಕೊಟ್ಟವ ಕೋಡಂಗಿ, ಇಟ್ಟುಕೊಂಡವ ಈರಭದ್ರ ಎಂಬೋ ಮಾತನ್ನು ನೀವು ಕೇಳಿಲ್ವೇ? ಆದುದರಿಂದ ನಾವೇ ಈರಭದ್ರರು, ಕೈ ಕೊಟ್ಟವನೇ ಕೋಡಂಗಿ" ಎಂದು ಈ ಪೊಲೀಸರು ತಮ್ಮ ಮಹಾನ್ ಸಾಧನೆಯನ್ನು ಸಮರ್ಥಿಸಿಕೊಂಡರಲ್ಲದೆ, ನಮ್ಮನ್ನೂ ಕೋಡಂಗಿ ಇರಬಹುದೇ ಎಂದು ಸಂಶಯದ ದೃಷ್ಟಿಯಿಂದಲೇ ಬಿರಬಿರನೆ ನೋಡಿದರು.
 
"ಈ ಹಿಂದೆ ಇದೇ ರೀತಿ, ಹೀಗೆ ಸಾಕಷ್ಟು ಚಳ್ಳೆ ಹಣ್ಣು ತಿಂದ ಪೊಲೀಸರನ್ನು ಮನೆಗೆ ಕಳುಹಿಸಲಾಗಿದೆ, ನಿಮಗೆ ಭವಿಷ್ಯದ ಬಗ್ಗೆ ಆತಂಕವಿಲ್ಲವೇ" ಎಂದು ಕೇಳಿದಾಗ, "ಆತಂಕ ಯಾರಿಗ್ರೀ...? ನಮಗೆ ಆಗಾಗ ಈ ರೀತಿಯಾಗಿ ಶ್ರೀಮಂತ ಕಳ್ಳರು, ದರೋಡೆಕೋರರು, ಮಾತ್ರವಲ್ಲದೆ ರಾಜಕಾರಣಿಗಳು ಕೂಡ ಕೈ ಕೊಡುತ್ತಾ ಇದ್ದರು. ಅವರು ಬರೇ ಕೈ ಕೊಟ್ಟಿರಲಿಲ್ಲ. ಕೈಯೊಳಗೆ ದೊಡ್ಡ ದೊಡ್ಡ ಇಡುಗಂಟನ್ನೂ ಕೊಡುತ್ತಿದ್ದರು. ಅದು ಕೊಳೆಯುವಷ್ಟಿದೆ. ಅಷ್ಟು ಮಾತ್ರವೇ ಅಲ್ಲ, ಪಾಪದವರನ್ನು ಬೆದರಿಸುವ ಮೂಲಕವೂ ನಾವು ಸಾಕಷ್ಟು ಸಂಪಾದಿಸಿದ್ದೇವೆ, ಜೀವಮಾನವಿಡೀ ದುಡಿಯಬೇಕು ಎಂಬುದೇ ನಿಮ್ಮ ಅಭಿಪ್ರಾಯವೇ?" ಎಂದು ಬ್ಯುರೋ ಸಿಬ್ಬಂದಿಯನ್ನೇ ಪ್ರಶ್ನಿಸಿದರು.!!!
 
ಆ ಬಳಿಕ, ಪೊಲೀಸರಿಗೆ ಕೈಕೊಟ್ಟು, ಕೈ ಕಳೆದುಕೊಂಡ ಆರೋಪಿ ನಾಗೇಂದ್ರ ಚಡ್ಡಿಯನ್ನು ಮಾತನಾಡಿಸಲಾಯಿತು. ಆತನಿಂದ ದೊರೆತ ಉತ್ತರ ಮಾತ್ರ ನೀಡಲಾಗುತ್ತದೆ, ಯಾಕೆಂದರೆ ಪ್ರಶ್ನೆ ಕೇಳುವುದಕ್ಕೆ ಆತ ನಮಗೆ ಅವಕಾಶವೇ ನೀಡಿರಲಿಲ್ಲ ಎಂದು ನಾವು ಔಪಚಾರಿಕತೆಗಾಗಿ ಹೇಳುತ್ತಿದ್ದೇವೆ. ವಾಸ್ತವವಾಗಿ ಆತನನ್ನು ಪ್ರಶ್ನಿಸುವ ಧೈರ್ಯ ನಮ್ಮ ತಂಡಕ್ಕಿಲ್ಲ ಎಂಬುದು ಗುಟ್ಟಿನ ವಿಷಯ!
 
ಆತನೇ ಮಾತನಾಡುತ್ತಾ ಹೋದಂತೆ, ನಮ್ಮ ಬ್ಯುರೋ ಸಿಬ್ಬಂದಿ ತಮ್ಮ ಬೆರಳುಗಳನ್ನು ಭದ್ರವಾಗಿ ಹಿಡಿದುಕೊಂಡು ಬರೆಯುತ್ತಾ ಹೋದರು.
 
