Subscribe Us

ಜಾಹೀರಾತು
header ads

ಬೊಗಳೆ Bar-King News: ಕೊರೊನಾವನ್ನು ಉಸಿರುಗಟ್ಟಿ ಸಾಯಿಸುವ ತಂತ್ರ!


[ಕೊರೊನಾ ಶಂಕಿತ ಬ್ಯುರೋದಿಂದ]
ಬೊಗಳೂರು: ದೇಶಾದ್ಯಂತ ಇಂದು ಸಂಭ್ರಮ ಸಡಗರ. ಎಲ್ಲೆಲ್ಲೂ ಕೇಸರಿ-ಬಿಳಿ-ಹಸಿರು ಬಾವುಟಗಳು ಕಾಣಿಸುತ್ತಿದ್ದು, ಮಧ್ಯೆ ಮಧ್ಯೆ ಕೈಗಳೂ ಇಣುಕುತ್ತಿದ್ದವು. ಇದಕ್ಕೆ ಕಾರಣವೆಂದರೆ, ಇಂದು ಬೊಗಳೂರಿನ ವಿರೋಧಿ ಪಕ್ಷದ ಮುಖಂಡನ ಕೋರೋನೇಷನ್ (Coronation), ಅಂದರೆ ಪಟ್ಟಾಭಿಷೇಕ ಕಾರ್ಯಕ್ರಮ.

ಈ ಕಾರ್ಯಕ್ರಮದ ಹೆಸರಿನಲ್ಲೇ ಕೊರೊನಾ ಇರುವುದರಿಂದಾಗಿ, ಈ ಕಾರ್ಯಕ್ರಮಕ್ಕೆ ಎಲ್ಲಿಲ್ಲದ ಮಹತ್ವ. ಬಸ್ಸುಗಳು, ಲಾರಿ, ಬೈಕುಗಳಲ್ಲಿ ಎಲ್ಲೆಲ್ಲೂ ಭಾರತದ ತ್ರಿವರ್ಣ ಧ್ವಜವನ್ನೇ ಹೋಲುವ ಬಾವುಟಗಳು ಹಾಗೂ ಜನರು ಕೂಡ ಗುಂಪುಗುಂಪಾಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು, ಕೈಕುಲುಕಿ ಸಂಭ್ರಮಿಸುತ್ತಿದ್ದರು.

ಇತ್ತೀಚೆಗೆ ವಿರೋಧಿ ಪಕ್ಷಗಳೆಲ್ಲವೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಕಂಡುಬಂದ ಪರಿಸ್ಥಿತಿಯೇ ಇಲ್ಲೂ ಕಾಣಿಸುತ್ತಿತ್ತು. ಬಂದ ಅತಿಥಿಗಳೆಲ್ಲರನ್ನೂ ಕೈಕುಲುಕಿ, ಮುಖದ ಮಾಸ್ಕ್ ತೆಗೆದು, ತಾವ್ಯಾರು ಎಂದು ತೋರಿಸಿಕೊಳ್ಳುತ್ತಾ, ಅಂತರ ಕಾಯ್ದುಕೊಂಡೇ ಕೊರೊನಾ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದರು.

ಸರ್ಕಾರದ ಸೂಚನೆಯ ಅನುಸಾರವೇ ಎಲ್ಲವನ್ನೂ ಮಾಡಿದರೆ ತಮ್ಮನ್ನು ಯಾರು ವಿರೋಧಿ ಪಕ್ಷಗಳು ಅಂತ ಕರೀತಾರೆ ಎಂದು ಘೋಷಿಸಿದ ಮುಖಂಡರೆಲ್ಲರೂ ಒಟ್ಟು ಸೇರಿ, ಕೊರೊನಾ ಹರಡಲು, ಚೀನಾ ಸೈನಿಕರ ಸಾವಿಗೆ ಪ್ರಧಾನಿಯೇ ಕಾರಣ ಎಂದರು. ತಾಕತ್ತಿದ್ದರೆ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿ ಅಂತ ಕೇಳುವವರಿದ್ದರು. ಅಷ್ಟರಲ್ಲಿ, ಈಗಾಗಲೇ ನಿಷೇಧಿಸಲಾಗಿದೆ ಎಂದು ಪಕ್ಕದಲ್ಲಿ ಕೂತವರು ಹೇಳಿದ ಕಾರಣ, ಆ್ಯಪ್ ನಿಷೇಧಿಸಿ ಏನು ಸಾಧನೆ ಮಾಡಿದಂತಾಯಿತು ಎಂದು ಪ್ರಶ್ನಿಸಿದರು.

