Election FLASH: ಮಿತ್ರರಲ್ಲ, ಶತ್ರುಗಳೂ ಅಲ್ಲ

Tuesday, May 19, 2009

(ಬೊಗಳೂರು ಫ್ಲ್ಯಾಶ್ ನ್ಯೂಸ್ ಬ್ಯುರೋದಿಂದ)
* ದೇಶಾದ್ಯಂತ ಕಳ್ಳರ ಕಾಟ ಜಾಸ್ತಿಯಾಗಿದೆ. ಇದಕ್ಕೆ ಕಾರಣವೆಂದರೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹಿಂಬಾಗಿಲನ್ನು ಮುಕ್ತವಾಗಿ ತೆರೆದಿಟ್ಟಿರುವುದು.

* ಆಕ್ಸ್‌ಫರ್ಡ್ ಡಿಕ್ಷ'ನರಿ'ಯಿಂದ ಗುಳ್ಳೆ ನರಿ, ಅವಕಾಶವಾದಿ ಮುಂತಾದ ಅಮೂಲ್ಯ ಪದಗಳನ್ನು ತತ್ಕಾಲಕ್ಕೆ ತಡೆಹಿಡಿಯಲಾಗಿದೆ.

* ಡಿಕ್ಷ-ನರಿಯಿಂದ ವಿಶೇಷವಾಗಿ 'ಶತ್ರು, ವೈರಿ' ಎಂಬಿತ್ಯಾದಿ ಪದಗಳನ್ನು ಸರಕಾರ ಸ್ಥಾಪನೆಯಾಗುವವರೆಗೂ ತಡೆಹಿಡಿಯಲು ನಿರ್ಣಯ ಕೈಗೊಳ್ಳಲಾಗಿದೆ.

* 'ಕೋಮುವಾದಿ, ಜಾತ್ಯತೀತ' ಎಂಬ ವಿರುದ್ಧಾರ್ಥಕ ಪದಗಳನ್ನು ಬಳಸದಿರಲು ಮತ್ತು ಬಳಸಿದರೂ ಅದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಉಲ್ಲೇಖಿಸಲು ನಿರ್ಣಯ ಕೈಗೊಳ್ಳಲಾಗಿದೆ.

* ಹೆಚ್ಚು ಹೆಚ್ಚು 'ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ' ಎಂಬ ವಾಕ್ಯಸಮೂಹವನ್ನೇ ಬಳಸಲು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದ್ದು, 'ರಾಜಕೀಯದಲ್ಲಿ ಯಾರೂ ಮಿತ್ರರಲ್ಲ' ಎಂಬ ವಾಕ್ಯಸಮೂಹವನ್ನು ಸದ್ಯಕ್ಕೆ ತೆರೆಯ ಮರೆಯಲ್ಲಿ ಮತ್ತು ಮರೆಯ ತೆರೆಯಲ್ಲಿ ಇರಿಸಲು ನಿರ್ಣಯ ಸ್ವೀಕರಿಸಲಾಗಿದೆ.

* ಪಕ್ಷದ ತತ್ವಗಳು, ಪಕ್ಷದ ಸಿದ್ಧಾಂತಗಳು ಇವೆಲ್ಲವನ್ನೂ ಕಸದ ಬುಟ್ಟಿಗೆ ಹಾಕಲು ಸರ್ವಪಕ್ಷಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಅದು ತೀರಾ ಹಗುರವಾಗಿರುವುದರಿಂದ ಗಾಳಿಯಲ್ಲಿ ತೂರುವುದಕ್ಕೂ ಸಿದ್ಧತೆಗಳನ್ನು ಮಾಡಲಾಗಿದೆ.

