Subscribe Us

ಜಾಹೀರಾತು
header ads

ಬೊಗಳೆ ವಿಶೇಷ | ವೈರಸ್ ಸಂಚಾರ ನಿಷೇಧ: ಅಕ್ರಮನೇ ಮದ್ಯ ಯಾಕೆ ವಿತರಿಸಬೇಕು?[ಬೊಗಳೆ ಅಕ್ರಮ ವಿತರಣಾ ಬ್ಯುರೋದಿಂದ]
ಬೊಗಳೂರು: ಯಾವಾಗಲೂ ಮದ್ಯ, ಸ್ಯಾನಿಟೈಸರ್, ಪಿಪಿಇ ಕಿಟ್, ಅಕ್ಕಿ, ಇತ್ಯಾದಿಗಳನ್ನು ಅಕ್ರಮನೇ ಯಾಕೆ ವಿತರಿಸಬೇಕು ಎಂಬ ಬಗ್ಗೆ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಇದೀಗ ತನಿಖೆ ಆರಂಭಿಸಿದಾಗ, ಚೋದ್ಯದ ಸಂಗತಿಗಳು ಬೆಳಕಿಗೆ ಬಂದಿವೆ.

ಕೋವಿಡ್ ಸಂಕಷ್ಟದ ಸಂದರ್ಭದ ಈ ದಿನಗಳಲ್ಲಿ, ಲಾಕ್‌ಡೌನ್ ಮಾಡಲಾಗಿದೆ. ಇದು ಲೋಕ ಡೌನೋ ಅಥವಾ ಲಾಕುಡೌನೋ ಎಂಬುದು ಕೆಲವೆಡೆ ಗೊತ್ತಾಗದಂತಹಾ ಪರಿಸ್ಥಿತಿಯಿದೆ. ವಿಶೇಷವಾಗಿ ಬೊಗಳೂರಿನಲ್ಲಿ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ಶಂಕೆ ಎದ್ದಿದೆ ಎಂದು ಅನ್ವೇಷಿ ನೇತೃತ್ವದ ಏಕಸದಸ್ಯ ಬ್ಯುರೋ ಕಂಡುಕೊಂಡಿದೆ.

ವಿಶೇಷವಾಗಿ ರಾಜ್ಯದ ಗಡಿ ಭಾಗದಲ್ಲಿರುವ ಪ್ರದೇಶಗಳಲ್ಲಿ ಗುಡಿಸಲು, ಶೆಡ್‌ಗಳು, ಶಾಲೆಗಳು, ಮದ್ಯದಂಗಡಿಗಳು - ಇತ್ಯಾದಿಗಳೆಲ್ಲವೂ ಲಾಕ್‌ಡೌನ್‍ನಿಂದಾಗಿ ಕಂಗೆಟ್ಟು ಬೆಂದು, ಬಸವಳಿದು ಹೋಗಿವೆ.

ಇದಕ್ಕೆಲ್ಲಾ ರಕ್ಕಸ, ಹೆಮ್ಮಾರಿ, ಭೂತ, ರಕ್ತಪಿಪಾಸು, ಗಡಗಡ ನಡುಗಿಸುವ ರಾಕ್ಷಸ, ಅಂತಕ, ಮಾರಣಾಂತಿಕ, ಕ್ರೂರಿ, ನಿಗೂಢ, ರಹಸ್ಯ ಪಿಶಾಚಿ - ಎಂದೆಲ್ಲಾ ಟಿವಿ ಚಾನೆಲುಗಳಿಂದ ಹೊಗಳಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ಕಾರಣ. ವಿಷಯ ಏನೆಂದರೆ, ಈ ಪಾಳು ಬಿದ್ದಿರುವ ತಾಣಗಳನ್ನೇ ಐಷಾರಾಮಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಿ ಪರಿವರ್ತಿಸಿದರೆ, ಊರು ಕೂಡ ಅಭಿವೃದ್ಧಿಯಾದಂತೆ ಕಾಣಿಸುತ್ತದೆ. ಜನ ಸಂಚಾರ ಹೆಚ್ಚಾಗಿ, ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಬಹುದು ಎಂದು ಸ್ಥಳೀಯ ಅ-ಧಿಕ್ಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಲಾಕ್‌ಡೌನ್ ಇದ್ದರೂ ಊರೂರು ಉದ್ಧಾರವಾಗುವುದಕ್ಕೆ ಯಾವುದೇ ಅಭ್ಯಂತರಗಳನ್ನು ಸರ್ಕಾರವು ಆರಂಭದಲ್ಲೇ ನಿರ್ಬಂಧ ತೆರವುಗೊಳಿಸುವ ಮೂಲಕ ಚಾಲನೆ ನೀಡಿತ್ತು ಎಂಬ ಅಂಶವೂ ಈಗಾಗಲೇ ಎಲ್ಲರಿಗೂ ತಿಳಿದಿರುವ ರಹಸ್ಯವಾಗಿ ಬಯಲಾಗಿದೆ.

