ಬೊಗಳೆ ರಗಳೆ

header ads

ಅಲ್ಲಲ್ಲಿ ಉದುರಿದ ಬೀಜಗಳು: ಕೃಷಿ ಇಲಾಖೆಯ ಅತಿದೊಡ್ಡ ಪ್ರಮಾದ!

ಚಿತ್ರ: ಪಿಕ್ಸಾಬಿ ಕೃಪೆ

[ಬೀಜ ವರದ್ದಿಗಾರರಿಂದ ವಿಶೇಷ ವರದಿ]

ಬೊಗಳೂರು: ಇತ್ತೀಚೆಗೆ ಬೊಗಳೂರಿನ ವಿವಿಧೆಡೆ ಬೀಜಗಳು ಉದುರಿರುವುದು ಪತ್ತೆಯಾಗಿದೆ. ಇದರ ಹಿಂದಿನ ಜಾಲ ಭೇದಿಸಲು ಹೊರಟ ಬೊಗಳೆ ಬ್ಯುರೋದ ವಿಶೇಷ ವರದ್ದಿಗಾರರಿಗೆ ಸಿಕ್ಕಿದ ಆಘಾತಕಾರಿ ವರದ್ದಿಯೊಂದು ಇಲ್ಲಿದೆ.

ಬೊಗಳೂರಿನಲ್ಲಿ ಅಲ್ಲಲ್ಲಿ ಬೀಜಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇವು ಯಾರದೆಂದು ತಿಳಿಯದೆ ಊರಿನವರೆಲ್ಲರೂ ಕಂಗಾಲಾಗಿದ್ದರು. ಈ ಬೀಜಗಳೆಲ್ಲವೂ ಬಹುತೇಕವಾಗಿ ಕರಗಿದ ಸ್ಥಿತಿಯಲ್ಲಿದ್ದವು. ಇದರ ಹಿಂದಿನ ಕಾರಣ ಪತ್ತೆ ಮಾಡಲು ಹೊರಟಾಗ ಸಿಕ್ಕಿದ್ದೇ ಗೊಬ್ಬರ! ಇದು ರಾಸಾಯನಿಕಯುಕ್ತ ಗೊಬ್ಬರ. ಗೊಬ್ಬರಕ್ಕೆ ಮಿಶ್ರ ಮಾಡಿದ ರಾಸಾಯನಿಕದಿಂದಾಗಿ ಈ ಬೀಜಗಳು ಕರಗಿ ಕರಗಿ ಸಣ್ಣಗಾಗಿಬಿಟ್ಟಿದ್ದವು. ಕೆಲವಂತೂ ಕೊರಗಿದ್ದವು ಎಂಬುದನ್ನು ಸ್ಥಳೀಯ ರೈತರ ಬೀಜದಂಗಡಿಯ ಮಾಲೀಕರೊಬ್ಬರು ಬೊಗಳೆ ಬ್ಯುರೋಕ್ಕೆ ರಹಸ್ಯವಾಗಿ ತಿಳಿಸಿದರು.

Follow ಬೊಗಳೆ-ರಗಳೆ On Facebook and Twitterಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಈ ನಿಟ್ಟಿನಲ್ಲಿ ಸಂಚೋದನೆ ಮುಂದುವರಿಸಿದಾಗ, ಇವೆಲ್ಲವೂ ರೈತರ ಬೀಜಗಳೆಂಬುದು ಪತ್ತೆಯಾದವು. ರೈತರು ಹಗಲು-ರಾತ್ರಿ ಶ್ರಮ ಪಡುತ್ತಿರುವಾಗಲೇ ಕಷ್ಟಪಟ್ಟು ಬೀಜವನ್ನು ಕಾಪಾಡಿಕೊಂಡಿದ್ದರು. ಆದರೆ, ಈಗ ನೋಡಿದರೆ ಈ ಎಲ್ಲ ಬೀಜಗಳು ಉದುರಿಹೋಗಿವೆ. ಇದಕ್ಕೆಲ್ಲ ಕಾರಣ, ನಕಲಿ ಬೀಜ ಮತ್ತು ಗೊಬ್ಬರ ಪೂರೈಕೆದಾರರೆಂಬ ಅಸಲಿ ಕಳ್ಳರು ಎಂಬುದು ತಿಳಿದುಬಂತು.

