(ಬೊಗಳೂರು ಪಿತ್ತ ಇಲಾಖೆ ಬ್ಯುರೋದಿಂದ)
[ಈಗಾಗಲೇ ಅಪ್ಪನಿಗೆ ಗೊತ್ತಿಲ್ಲದಂತೆ ಮಗ ಕುಮಾರ, ದಿಲ್ಲಿ ಮೇಡಂ ಮನೆಗೆ ಎಸಿ ಕಾರಿನಲ್ಲಿ ಬೆವರುತ್ತಾ ಗುಪ್ತವಾಗಿ ನುಗ್ಗಿ ಬಂದಿರುವುದನ್ನು ಇಲ್ಲಿ ಪ್ರಕಟಿಸಲಾಗಿರುವುದರಿಂದ ಈ ವಿಶೇಷ ವರದ್ದಿ.]
ಬೊಗಳೂರು, ಮೇ. 13- ಜಾಗತಿಕವಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಈಗಷ್ಟೇ ಎಚ್ಚೆತ್ತುಕೊಂಡಿರುವ ಬೊಗಳೂರು ಕೇಂದ್ರ ಸರಕಾರವು, ಕುದುರೆಗಳ ರಕ್ಷಣೆ, ಸಾಕಣೆ, ಅಭಿವೃದ್ಧಿ, ಇತ್ಯಾದಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಜನತೆಗೆ ಮನವಿ ಮಾಡಿಕೊಂಡಿದೆ.

ಇದೇನಪ್ಪಾ, ಕುದುರೆ ಸಾಕುವುದಕ್ಕೂ ಜಾಗತಿಕ ಆರ್ಥಿಕ ಸ್ಥಿತಿಗೂ ಎತ್ತಣಿಂದೆತ್ತಣ ಸಂಬಂಧ ಎಂದೆಲ್ಲಾ ಬಡಬಡಿಸುತ್ತಿರುವವರಿಗೆ ಸ್ಪಷ್ಟನೆ ನೀಡುವುದಕ್ಕಾಗಿಯೇ ರದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಗಳೂರು ಪಿತ್ತ ಸಚಿವರು, ಈಗಷ್ಟೇ ಚುನಾವಣೆಗಳು ಮುಗಿಯುವ ಹಂತದಲ್ಲಿದೆ. ಇದುವರೆಗೆ ನಾವು ಕತ್ತೆಗಳು ಎಂದು ತಿಳಿದುಕೊಂಡ ಮತದಾರರನ್ನು ಮನಬಂದಂತೆ ಓಲೈಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಮತದಾರರು ಈ ಓಲೈಕೆಯ ಅಮಲಿನಲ್ಲಿ ಮತ ನೀಡಿರುವುದರಿಂದಾಗಿ ಅತಂತ್ರ ಸಂಸತ್ತು ನಿರ್ಮಾಣವಾಗಿ ನಮಗೆ ದೊರೆಯುವ ಸಂಪತ್ತು ಕೂಡ ಅತಂತ್ರವಾಗುವ ಸಾಧ್ಯತೆಯಿದೆ ಎಂದು ವಿವರಣೆ ನೀಡಿದರು.

ತಕ್ಷಣವೇ ಮಧ್ಯೆ ಬಾಯಿ ಹಾಕಿದ ಬೊಗಳೂರು ವರದ್ದಿಗಾರರು, ಕುದುರೆ ಬಗ್ಗೆ ಹೇಳಿ, ಹಯೋದ್ಯಮದ ಬಗ್ಗೆ ಹೇಳಿ ಎಂದು ಬೊಬ್ಬಿರಿದರು.

ಸಾವರಿಸಿಕೊಂಡ ಪಿತ್ತಸಚಿವರು (ಅವರ ಹೆಸರು ಏನೆಂದು ಮರೆತುಹೋಗಿದೆ, ಅಥವಾ ಪಿತ್ತ ಸಚಿವರು ಎಂಬೊಂದು ಹುದ್ದೆ ಇದೆಯೇ ಇಲ್ಲವೇ ಎಂಬುದೂ ತಿಳಿದಿಲ್ಲ), ಸಂಬಂಧ ಇದೆ ಕಣ್ರೀ, ಬಾಯ್ಮುಚ್ಚಿ ಎಂದು ಧೈರ್ಯವಾಗಿಯೇ ದಬಾಯಿಸಿದರು. ಅವರ ಧೈರ್ಯಕ್ಕೆ ಕಾರಣವೆಂದರೆ, ಈಗಾಗಲೇ ನಮ್ಮ ವರದ್ದಿಗಾರರ ಓಟು ಚಲಾವಣೆಯಾಗಿದೆ ಎಂಬ ಒಣಧೈರ್ಯ.

