ಬೊಗಳೆ ರಗಳೆ

header ads

ಬೊಗಳೆ ಬ್ರೇಕ್: ನೇತಾಗಳಿಂದ ಗಾಂಧಿಗಿರಿ, ಜೈಲ್ ಭರೋ ಚಳವಳಿ

[ಬೊಗಳೂರು ಗಾಂಧಿವಾದಿ ಬ್ಯುರೋದಿಂದ]
ಬೊಗಳೂರು, ಅ.2: ತಡೆಯಲಾರದ ನಿದ್ದೆಯಿಂದ ಮತ್ತೆ ಎಚ್ಚೆತ್ತುಕೊಂಡಿರುವ ಬೊಗಳೆ ರಗಳೆ ಬ್ಯುರೋ, ಗಾಂಧಿ ಗಿರಿ ಕುರಿತು ವಿಶೇಷ ವರದ್ದಿ ಪ್ರಕಟಿಸುವ ಮುಲಾಜಿಗೆ ಒಳಗಾಗಿದೆ.

ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದಂದು ಕೂಡ ಗಾಂಧಿಗಿರಿ ಪ್ರದರ್ಶಿಸುವ ಗೋಜಿಗೆ ಸಿಲುಕಿರುವ ಬೊಗಳೂರು ಏಕ ಸದಸ್ಯ ಬ್ಯುರೋದ ಸೊಂಪಾದ-ಕರು, ಓದುಗರು, ವರದ್ದಿಗಾರರು, ವಿತರಕರು... ಹೀಗೆ ಮಲ್ಟಿಟಾಸ್ಕಿಂಗ್ ಪರಿಣತರು ದೇಶವಿಡೀ ಓಡಾಡಿದಾಗ, ದೇಶದಲ್ಲಿ ಎಲ್ಲ ಭ್ರಷ್ಟಾಚಾರಿಗಳು ಗಾಂಧಿಗಿರಿ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ.

ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ್ದ ಗಾಂಧೀಜಿ, ಬ್ರಿಟಿಷ್ ಸರಕಾರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ವಾಕಿಂಗ್ ಮುಂತಾದ ಚಳವಳಿಗಳನ್ನು ಅಹಿಂಸೆಯಿಂದಲೇ ಮಾಡಿದ್ದರು ಮತ್ತು ಅದೆಷ್ಟೋ ಬಾರಿ ಸ್ವಯಂಪ್ರೇರಿತವಾಗಿ ಜೈಲ್ ಭರೋ ಚಳವಳಿಯನ್ನೂ ಮಾಡಿದ್ದರು. ಇದೇ ಗಾಂಧಿಗಿರಿಯನ್ನು ಅನುಸರಿಸುತ್ತಿರುವ ಈಗಿನ ರಾಜಕಾರಣಿಗಳು ಕೂಡ ಜೈಲ್ ಭರೋ ಚಳವಳಿಗೆ ಮುಂದಾಗಿದ್ದಾರೆ.

ತೀರಾ ಮೊನ್ನೆಯ ಪ್ರಕರಣವೆಂದರೆ ಅಸತ್ಯ'ಮೇವು' ಜಯತೇ ಎಂದೇ ಪ್ರತಿಪಾದಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, Fodder ಆಫ್ ದಿ ನೇಷನ್, ಲಲ್ಲೂ ಪ್ರಸಾದ್ ಯಾದವ್ ಜೈಲ್ ಭರೋಗೆ ಚಾಲನೆ ನೀಡಿದ್ದಾರೆ. ಅವರ ಬೆನ್ನಿಗೇ ಮತ್ತೊಬ್ಬ ಸಂಸದ, ವೈದ್ಯರಾಗಲು ಅನರ್ಹರಾಗಿದ್ದರೂ ಅವರಿಗೆ ಎಂಬಿಬಿಎಸ್ ಸೀಟು ಕೊಡಿಸಿ ಔದಾರ್ಯ ಮೆರೆದ ರಶೀದ್ ಮಸೂದ್ ಕೂಡ ಜೈಲು ಪಾಲಾಗಿದ್ದಾರೆ.