ಈ ನಕಲಿ ಬೀಜಗಳನ್ನು ನೆಟ್ಟು, ಬೆಳೆಸಿ ಫಲ ತೆಗೆದು, ಆ ಫಲಗಳು ಕೊಡುವ ಬೀಜಗಳೆಲ್ಲವೂ ಉದುರಿಹೋಗುವುದು ಒಂದು ಕಡೆಯಾದರೆ, ಮತ್ತೊಂದು ಕಡೆಗೆ, ಕೃಷಿ ಇಲಾಖೆಯ ವಿಚಕ್ಷಣ ಪಡೆಯ ಅಧಿಕಾರಿಗಳು ಈ ಬೀಜಗಳನ್ನು ಹೊಡೆದು ಉರುಳಿಸುತ್ತಿದ್ದರು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಮಾಡಿದೆ. 

ಬೊಗಳೂರಿನ ಕೃಷಿ ಸಚಿವರು ಇತ್ತೀಚೆಗೆ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಕಲಿ ಬೀಜ, ಗೊಬ್ಬರ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ ಎಂಬ ಹೇಳಿಕೆ ನೀಡಿದ್ದೇ ಈ ಎಲ್ಲ ಆವಾಂತರಗಳಿಗೆ ಕಾರಣ ಎಂಬುದನ್ನು ಬೊಗಳೆ ಬ್ಯುರೋ ಸಂಚೋದಿಸಿದೆ. ಇದರ ಬಗ್ಗೆ ಪ್ರತಿಸ್ಫರ್ಧಿ ಪತ್ರಿಕೆಯ ಈ ವರದ್ದಿಯೇ ಕಾರಣ. ನಕಲಿ ಬೀಜದ ಜಾಲದ ಬುಡವನ್ನೇ ಕತ್ತರಿಸಿ ಎಂದು ಕೃಷಿ ಸಚಿವರು ಕರೆ ನೀಡಿದಾಗ, ಕೆಲವು ಅಧಿಕಾರಿಗಳಂತೂ ನಕಲಿ ಬೀಜದ ಜಾಲದ ಬುಡವನ್ನು ಕತ್ತರಿಸುವ ಬದಲಾಗಿ, ಬೀಜದ ಬುಡವನ್ನೇ ಕತ್ತರಿಸಿದ್ದರು!

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಈ ಬೀಜೋತ್ಪಾಟನೆಯಿಂದಾಗಿ ಕೃಷಿಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗುವುದರಲ್ಲಿ ಸಂದೇಹವಿಲ್ಲ. ಈ ಕೆಲಸಕ್ಕಾಗಿ ಕೃಷಿ ಇಲಾಖೆಯು ಸಾವಿರಾರು ಜನ ನೌಕರರನ್ನು ನಿಯಮಿಸಿಕೊಂಡರೆ, ನಿರುದ್ಯೋಗ ಸಮಸ್ಯೆಯೂ ಸಹ ನಿವಾರಣೆಯಾಗುವುದು. ಒಂದು ಕೃಷಿಹಾಳ ಸಂಶೋಧನೆಯ ವರದ್ದಿಯನ್ನು ಮಾಡಿದ್ದಕ್ಕಾಗಿ ನಿಮಗೆ ‘ಕೆಲಸವಿಲ್ಲದವರ ಸಂಘ’ದಿಂದ ಪ್ರಶಸ್ತಿಯನ್ನು ಕೊಡಲಾಗುವುದು!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು ಸುನಾಥರೇ, ಅದೊಮ್ಮೆ ನಮ್ಮದೇ ಪ್ರತಿಸ್ಫರ್ಧಿ ಪತ್ರಿಕೆಯಲ್ಲಿ ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ ಅಂತನೂ ಘಂಟಾಘೋಷವಾಗಿ ಸಾರಿದ್ದರು. ಆದರೂ, ನಿಮ್ಮ ಮನೆ ಅಲ್ಲಲ್ಲ ಕೃಷಿಹಾಳ ಪ್ರಪ್ರಶಸ್ತಿಯನ್ನು ಶಿಸ್ತಿನಿಂದ ನಿರಾಕರಿಸಲು ನಮಗೆ ಹೆಮ್ಮೆಯಾಗುತ್ತದೆ.

      ಅಳಿಸಿ

ಏನಾದ್ರೂ ಹೇಳ್ರಪಾ :-D