* ಜಾತ್ಯತೀತ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಶತ್ರುಗಳಾಗಿದ್ದವರನ್ನು, ಕೈಕೊಟ್ಟು ಓಡಿ ಹೋದ ಪ್ರೇಮಿಗಳನ್ನು, ಮುನಿಸಿಕೊಂಡು ವಿಚ್ಛೇದನ ನೀಡಿದವರನ್ನು ಮರಳಿ ರಾಜ ಮರ್ಯಾದೆಯಿಂದ ಕರೆತಂದು ಕ್ಷಮೆ ಯಾಚಿಸುವ ಅಥವಾ ಕ್ಷಮೆ ಕೇಳುವಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

* ಏನೇ ಹೇಳದಿದ್ದರೂ ನಾನು ಕ್ಷಮೆ ಯಾಚಿಸುತ್ತೇನೆ ಎಂದು ನಾಚಿಕೆ, ಮಾನ ಮತ್ತು ಮರ್ಯಾದೆಗಳೆಂಬ ರಾಜಕೀಯ ವಿರೋಧಿ-ಗುಣಗಳನ್ನು ಪಕ್ಕದ ರೀಸೈಕಲ್ ಬಿನ್‌ಗೆ ಹಾಕಲು ನಿರ್ಧರಿಸಲಾಗಿದೆ.

6 ಕಾಮೆಂಟ್:

Jayalakshmi May 19, 2009 4:32 PM  

Flash News is really flashig with vibrant colours.

shivu May 19, 2009 6:09 PM  

ಸರ್,

ನ್ಯೂಸ್ ನಿಜಕ್ಕೂ ಬಣ್ಣಮಯವಾಗಿಯೇ ಇದೆ...ಖುಷಿಯಾಯಿತು..

sunaath May 20, 2009 9:52 PM  

ಇದು ಹೈಬ್ರಿಡ್ ರಾಜಕೀಯ!

ಅನ್ವೇಷಿ May 23, 2009 9:34 AM  

ಜಯಲಕ್ಷ್ಮಿ ಅವರೆ, ಬೊಗಳೂರಿಗೆ ಆದರದ ಸ್ವಾಗತ.
ಈ ವ-ರದ್ದಿಗಳು ನಮ್ಮ ಮಂಡೆಗೆ ಫ್ಲ್ಯಾಶ್ ಆಗದಿದ್ದರೂ, ನಿಮ್ಮ ಕಣ್ಣು ಕುಕ್ಕುವಷ್ಟರ ಮಟ್ಟಿಗೆ ಫ್ಲ್ಯಾಶ್ ಆಗಿದೆ ಅಂತ ಕೇಳಿ ಭಯಾತಂಕವಾಯ್ತು. ಕಡ್ಡಾಯವಾಗಿ ಕ್ಷಮ್ಸಿ ಅಂತ ಬೊಗಳೂರು ಮಂದಿ ಕೇಳಿಕೊಳ್ತಾ ಇದ್ದಾರೆ.

ಅನ್ವೇಷಿ May 23, 2009 9:38 AM  

ಶಿವು ಅವರೆ,
ನೀವಿಲ್ಲಿ ಬಣ್ಣಾ ಬಣ್ಣಾ ಒಲವಿನ ಬಣ್ಣ ಅಂತ ಪಿಚಕಾರಿ ಹಿಡಿದುಕೊಂಡು ಓಕುಳಿಯಾಟಕ್ಕೆ ಹೊರಟಿರುವುದು ನಮಗೂ ಸಂತೋಷವಾಗಿಬಿಟ್ಟಿದೆ.

ಅನ್ವೇಷಿ May 23, 2009 9:39 AM  

ಸುನಾಥರೆ,
ಈ ಬಗೆಯ ರಾಜಕೀಯ ತಳಿಗಳ ನಿರ್ನಾಮಕ್ಕೆ ಮತದಾರರು ಈ ಬಾರಿ ಒಂದಷ್ಟು ಯೋಚಿಸಿ ಯೋಚಿಸಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದರಿಂದಾಗಿಯೇ ಪ್ರಾದೇಶಿಕ ಪಕ್ಷಗಳಿಗೆ ಅಲ್ಲಲ್ಲಿ ಒಂದಷ್ಟು ಆಘಾತವಾಗಿದೆ. ಈ ಹೈಬ್ರಿಡ್ ಕಳೆಗಳನ್ನು ಕೀಳಬೇಕಾಗಿದೆ.

Post a Comment

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

About This Blog

  © Blogger template Foam by Ourblogtemplates.com 2009

Back to TOP