"ನಾನು ನನ್ನ ಸ್ನೇಹಿತನ ತಲೆ, ಹೆಬ್ಬೆಟ್ಟು ಮುಂತಾದವನ್ನು ಕಡಿದು ಎಷ್ಟೊಂದು ಕಷ್ಟಪಟ್ಟು ಈ ಜೈಲಿಗೆ ಬಂದೆ! ಪುರಾಣದಲ್ಲಿ ಅಂದರೆ ಮಹಾಭಾರತದಲ್ಲಿ ನೀವು ಏಕಲವ್ಯನ ಕಥೆ ಕೇಳಲಿಲ್ವೇ? ಆತ ತನ್ನ ಬೆರಳಿನ ತುಂಡನ್ನಷ್ಟೇ ಗುರು ದ್ರೋಣಾಚಾರ್ಯರಿಗೆ ಕಡಿದು ಕೊಟ್ಟ. ನಾನು ಅವನಿಗಿಂತ ದೊಡ್ಡ ಸಾಧನೆ ಮಾಡಿದ್ದೇನೆ. ಪೊಲೀಸರಿಗೆ ಇಡೀ ಕೈಕೊಟ್ಟು ಬಂದಿದ್ದೇನೆ. ಪೊಲೀಸರು ಕೂಡ ತುಂಬಾ ದಯಾಮಯಿಗಳು. ನನ್ನ ಕೈಗೆ ಕೋಳ ತೊಡಿಸಿರಲಿಲ್ಲ. ಅಷ್ಟು ದೊಡ್ಡ ದಯಾಪರತೆ ತೋರಿದ ಪೊಲೀಸರಿಗೆ ಗುರುದಕ್ಷಿಣೆ ರೂಪದಲ್ಲಿ ಕೈಕೊಡದಿದ್ದರೆ ಹೇಗೆ" ಎಂದು ಪ್ರಶ್ನೆಯಲ್ಲೇ ಆತ ಮಾತು ಮುಗಿಸಿದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಈ ಪೋಲಿಗಳು ದೊಡ್ಡೋರ ಮಾತು ಕೇಳೋಲ್ಲ. ಸುಮ್ ಸುಮ್ನೆ ಹೇಳೋಲ್ಲ, ಗಂಡಸರ ಕೈ ಹೆಂಗಸಿಗೆ ಕೊಟ್ರೆ ಎಲ್ಲವೂ ಸುರಕ್ಷಿತವಾಗಿರತ್ತೆ. ಗಂಡು ಪೋಲಿ ಕೈಗೆ ಕಳ್ಳಿಯ ಕೈಯನ್ನೂ, ಹೆಣ್ಣು ಪೋಲಿ ಕೈಗೆ ಕಳ್ಳನ ಕೈಯನ್ನೂ ಕೊಡಲಿ ನೋಡಿ, ಅದು ಹ್ಯಾಗೆ ಪರಾರಿ ಆಗ್ತಾರೆ ನೋಡೋಣ.

  ಪ್ರತ್ಯುತ್ತರಅಳಿಸಿ
 2. ಗುರುದಕ್ಷಿಣೆಯಾಗಿ ಕೈ ಕೊಟ್ಟೆ - ಈ ಮಾತಿನಲ್ಲಿ ಏನೋ ಅಡಗಿದೆಯಲ್ಲಾ? ಅಂದರೆ ಕಳ್ಳರಿಗೆ ಪೋಲೀಸರೇ ಗುರು ಎಂದು ನೀವು ಹೇಳುತ್ತಿದ್ದೀರಾ?ಇದನ್ನು ಅಖಿಲ ಕರ್ನಾಟಕ ಪೋಲಿ - ಈಸರ ಸಂಘ ಪ್ರತಿಭಟಿಸುತ್ತಿದೆ.

  -ಪಬ್

  ಪ್ರತ್ಯುತ್ತರಅಳಿಸಿ
 3. ಮಾವಿನಯನಸರೆ,
  ರಳ್ಳನ ಕೈಯನ್ನು ಕೊಡಲಿ ನೋಡಿ ಎಂದಾಗ ಕೊಡಲಿ ಏಟು ಕೊಟ್ಟು ನೋಡಿ ಎಂದಾಗೆ ಕೇಳಿಸಿತು... ನಿಮ್ಮ ಕೈ ಯಾರ ಬಳಿ ಇದೆ?

  ಪ್ರತ್ಯುತ್ತರಅಳಿಸಿ
 4. ತುಂಬಾ ದಿನಗಳ ಬಳಿಕ ಪಬ್‌ನಿಂದ ಎಚ್ಚೆತ್ತುಕೊಂಡು ಬಂದ ಅನಾನಿಮಸರೇ,

  ಪಬ್ಬಿನಲ್ಲೇ ಇದ್ದರೂ ನಿಮ್ಮ ಪ್ರಜ್ಞೆ ತಪ್ಪದೇ ಪೊಲೀಸರಿಗೆ ಕಳ್ಳರೂ, ಕಳ್ಳರಿಗೆ ಪೊಲೀಸರೂ ಗುರುಗಳು ಅಂತ ಪತ್ತೆ ಹಚ್ಚಿದ್ದಕ್ಕೆ ಶಹ-ಪಬ್ಬಾಸ್...!

  ಪ್ರತ್ಯುತ್ತರಅಳಿಸಿ
 5. ಭಗವಂತ ಇಂಥವರಿಗೆ ಕೈ ಕೊಟ್ಟು ತಪ್ಪು ಮಾಡಿದ, ಪೋಲೀಸ್ ನೋರಿಗೆ ಇನ್ನೊಂದು ಕೈ ಎಕ್ಸ್‌ಟ್ರಾ ಕೊಡಬೇಕಿತ್ತು!

  ಪ್ರತ್ಯುತ್ತರಅಳಿಸಿ
 6. ಇದು ನಿಜವಾಗಿ ನಡೆದ ಘಟನೆ ಅಲ್ಲ, "ಪೋಲೀಸ್ ದಾದಾ" ಚಿತ್ರದ ಚಿತ್ರೀಕರಣವನ್ನು ನೋಡಿ ಪತ್ರಿಕೆಗಳು ತಪ್ಪಾಗಿ ವರದಿ ಮಾಡಿವೆಯಂತೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D