ಬೊಗಳೆ ರಗಳೆ

header ads

ರಸ್ತೆ ಗುಂಡಿಗಳಿಂದ ಮಹಾನರಕಕ್ಕೆ ಕೆಟ್ಟ ಹೆಸರು: ಮೂಗ್ನಲ್ಲೂ ಕನ್ನಡ ಪದವಾಡೋಕೆ ತ್ರಾಸ

ಬೊಗಳೂರು: ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ಅಂತ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿಕೊಂಡಿರುವ ಬೃಹತ್ ಬೊಗಳೂರು ಮಹಾನಗರ ಪಾಲಿಕೆ "ಬಿಬಿಎಂಪಿ"ಗೆ ಮಹಾ ಗರ ಬಡಿದಿದೆಯೋ ಎಂಬ ಕುರಿತು ಬೊಗಳೂರು ಅನ್ವೇಷಿ ಬ್ಯುರೋದಿಂದ ತನಿಖೆ ಶುರುವಾಗಿದೆ.

ಗರ ಬಡಿದ ಪರಿಣಾಮವಾಗಿಯೇ ಹೈಕೋರ್ಟ್ ಕೂಡ ಬಿಬಿಎಂಪಿ ಮೇಲೆ ಹರಿಹಾಯ್ದಿದ್ದು, ಹಿಡಿದ ಗರ ಬಿಡುತ್ತದೆಯೇ ಎಂದು ಕಾದುನೋಡಬೇಕಿರುವುದಾಗಿ ವರದ್ದಿಯಾಗಿದೆ.

Follow ಬೊಗಳೆ-ರಗಳೆ On Facebook and Twitterಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಇದಕ್ಕೆ ಕಾರಣವೆಂದರೆ, ಪ್ರಧಾನಿ ಅವರು ಬೊಗಳೂರಿಗೆ ಭೇಟಿ ನೀಡಿ ಹೋದ ಬಳಿಕ ರಸ್ತೆಗಳೆಲ್ಲ ಹಾಳಾಗಿದ್ದು, ಇದರಿಂದಾಗಿ ಈಗಾಗಲೇ ನರಕ ಸದೃಶವಾಗಿರುವ ಬೊಗಳೂರಿಗೆ ಕೆಟ್ಟ ಹೆಸರು ಬಂದಿದೆ ಎಂಬುದಾಗಿ ವ್ಯಾಖ್ಯಾನವನ್ನು ಪ್ರಸಿದ್ಧವೂ, ನಮ್ಮ ಪ್ರತಿಸ್ಫರ್ಧಿಯೂ ಆಗಿರುವ ಪತ್ರಿಕೆಯೊಂದು, ತಲೆಬರಹದಲ್ಲಿ ಅಕ್ಷರದೋಷದೊಂದಿಗೆ ಪ್ರಕಟಿಸಿದೆ. "ರಸ್ತೆ ಗುಂಡಿಯಿಂದ ನರಕಕ್ಕೆ ಕೆಟ್ಟ ಹೆಸರು" ಎಂದು ಪ್ರಕಟವಾಗಿರಬೇಕಾದಲ್ಲಿ 'ನಗರಕ್ಕೆ' ಎಂದು ತಪ್ಪು ಅರ್ಥ ಬರುವಂತೆ ಪ್ರಕಟಿಸಿರುವುದನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ.

ಅಲ್ಲಲ್ಲಿ ರಸ್ತೆ ಹೊಂಡಗಳು, ಗುಂಡಿಗಳು ಅಷ್ಟೇ ಅಲ್ಲ, ಇಂಥ ಗುಂಡಿಗಳನ್ನು ದಾಟಿ ಹೋಗುವುದಕ್ಕಾಗಿ ಅನಿವಾರ್ಯವಾಗಿರುವ ಗುಂಡಿನಂಗಡಿಗಳೇ ತುಂಬಿರುವ ಬೊಗಳೂರಿನಲ್ಲಿ, ಸರಿಯಾಗಿ ಚಲಿಸುವ ಯಾವುದೇ ವಾಹನಗಳೂ ಕಂಡುಬರುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಈ ಮಹಾ ನರಕದಲ್ಲಿ ಕನ್ನಡ ಪದ ಬಿಟ್ಟು, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಪದಗಳೇ ರಾರಾಜಿಸುತ್ತಿವೆ. ಇಂತಹಾ ಪರಿಸ್ಥಿತಿ ಇದ್ದರೂನೂ, ಇವ್ರನ್ನೆಲ್ಲ ನರಕಕ್ಕಿಳ್ಸಿದರೆ ಹೇಗೆ ಮೂಗ್ನಲ್ ಕನ್ನಡ ಪದವಾಡ್ತಾರೆ ಅಂತ ನೋಡಿಯೇಬಿಡೋಣ ಎಂದು ಬೊಗಳೂರು ಪಾಲಿಕೆಯು ಸವಾಲು ಹಾಕಿಕೊಂಡಿದೆ. ಆದರೂ ಅಳಿದುಳಿದ ಕನ್ನಡಿಗರು ಮೂಗ್ನಲ್ ಕನ್ನಡ ಪದವಾಡ್ತಿದ್ದಾರೆ ಎಂಬುದನ್ನು ಬೊಗಳೆ ಬ್ಯುರೋ ಅನ್ವೇಷಣೆ ಮಾಡಿದೆ.