ಊರು ಉದ್ಧರಾವಾಗುವ ಕಾರಣದಿಂದಲೇ, ಎಲ್ಲವನ್ನೂ ಅಕ್ರಮನೇ ಪೂರೈಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊಗಳೆ ಬ್ಯುರೋಗೆ ನಂಬಲನರ್ಹ ಮೂಲಗಳು ಸ್ಪಷ್ಟವಾಗಿ ಹೇಳಿರುವುದಾಗಿ ವರದ್ದಿಯಾಗಿದೆ ಎಂದು ತಿಳಿದುಬಂದಿರುವುದಾಗಿ ಹೇಳಲಾಗಿದೆಯೆಂದು ಉಲ್ಲೇಖಿಸಲಾಗಿದೆ.

ಇದೀಗ ವೈರಸ್ ನಿಯಂತ್ರಣಕ್ಕೂ ಕಡಿವಾಣ ಹಾಕಲು ಇದೇ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುವ ಮುನ್ನವೇ ಅದು ಕೂಡ ಸೋರಿಕೆಯಾಗಿದೆ ಎಂಬ ಮತ್ತೊಂದು ಬ್ರೇಕ್ ಆಗಿರುವ ಸುದ್ದಿಯೂ ಬೊಗಳೂರಿಗೆ ಲಭ್ಯವಾಗಿದೆ.

ಓಡಾಟ ನಿಲ್ಲಿಸಿ, ಮನೆಯೊಳಗಿರಿ ಅಂತೆಲ್ಲಾ ಜನರಿಗೆ ತಿಳಿಹೇಳಿ ಹೇಳಿ ಬೆಂದು ಬಸವಳಿದ ಬೊಗಳೂರು ಸರ್ಕಾರವು, ಕೊರೊನಾ ವೈರಸ್ಸಿಗೇ ಸಂಚಾರ ನಿಷೇಧ ಹೇರಲು ನಿರ್ಧರಿಸಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ನಿರ್ಧಾರ ಹೊರಬೀಳಲಿದೆ. ಆದರೂ, ಈ ನಿರ್ಧಾರ ಹೊರಬೀಳುವ ಮುನ್ನವೇ, ನಿರ್ಧಾರವೂ ಸೋರಿಕೆಯಾಗಿರುವುದರಿಂದ, ಜನರು ಬೇಕಾಬಿಟ್ಟಿಯಾಗಿ ಓಡಾಡತೊಡಗಿದ್ದಾರೆ ಎಂದು ಪತ್ತೆಯಾಗಿದೆ.

Post a Comment

2 Comments

  1. ಕೋವಿಡ್ ಎನ್ನುವ ಬೇತಾಳದ ಬೆನ್ನು ಹತ್ತಲು ಅಕ್ರಮ ಮಹಾರಾಜನೇ ಬೇಕಾಯಿತೆ?

    ReplyDelete
    Replies
    1. ಇತ್ತೀಚಿನ ವರದ್ದಿಯ ಪ್ರಕಾರ, ಅಕ್ರಮವಾಗಿ ನುಸುಳಿದವರೇ, ಅಲ್ಲಲ್ಲಿ ಅಕ್ರಮವಾಗಿ ಬಚ್ಚಿಟ್ಟುಕೊಂಡು, ಅಕ್ರಮವಾಗಿ ಓಡಾಡಿಯೇ ಕೋವಿಡ್ ಹಂಚಿದ್ದಾರೆ ಅಂತೆ.

      Delete

ಏನಾದ್ರೂ ಹೇಳ್ರಪಾ :-D