ಈ ಕುರಿತು, ಕೊರೋನೇಷನ್ ಕಾರ್ಯಕ್ರಮಕ್ಕೆ ತುಂಬಿ ತುಳುಕಾಡುತ್ತಿದ್ದ ಆಟೋರಿಕ್ಷಾ, ಬಸ್ಸುಗಳಲ್ಲಿ ಹೋಗುತ್ತಿದ್ದರು. ಅದೇ ರೀತಿ, ಇತ್ತೀಚೆಗೆ ಪ್ರಜಾಪ್ರಭುತ್ವದ ಪ್ರಭುಗಳು ತಮ್ಮ ಬರ್ತಡೇ ಪಾರ್ಟಿಯನ್ನೂ ಭರ್ಜರಿಯಾಗಿ ಆಚರಿಸಿಕೊಂಡಿದ್ದರು. ಇದಕ್ಕೆಲ್ಲ ಹೋದವರನ್ನು ಪಕ್ಕಕ್ಕೆ ಕರೆದು ಮಾತನಾಡಿಸಿದಾಗ, ಕೊರೊನಾಗೆ ಯಾರೂ ಕಂಡುಹಿಡಿಯಲಾಗದ ಔಷಧಿಯ ರಹಸ್ಯವೂ, ರಾಜಕೀಯ ಪಕ್ಷಗಳ ಜನಕಲ್ಯಾಣ ಮನಸ್ಥಿತಿಯೂ ಹೊರಬಿತ್ತು. ಅದೆಂದರೆ, ಕೊರೊನಾಗೆ ಯಾವುದೇ ಔಷಧಿಯಿಂದ ಆಗಲಾರದ ಒಂದು ಹೊಸ ಐಡಿಯಾವನ್ನು ಕಂಡುಹಿಡಿಯಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ವ್ಯಕ್ತಿ ಹೇಳಿದರು.

ಏನು ಹೇಳಿರಲ್ಲಾsssss ಎಂದು ಪದೇ ಪದೇ ಪೀಡಿಸಿದಾಗ ಅವರಿಂದ ಹೊರಬಂದ ಮಾತು:
"ಸಭೆ ಸಮಾರಂಭ ನಡೆಸಿದರೆ, ಜನಜಂಗುಳಿ ಸೇರಿದರೆ, ಬಸ್ಸುಗಳಲ್ಲಿಯೂ ಉಸಿರುಕಟ್ಟುವಷ್ಟು ಮಂದಿಯನ್ನು ತುರುಕಿಕೊಂಡು ಹೋದರೆ, ಕೊರೊನಾ ವೈರಸ್ಸೇನು, ಅದರಪ್ಪ ಬಂದರೂ ಈ ಜನದಟ್ಟಣೆಯ ಮಧ್ಯೆ ಉಸಿರುಗಟ್ಟಿ ಸಾಯಬೇಕು. ಕೈಕುಲುಕಿದರೂ ಕೂಡ, ಎರಡು ಕೈಗಳ ಮಧ್ಯೆ ಸಿಲುಕಿಕೊಂಡು ಕೊರೊನಾ ವೈರಸ್ ಸಾಯುತ್ತದೆ. ಮಾಸ್ಕ್ ಇದ್ದರಲ್ಲವೇ ನಮ್ಮ ಹತ್ತಿರಕ್ಕೆ ವೈರಸ್ ಬರುವುದು? ಮಾಸ್ಕ್ ಇರುವಂತೆ ಮಾಡಿ, ಅದು ಬರುವಾಗ ಮೆಲ್ಲನೇ ಕೆಳಗೆ ಸರಿಸಿದಾಗ, ಕೊರೊನಾ ವೈರಸ್ಸಿಗೇ ಗಲಿಬಿಲಿಯಾಗಿ, ಮಾಸ್ಕ್ ಇಲ್ಲದಿರುವುದನ್ನು ನೋಡಿ ಅದುವೇ ಓಡಿಹೋಗುತ್ತದೆ. ಈ ರೀತಿಯಾಗಿ ಕೊರೊನಾ ವಿರುದ್ಧ ನಾವೂ ಸಮರ ಸಾರಿದ್ದೇವೆ" ಎಂದು ಹೇಳಿದ ಅವರು, ಏದುಸಿರು ಬಿಡುತ್ತಾ ಓಡಿದರು.

