Subscribe Us

ಜಾಹೀರಾತು
header ads

ರಕ್ಷಾ ಬಂಧನವೂ... ಶಿಕ್ಷಾ ಬಿಡುಗಡೆಯೂ...!

(ಬೊಗಳೂರು ಶಿಷ್ಟ-ರಕ್ಷಕ ಬ್ಯುರೋದಿಂದ)
ಬೊಗಳೂರು, ಆ.10- ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ, ಮಡಕೆ ಒಡೆಯುವ ಸ್ಪರ್ಧೆಗಳೆಲ್ಲಾ ಅಲ್ಲಲ್ಲಿ ನಡೆಯುತ್ತದೆ ಅಂತ ಕೇಳಿದ್ದೇವೆ. ಆದರೆ ರಕ್ಷಾ ಬಂಧನ ದಿನದಂದೇ ಇದೇ ಮೊಸರು ಕುಡಿಕೆ ಒಡೆಯುವಂತಹ ಸ್ಪರ್ಧೆ ನಡೆದಿರುವುದು ಕುತೂಹಲ ಮೂಡಿಸಿರುವುದರಿಂದ ಬೊಗಳೆ ರಗಳೆ ಬ್ಯುರೋ ಇದರ ತನಿಖೆಗಾಗಿ ತನ್ನ ಅಭಿಯಾನ ಕೈಗೊಂಡಿತ್ತು.

ಕಾಲೇಜುಗಳಿಗೆ ರಕ್ಷಾ ಬಂಧನದಂದು ಭೇಟಿ ಕೊಟ್ಟ ದಿನ ಕಂಡುಬಂದ ಚಿತ್ರ ವಿಚಿತ್ರ ಸನ್ನಿವೇಶಗಳು ಬ್ಯುರೋ ಸಿಬ್ಬಂದಿಯ ಮನ ಕಲಕುವಂತೆ ಮಾಡಿದವು. ರಕ್ಷಾ ಬಂಧನ ಎಂಬುದನ್ನು ಶಿಕ್ಷೆ ಮತ್ತು ಬಂಧನ ಎಂದು ಭಾವಿಸಿದ ಕೆಲವರು ಕಾಲೇಜಿನಿಂದಲೇ ನಾಪತ್ತೆಯಾಗಿದ್ದರು.

ಕೆಲವು ಹುಡುಗರು ಕಣ್ಣೀರಿನ ಹೊಳೆಯಲ್ಲಿ ಈಜಾಡುತ್ತಾ ಇದ್ದರೆ, ಮತ್ತೆ ಕೆಲವರು ಕೈ ತೊಳೆಯುತ್ತಿದ್ದರು. ಇನ್ನು ಕೆಲವರು ಗಂಗೇಚ ಯಮುನೇಚ ಗೋದಾವರೀ, ಸರಸ್ವತಿಯರನ್ನು ಸೃಷ್ಟಿಸುತ್ತಿದ್ದರು.

ಅಷ್ಟರಲ್ಲಿ ಕಂಡದ್ದು, ಬಣ್ಣ ಬಣ್ಣದ ಚಿಟ್ಟೆಗಳ ದಂಡೊಂದು ಕಾಲೇಜಿನ ಮುಖ್ಯ ಅಪಾಪೋಲಿ ಹುಡುಗನೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗುತ್ತಿತ್ತು. ವಾಸ್ತವವಾಗಿ ಈ ಹುಡುಗೀರ ದಂಡು ಆತನನ್ನು ಆಟ್ಟಾಡಿಸುತ್ತಿರಲಿಲ್ಲ, ಆತನೇ ಅವರ ಕೈಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಎಂಬುದು ಆ ಬಳಿಕದ ತನಿಖೆಯಿಂದ ತಿಳಿದುಬಂದಿದೆ.