ನಾಲಿಗೆ ಮತ್ತಷ್ಟು ಉದ್ದ ಚಾಚಿದ ಅವರು, ಮತದಾರರ ಕರ್ತವ್ಯ ನಿಭಾಯಿಸಿ ಆಗಿದೆ. ಇನ್ನು ಅವರಿಂದ ನಮಗೆ ಬರಬೇಕಾದ್ದು ಅಥವಾ ಆಗಬೇಕಾದ್ದು ಏನೂ ಇಲ್ಲ. ಆದರೆ ಅವರು ಯಾರನ್ನು ಆರಿಸಿ ಕಳುಹಿಸಿದ್ದಾರೋ ಅವರಲ್ಲಿ ನಮಗೆ ಕೆಲಸವಿದೆ. ಹೀಗಾಗಿ ಕುದುರೆ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.

ಹೇಗೂ ಅತಂತ್ರ ಸಂಸತ್ತು ಸೃಷ್ಟಿಯಾಗುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಕುದುರೆಗಳು ಮಾರಾಟಕ್ಕೆ ಲಭ್ಯವಿವೆ. ಲಕ್ಷ ಲಕ್ಷ ತೆತ್ತು ಖರೀದಿಸಬಹುದಾದರೂ, ಈಗ ಲಕ್ಷ ಎಂಬುದು ಲಕ್ಷ್ಯವೇ ಅಲ್ಲ. ಹೀಗಾಗಿ ಕೋಟಿ ಕೋಟಿಯ ನೋಟುಗಳೇ ಬೇಕಾಗುತ್ತವೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಆದರೆ ಈಗ ಭಾರೀ ಭವಿಷ್ಯವಿರುವ, ಭರವಸೆಯ recession ಸಂದರ್ಭದಲ್ಲಿ ಏಕೈಕ ಆಶಾಕಿರಣವಾಗಿರುವ ಈ Horse Trading ನಲ್ಲಿ ಹಾಕಿದ ಬಂಡವಾಳವನ್ನು ಅಧಿಕಾರಕ್ಕೇರಿದ ಎರಡೇ ದಿನಗಳಲ್ಲಿ ವಾಪಸ್ ಪಡೆಯಬಹುದಾದಷ್ಟು ಲಾಭದಾಯಕ ಉದ್ಯಮವಿದು ಎಂದು ಅವರು ಸ್ಪಷ್ಟಪಡಿಸಿದರು.

ಇದು ಸ್ಪರ್ಧಾತ್ಮಕ ಯುಗವಾಗಿರುವುದರಿಂದ ನಮಗೆ ಸಮರ್ಥ ಕುದುರೆ ದೊರೆಯದಿದ್ದರೆ ಕುದುರೆ-ಕತ್ತೆ ಮಿಶ್ರತಳಿಗಳಾದ ಹೇಸರಗತ್ತೆಗಳು ಕೂಡ ಆಗುತ್ತವೆ ಎಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕುರಿಗಳನ್ನು ನಾವು ಹಣ-ಹೆಂಡ ಕೊಟ್ಟು ಖರೀದಿಸಿಯಾಗಿದೆ. ಅವುಗಳು ತಕ್ಕಮಟ್ಟಿಗಷ್ಟೇ ಲಾಭ ತಂದಿತ್ತಿವೆ. ಇನ್ನು ಮುಂದೆ ನಮಗೆ ಕುದುರೆ ವ್ಯಾಪಾರವೇ ಏಕೈಕ ಆಶಾವಾದ ಎಂದೂ ಅವರು ಹೇಳಿದರು.

2 Comments

ಏನಾದ್ರೂ ಹೇಳ್ರಪಾ :-D

 1. ಕತ್ತೆ ಕಿಮ್ಮತ್ತು ಕತ್ತೆಗೆ, ಕುದುರೆ ಕಿಮ್ಮತ್ತು ಕುದುರೆಗೆ!
  ಕತ್ತೆಗಳ ಕಾಲುಗಳನ್ನು ಹಿಡಿದವರೆಲ್ಲ, ಆ ಬಳಿಕ ಕುದುರೇ ಬಾಲವನ್ನು ಹಿಡಿಯಲೇ ಬೇಕಾಗುತ್ತದೆ.
  ತಮ್ಮ ಲಾಯದಲ್ಲಿ ಎರಡೇ ಕುದುರೆಗಳು ಇರಲಿ,ಆ ಕುದುರೆಗಳ jockeyನೇ ಸರ್ಕಸ್ ಕಂಪನಿಯ ಜೋಕರ!
  ಇದೆಲ್ಲಾ ತಿಳಿದದ್ದಕ್ಕೇ ಜೋಕು-ಮಾರ ಸ್ವಾಮಿಯು ಡಿಲ್ಲಿಯಲ್ಲಿ ಲಾಗ ಹಾಕ್ತಿರೋದು!

  ReplyDelete
 2. ಸುನಾಥರೆ,
  ಈ ಬಾರಿ ಕಿಮ್ಮತ್ತು ಕಡಿಮೆಯಾಗಿದೆ. ಕುದುರೆ ವ್ಯಾಪಾರಕ್ಕೂ ಅವಕಾಶವಿಲ್ಲದಂತಾಗಿದೆ. ಮ್ಯಾಮ್‌ಮೋಹನ್ ಸಿಂಗೇ ಮರಳಿ ಕಿಂಗು.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post