[ಟಿಕ್-ಟಾಕ್ ಬ್ಯುರೋದಿಂದ]
ಬೊಗಳೂರು: ದೇಶದಾದ್ಯಂತ ಟಿಕ್-ಟಾಕ್, ಶೇರ್‌ಇಟ್, ಕ್ಯಾಮ್‌ಸ್ಕ್ಯಾನರ್ ಮುಂತಾದ ಚೈನೀಸ್ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಆದರೆ, ನಿಷೇಧಿಸಿದ ಹೊರತಾಗಿಯೂ, ಟಿಕ್-ಟಾಕ್ ಭಾರತದೊಳಕ್ಕೆ ಬಂದಿರುವ ಉದ್ದೇಶವು ಇನ್ನೂ ಮುಂದುವರಿಯುತ್ತಿದೆ ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಮಾಡಿದೆ.
ಟಿಕ್-ಟಾಕ್ ನಿಷೇಧದಿಂದಾಗಿ ರೋಸಿ ಹೋಗಿ, ಖಿನ್ನರಾಗಿರುವ ಯುವಜನತೆಯಿಂದಾಗಿ ದೇಶಾದ್ಯಂತ ಆತ್ಮಹತ್ಯೆ ಹೆಚ್ಚಾಗುವ ಸಾಧ್ಯತೆಗಳನ್ನು ಕೂಡ ಪತ್ತೆ ಮಾಡಿರುವ ಬೊಗಳೆ ಬ್ಯುರೋ, ದಿಢೀರ್ ನಿಷೇಧಕ್ಕೆ ಕಾರಣವೇನೆಂದು ಅರಸುತ್ತಾ ಹೊರಟಿರುವುದಾಗಿ ವರದ್ದಿಯಾಗಿದೆ.
ಟಿಕ್-ಟಾಕ್ ಎಂಬ ವೈರಸ್ಸನ್ನು ಚೀನಾವೇ ಹಲವು ವರ್ಷಗಳ ಹಿಂದೆ ಭಾರತದೊಳಕ್ಕೆ ಬಿಟ್ಟಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ, ಎರಡು ವಲಯಗಳಲ್ಲಿ ಭಾರತವು ನಂ.1 ಆಗುತ್ತಿದೆಯೆಂಬ ಆತಂಕ, ಭೀತಿ, ಅಸೂಯೆ ಎಂಬುದು ಈಗ ಪತ್ತೆಯಾಗಿದೆ. ಆ ಎರಡು ಉದ್ದೇಶಗಳು ವಿಫಲವಾದ ಬಳಿಕ, ಇದೀಗ ಹೊಚ್ಚ ಹೊಸದಾಗಿ ಕೊರೊನಾ ವೈರಸ್ಸನ್ನು ಚೀನಾವು ಭಾರತದೊಳಕ್ಕೆ ನುಸುಳಿಸಿದೆ. ಇದಕ್ಕೆ ಎಲ್ಲೆಂದರಲ್ಲಿ ಉಗುಳುವ, ಉಗುಳುವಾಗ ಅಥವಾ ಸೀನುವಾಗ ಮುಖಕ್ಕೆ ಹಾಕಿಕೊಳ್ಳಬೇಕಾದ ಮಾಸ್ಕನ್ನು ಎಲ್ಲೆಲ್ಲೋ ಹಾಕಿಕೊಳ್ಳುವ, ವೈರಸ್ಸು ತಗುಲಿದರೂ ನಮಗೇನೂ ಆಗುವುದಿಲ್ಲ ಎನ್ನುತ್ತಾ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಲು ತರಬೇತಿ ಪಡೆದಿರುವ, ಅಲ್ಲಲ್ಲಿ ಅಡಗಿ ಕುಳಿತುಕೊಂಡು, ಸೀಲ್ ಡೌನ್ ಮಾಡಿದರೂ ಕಾಂಪೌಂಡ್ ಹಾರಿ, ಊರೆಲ್ಲಾ ತಿರುಗಾಡಿ ಕೊರೊನಾ ಪ್ರಸಾದವನ್ನು ಹಂಚುವ ಜನರ ಸಹಕಾರವೂ ಇತ್ತು ಎಂಬುದನ್ನು ಈಗಾಗಲೇ ಪ್ರತಿಸ್ಫರ್ಧಿ ಪತ್ರಿಕೆಗಳು ಸಾಕಷ್ಟು ಬೆಳಕಿಗೆ ತಂದಿವೆ.
