[ಬೊಗಳೂರು ಕರ-ಕಮಲ ಬ್ಯುರೋದಿಂದ]
ಬೊಗಳೂರು, ಅ.29- ಮಧ್ಯಪ್ರದೇಶದಲ್ಲಿ ಇತ್ತಿತ್ತಲಾಗಿ ಯಾರಿಗೂ ಕೈಗಳೇ ಇಲ್ಲದಿರುವುದರ ಹಿಂದಿನ ತಥ್ಯ ಬಯಲಾಗಿದೆ.ಇದಕ್ಕೆಲ್ಲಾ ಕಾರಣವೆಂದರೆ, ಅಲ್ಲಿ ಶೀಘ್ರವೇ ನಡೆಯುವ ಚುನಾವಣೆಗಳು. ಜನರನ್ನು ಸುಲಿಗೆ ಮಾಡುವ, ಅಗತ್ಯವಸ್ತುಗಳ ಬೆಲೆ ಏರಿಸುತ್ತಾ ಎಲ್ಲರೂ ಈ ಲೋಕದಿಂದಲೇ ಹೊರಟು ಹೋಗುವಂತೆ ಮಾಡಿ, ತಾವು ಮಾತ್ರ ಒಂದ್ರೂಪಾಯಿಗೆ ಐಷಾರಾಮಿ ಊಟ ಸೇವಿಸುತ್ತಾ ಇರುವ ಮತ್ತು ಬೆಲೆಯನ್ನು ರಾಕೆಟ್ ಬಾಲಕ್ಕೆ ಕಟ್ಟಿ ಏರಿಸುತ್ತಾ, ಅದರ ಹಿಂದೆಯೇ ಹೋಗುವ ಜನ ಸಾಮಾನ್ಯರೂ ಕೂಡ ಆಕಾಶದಲ್ಲೇ ತೇಲಾಡುವಂತೆ ಮಾಡುತ್ತಿರುವ, ಜನರ ತೆರಿಗೆ ಹಣವನ್ನು ನುಂಗುತ್ತಿರುವ ರಾಜಕಾರಣಿಗಳಿಗೆ ಮತ ಹಾಕುವವರಿಗೆ ಮೆದುಳೇ ಇಲ್ಲ ಎಂಬ ವಾದವೂ ಇದ್ದರೂ, ಈಗ ಕೈಗಳೇ ಇಲ್ಲದಿರುವುದರ ಹಿಂದಿನ ಗುಟ್ಟೇನು ಎಂದು ಅನ್ವೇಷಿಗಳು ಮತ್ತೊಮ್ಮೆ ನಿದ್ರಾಭಂಗಗೊಂಡು ತನಿಖೆ ಆರಂಭಿಸಿದಾಗ ವಿಷಯ ತಿಳಿದಿದೆ.
ವಿಷಯವಿಷ್ಟೆ. ಮಧ್ಯ ಪ್ರದೇಶದಲ್ಲಿರುವ ಎಲ್ಲ ಪಾರ್ಕುಗಳು, ಕೆರೆಗಳು, ಉದ್ಯಾನಗಳಲ್ಲಿ ತಾವರೆ ಹೂವುಗಳು ಅರಳಿ ನಿಂತಿವೆ. ಅವುಗಳನ್ನು ನೋಡಿದಾಕ್ಷಣ ಜನರು ಪ್ರಚೋದನೆಗೊಂಡು ಕಮಲದ ಚಿಹ್ನೆಯುಳ್ಳ ಬಿಜೆಪಿಗೇ ಮತ ಹಾಕುತ್ತಾರೆ ಎಂಬುದು CONಗ್ರೆಸ್ ಆರೋಪ.
ಈ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ಅದು ದೂರು ನೀಡಿರುವುದಾಗಿ ಇಲ್ಲಿ ವರದ್ದಿಯಾಗಿದೆ.
ಇದಕ್ಕೆ ಪ್ರತಿಯಾಗಿ ಕಮಲದ ಪಕ್ಷದವರೂ ಚುನಾವಣಾ ಆಯೋಗಕ್ಕೆ ದೂರು ನೀಡಿ, "ಎಲ್ಲರಲ್ಲಿಯೂ ಕೈಗಳಿವೆ. ಅದು ಕಾಂಗ್ರೆಸ್ ಚಿಹ್ನೆ. ಅವುಗಳನ್ನೆಲ್ಲಾ ಕತ್ತರಿಸಿ, ಚುನಾವಣೆಗಳು ಮುಗಿಯುವವರೆಗೆ ಯಾರಿಗೂ ಕಾಣದಂತೆ ಇರಿಸಬೇಕು" ಎಂದು ಆಗ್ರಹಿಸಿದೆ.
ಹೀಗಾಗಿ, ಆ ರಾಜ್ಯದಲ್ಲಿ ಇತ್ತೀಚೆಗೆ ಯಾರ ಕೈಗಳೂ ಗೋಚರಿಸುತ್ತಿಲ್ಲ ಎಂದು ಅನ್ವೇಷಿ ಪತ್ತೆ ಹಚ್ಚಿದ ಬಳಿಕ, ಮತ್ತೊಮ್ಮೆ ಧಡಾರನೇ ಬಾಗಿಲು ಹಾಕಿಕೊಂಡು ಮಲಗಿರುವುದಾಗಿ ವರದ್ದಿಯಾಗಿದೆ.
4 ಕಾಮೆಂಟ್‌ಗಳು
ಅನ್ವೇಷಿಗಳೇ,
ಪ್ರತ್ಯುತ್ತರಅಳಿಸಿತಲೆಯನ್ನು ಚುನಾವಣೆ ಚಿಹ್ನವಾಗಿ ಮಾಡಿಕೊಂಡಿರೆ ಹೇಗಿರುತ್ತದೆ?
ಸುನಾಥರೇ,
ಅಳಿಸಿತಲೆಯನ್ನೇ ಮಾಡಿದರೆ, ಮತ ಯಂತ್ರದಲ್ಲಿ ಚಿಹ್ನೆಯ ಜಾಗದಲ್ಲಿ ಖಾಲಿ ಬಿಡಬೇಕಾಗುತ್ತದಲ್ಲಾ.... ಅದೊಂದು ಸಮಸ್ಯೆಯೇ ಇದೆ...
ಅನ್ವೇಷಿಗಳೇ, ನೀವು ಬೊಗಳೆ ಬಿಡುವುದನ್ನು ಇನ್ನೂ ನಿಲ್ಲಿಸಿಲ್ಲವೆಂದು ತಿಳಿದು ಸಂತೋಷವಾಯಿತು! :-)
ಪ್ರತ್ಯುತ್ತರಅಳಿಸಿಶ್ರೀಶ್ರೀಶ್ರೀ ಅವರೇ,
ಅಳಿಸಿಏನು... ವಿಷಾದವಾಯಿತೇ? ಏನೋ... ಹೇಳಿದ್ದು ಸರಿಯಾಗಿ ಕೇಳಿಸ್ತಾ ಇಲ್ಲ... ನೀವು ಅದೇನೋ ಹೊರ ದೇಶದಿಂದ ಮಾತಾಡ್ತಾ ಇದ್ದೀರಿ.... ಸರಿಯಾಗಿ ಸಿಗ್ನಲ್ ಇಲ್ಲ.... :)
ಏನಾದ್ರೂ ಹೇಳ್ರಪಾ :-D