ಇದೀಗ, ಗುತ್ತಿಗೆದಾರರ ಆವಾಂತರದಿಂದಾಗಿ, ಅಲ್ಲಲ್ಲಿ ಎಗರೆಗರಿ ಬೀಳುತ್ತಾ ಏಳುತ್ತಾ ತಲೆ ಮೇಲೆ ಕೈಹೊತ್ತಿರುವ ದ್ವಿಚಕ್ರ ಸವಾರರು, ಪದೇ ಪದೇ ಶಾಕ್ ಅಬ್ಸಾರ್ಬರ್‌ಗಳನ್ನು ಬದಲಿಸುತ್ತಲೇ ಇರುವ ಚತುಶ್ಕಕ್ರಿಗಳು, ಐಷಾರಾಮಿ ಕಾರುಗಳಲ್ಲಿ ಕುಳಿತ ಕಾರಣದಿಂದಾಗಿ ಎಷ್ಟೇ ಹೊಂಡಗಳಿದ್ದರೂ ತಿಳಿಯದ ರೀತಿ ಅತ್ತಿತ್ತ ಓಡಾಡುವ ಶೋಷಕರು ಮತ್ತು ದುರ್-ಜನಪ್ರತಿನಿಧಿಗಳು. ಅಡ್ಡಡ್ಡ ಅಗೆಯುವುದರ ಬದಲಾಗಿ ರಸ್ತೆಯನ್ನು ಉದ್ದುದ್ದ ಸೀಳುತ್ತಿರುವ ದೂರ್ದೂರವಾಣಿ ಕೇಬಲ್ ಮಂಡಳಿ ಹಾಗೂ ಒಳಚರಂಡಿ-ನೀರು ಮಿಕ್ಸ್ ಸರಬರಾಜು ಮಂಡಳಿ, ಹಾಗೂ ಕೆಲವು ಕಡೆಗಳಲ್ಲಿ ಮೂಗ್ನಲ್ಲಷ್ಟೇ ಕನ್ನಡ ಪದವಾಡುವಾಗ, ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯೂ ಇರುವ ಬೊಗಳೂರು ಈಗ ಮಹಾ ನರಕವಾಗಿಬಿಟ್ಟಿದೆ. ಇದನ್ನು ಮಹಾನಗರ ಎಂದು ಬಿಂಬಿಸಿ, ನರಕ ಎಂಬ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಬೊಗಳೂರಿನ ಅಖಿಲ ಭಾರತ ಬೊಗಳೂರು ಪ್ರಜಾ ಸಂಘದ ಅಂಬೋಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಈ ರಸ್ತೆಗುಂಡಿಗಳಲ್ಲಿ ಒಂದು ಈಜುವ ಸ್ಪರ್ಧೆಯನ್ನು ಏರ್ಪದಿಸಿದರೆ ಹೇಗೆ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈಗಾಗಲೇ ನೆಟ್ಟ ಗಿಡಗಳು ಫಲ ಕೊಡುವಷ್ಟು ದೊಡ್ಡದಾಗತೊಡಗಿವೆ. ಬಹುಶಃ ರಸ್ತೆಯ ಮೇಲಕ್ಕೆ ಓಡುವ ವಿಮಾನಗಳು ಬಂದರೆ ಆದೀತೇನೋ?

      ಅಳಿಸಿ

ಏನಾದ್ರೂ ಹೇಳ್ರಪಾ :-D