ಆದರೆ, ಇಡೀ ಜಗತ್ತಿನಲ್ಲಿ ಒಬ್ಬನೇ ಓದುಗ, ಒಬ್ಬನೇ ಸಂಪಾದಕ, ಒಬ್ಬನೇ ವರದಿಗಾರ, ಒಬ್ಬನೇ ವಿತರಕ, ಒಬ್ಬನೇ ಮುದ್ರಕರನ್ನು ಹೊಂದಿರುವ ಬೊಗಳೆ ಪತ್ರಿಕೆಯು ಪ್ರತಿಸ್ಫರ್ಧಿಗಳು ಯಾರೂ ಬರೆಯಲಾಗದ ವರದಿಯೊಂದನ್ನು ಹೆಕ್ಕಿ ತಂದಿದೆ. ಅದರ ತನಿಖಾ ವರದಿ ಇಲ್ಲಿದೆ.
ಈ ಮೊದಲು, ಟಿಕ್-ಟಾಕ್‌ನಿಂದಾಗಿಯೇ ಭಾರತದಲ್ಲಿ ಸಾಕಷ್ಟು ಜನಸಂಖ್ಯೆ, ಅದರಲ್ಲಿಯೂ ಯುವಜನ ಸಂಖ್ಯೆ ಕಡಿಮೆಯಾಗಿತ್ತು. ಅಪಾಯಕಾರಿ ಪ್ರದೇಶಗಳಲ್ಲಿ, ಅತ್ಯಪಾಯಕಾರಿ ರೀತಿಯಲ್ಲಿ ವಿಡಿಯೊ ಮಾಡುವುದು, ಆತ್ಮಹತ್ಯೆ ಹೇಗೆ ಮಾಡಿಕೊಳ್ಳುವುದೆಂಬುದನ್ನು ತೋರಿಸಲು ವಿಡಿಯೊ ಮಾಡುವುದು, ಸ್ನೇಹಿತರು ಹುಡುಗಿ ಜೊತೆ ಟಿಕ್-ಟಾಕ್ ಮಾಡುವುದರ ಕುರಿತು ಜಗಳವಾಗಿ ಹೊಡೆದಾಟ-ಕೊಲೆ - ಇತ್ಯಾದಿ ವಿಧಾನಗಳ ಮೂಲಕವಾಗಿ ಭಾರತದ ಏರುತ್ತಿರುವ ಜನಸಂಖ್ಯೆಗೆ ಚೀನಾ ಕಡಿವಾಣ ಹಾಕಿತ್ತು. ಇದರ ಜೊತೆಜೊತೆಗೆ, ಭಾರತೀಯರ ಬೌದ್ಧಿಕ ಸಾಮರ್ಥ್ಯವನ್ನೂ ಟಿಕ್-ಟಾಕ್‌ನತ್ತ ಹರಿಸಿ, ಅವರು ಯಾವುದೇ ರೀತಿಯಲ್ಲಿಯೂ ಜಾಗತಿಕ ವಲಯದಲ್ಲಿ ಮಿಂಚದಂತೆ ಕಡಿವಾಣ ಹಾಕುವ ವೈರಸ್ಸೂ ಇದಾಗಿತ್ತು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚೀನಾದ ಮೊಬೈಲ್ ಫೋನುಗಳು, ಎಲೆಕ್ಟ್ರಾನಿಕ್ ಸಾಧನಗಳು, ಬಲ್ಬು, ದೇವರ ಮೂರ್ತಿಗಳೇ ಮುಂತಾದವುಗಳ ರೂಪದಲ್ಲಿ ವೈರಸ್ಸುಗಳು ದೇಶಾದ್ಯಂತ ಹರಡಿದ್ದವು. ದೇಶದಲ್ಲೇ ಉತ್ಪಾದನೆಯಾಗುತ್ತಿದ್ದ ಉತ್ಪನ್ನಗಳೆಲ್ಲವುಗಳ ಬೇಡಿಕೆ ಕುಸಿಯಿತು. ಚೀನಾ ವಸ್ತುಗಳಿಗೆ ಬೇಡಿಕೆಯಿಂದಾಗಿ ದೇಶದ ಆರ್ಥಿಕತೆಯಂತೂ ರಸಾತಳಕ್ಕಿಳಿದು, ಜನರ ದುಡ್ಡೆಲ್ಲ ಚೀನಾದ ಸಾಧನಗಳಿಗೆ ವ್ಯಯವಾಗಿ, ಚೀನಾವಂತೂ ಭಾರತೀಯರ ದುಡ್ಡಿನಲ್ಲಿ ಮೆರೆದು ಮೆರೆದು, ಭಾರತೀಯ ಭೂಭಾಗ ಕಬಳಿಸಿ, ನಮ್ಮ ಸೈನಿಕರ ಮೇಲೆ ದಾಳಿ ನಡೆಸುವಷ್ಟರ ಮಟ್ಟಿಗೆ ವರ್ಧಿಸಿತು. ಯುವಜನರ ಬುದ್ಧಿಗಳೆಲ್ಲವೂ ಟಿಕ್-ಟಾಕ್‌ಗೆ ಸೀಮಿತವಾಗಿ, ಪ್ರತಿಭೆಗಳೆಲ್ಲವೂ ಕುಗ್ಗಿ ಹೋಗಿದ್ದವು. ಹೊಸ ಪ್ರಧಾನಿ ಬಂದು ಕೂತಾಗ, ಅದಾಗಲೇ ಟಿಕ್-ಟಾಕ್ ಸಹಿತ ಈ ವೈರಸ್ಸುಗಳು ಹರಡಿಯಾಗಿತ್ತು.
ಒಂದೆಡೆ, ಭಾರತದಲ್ಲಿ ಬೆಳೆಯುತ್ತಿದ್ದ ಬುದ್ಧಿಶಕ್ತಿಗೂ ಕಡಿವಾಣ ಹಾಕಬೇಕಿತ್ತು; ಮತ್ತೊಂದೆಡೆಯಿಂದ, ಜನಸಂಖ್ಯೆಯಲ್ಲೂ ಭಾರತವು ತನ್ನ ಹೆಸರಿನಲ್ಲಿದ್ದ ನಂ.1 ಸ್ಥಾನವನ್ನು ಕಿತ್ತುಕೊಳ್ಳಲು ಮುಂದಾಗಿತ್ತು ಎಂದು ಯೋಚಿಸಿದ ಚೀನಾ, ಟಿಕ್-ಟಾಕ್ ಸಹಿತ ಎಲ್ಲ ರೀತಿಯ ವೈರಸ್ಸುಗಳನ್ನೂ ಭಾರತದೊಳಕ್ಕೆ ರವಾನಿಸಿತ್ತು. ಜನರ ಬುದ್ಧಿಗೂ ಟಿಕ್-ಟಾಕ್‌ನಂತಹಾ ವ್ಯಸನಕಾರಿ ಆ್ಯಪ್‌ಗಳು ಕಡಿವಾಣ ಹಾಕಿ, ಬುದ್ಧಿವಂತಿಕೆಯಲ್ಲೂ ನಂ.1 ಆಗದಂತೆ ಭಾರತವನ್ನು ತಡೆಯುವ ಉದ್ದೇಶವಿತ್ತು ಎಂದು ಅನ್ವೇಷಿ ಜೊತೆ ಮಾತನಾಡುತ್ತಿದ್ದ ಚೀನಾದ ನಿಧಾನಿ ಶೀಶೀ ಚಿನ್ ಪಿಂಗ್-ಪಾಂಗ್ ಅವರು ದೂರದ ವಾಣಿಯ ಮೂಲಕ ತಿಳಿಸಿದ್ದಾರೆ. ಆದರೂ ಕೆಲವು ಪ್ರಾಜ್ಞರು ಟಿಕ್-ಟಾಕ್‌ಗೆ ಸೊಪ್ಪು ಹಾಕದಿದ್ದ ಕಾರಣ, ಅದರ ಉದ್ದೇಶ ಈಡೇರಿರಲಿಲ್ಲ. ಈ ಕಾರಣಕ್ಕಾಗಿಯೇ ಕೊರೊನಾ ವೈರಸ್ಸನ್ನು ಚೀನಾವು ಭಾರತ ಮತ್ತಿತರ ದೇಶಗಳಿಗೂ ರವಾನಿಸಿತು ಎಂದು ಬೊಗಳೆ ಬ್ಯುರೋ ಕಂಡುಹಿಡಿದಿದೆ.