ಇದಕ್ಕಿಂತ ಮುನ್ನ ಕರ್ನಾಟಕದಲ್ಲಿಯೂ ಸಾಕಷ್ಟು ಮಂದಿ ಕೇವಲ ಮಣ್ಣಂಗಟ್ಟಿ ಕೆಲಸ ಮಾಡಿದ್ದಕ್ಕಾಗಿ ಅದಾಗಲೇ ಜೈಲು ಯಾತ್ರೆ ಆರಂಭಿಸಿಬಿಟ್ಟಿದ್ದಾರೆ. ರೆಡ್ಡಿ- ಯಡ್ಡಿಗಳು, ಮತ್ತು ಅವರಿಗೆ ಊರುಗೋಲಾಗಿದ್ದ ಹಲವು ಕಡ್ಡಿಗಳು ಈಗಾಗಲೇ ಜೈಲು ಪಾಲಾಗಿದ್ದು, ಇನ್ನು ಕೆಲವರು ಜೈಲಿನಗಾಗಿ ಇದಿರು ನೋಡುತ್ತಿದ್ದಾರೆ.

ಬೆಲೆ ಏರಿಕೆಯ ಈ ಯುಗದಲ್ಲಿ, ಉಚಿತ ಅನ್ನಾಹಾರ, ನಿದ್ರೆ ಇತ್ಯಾದಿ ದೊರೆಯಬಹುದಾದ ಜೈಲು ಸೇರುವುದೇ ಒಳಿತು ಎಂಬುದು ಈ ಜಾರಕಾರಣಿಗಳ ಕ್ರಮದ ಹಿಂದಿನ ಪ್ರಧಾನ ಉದ್ದೇಶವಾಗಿದ್ದರೂ, ಗಾಂಧೀಜಿಯೇ ಜೈಲ್ ಭರೋ ಅಂತ ಸಾರಿರುವಾಗ, ನಾವು ಅದನ್ನೇ ಅನುಸರಿಸುತ್ತಿದ್ದೇವೆ ಎಂದು ಚೆನ್ನಾಗಿಯೇ ಹೇಳಿಕೊಳ್ಳತೊಡಗಿದ್ದಾರೆ ಈ ಕುಳಗಳು. ಇವರೊಂದಿಗೆ ಈಗಾಗಲೇ ಆಟಿಕೆ ಪಿಸ್ತೂಲು ಹಿಡಿದುಕೊಂಡಿದ್ದ ಮುನ್ನಾಭಾಯಿ ಎಂಬಿಬಿಎಸ್ ಕೂಡ ಜೈಲು ಸೇರಿ, ಸಮಜಾ ಸೇವೆಯ ಬಳಿಕ ಸಮಾಜಸೇವೆಯ ಜ್ಞಾನೋದಯವಾಗಿ, ಗಾಂಧಿಗಿರಿಯಿಂದಾಗಿಯೇ ಹೊರಗೆ ಬಂದಿದ್ದಾರೆ.

ಜಾರಕಾರಣಿಗಳ ಗಾಂಧಿಗಿರಿಯ ಜೈಲು ಅಭಿಯಾನ ಶೀಘ್ರವೇ ಮೇರೆ ಮೀರಲಿದೆ. ಆದರೆ, ಜೈಲಿನಿಂದಲೇ ಚುನಾವಣೆ ಸ್ಪರ್ಧಿಸುವಂತಾಗಲು ಕೇಂದ್ರದಲ್ಲಿರುವ ಸುಗ್ರೀವ ಸೇನೆಯ ಮಂದಿ ಆಜ್ಞೆಯನ್ನೂ ಹೊರಡಿಸಲು ಸಿದ್ಧತೆ-ಬದ್ಧತೆ ವ್ಯಕ್ತಪಡಿಸಿದ್ದಾರೆ ಎಂಬುದು ಏನೂ ಗೊತ್ತಿಲ್ಲದ ಮೂಲಗಳಿಂದ ತಿಳಿದುಬಂದ ವಿಚಾರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಕನ್ನಡ ಸಿನೆಮಾಗಳಲ್ಲಿಯ ನಾರಾಯಣನಂತೆ ಅನ್ವೇಷಿಯವರು ಯಾವಾಗಲೋ ಒಮ್ಮೆ ಪ್ರತ್ಯಕ್ಷರಾಗಿ, ಮತ್ತೆ ಅದೃಶ್ಯರಾಗಿ ಬಿಡುವುದು ಸರಿಯಲ್ಲ. ನೀವು ನಾರದರಂತೆ ಯಾವಾಗಲು ಕಾಣಿಸಿಕೊಳ್ಳುತ್ತಲೇ ಇರಬೇಕೆನ್ನುವುದು ನಮ್ಮೆಲ್ಲರ ಹಕ್ಕೊತ್ತಾಯ! ನೀವಿನ್ನೂ ಜೇಲಿಗೆ ಹೋಗಿ ಅನೇಕ ನೇತಾಗಳನ್ನು ನೇತಾಡಿಸುವ ಸಂದರ್ಶನ ತೆಗೆದುಕೊಳ್ಳುವುದು ಬಾಕಿ ಇದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುನಾಥರೇ,
      ನಾವೇನೋ ನಿಮ್ಮಾಜ್ಞೆಯಾನುಸಾರ ಹೋಗಿದ್ವಿ... ನಮ್ಮನ್ನು ನೇತು ಹಾಕಿಯೇ ಬಿಟ್ರು.. ನೇತು ಹಾಕಿದ್ರೂ ನಿದ್ದೆ ಬಿಡಲಿಲ್ಲ... ಈಗಷ್ಟೇ ಎಚ್ಚೆತ್ತುಕೊಂಡು ಬಂದೆವು...

      ಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಯವರು ಮೊದಲು ಎಳುತ್ತಾರೋ,...ಅಥವಾ ಕುಂಬಕರ್ಣ ಮೊದಲು ಎಳುತ್ತಾನೋ ಎಂದು ಪಂಥ ಕಟ್ಟಿದರೆ ಕುಂಭಕರ್ಣನೆ ಜಯಶಾಲಿಯಾಗುವ ಸಾಧ್ಯತೆಗಳು ಜಾಸ್ತಿ.. !! ಜೈಲಿನಲ್ಲಿ ಉಚಿತವಾಗಿ 'ಮೇವು ' ಸಿಗುತ್ತದೆಯೆಂದೇ ಎಲ್ಲರೂ ಜೈಲು ಭರೋ ಚಳುವಳಿ ನಡೆಸುತ್ತಾರೆ ಅನ್ನುವ ವಿಚಾರವನ್ನು ನಿದ್ದೆಗಣ್ಣಿನಲ್ಲಿಯೇ ಕೂಲ್ ಅಂಕುಶವಾಗಿ ಬರೆದು ಒಗೆದಿದ್ದಕ್ಕಾಗಿ ಕುಂಭ ಕರ್ಣನ ಹಸಿವಿಗೆ ಬೇಕಾದ ಎಲ್ಲಾ ತಿಂಡಿ ತಿನಿಸು ಗಳನ್ನೂ ಆನ್ ಲೈನ್ ನಲ್ಲಿ ನಿಮಗೇ ಕಳಿಸಲು ರದ್ದಿ ಓದುಗರ ಚಿಂತನೆ ....!!!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೀವೊಮ್ಮೆ ಪಂಥ ಕಟ್ಟಿ, ಸೋತು.... ಪಾರ್ಟಿ ಕೊಡುತ್ತೀರಾದರೆ ಯಾವಾಗ ಬೇಕಾದ್ರೂ ಏಳಲು ನಾವು ಸಿದ್ಧವಿದ್ದೇವೆ ಚುಕ್ಕಿಚಿತ್ತಾರಿಗಳೇ.... ರದ್ದಿ ಓದುಗರನ್ನು ಮಾತ್ರ ಇತ್ತ ಕಡೆ ಸುಳಿಯಗೊಡಬೇಡಿ...

      ಅಳಿಸಿ
  4. ಅನ್ವೇಷಿಗಳಿಗೆ ನಮ್ಮದೊಂದು ನಮಸ್ಕಾರ !

    ಬಹಳ ದಿನದ ನಂತರ ಬೊಗಳೆಗೆ ಬಂದೆ ಮತ್ತು ಗಾಂಧಿಗಿರಿ ಬಗ್ಗೆ ಓದಿ, ಮುಂದಿನ ಸಂಚಿಕೆ ಜೈಲಿನ ಜೀವನದ ಬಗ್ಗೆ ನಿಮ್ಮ ಬೊಗಳೆಯಲ್ಲಿ ನಿರೀಕ್ಷಿಸುತ್ತಾ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸಾನ್ವಿಯ ಅಪ್ಪಾಮ್ಮನಿಗೆ ಮರಳಿ ಸ್ವಾಗತ. ನಾವೆಂದಾದರೂ ಹಿಂದೆ ಭೇಟಿಯಾಗಿದ್ದೆವೇ? ನಿದ್ದೆ ಮಾಡೀ ಮಾಡೀ ಏನೂ ನೆನಪಿಗೆ ಬರ್ತಾ ಇಲ್ಲ.... ಖಂಡಿತವಾಗಿಯೂ ಒಂದಲ್ಲ ಒಂದು ದಿನ ಜೈಲು ಪಾಲಾಗುತ್ತೇವೆ...

      ಅಳಿಸಿ

ಏನಾದ್ರೂ ಹೇಳ್ರಪಾ :-D