ಮತ್ತೊಂದೆಡೆ, ಶ್ರೀಕೃಷ್ಣ ಜನ್ಮಾಷ್ಟಮಿ ದಿನ ನಡೆಯುವ ಮೊಸರು ಕುಡಿಕೆ ಉತ್ಸವ ನಡೆಯುತ್ತಿದೆಯೋ ಅಂತ ನೋಡಲು ಹೋದಾಗ ನಾವು ಬೇಸ್ತು ಬಿದ್ದಿದ್ದು, ಅದು ರಾಖಿ ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಯತ್ನ ಎಂಬುದು ಆ ಬಳಿಕ ತಿಳಿದುಬಂತು.

ಇದರ ನಡುವೆಯೂ ರಕ್ಷಾ ಬಂಧನ ಆಚರಣೆಯು ತಮಗೆ ಶಿಕ್ಷೆಯಿಂದ ಬಿಡುಗಡೆ ಎಂದು ಭಾವಿಸಿದ ಕಾಲೇಜು ತರುಣಿಯರು ಮಾತ್ರವೇ ಅಲ್ಲಲ್ಲಿ ಬಿದ್ದು... ಬಿದ್ದು.... ನಗುತ್ತಿದ್ದರು ಮತ್ತು ನಕ್ಕು ನಕ್ಕು ಬೀಳುತ್ತಿದ್ದರು. ಕೆಲವರಂತೂ ಜೋರಾಗಿ "ಸದ್ಯ ಪೀಡೆ ತೊಲಗಿಸಿಕೊಂಡೆನಲ್ಲಾ..." ಎಂಬ ಅತ್ಯುತ್ಸಾಹದಿಂದ ಬಿಟ್ಟ ನಿಟ್ಟುಸಿರಿನ ವೇಗಕ್ಕೆ ಎದುರಿಗಿದ್ದ ನವರಸ ನಾಯಕರು ಅಷ್ಟು ದೂರ ನೆಗೆದು ಬೀಳುತ್ತಿದ್ದರು. ನನಗೊಬ್ಬ ಉತ್ತಮ ಸಹೋದರ ದೊರೆತನಲ್ಲಾ ಎಂದು ಸಂತಸಪಟ್ಟವರೂ ಅಲ್ಲಲ್ಲಿ ಧನ್ಯತಾಭಾವ ಪ್ರಕಟಿಸುತ್ತಿದ್ದವರಿಗೂ ಅಲ್ಲಿ ಕೊರತೆಯಿರಲಿಲ್ಲ.

ಒಟ್ಟಿನಲ್ಲಿ ರಕ್ಷಾ ಬಂಧನವನ್ನು ಜನ್ಮಾಷ್ಟಮಿಯಂತೆ ಆಚರಿಸಿ, ಮಡಿಕೆ ಒಡೆಯುವ ಬದಲು ಹೃದಯ ಒಡೆಯುವ ಸ್ಪರ್ಧೆ ಏರ್ಪಡಿಸಿದ ಬಣ್ಣದ ಚಿಟ್ಟೆಗಳ ವಿರುದ್ಧ ಪ್ರತಿಭಟನೆಗೆ ನವರಸಿಕ ನಾಯಕರು ಸಿದ್ಧರಾಗುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿಯೂ ತನಿಖೆ ವೇಳೆ ಹೊರಬಿದ್ದಿದ್ದು, ಈ ಕುರಿತ ಗುಪ್ತಚರ ದಳದ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ.

ರಕ್ಷಾ ಬಂಧನ ದಿನವನ್ನೇ ಅಕ್ಕ-ತಂಗಿಯಂದಿರು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೆ ಬಳಸಿಕೊಳ್ಳತೊಡಗಿರುವುದು ವಿಶೇಷ. ರಾಖಿ ಎಂಬ ಹೊಸ ಆಯುಧದ ಬಗ್ಗೆ ಎಲ್ಲಾ ಸೋದರಿಯರು ಸಂತಸಚಿತ್ತರಾಗಿದ್ದಾರೆ ಎಂಬ ಅಮೂಲ್ಯ ಮಾಹಿತಿಯೂ ಇದೇ ವೇಳೆ ದೊರಕದೇ ಬಿಡಲಿಲ್ಲ.

