ಬೊಗಳೆ ರಗಳೆ

header ads

ಬೊಗಳೆ BarKing: ಎಸ್ಸೆಸ್ಸೆಲ್ಸಿ ಮಾರ್ಕ್‌ಗೆ ಅಡ್ಡಿಯಾಯಿತು ಮಾಸ್ಕ್!

[ಮಾಸ್ಕ್-ರಹಿತ ಬ್ಯುರೋದಿಂದ]
ಬೊಗಳೂರು: ಮಾಸ್ಕ್ ಡೇ ವಿರುದ್ಧ ಆಂಟಿ ಮಾಸ್ಕ್ ಡೇ ಆಚರಿಸಿ ಪ್ರತಿಭಟನೆ ನಡೆಸಿರುವ ವಿರೋಧೀ ಪಕ್ಷಗಳ ಬಗ್ಗೆ ಸುದ್ದಿ ಕೇಳಿದ್ದೇವೆ. ಆದರೆ, ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು, ಮಾರ್ಕ್ ಜಾಸ್ತಿ ತೆಗೆಯಲು ಈ ಮಾಸ್ಕ್ ತೊಡಕಾದ ಘಟನೆಯನ್ನು ಅನ್ವೇಷಿ ನೇತೃತ್ವದ ಬೊಗಳೂರು ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಠಳಾಯಿಸಿದ ಬೊಗಳೂರು ವರದ್ದಿಗಾರರು, ಯಾರನ್ನೂ ಗುರುತು ಹಿಡಿಯದೆ ತಬ್ಬಿಬ್ಬಾದರು. ಆದರೂ ಸಾವರಿಸಿಕೊಂಡು, ಕೆಲವೊಂದು ವಿದ್ಯಾರ್ಥಿಗಳನ್ನು ಸಂ-ದರ್ಶನ ನಡೆಸಿದರು.

ಬೊಗಳೆ ಜೊತೆ ಮಾತನಾಡಿದ, ಜೀವನದಲ್ಲೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಬಂದಿದ್ದ ವಿದ್ಯಾರ್ಥಿನಿ ಶಂಕಿತಾ ಚಟ್ಟರ್ಜಿ, ಸಾರ್, ಮಾಸ್ಕ್ ಇದೆ, ಆದರೆ ಮಾರ್ಕ್ ಇಲ್ಲ ಎಂದರು. ಈ ಕುರಿತು ವಿವರಣೆ ಕೇಳಿದಾಗ, ಸಮವಸ್ತ್ರ ಧರಿಸಿ ವಿಚಿತ್ರ ಬಣ್ಣದ ಮಾಸ್ಕ್ ಹಾಕಿಕೊಳ್ಳಬೇಕಿತ್ತು. ಮ್ಯಾಚಿಂಗ್ ಮಾಸ್ಕ್ ಬೇಕು ಅಂತ ಎಷ್ಟೇ ಹಠ ಹಿಡಿದರೂ ಕೊಡಿಸಿಲ್ಲ. ಹೀಗಾಗಿ ತಲೆನೋವು ಮತ್ತು ಖಿನ್ನತೆಯಿಂದಾಗಿ, ಮುಖದ ಮೇಲಿರಬೇಕಾದ ಮಾಸ್ಕು, ತಲೆಯೊಳಗೆ ಹೊಕ್ಕುಬಿಟ್ಟಿತ್ತು. ಹೀಗಾಗಿ ಓದಿದ್ದಕ್ಕೆಲ್ಲಾ ಮಾಸ್ಕ್ ಹಾಕಿಕೊಂಡಾಯಿತು. ಯಾವುದೂ ಕಾಣಿಸಲಿಲ್ಲ ಎಂದುತ್ತರಿಸಿ ತತ್ತರಿಸಿದರು.