ಇಷ್ಟೇ ಅಲ್ಲ, ಆನ್‌ಲೈನ್‌ನಲ್ಲಿಯೂ ಲಕ್ಷಾಂತರ ಮಂದಿಯನ್ನು ವಿಡಿಯೊ ಮೂಲಕ ಒಂದುಗೂಡಿಸಿ, ಕೊರೊನಾ ವೈರಸ್ ಆನ್‌ಲೈನ್‌ನಲ್ಲೂ ಹರಡದಂತೆ ಕ್ರಮ ಕೈಗೊಂಡಿರುವುದನ್ನು ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ವರದ್ದಿ ಮಾಡಿದ್ದಾರೆ. ಆದರೂ, ಕೆಲವರು ಇದನ್ನು ವಿರೋಧಿಸಿ, ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಅಂತರ ಕಾಯ್ದುಕೊಂಡು, ಇದ್ದಲ್ಲಿಂದಲೇ ಶುಭ ಹಾರೈಸಿ, ಸಂಭ್ರಮಿಸಿದ್ದಾರೆ. ಅಂಥವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.

Post a Comment

3 Comments

 1. ಕೊರೊನಾ ವಿರುದ್ಧದ ಈ ಸಿದ್ಧೌಷಧಿಯನ್ನು ಚೀನಾ ದೇಶಕ್ಕೂ ರಫ್ತು ಮಾಡಿದರೆ, ಮತ್ತೊಮ್ಮೆ ‘ಹಿಂದೀ-ಚೀನೀ ಭಾಯಿ ಭಾಯಿ’ ರಣಕಹಳೆ ಮೊಳಗುವುದರಲ್ಲಿ ಸಂದೇಹವಿಲ್ಲ.

  ReplyDelete
 2. ಕೊರೊನಾ ವಿರುದ್ಧದ ಈ ಸಿದ್ಧೌಷಧಿಯನ್ನು ಚೀನಾ ದೇಶಕ್ಕೂ ರಫ್ತು ಮಾಡಿದರೆ, ಮತ್ತೊಮ್ಮೆ ‘ಹಿಂದೀ-ಚೀನೀ ಭಾಯಿ ಭಾಯಿ’ ರಣಕಹಳೆ ಮೊಳಗುವುದರಲ್ಲಿ ಸಂದೇಹವಿಲ್ಲ.

  ReplyDelete
  Replies
  1. ಅಲ್ಲಿ ಭಾರತೀಯರಿಗಿಂತಲೂ ಹೆಚ್ಚು ಜನಸಂಖ್ಯೆ ಇರೋದ್ರಿಂದಾಗಿ, ಅವರೇ ಉಸಿರುಗಟ್ಟಿಸುವ ಯಂತ್ರವನ್ನೂ ಮಾಡಿ ಕಳಿಸ್ತಾರಂತೆ. ಅದೇ, ಟಿಕ್ ಟಾಕ್ ಟಿಕ್ ಟಾಕ್ ಅಂತ ಜನ ಏದುಸಿರು ಬಿಡ್ತಾ ಇದ್ರಲ್ಲಾ....

   Delete

ಏನಾದ್ರೂ ಹೇಳ್ರಪಾ :-D