Post a Comment

6 Comments

 1. A aapapli hudaga neevena aMta beMd-KaaLurunalli suddi habbide...
  `

  ReplyDelete
 2. ಮಹಾಂತೇಶರೇ, ಅದು ಗುರ್ರ್..... ಗಾಂವಿನಿಂದ ನಿಮ್ಮ ಮಿತ್ರರು ಕಳುಹಿಸಿದ ಫೋಟೋ... :)
  ನಾನಂತೂ ಅಲ್ಲಿಗೆ ಇದುವರೆಗೆ ಹೋಗಿಲ್ಲ, ಆಲ್ಲಿಂದ ಓಡಿಸಿಕೊಂಡೋರು ನೀವೇ... :)

  ReplyDelete
 3. ಸಾಕಿ ವಸ್ತ್ರಾಂತ್ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲಿ ಎಂದು ಆಕೆ ಬೊ-ರ ವರದಿಗಾರರಿಗೆ ರಾಖಿ ಕಟ್ಟಿದರು ಎಂಬುದು ನಾನು ಕೇಳಿದ ಸುದ್ದಿ. ಅದು ಹೌದೇ?

  ರಕ್ಷಾಬಂಧನ ದಿನದಂದೂ ಮಡಕೆಒಡೆಯುತ್ತಾರೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ.

  ReplyDelete
 4. ಹೌದು ಮಾವಿನಯನಸರೆ,
  ರಾಖೀ ಸಾವಂತ್ ಕಟ್ಟಿದ ರಾಖಿ ಆಕೆ ತೊಟ್ಟಿದ್ದ ಉಡುಗೆಯಷ್ಟೇ ಚಿಕ್ಕದಿದ್ದ ಕಾರಣ, ಅದನ್ನು ಬೆರಳಿಗೆ ಮಾತ್ರವೇ ಕಟ್ಟಿಕೊಳ್ಳಲಾಗಿದೆ.

  ಜನ್ಮಾಷ್ಟಮಿಯಂದು ಮಡಕೆ ಒಡೆಯುವುದಾದರೆ, ರಕ್ಷಾ ಬಂಧನದಂದು ಗೋವಿಂದಾ.....ಅಂತ ಒಡೆಯುವುದು ಬುರುಡೆ.

  ReplyDelete
 5. ಭೂತಕ್ಕೆ ಈ ನಡುವೆ ಅಂತರ್ ಜಾಲದ ಬಳಿ ಸುಳಿದಾಡಲಾಗುತ್ತಿಲ್ಲ. ಕಾರಣ ನೆಟ್ ಇಲ್ಲ :(

  ಇಂದು ಬಂದಿದ್ದು ಒಳ್ಳೆದೇ ಆಯಿತು. ಇಟ್ಟಡಿಸಿಕೊಂಡು ರಾಖಿ ಕಟ್ಟಲು ಹೆಣಗಾಡುತ್ತಿರುವ ಹುಡಿಗಿಯರ ಬಗ್ಗೆ ತಿಳಿಯಿತು. ನಮ್ಮ ಭೂತ ಸಂಸ್ಕೃತಿಯಲ್ಲಿ ಸದ್ಯ ಈ ಥರಹ ಇಲ್ಲ. ಬದುಕಿತು ಭೂತ ;)

  ನಮ್ಮಲ್ಲಿ ಏನಿದ್ದರು, "ಬನ್ನಿ ಬನ್ನಿ, ಅರ್ದ ಪ್ರಾಣ ತನ್ನಿ" ಅನ್ನೊರು ಜಾಸ್ತಿ :D

  ಭೂತ

  ReplyDelete
 6. ಭೂತಕ್ಕೆ ಬಲೆ ಬೀಸುವವರು ಯಾರೂ ಇಲ್ಲದೆ ನಿರಾಸೆಯಾಗಿದೆ ಅಂತ ತಿಳಿದು ಸಂತೋಷವಾಯಿತು.

  ಭೂತದ ಕಾಟ ಮತ್ತೆ ಆರಂಭವಾಗಿದ್ದಕ್ಕೂ...

  ReplyDelete

ಏನಾದ್ರೂ ಹೇಳ್ರಪಾ :-D