ಶಂಕಿತ್ ಬ್ಯಾನ್ಅರ್ಜಿ ಅವರು ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನೆನಪಿಸಿಕೊಂಡೇ ಖಿನ್ನರಾದರು. ಈ ಖಿನ್ನತೆಗೆ ಕಾರಣ ಕೇಳಿದಾಗ, ಸಾರ್, ನನ್ನ ಸ್ನೇಹಿತೆಯರೆಲ್ಲರೂ ಮಾಸ್ಕ್ ಧರಿಸಿದ್ರು. ನನಗೆ ಅದರಲ್ಲಿದ್ದ ಆಪ್ತ ಸ್ನೇಹಿತೆಯ ಮುಖ ನೋಡಲೇ ಸಾಧ್ಯವಾಗಲಿಲ್ಲ. ಯಾಕೆಂದರೆ ಗುರುತೇ ಆಗಲಿಲ್ಲ. ಈ ಮಾಸ್ಕ್‌ನ ಅವಾಂತರ ಹೇಳತೀರದು. ಅವಳ ಮುಖ ನೋಡದಿದ್ದರೆ ನನಗೆ ಓದಿದ್ದು ಯಾವುದೂ ನೆನಪಿಗೆ ಬರುತ್ತಿರಲಿಲ್ಲ. ಓದುವ ದಿನಗಳಲ್ಲೂ ಸದಾ ಕಾಲ ಅವಳದ್ದೇ ನೆನಪು ಎಂದುತ್ತರಿಸಿದರು.

ಮಾಸ್ಕೇಂದ್ರ ಎಂಬ ವಿದ್ಯಾರ್ಥಿಯ ಚಿಂತೆಯೇ ಬೇರೆಯದು. "ಸಾರ್, ನಮ್ಮ ಕೈಗೆ ಸ್ವಲ್ಪೇ ಸ್ವಲ್ಪ ಸ್ಯಾನಿಟೈಝರ್ ಹಾಕಿದರು. ಅದು ಕೈಗಳಿಗೇ ಸಾಲುತ್ತಿರಲಿಲ್ಲ" ಎಂದು ಹೇಳಿ ತಮ್ಮ ಸಂಕಷ್ಟ ತೋಡಿಕೊಂಡರು. "ಯಾಕೆ" ಎಂದು ಬೆಪ್ಪು ತಕ್ಕಡಿಯಂತೆ ಕೇಳಿದ ವರದ್ದಿಗಾರರೆದುರು ತಮ್ಮ ಸಂಕಷ್ಟ ತೋಡಿಕೊಂಡ ಅವರು, "ಅಲ್ಲಾ ಸಾರ್, ಈ ಸರ್ಕಾರದೋರು ಎಂಆರ್‌ಪಿ ಶಾಪುಗಳನ್ನು ತೆರೆದಿಟ್ಟಿದ್ದಾರೆ, ಅಲ್ಲಿಂದ ತಂದಿದ್ದ ಲಿಕ್ಕರೆಲ್ಲವನ್ನೂ ನಮ್ಮಪ್ಪನೇ ಕುಡಿದುಬಿಟ್ರು. ಸ್ಯಾನಿಟೈಝರಲ್ಲೂ ಆಲ್ಕೋಹಾಲಿರುವುದರಿಂದ, ಪರೀಕ್ಷಾ ಹಾಲ್‌ಗೆ ಹೋಗೋ ಮೊದ್ಲು ಆಲ್ಕೋಹಾಲ್ ಬೇಕಿತ್ತು. ಅದಿದ್ದರಷ್ಟೇ ಬರೆಯುವ ಕಿಕ್ ದೊರಕುವುದು. ಆದರೆ, ಈ ಮೇಷ್ಟ್ರೇ ಎಲ್ಲ ಸ್ಯಾನಿಟೈಝರ್ ಖಾಲಿ ಮಾಡಿ, ನಮ್ಮ ಕೈ ಬೆರಳುಗಳಿಗೆ ಆಲ್ಕೋಹಾಲ್-ರಹಿತವಾದ, ನೀರನ್ನು ಕಲಬೆರಕೆ ಮಾಡಿದ್ದ ಸ್ಯಾನಿಟೈಝರನ್ನು ಸಿಂಪಡಿಸುತ್ತಿದ್ದರು. ಅದು ಕೈಗಳಿಗೇ ಸಾಲುತ್ತಿರಲಿಲ್ಲ, ಇನ್ನು ಹೊಟ್ಟೆಗೆಲ್ಲಿ?" ಎಂದು ಬಾಯಿ ಚಪ್ಪರಿಸುತ್ತಾ ಅಲವತ್ತುಕೊಂಡು ಮುಂದೆ ಸಾಗಿದರು.