ಈ ಮಧ್ಯೆ, ಕರ್ನಾಟಕಟಕದ ವಿರೋಧಿ ಪಕ್ಷದ ಮುಖ್ಯಸ್ಥ ಟೀಕೇಶಿ ಅವರ ಕೊರೋನೇಷನ್‌ಗೂ ಕೊರೊನಾ ಎಂಬ ಮಾರಿಯು ಅಡ್ಡಿ ಮಾಡಿತ್ತು. ಆದರೂ, ವಿರೋಧಿ ಪಕ್ಷವಾದುದರಿಂದ, ಸರ್ಕಾರದ ನಿಯಮಗಳನ್ನೆಲ್ಲ ವಿರೋಧಿಸುವುದು, ಟೀಕಿಸುವುದು ಜನ್ಮಸಿದ್ಧ ಹಕ್ಕು. ಅಂತರ ಕಾಯ್ದುಕೊಂಡರೆ ಕೊರೊನಾ ಬರುವುದಿಲ್ಲ ಎಂಬುದು ಸುಳ್ಳು. ದೊಡ್ಡ ದೊಡ್ಡ ಪ್ರತಿಭಟನೆ ಮಾಡುತ್ತಲೇ, ಭರ್ಜರಿ ಜನಬಲ ಪ್ರದರ್ಶಿಸಬೇಕು. ಟಿಕ್-ಟಾಕ್ ಬಳಸುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿಯೇ ಅಧಿಕಾರಕ್ಕೆ ಗ್ರಹಣ ಹಿಡಿಯಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಇದೀಗ ಅದೇ ಹಳೆಯ ಟಿಕ್-ಟಾಕ್ ಬಳಸಲು ಕರೆ ನೀಡಿದಾಕ್ಷಣವೇ ಅದನ್ನು ನಿಷೇಧಿಸಿರುವುದು, ನಮ್ಮ ಏಳಿಗೆ ಸಹಿಸದ ಸರ್ಕಾರದ ಕುತಂತ್ರ ಎಂದು ಅವರು ಗೋಷ್ಠಿಯ ಮೂಲಕ ವರದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
2 ಕಾಮೆಂಟ್‌ಗಳು
‘ಟಿಕ್ ಟಾಕ್ ಗೆಳೆಯಾ, ಟಿಕ್ ಟಿಕ್ ಟಾಕ್’ ಎಂದು ದಿನಕರ ದೇಸಾಯಿಯವರು ಯಾವಾಗಲೋ ಕಂಡು ಹಿಡಿದ app ಇದು. ಆದರೆ ಆ ಸಮಯದಲ್ಲಿ ಇನ್ನೂ ಮೊಬೈಲ್ ಇರದೇ ಇದ್ದುದರಿಂದ, ದೇಸಾಯಿಯವರ appಗೆ ಪ್ರಸಿದ್ಧಿ ಸಿಗಲಿಲ್ಲ.
ಪ್ರತ್ಯುತ್ತರಅಳಿಸಿಹೌದ್ರೀಯಪಾ... ಆವತ್ತು ಅವರು ಸಂಚೋದಿಸಿದ್ದನ್ನೇ ಚೀನಾದವರು ತಮ್ಮದೆಂದು ತಯಾರಿಸಿಕೊಂಡರಷ್ಟೇ. ಈಗ ಯೋಗ, ಆಯುರ್ವೇದ ಎಲ್ಲ ವಿದೇಶೀಯರ ಪಾಲಾಗ್ತಿರೋ ಥರಾ....
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D