ಕೋವಿಡಾಕ್ಷಿ ಈ ಕುರಿತು ತಮ್ಮ ಅಭಿಪ್ರಾಯ ಮುಂದಿಟ್ಟರು. ನಾನು ಲಿಪ್-ಸ್ಟಿಕ್ ಹಾಕಿಕೊಂಡಿದ್ದೆಲ್ಲ ಮಾಸ್ಕ್‌ನಿಂದಾಗಿ ಮರೆಯಾಯಿತು ಎಂದು ಶುರುಹಚ್ಚಿಕೊಂಡ ಆಕೆ, ಪರೀಕ್ಷಾ ಹಾಲ್‌ಗೆ ಹೋಗುವ ಮುನ್ನ ಗೆಳೆಯರೊಂದಿಗೆ ಮಾತನಾಡುವಾಗ ಆತ ಹಲ್ಕಿರಿಯುತ್ತಿದ್ದನೋ, ಅಳುತ್ತಿದ್ದನೋ, ನಗುತ್ತಿದ್ದನೋ ಒಂದೂ ತಿಳಿಯದು. ಆತನ ಮುಖಭಾವ ಗೊತ್ತಾಗದೆ ಮತ್ತಷ್ಟು ಗೊಂದಲಕ್ಕೀಡಾಗಿಬಿಟ್ಟೆ. ಈ ಗೊಂದಲವೇ ತಲೆಯಲ್ಲಿ ಹುಳದಂತೆ ಕೊರೆಯುತ್ತಿತ್ತು. ಹೀಗಾಗಿ, ಮಾಸ್ಕ್‌ನಿಂದಾಗಿ ಮಾರ್ಕು ಬರದಂತಾಯಿತು ಎಂದು ತನ್ನ ಪಾಡಿಗೆ ಮಾಸ್ಕನ್ನು ಬಿಸಾಕುತ್ತಾ ಬಿರಬಿರನೇ ಮುಂದೆ ಸಾಗಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಮಾಸ್ಕ ಧರಿಸಿ ನಕಲು ಮಾಡುವುದು ತುಂಬ ಕಷ್ಟಕರ. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಮೊದಲೇ ತರಬೇತಿ ಕೊಡಬೇಕು. ಎರಡನೆಯದಾಗಿ, ಹೊರಗೆ ನಿಂತು ಕಿಡಕಿಯಿಂದ ನಕಲುಚೀಟಿಗಳನ್ನು ಒಗೆಯುವ ಹುಡುಗರಿಗೆ, ತಮ್ಮ ವ್ಯಕ್ತಿ ಯಾರು ಎಂದು ಗೊತ್ತಾಗುವುದಿಲ್ಲ. ಆದುದರಿಂದ, ಈ ಎಲ್ಲ ವಿದ್ಯಾರ್ಥಿಗಳಿಗೆ base marks ಅಂದರೆ ಮೊದಲೇ ೪೦ ಮಾರ್ಕುಗಳನ್ನು ಕೊಟ್ಟು, ಅವರವರ ಉತ್ತರಗಳ ಪ್ರಕಾರ, ಹೆಚ್ಚಿನ ಮಾರ್ಕುಗಳನ್ನು ಕೂಡಿಸುತ್ತ ಹೋಗುವುದು ನ್ಯಾಯಸಮ್ಮತವಾಗುತ್ತದೆ.

    ಪ್ರತ್ಯುತ್ತರಅಳಿಸಿ
  2. ಬೇಸ್ ಮಾರ್ಕುಗಳನ್ನು ನೀಡುವುದಕ್ಕೂ ಕೊರೊನಾ ಅಡ್ಡಿಯಾಗಿದೆ ಅಂತ ವರದ್ದಿಯಾಗಿದೆ. ಇದಕ್ಕೊಂದು ಕಾರಣವಿದೆ. ಮುಸುಕು ಹಾಕಿಕೊಂಡವರಿಂದಾಗಿ ಬೇಸ್ ಮಾರ್ಕುಗಳನ್ನು ಕೊಡುವುದಕ್ಕೆ ಗಿಂಬಳ ಪಡೆದಿದ್ದು ಯಾರಿಂದ ಎಂಬುದೇ ತಿಳಿಯದೇಹೋಗಿದೆಯಂತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D